ನಿಮ್ಮ ಶರೀರದ ಈ ಜಾಗದ ಚರ್ಮದಲ್ಲಿ ಕಲೆಗಳು ಕಾಣಿಸಿಕೊಂಡರೆ ಹೃದಯಾಘಾತದ ಅಪಾಯವಿದೆ ಎಂದೇ ಅರ್ಥ!

Update: 2018-08-29 12:38 GMT

ಅಪಧಮನಿಗಳಲ್ಲಿ ರಕ್ತವು ಹೆಪ್ಪುಗಟ್ಟಿದಾಗ ಹೃದಯಕ್ಕೆ ರಕ್ತದ ಹರಿವಿಗೆ ತಡೆಯುಂಟಾಗುತ್ತದೆ ಮತ್ತು ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಹೃದಯಕ್ಕೆ ರಕ್ತದ ಪೂರೈಕೆ ಸ್ಥಗಿತಗೊಂಡರೆ ಹೃದಯದ ಅಂಗಾಂಶಗಳು ಸಾಯುತ್ತವೆ ಮತ್ತು ನಿಮಿಷಗಳಲ್ಲಿ ಅಂಗವೈಫಲ್ಯವುಂಟಾಗಿ ಹೃದಯಾಘಾತ ಸಂಭವಿಸುತ್ತದೆ.

ಹೃದಯಾಘಾತವು ತುರ್ತು ವೈದ್ಯಕೀಯ ಸ್ಥಿತಿಯಾಗಿದ್ದು,ಸಕಾಲದಲ್ಲಿ ಎಚ್ಚರಿಕೆ ವಹಿಸಿದರೆ ಮಾರಣಾಂತಿಕ ಪರಿಣಾಮಗಳನ್ನು ತಡೆಯಲು ಸಾಧ್ಯ. ಹೃದಯಾಘಾತದ ಅಪಾಯವನ್ನು ಸೂಚಿಸುವ ಲಕ್ಷಣಗಳು ನಮ್ಮ ಗಮನಕ್ಕೆ ಬರಬಹುದು ಅಥವಾ ಬರದಿರಬಹುದು. ಇಂತಹ ಲಕ್ಷಣವೊಂದರ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಏಕೆಂದರೆ ಈ ಲಕ್ಷಣ ಕಾಣಿಸಿಕೊಳ್ಳುವ ನಮ್ಮ ಶರೀರದ ಭಾಗವನ್ನು ನಾವು ನೋಡಿಕೊಳ್ಳುವುದು ಸುಲಭವೂ ಅಲ್ಲ, ಅದಕ್ಕೆ ಕನ್ನಡಿಯೇ ಬೇಕು. ಈಗಾಗಲೇ ನೀವು ಊಹಿಸಿರಬಹದು....ಹೌದು ಅದು ಪೃಷ್ಠದ ಭಾಗ! ಈ ಭಾಗದಲ್ಲಿಯ ಚರ್ಮದ ಮೇಲೆ ಕಲೆಗಳು ಕಾಣಿಸಿಕೊಂಡರೆ ಅದು ಮುಂಬರುವ ಹೃದಯಾಘಾತದ ಅಪಾಯವನ್ನು ಹೆಚ್ಚು ಸ್ಪಷ್ಟವಾಗಿ ಸೂಚಿಸುತ್ತದೆ ಎನ್ನುವುದನ್ನು ನೂತನ ಅಧ್ಯಯನವೊಂದು ಬೆಳಕಿಗೆ ತಂದಿದೆ. ಪೃಷ್ಠದ ಚರ್ಮದ ಮೇಲೆ ದಿಢೀರ್ ಆಗಿ ಸಣ್ಣಸಣ್ಣ, ಸ್ವಲ್ಪ ಉಬ್ಬಿದಂತಿರುವ ಹಳದಿ ಬಣ್ಣದ ಕಲೆಗಳನ್ನು ನೀವು ಗಮನಿಸಿದರೆ ಬಹುಶ ಅದು ಹೃದಯಾಘಾತದ ಅಪಾಯ ಸನ್ನಿಹಿತವಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಚರ್ಮದ ಮೇಲೆ ಇಂತಹ ಕಲೆಗಳು ಮೊಣಗಂಟುಗಳು,ಮಂಡಿಗಳು ಮತ್ತು ಕಣ್ಣುಗುಡ್ಡೆಗಳಂತಹ ಶರೀರದ ವಿವಿಧ ಭಾಗಗಳಲ್ಲಿಯೂ ಕಾಣಿಸಿಕೊಳ್ಳಬಹುದು,ಆದರೆ ಇವು ಹೆಚ್ಚು ಸಾಮಾನ್ಯವಾಗಿ ಪೃಷ್ಠಗಳಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಅಧ್ಯಯನ ವರದಿಗಳು ಹೇಳಿವೆ.

ಬ್ರಿಟನ್ನಿನ ಲ್ಯಾಂಕಾಸ್ಟರ್ ವಿವಿಯ ಅಧ್ಯಯನದಂತೆ ವೈದ್ಯಕೀಯ ಪರಿಭಾಷೆಯಲ್ಲಿ ಝಾಂತೋಮಾ ಎಂದು ಕರೆಯಲ್ಪಡುವ ಇಂತಹ ಚರ್ಮದ ಕಲೆಗಳು ಹೃದಯಾಘಾತದ ಅಪಾಯವನ್ನು ಸೂಚಿಸುವ ಅಪರೂಪದ ಲಕ್ಷಣವಾಗಿವೆ.

 ಅಧಿಕ ಕೊಲೆಸ್ಟ್ರಾಲ್ ಮಟ್ಟ ಹೃದಯಾಘಾತಕ್ಕೆ ಪ್ರಮುಖ ಕಾರಣಗಳಲ್ಲೊಂದು ಎನ್ನುವುದು ಹೆಚ್ಚಿನವರಿಗೆ ತಿಳಿದಿರುವ ವಿಷಯವೇ ಆಗಿದೆ. ವ್ಯಕ್ತಿಯ ಶರೀರದಲ್ಲಿ ಕೊಲೆಸ್ಟ್ರಾಲ್ ಮಟ್ಟ ಅತಿಯಾಗಿ ಹೆಚ್ಚಿದಾಗ ಪರಿಧಮನಿಗಳ ಭಿತ್ತಿಗಳಲ್ಲಿ ಕೊಬ್ಬಿನಂಶವು ಶೇಖರಗೊಳ್ಳುತ್ತದೆ. ಇದರಿಂದಾಗಿ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ ಮತ್ತು ಕರಣೆಗಳು ರೂಪುಗೊಂಡು ರಕ್ತದ ಹರಿವಿಗೆ ತಡೆಯನ್ನುಂಟು ಮಾಡಿ ಹೃದಯಾಘಾತಕ್ಕೆ ಕಾರಣವಾಗುತ್ತವೆ.

ವ್ಯಕ್ತಿಯ ಶರೀರದಲ್ಲಿನ ದೀರ್ಘಕಾಲೀನ ಕೊಲೆಸ್ಟ್ರಾಲ್ ಅಧಿಕ ಮಟ್ಟವು ಪೃಷ್ಠಗಳಲ್ಲಿ ಕಾಣಿಸುವ ಕಲೆಗಳಿಗೆ ಕಾರಣ ಎಂದು ಅಧ್ಯಯನ ವರದಿಯು ಹೇಳಿದೆ. ಶರೀರದಲ್ಲಿ ಕೊಲೆಸ್ಟ್ರಾಲ್ ಮಟ್ಟ ಅಸಾಧಾರಣವಾಗಿ ಹೆಚ್ಚಾಗಿದ್ದರೆ ಅದು ಚರ್ಮದ ಕೆಳಗೆ ಸಂಗ್ರಹಗೊಳ್ಳುತ್ತದೆ ಮತ್ತು ಈ ಉಬ್ಬಿದ ಹಳದಿ ಬಣ್ಣದ ಕಲೆಗಳಿಗೆ ಕಾರಣವಾಗುತ್ತದೆ.

ಪೃಷ್ಠಗಳ ಚರ್ಮವು ಹೆಚ್ಚು ಮೃದುವಾಗಿದ್ದು,ಕೊಬ್ಬಿನ ಅಂಗಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವಾದ್ದರಿಂದ ಈ ಕಲೆಗಳು ಹೆಚ್ಚಾಗಿ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ವ್ಯಕ್ತಿಯಲ್ಲಿ ಚರ್ಮದ ಮೂಲಕ ಗೋಚರವಾಗುವಷ್ಟು ಅಧಿಕ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಇದ್ದರೆ ಅದು ಖಂಡಿತವಾಗಿಯೂ ಮುಂಬರುವ ಹೃದಯಾಘಾತದ ಅಪಾಯದ ಲಕ್ಷಣವಾಗುತ್ತದೆ. ಎದೆಯ ಭಾಗದಲ್ಲಿ ಒತ್ತಡ ಮತ್ತು ಬಿಗಿತ,ಎದೆನೋವು,ವಾಕರಿಕೆ ಮತ್ತು ಅಜೀರ್ಣ,ದಣಿವು, ಉಸಿರಾಟಕ್ಕೆ ತೊಂದರೆ,ಎಡತೋಳಿನಲ್ಲಿ ನೋವು, ತಲೆಸುತ್ತುವಿಕೆ ಮತ್ತು ಅತಿಯಾಗಿ ಬೆವರುವಿಕೆ ಇತ್ಯಾದಿಗಳು ಹೃದಯಾಘಾತದ ಇತರ ಲಕ್ಷಣಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News