ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದ ಸುರಕ್ಷಾ ಕವಚ, ಅದನ್ನು ಅದುಮಿಟ್ಟರೆ ಸ್ಫೋಟಿಸುತ್ತದೆ : ಸುಪ್ರೀಂ ಕೋರ್ಟ್

Update: 2018-08-29 14:58 GMT

ಹೊಸದಿಲ್ಲಿ, ಆ.29: ಐವರು ಮಾನವ ಹಕ್ಕುಗಳ ಹೋರಾಟಗಾರರನ್ನು ಬಂಧಿಸಿರುವ ರೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯ, ಭಿನ್ನಾಭಿಪ್ರಾಯ ಎಂಬುದು ಪ್ರಜಾಪ್ರಭುತ್ವದ ಭದ್ರ ಕವಚದಂತೆ. ಅದಕ್ಕೆ ಅವಕಾಶ ನೀಡದೆ ಹೋದರೆ ಪ್ರೆಶರ್ ಕುಕ್ಕರ್ ಥರ ಸ್ಫೋಟಗೊಳ್ಳಬಹುದು. ಭಿನ್ನಾಭಿಪ್ರಾಯದ ಧ್ವನಿಯನ್ನು ಎಂದೂ ಉಡುಗಿಸಲು ಹೋಗಬಾರದು ಎಂದು ತಿಳಿಸಿದೆ.

ಬುಧವಾರ ಇತಿಹಾಸತಜ್ಞೆ ರೊಮಿಲಾ ಥಾಪರ್, ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್, ಸತೀಶ್ ದೇಶಪಾಂಡೆ ಹಾಗೂ ಇತರರು ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಧೀಶ ಚಂದ್ರಚೂಡ್ ಈ ಹೇಳಿಕೆಯನ್ನು ನೀಡಿದ್ದಾರೆ.

ಜನವರಿ ಒಂದರಂದು ಭೀಮಾ ಕೋರೆಗಾಂವ್‌ನಲ್ಲಿ ದಲಿತರನ್ನು ಗುರಿಯಾಗಿಸಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷದ್‌ನ ಸಭೆಯಲ್ಲಿ ಮಾವೋವಾದಿಗಳು ಶಾಮೀಲಾಗಿರುವ ಬಗ್ಗೆ ತನಿಖೆ ನಡೆಸುತ್ತಿರುವ ಪುಣೆ ಪೊಲೀಸರು ಬಂಧಿಸಿರುವ ಐವರು ಮಾನವ ಹಕ್ಕುಗಳ ಹೋರಾಟಗಾರರಿಗೆ ಮುಂದಿನ ವಿಚಾರಣೆಯವರೆಗೆ ಗೃಹಬಂಧನ ವಿಧಿಸುವಂತೆ ಶ್ರೇಷ್ಠ ನ್ಯಾಯಾಲಯ ಸೂಚಿಸಿದೆ. ಆಮೂಲಕ ಮಂಗಳವಾರ ಬಂಧನಕ್ಕೊಳಗಾದ ಹೋರಾಟಗಾರರಿಗೆ ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.

ಈ ಸಂಬಂಧ ಮಹಾರಾಷ್ಟ್ರ ಸರಕಾರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ ಸೆಪ್ಟಂಬರ್ 6ರ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ.

ಹೋರಾಟಗಾರರನ್ನು ವಿವಾದಿತ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ಬಂಧಿಸಲಾಗಿದೆ. ಈ ಕಾಯ್ದೆಯ ಪ್ರಕಾರ, ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುವ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದಾರೆ ಎಂದು ಸಂಶಯಿಸಲಾಗಿರುವ ವ್ಯಕ್ತಿಯನ್ನು ವಾರಂಟ್ ಇಲ್ಲದೆ ಬಂಧಿಸಬಹುದಾಗಿದೆ. ಆರೋಪಿಗೆ ಜಾಮೀನು ಅರ್ಜಿ ಸಲ್ಲಿಸುವ ಅವಕಾಶವಿರುವುದಿಲ್ಲ ಮತ್ತು ಆತನ ವಿರುದ್ಧ ದೋಷಾರೋಪ ಸಲ್ಲಿಸಲು ಪೊಲೀಸರಿಗೆ 180 ದಿನಗಳ ಕಾಲಾವಕಾಶವಿರುತ್ತದೆ.

ಸರ್ವೋಚ್ಚ ನ್ಯಾಯಾಲಯದ ಆದೇಶ ಈ ಪ್ರಕರಣವನ್ನು ಆಲಿಸುತ್ತಿರುವ ಪುಣೆ ಮತ್ತು ದಿಲ್ಲಿ ಉಚ್ಚ ನ್ಯಾಯಾಲಯಗಳ ಆದೇಶಕ್ಕಿಂತ ಮೊದಲು ಹೊರಬಿದ್ದಿದೆ. ವರವರ ರಾವ್, ವೆರ್ನನ್ ಗೊನ್ಸಾಲ್ವೀಸ್ ಮತ್ತು ಅರುಣ್ ಪಿರೇರರನ್ನು ಪುಣೆ ಉಚ್ಚ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಗೌತಮ್ ನವ್ಲಖಾ ಅವರ ರಿಮಾಂಡ್ ಪರಿವರ್ತನೆಯ ಬಗ್ಗೆ ವಿಚಾರಣೆ ನಡೆಸುತ್ತಿರುವ ದಿಲ್ಲಿ ಉಚ್ಚ ನ್ಯಾಯಾಲಯ ಸುಪ್ರೀಂ ಕೋರ್ಟ್‌ನ ಆದೇಶವನ್ನು ಪರಿಶೀಲಿಸಿದ ನಂತರ ಗುರುವಾರದಂದು ಈ ಬಗ್ಗೆ ವಿಚಾರಣೆಯನ್ನು ಆರಂಭಿಸುವುದಾಗಿ ತಿಳಿಸಿದೆ.

ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ವ್ಯವಹಾರಗಳ ರಾಜ್ಯ ಸಚಿವ ಹನ್ಸ್‌ರಾಜ್ ಅಹಿರ್, ಭೀಮಾ ಕೋರೆಗಾಂವ್ ಹಿಂಸಾಚಾರ ರಾಷ್ಟ್ರ ಮತ್ತು ಸಂವಿಧಾನದ ಮೇಲೆ ನಡೆಸಿದ ಗಂಭೀರ ಹೊಡೆತವಾಗಿದೆ. ಪೊಲೀಸರ ನೈತಿಕಸ್ಥೈರ್ಯವನ್ನು ಕುಗ್ಗಿಸುವುದು ಸರಿಯಲ್ಲ. ಜಾತಿ ಸಂಘರ್ಷವನ್ನು ಪ್ರಚೋದಿಸುವ ತಂತ್ರವು ಈಗ ಬಯಲಾಗಿದೆ ಮತ್ತು ಪೊಲೀಸರು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ನ್ಯಾಯಾಲಯಗಳು ಇವೆ ಮತ್ತು ಹೋರಾಟಗಾರರು ಮುಗ್ಧರಾಗಿದ್ದಾರೆ ಜಾಮೀನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಹೋರಾಟಗಾರ ಗೌತಮ್ ನವ್ಲಾಖಾ ಅವರ ಬಂಧನದ ಕುರಿತು ಮಹಾರಾಷ್ಟ್ರ ಪೊಲೀಸರ ನಡೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಪ್ರಶ್ನಿಸಿದೆ ಮತ್ತು ಪೊಲೀಸರ ನಡೆಯ ಕಾನೂನಾತ್ಮಕತೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮರಾಠಿಯಿಂದ ಭಾಷಾಂತರಗೊಳಿಸಿ ನ್ಯಾಯಾಲಯ ಮತ್ತು ನವ್ಲಖಾ ಅಥವಾ ಅವರ ವಕೀಲರಿಗೆ ಯಾಕೆ ನೀಡಲಿಲ್ಲ ಎಂದು ನ್ಯಾಯಾಧೀಶ ಎಸ್.ಮುರಳೀಧರ ಮತ್ತು ವಿನೋದ್ ಗೋಯಲ್ ಅವರನ್ನೊಳಗೊಂಡ ನ್ಯಾಯಪೀಠ ಪ್ರಶ್ನಿಸಿದೆ. ಈ ವರ್ಷದ ಆರಂಭದಲ್ಲಿ ಪುಣೆಯಲ್ಲಿ ಎಲ್ಗಾರ್ ಪರಿಷದ್ ಆಯೋಜಿಸಿದ ಆರೋಪದಲ್ಲಿ ಮಾನವಹಕ್ಕುಗಳ ಹೋರಾಟಗಾರರಾದ ವರವರ ರಾವ್, ಮಹಿಳಾ ನ್ಯಾಯವಾದಿ ಸುಧಾ ಭಾರದ್ವಾಜ್, ಅರುಣ್ ಪಿರೇರ, ಗೌತಮ್ ನವ್ಲಖಾ ಮತ್ತು ವೆರ್ನನ್ ಗೊನ್ಸಲ್ವೀಸ್ ಅವರನ್ನು ಮಂಗಳವಾರ ಪೊಲಿಸರು ಬಂಧಿಸಿದ್ದರು. ದಿಲ್ಲಿ, ಫಿರದಾಬಾದ್, ಗೋವಾ, ಮುಂಬೈ, ರಾಂಚಿ ಮತ್ತು ಹೈದರಾಬಾದ್‌ನಲ್ಲಿ ದಾಳಿ ನಡೆಸಿ ಈ ಐವರನ್ನು ಬಂಧಿಸಲಾಗಿತ್ತು.

ಎಲ್ಗಾರ್ ಪರಿಷದನ್ನು ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಈ ಯುದ್ಧದ ಗೆಲುವನ್ನು ದಲಿತರು ಮೇಲ್ವರ್ಗದ ಪೇಶ್ವಾ ಸಮುದಾಯದ ಮೇಲೆ ಸಾಧಿಸಿದ ವಿಜಯವೆಂದೇ ಪರಿಗಣಿಸುತ್ತಾರೆ.

ಮಾವೋವಾದಿಗಳ ಜೊತೆ ಸಂಪರ್ಕ ಹೊಂದಿರುವ ಸಂಶಯದಲ್ಲಿ ಕಳೆದ ಜೂನ್‌ನಲ್ಲಿ ಸುಧೀರ್ ಧವಲೆ, ಸುರೇಂದ್ರ ಗಡ್ಲಿಂಗ್, ಮಹೇಶ್ ರಾವತ್, ರೊನಾ ವಿಲ್ಸನ್ ಮತ್ತು ಶೋಮಾ ಸೇನ್ ಅವರನ್ನು ಪೊಲೀಸರು ಬಂಧಿಸಿದ್ದರು. ಇವರ ವಿಚಾರಣೆಯ ವೇಳೆ ಪಡೆದ ಮಾಹಿತಿಯ ಆಧಾರದಲ್ಲಿ ಮಂಗಳವಾರ ಐವರು ಹೊರಾಟಗಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News