ಇಂದಿನಿಂದ ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್

Update: 2018-08-29 18:34 GMT

ಸೌಥಂಪ್ಟನ್, ಆ.29: ಇಂಗ್ಲೆಂಡ್ ವಿರುದ್ಧ ಮೂರನೇ ಕ್ರಿಕೆಟ್ ಟೆಸ್ಟ್‌ನಲ್ಲಿ 203 ರನ್‌ಗಳ ಗೆಲುವು ದಾಖಲಿಸಿದ ಭಾರತ ಗುರುವಾರ ಆರಂಭವಾಗಲಿರುವ ನಾಲ್ಕನೇ ಕ್ರಿಕೆಟ್ ಟೆಸ್ಟ್ ನಲ್ಲಿ ಜಯಗಳಿಸುವ ಮೂಲಕ 2-2 ಅಂತರದಲ್ಲಿ ಸರಣಿಯನ್ನು ಸಮಬಲಗೊಳಿಸಲು ಎದುರು ನೋಡುತ್ತಿದೆ.

ಮೂರನೇ ಟೆಸ್ಟ್‌ನಲ್ಲಿ ಗೆಲುವು ದಾಖಲಿಸಿದರೂ, ಸರಣಿ ಸೋಲು ತಪ್ಪಿಸಲು ಈ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯ. ಈ ಕಾರಣದಿಂದಾಗಿ ಟೀಮ್ ಇಂಡಿಯಾ ಒತ್ತಡಕ್ಕೆ ಸಿಲುಕಿದೆ.

 ಮೊದಲ ಎರಡು ಟೆಸ್ಟ್‌ಗಳಲ್ಲಿ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆಲ್ಲಲು ಇನ್ನುಳಿದಿರುವ ಎರಡು ಟೆಸ್ಟ್‌ಗಳಲ್ಲೂ ಜಯಿಸಬೇಕಾಗಿದೆ.

ಮೊದಲ ಟೆಸ್ಟ್‌ನಲ್ಲಿ ಭಾರತ 31 ರನ್ ಮತ್ತು ಎರಡನೇ ಟೆಸ್ಟ್‌ನಲ್ಲಿ ಇನಿಂಗ್ಸ್ ಸೋಲು ಅನುಭವಿಸಿತ್ತು. ಆತಿಥೇಯ ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ನಲ್ಲಿ ಗೆಲುವಿನೊಂದಿಗೆ 3 -1 ಅಂತರದಲ್ಲಿ ಸರಣಿ ಗೆಲುವಿನತ್ತ ನೋಡುತ್ತಿದೆ. ಭಾರತದ ವೇಗದ ಬೌಲರ್‌ಗಳು ಇಂಗ್ಲೆಂಡ್ ತಂಡದ ಅಗ್ರ ಸರದಿಯ ಬ್ಯಾಟಿಂಗ್‌ನ್ನು ಮುರಿದಿದ್ದರು. 3ನೇ ಟೆಸ್ಟ್‌ನಲ್ಲಿ ನಾಯಕ ಕೊಹ್ಲಿ ಮೊದಲ ಇನಿಂಗ್ಸ್‌ನಲ್ಲಿ 97 ರನ್ ಮತ್ತು 2ನೇ ಇನಿಂಗ್ಸ್‌ನಲ್ಲಿ 103 ರನ್ ಗಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದರು.

 ಈ ವರೆಗೆ ನಡೆದ ಮೂರು ಟೆಸ್ಟ್ ಗಳಲ್ಲಿ ಪತನಗೊಂಡಿರುವ 46 ವಿಕೆಟ್‌ಗಳಲ್ಲಿ 36 ವಿಕೆಟ್‌ಗಳನ್ನು ವೇಗದ ಬೌಲರ್‌ಗಳು ಪಡೆದಿದ್ದಾರೆ. ಭಾರತದ ಪರ ಉತ್ತಮ ಪ್ರದರ್ಶನ ನೀಡಿರುವ ಬೌಲರ್ ಹಾರ್ದಿಕ್ ಪಾಂಡ್ಯ ನಾಲ್ಕನೇ ಟೆಸ್ಟ್‌ನಲ್ಲೂ ಇಂಗ್ಲೆಂಡ್ ದಾಂಡಿಗರನ್ನು ಕಾಡುವುದನ್ನು ನಿರೀಕ್ಷಿಸಲಾಗಿದೆ.

ಜಸ್‌ಪ್ರೀತ್ ಬುಮ್ರಾ ಮಂಗಳವಾರ ನೆಟ್ ಪ್ರಾಕ್ಟೀಸ್‌ನಲ್ಲಿ ಭಾಗವಹಿಸಲಿಲ್ಲ. ವೇಗಿಗಳಾದ ಉಮೇಶ್ ಯಾದವ್, ಇಶಾಂತ್ ಶರ್ಮಾ ಮತ್ತು ಮುಹಮ್ಮದ್ ಶಮಿ ನೆಟ್ ಪ್ರಾಕ್ಟೀಸ್ ನಡೆಸಿದರು. ರವಿಚಂದ್ರನ್ ಅಶ್ವಿನ್ ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕಾರಣದಿಂದಾಗಿ ರವೀಂದ್ರ ಜಡೇಜ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಅಶ್ವಿನ್ ಬದಲಿಗೆ ಹೆಚ್ಚುವರಿಯಾಗಿ ಓರ್ವ ದಾಂಡಿಗನನ್ನು ಅಂತಿಮ ಹನ್ನೊಂದರ ಬಳಗ ಸೇರಿಸಿಕೊಳ್ಳಲು ಮುಂದಾದರೆ ಕರುಣ್ ನಾಯರ್‌ಗೆ ಅವಕಾಶ ಸಿಗಲಿದೆ. ಪ್ರಥ್ವಿ ಶಾ ಮತ್ತು ಹನುಮ ವಿಹಾರಿ ಅವಕಾಶಕ್ಕಾಗಿ ಇನ್ನಷ್ಟು ಕಾಯಬೇಕಾಗಿದೆ.

ಇಂಗ್ಲೆಂಡ್‌ನ ವೇಗಿ ಕ್ರಿಸ್ ವೋಕ್ಸ್ ಗಾಯಗೊಂಡಿದ್ದಾರೆ. ಅವರು ಕಣಕ್ಕಿಳಿಯುವುದು ಸ್ಪಷ್ಟಗೊಂಡಿಲ್ಲ. ಬೈರ್‌ಸ್ಟೋವ್ ಬದಲಿಗೆ ಜೇಮ್ಸ್ ವಿನ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಅಲಿಸ್ಟೈರ್ ಕುಕ್ ಕಳಪೆ ಫಾರ್ಮ್ ಎದುರಿಸುತ್ತಿದ್ದಾರೆ. 5 ಇನಿಂಗ್ಸ್‌ನಲ್ಲಿ ಕೇವಲ 80 ರನ್ ಕಲೆ ಹಾಕಿದ್ದಾರೆ.

► ಭಾರತ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಪ್ರಥ್ವಿ ಶಾ, ಲೋಕೇಶ್ ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್, ರಿಷಭ್ ಪಂತ್(ವಿಕೆಟ್ ಕೀಪರ್), ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ರವೀಂದ್ರ ಜಡೇಜ, ಹನುಮ ವಿಹಾರಿ, ಇಶಾಂತ್ ಶರ್ಮಾ, ಉಮೇಶ್ ಯಾದವ್ ಶಾರ್ದುಲ್ ಠಾಕೂರ್, ಮುಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ.

► ಇಂಗ್ಲೆಂಡ್: ಜೋ ರೂಟ್(ನಾಯಕ), ಅಲಿಸ್ಟೈರ್ ಕುಕ್, ಕೀಟನ್ ಜೆನ್ನಿಂಗ್ಸ್, ಜಾನಿ ಬೈರ್‌ಸ್ಟೋವ್, ಜೋಸ್ ಬಟ್ಲರ್, ಒಲಿವೆರ್ ಪೋಪ್, ಮೊಯಿನ್ ಅಲಿ, ಆದಿಲ್ ರಶೀದ್, ಸ್ಯಾಮ್ ಕರ್ರನ್, ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್, ಬೆನ್ ಸ್ಟೋಕ್ಸ್, ಜೇಮ್ಸ್ ವಿನ್ಸ್.

► ಪಂದ್ಯದ ಸಮಯ: ಅಪರಾಹ್ನ 3:30ಕ್ಕೆ ಆರಂಭ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News