ಸಿಬಿಐ ವಿಶೇಷ ಕೋರ್ಟ್‌ಗೆ ಶರಣಾದ ಲಾಲು ಪ್ರಸಾದ್ ಯಾದವ್

Update: 2018-08-30 06:38 GMT

ರಾಂಚಿ, ಆ.30: ಈ ವಾರ ಜಾರ್ಖಂಡ್ ಹೈಕೋರ್ಟ್ ತಾತ್ಕಾಲಿಕ ಜಾಮೀನು ರದ್ದುಪಡಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗುರುವಾರ ಸಿಬಿಐನ ವಿಶೇಷ ನ್ಯಾಯಾಲಯದಲ್ಲಿ ಶರಣಾದರು.

 ಬಹುಕೋಟಿ ಮೇವು ಹಗರಣದ ನಾಲ್ಕು ಪ್ರಕರಣದಲ್ಲಿ ಆರೋಪಿಯಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಪ್ರಸಾದ್ ಈ ವರ್ಷದ ಮೇನಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಆರು ವಾರಗಳ ತಾತ್ಕಾಲಿಕ ಜಾಮೀನು ಪಡೆದಿದ್ದರು. ಜಾಮೀನನ್ನು ಆ.14ರ ತನಕ ವಿಸ್ತರಿಸಲಾಗಿತ್ತು. ಹೈಕೋರ್ಟ್ ಇತ್ತೀಚೆಗೆ ನೀಡಿದ್ದ ಆದೇಶದಲ್ಲಿ ಆ.30 ರಂದು ಸಿಬಿಐ ನ್ಯಾಯಾಲಯಕ್ಕೆ ಶರಣಾಗುವಂತೆ ಸೂಚಿಸಿತ್ತು.

ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಾಲು ಪ್ರಸಾದ್ ಬುಧವಾರ ರಾಂಚಿಗೆ ತಲುಪಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿರ್ಸಾ ಮುಂಡಾ ಸೆಂಟ್ರಲ್ ಜೈಲಿನಲ್ಲಿ ಬಂದಿಯಾಗಿದ್ದ ಲಾಲು ಪ್ರಸಾದ್ ಅನಾರೋಗ್ಯದ ಕಾರಣ ರಾಂಚಿಯ ರಿಮ್ಸ್ ಆಸ್ಪತ್ರೆ ಹಾಗೂ ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮುಂಬೈ ಆಸ್ಪತ್ರೆಯಲ್ಲಿ ಮೂರು ವಾರ ಚಿಕಿತ್ಸೆ ಪಡೆದಿದ್ದ ಲಾಲು ಪ್ರಸಾದ್ ಆ.25 ರಂದು ಡಿಸ್ಚಾರ್ಚ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News