ಕ್ರೀಡಾ ಸಚಿವ ರಾಥೋಡ್ ಭಾರತೀಯ ಅಥ್ಲೀಟುಗಳಿಗೆ ತಾವೇ ಆಹಾರ ವಿತರಿಸಿದ್ದರೇ?

Update: 2018-08-30 07:39 GMT

ಹೊಸದಿಲ್ಲಿ, ಆ.30: ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಏಷ್ಯನ್ ಗೇಮ್ಸ್ ನಡೆಯುತ್ತಿರುವ ಜಕಾರ್ತದಲ್ಲಿ ಭಾರತೀಯ ಅಥ್ಲೀಟುಗಳಿಗೆ ನೀಡಲೆಂದು ಕೈಯ್ಯಲ್ಲಿ ಆಹಾರದ ಟ್ರೇ ಒಂದನ್ನು ಹಿಡಿದು ನಿಂತಿದ್ದಾರೆಂಬ ವಿವರಣೆ ಇರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೈಯ್ಯಲ್ಲಿ ಆಹಾರದ ಟ್ರೇ ಹಿಡಿದುಕೊಂಡು ಕ್ರೀಡಾ ಸಚಿವರು ಅಥ್ಲೀಟುಗಳೊಂದಿಗೆ ಮಾತನಾಡುತ್ತಿರುವುದು ಚಿತ್ರದಲ್ಲಿ ಕಾಣಿಸುತ್ತಿದೆ.

ಫ್ರಸ್ಟೇಟೆಡ್ ಇಂಡಿಯನ್ ಇದನ್ನು ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ, “ದ ಡ್ಯೂಡ್ ಹೋಲ್ಡಿಂಗ್ ದ ಟ್ರೇ ಈಸ್ ಅವರ್ ಸ್ಪೋರ್ಟ್ಸ್ ಮಿನಿಸ್ಟರ್” ಎಂದು ಬರೆದಿತ್ತಲ್ಲದೆ ಇಂತಹ ಒಂದು ಸಂಗತಿ ಐದು ವರ್ಷಗಳ ಹಿಂದೆ ಯೋಚಿಸಲೂ ಸಾಧ್ಯವಿಲ್ಲ ಎಂದು ಬರೆಯಲಾಗಿತ್ತು. ಸುಮಾರು 6,000 ಮಂದಿ ಈ ಪೋಸ್ಟ್ ಅನ್ನು ಶೇರ್ ಮಾಡಿದ್ದರು.

ನಕಲಿ ಸುದ್ದಿ ತಾಣ ‘ಪೋಸ್ಟ್ ಕಾರ್ಡ್ ನ್ಯೂಸ್’ ಸ್ಥಾಪಕ ಮಹೇಶ್ ಹೆಗ್ಡೆ ಕೂಡ ಇದೇ ಫೋಟೋ ಪೋಸ್ಟ್ ಮಾಡಿದ್ದರು. ಅವರ ಹೊರತಾಗಿ ತೆಲಂಗಾಣ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಕೆ. ಲಕ್ಷ್ಮಣ್, ಉಡುಪಿ ಶಾಸಕ ರಘುಪತಿ ಭಟ್, ಎಎಪಿ ದಿಲ್ಲಿ ಶಾಸಕ ಕಪಿಕ್ ಮಿಶ್ರಾ ಕೂಡ ಇದೇ ಫೋಟೋ ಪೋಸ್ಟ್ ಮಾಡಿದ್ದರು. ಈ ಚಿತ್ರ ಶೇರ್ ಮಾಡಿದವರಲ್ಲಿ ಹಲವರು ಪ್ರಧಾನಿ ಮತ್ತು ರೈಲ್ವೆ ಸಚಿವರ ಫಾಲೋವರ್ಸ್ ಕೂಡ ಇದ್ದರು.

ರಾಜಕೀಯ ನಾಯಕರ ಹೊರತಾಗಿ ‘ಎನ್‍ ಡಿಟಿವಿ’, ‘ಡಿಎನ್‍ಎ’, ‘ದೈನಿಕ್ ಜಾಗರಣ್’,  ‘ಇಂಡಿಯಾ ಟಿವಿ’ ಕೂಡ ಇದೇ ಚಿತ್ರದ ಆಧಾರದಲ್ಲಿ ವರದಿಗಳನ್ನು ಪ್ರಕಟಿಸಿ ಸಚಿವರನ್ನು ಹೊಗಳಿದ್ದವು. ಸಚಿವರನ್ನು ಹೊಗಳಿದವರಲ್ಲಿ ಕೆಲ ಹಿರಿಯ ಪತ್ರಕರ್ತರೂ ಸೇರಿದ್ದರು.

ವಾಸ್ತವವೇನು?: ಹಾಗಾದರೆ ಕ್ರೀಡಾ ಸಚಿವರು ನಿಜವಾಗಿಯೂ ನಮ್ಮ ಅಥ್ಲೀಟುಗಳಿಗೆ ಆಹಾರ ಕೊಂಡು ಹೋಗಿ ಕೊಡುತ್ತಿರುವ ಚಿತ್ರ ಇದಾಗಿದೆಯೇ ಎಂಬ ಪ್ರಶ್ನೆ ಇದೆ. altnews.in ಇದರ ಹಿಂದಿನ ಸತ್ಯವನ್ನು ಕಂಡುಕೊಂಡಿದೆ.

ಈ ವೈರಲ್ ಚಿತ್ರವನ್ನು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಕೂಡ ಆಗಸ್ಟ್ 26ರಂದು ಇತರ ಕೆಲವೊಂದು ಫೋಟೋಗಳನ್ನು ಪೋಸ್ಟ್ ಮಾಡಿದೆ. ಆದರೆ  ಸಚಿವರು ಆಟಗಾರರಿಗೆ ಆಹಾರ  ಕೊಂಡು ಹೋಗುತ್ತಿರುವ ಚಿತ್ರವೆಂದು ಎಲ್ಲಿಯೂ ಬರೆದಿಲ್ಲ. ಸ್ವತಃ ರಾಥೋಡ್ ಕೂಡ ಈ ಬಗ್ಗೆ ಹೇಳಿಕೊಂಡಿಲ್ಲ. ಅದೇ ದಿನ ರಾಥೋಡ್ ಅವರು ಕ್ರೀಡಾಳುಗಳೊಂದಿಗೆ ಇರುವ ಹಲವು ಚಿತ್ರಗಳಿದ್ದರೂ ಕೇವಲ ಇದೊಂದೇ ಚಿತ್ರ ವೈರಲ್ ಆಗಿದೆ.

ಆ ದಿನದ ಹಲವು ಫೋಟೋಗಳನ್ನು ಗಮನಿಸಿದಾಗ ರಾಥೋಡ್ ಅವರು ತಮಗಾಗಿಯೇ ಆಹಾರ ತೆಗೆದುಕೊಂಡು ಹೋಗುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ. ಮೂಲವೊಂದರಿಂದ altnews.inಗೆ ದೊರೆತ ಮಾಹಿತಿಯಂತೆ ಸಚಿವರು ತಮಗೆ ಬೇಕಿದ್ದ ಆಹಾರವನ್ನು ತೆಗೆದುಕೊಂಡು ಟೇಬಲ್ ನತ್ತ ಹೋಗುತ್ತಿದ್ದಾಗ ಆಟಗಾರರೊಡನೆ ಮಾತನಾಡುವ ಚಿತ್ರ ಅದಾಗಿತ್ತು. ಸಚಿವರು ಆಹಾರ ತುಂಬಿಸುವ ಪೇಪರ್ ಬೌಲ್ ಗಳನ್ನು ಒಂದೆಡೆಯಿಂದ ತಮ್ಮ ಟ್ರೇನಲ್ಲಿ ಇರಿಸುವ ಚಿತ್ರವೂ ಒಂದಿದೆ.

ಕೃಪೆ: altnews.in 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News