ಜೇಟ್ಲಿಯವರೇ ನಿಮಗೆ ಕೇವಲ 6 ಗಂಟೆಗಳ ಸಮಯವಿದೆ: ರಾಹುಲ್ ಹೊಸ ಸವಾಲು

Update: 2018-08-30 10:30 GMT

ಹೊಸದಿಲ್ಲಿ, ಆ.30: ರಾಫೇಲ್ ಡೀಲ್ ಗೆ ಸಂಬಂಧಿಸಿದಂತೆ ಸರ್ವಪಕ್ಷಗಳ ಸಂಸದರನ್ನೊಳಗೊಂಡ ಸಂಸದೀಯ ಸಮಿತಿ ರಚಿಸಲು ತಾವು ನೀಡಿದ 24 ಗಂಟೆಗಳ ಗಡುವು ಮುಗಿಯಲು ಇನ್ನು ಕೇವಲ ಆರು ಗಂಟೆಗಳಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ನೆನಪಿಸಿದ್ದಾರೆ.

ರಾಹುಲ್ ಅವರು ಈ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತಂತೆ ಸುಳ್ಳು ಹೇಳುತ್ತಿದ್ದಾರೆಂದು ಆರೋಪಿಸಿ ಅವರಿಗೆ ಫೇಸ್ ಬುಕ್ ನಲ್ಲಿ ಅರುಣ್ ಜೇಟ್ಲಿ  15 ಪ್ರಶ್ನೆಗಳನ್ನು ಕೇಳಿದ್ದಕ್ಕೆ ಪ್ರತಿಯಾಗಿ ರಾಹುಲ್ ಅವರು ಜೇಟ್ಲಿಗೆ 24 ಗಂಟೆಗಳ ಸವಾಲೊಡ್ಡಿದ್ದರು.

``ರಾಫೇಲ್ ಜೆಪಿಸಿ ರಚಿಸಲು ನಿಮಗೆ ನೀಡಲಾಗಿದ್ದ ಗಡುವು ಮುಗಿಯಲು ಆರು ಗಂಟೆಗಳಿಗೂ ಕಡಿಮೆ ಸಮಯವಿದೆ. ಯುವ ಭಾರತ ಕಾಯುತ್ತಿದೆ. ನೀವಂತೂ ಮೋದೀಜಿ ಹಾಗೂ ಅನಿಲ್ ಅಂಬಾನಿ ಜಿ ಅವರ ಮನವೊಲಿಸುವ ಕಾರ್ಯದಲ್ಲಿ ವ್ಯಸ್ತರಾಗಿರಬಹುದು. ಅವರೇಕೆ ನಿಮ್ಮ ಮಾತನ್ನು ಕೇಳಿ ಇದಕ್ಕೆ ಅನುಮತಿಸಬೇಕು!,'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

`ಗ್ರೇಟ್ ರಾಫೇಲ್ ರಾಬರಿ' ಎಂದು ಬಣ್ಣಿಸಿ ಅದರ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸುವಂತೆ ಬುಧವಾರ ಸಂಜೆ ಆಗ್ರಹಿಸಿದ್ದ ರಾಹುಲ್, ವಿತ್ತ ಸಚಿವರಿಗೆ ಈ ನಿಟ್ಟಿನಲ್ಲಿ 24 ಗಂಟೆಗಳೊಳಗೆ ಪ್ರತಿಕ್ರಿಯಿಸುವಂತೆ ಹೇಳಿದ್ದರು.

ಅನಿಲ್ ಅಂಬಾನಿಯ ಹೆಸರೆತ್ತದೆಯೇ `ಪ್ರಧಾನಿ ಮೋದಿ ತಮ್ಮ ಸ್ನೇಹಿತನನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ,'' ಎಂದು ರಾಹುಲ್ ಟ್ವೀಟ್ ಮಾಡಿದ್ದರು.

ಈ ಟ್ವಿಟರ್ ಯುದ್ಧದಲ್ಲಿ ನಂತರ ಸೇರಿಕೊಂಡ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರಾಹುಲ್ ಅವರ ಟ್ವೀಟ್ ನಲ್ಲಿದ್ದ ಜೆಪಿಸಿ ಪದ ಉಲ್ಲೇಖಿಸಿ ಅದು `ಜೂಟ್ ಪಾರ್ಟಿ ಕಾಂಗ್ರೆಸ್' ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News