‘ನೋಟು ನಿಷೇಧ’ ದೇಶ ಕಂಡ ಎರಡನೇ ತುರ್ತುಪರಿಸ್ಥಿತಿ

Update: 2018-08-30 18:51 GMT

‘‘ಹಿಮಾಲಯವನ್ನು ಅಗೆದು ಹಿಡಿದದ್ದೇನು?’’ ಕೊನೆಗೂ ಉತ್ತರಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ವಿದೇಶದಿಂದ ಕಪ್ಪು ಹಣ ತರುತ್ತೇವೆ ಎಂದು ಅಧಿಕಾರ ಹಿಡಿದ ಸರಕಾರ, ಹೊರಟದ್ದು ದೇಶದೊಳಗಿರುವ ಕಪ್ಪು ಹಣವನ್ನು ಮಟ್ಟ ಹಾಕುವುದಕ್ಕೆ. ದೇಶದಲ್ಲಿ ಇಂದು ಕಪ್ಪು ಹಣ ಸಂಗ್ರಹವಾಗಿರುವುದು ಮಠಗಳು, ದೇವಸ್ಥಾನಗಳ ಹುಂಡಿಗಳಲ್ಲಿ ಮತ್ತು ಸ್ವಾಮೀಜಿಗಳ ಗುಪ್ತ ತಿಜೋರಿಗಳಲ್ಲಿ ಎನ್ನುವುದು ದೇಶದ ಪ್ರತಿಯೊಬ್ಬರಿಗೂ ಗೊತ್ತಿದೆ. ಅದನ್ನು ಹೊರತು ಪಡಿಸಿದರೆ ರಾಜಕಾರಣಿಗಳ ನಿವಾಸಗಳಲ್ಲಿ. ಆದರೆ ನರೇಂದ್ರ ಮೋದಿ ಕಪ್ಪು ಹಣವನ್ನು ಹುಡುಕಿದ್ದು, ದುಡಿದು ಉಣ್ಣುವ ಮಧ್ಯಮವರ್ಗದವರ ಹರಕಲು ಜೇಬಿನಲ್ಲಿ. ಕಪ್ಪು ಹಣ ಹುಡುಕುವ ಹೆಸರಿನಲ್ಲಿ ನೋಟು ನಿಷೇಧ ಮಾಡಿ, ಬಡವರು ಕೂಡಿಟ್ಟಿದ್ದ ಹಣವನ್ನೆಲ್ಲ ಬ್ಯಾಂಕಿಗೆ ತುಂಬಿಸುವಂತೆ ಮಾಡಿ, ಬಳಿಕ ತಮ್ಮದೇ ಹಣಕ್ಕೆ ಬ್ಯಾಂಕ್‌ನ ಮುಂದೆ ಕ್ಯೂ ನಿಲ್ಲುವಂತೆ ಮಾಡಿದರು. ಭಾರತದ ಅರ್ಥವ್ಯವಸ್ಥೆಯನ್ನೇ ಅಲ್ಲೋಕಲ್ಲೋಲ ಮಾಡಿದರು. ಗ್ರಾಮೀಣ ಉದ್ದಿಮೆಗಳು ನಾಶವಾದವು. ನಗರಗಳಲ್ಲಿ ನಿರುದ್ಯೋಗ ಸೃಷ್ಟಿಯಾಯಿತು. ಡಾಲರ್‌ನ ಎದುರು ರೂಪಾಯಿ ಕುಸಿಯುತ್ತಲೇ ಹೋಯಿತು. ಇಷ್ಟೆಲ್ಲ ಆದ ಬಳಿಕ ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಯಾವುದೇ ಕಪ್ಪು ಹಣ ಬಹಿರಂಗವಾಗಲಿಲ್ಲ ಎಂದು ಅಧಿಕೃತವಾಗಿ ಘೋಷಿಸಿದೆ.

ಅಮಾನ್ಯಗೊಂಡ ನೋಟುಗಳ ಪೈಕಿ ಶೇ. 99.3ರಷ್ಟು ಕರೆನ್ಸಿ ನೋಟುಗಳು ವಾಪಸ್ ಬಂದಿವೆ ಎಂದು ಆರ್‌ಬಿಐ ಸ್ಪಷ್ಟೀಕರಣ ನೀಡಿದೆ. ಇದರ ಅರ್ಥವೇನು? ಹಾಗಾದರೆ ಭಾರತದಲ್ಲಿ ಕಪ್ಪು ಹಣ ಇದ್ದಿರಲೇ ಇಲ್ಲವೆಂದೇ? ನೋಟು ನಿಷೇಧದ ಮೂಲಕ ಈ ದೇಶದಲ್ಲಿ ಇರುವ ಹಣವೆಲ್ಲ ಸಕ್ರಮವಾದುದು ಎಂದು ಸರಕಾರವೇ ಘೋಷಿಸಿದಂತಾಗಲಿಲ್ಲವೇ? ಪ್ರಧಾನಿ ನರೇಂದ್ರ ಮೋದಿಯವರ ಮಾತನ್ನು ನಂಬಿ ಜನಸಾಮಾನ್ಯರು ಮಾಡಿದ ತ್ಯಾಗ ಬಲಿದಾನಗಳಿಗೆ ಏನು ಅರ್ಥ ಉಳಿಯಿತು?

ನೋಟು ನಿಷೇಧಕ್ಕೆ ಸರಕಾರ ಹಲವು ಕಾರಣಗಳನ್ನು ನೀಡಿತ್ತು. ಭಯೋತ್ಪಾದನೆಯನ್ನು ಇದರಿಂದ ತಡೆಯಲಾಗುತ್ತದೆ ಎಂದು ಆರಂಭದಲ್ಲಿ ಹೇಳಿಕೊಂಡಿತು. ಕಾಶ್ಮೀರದಲ್ಲಿ ಕಲ್ಲು ತೂರಾಟ ನಿಲ್ಲುತ್ತದೆ ಎಂದಿತು. ಕಳ್ಳನೋಟುಗಳಿಗೆ ಈ ಮೂಲಕ ಕಡಿವಾಣ ಹಾಕುತ್ತೇವೆ ಎಂದು ಕೊಚ್ಚಿಕೊಂಡಿತು. ರೂಪಾಯಿಯ ವೌಲ್ಯ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತದೆ ಎಂದೂ ಆಸೆ ಹುಟ್ಟಿಸಿತು. ಆದರೆ ದೇಶದ ಯಾವ ಸಮಸ್ಯೆಯೇ ಬಗೆಹರಿಯಲಿಲ್ಲ. ಬದಲಿಗೆ ಆ ಸಮಸ್ಯೆಗಳೆಲ್ಲ ದುಪ್ಪಟ್ಟಾಯಿತು. 2018ರ ಮಾರ್ಚ್‌ನಲ್ಲಿ ಕೊನೆಗೊಂಡ ವಿತ್ತವರ್ಷದಲ್ಲಿ 50 ಹಾಗೂ 100 ರೂ. ಮುಖಬೆಲೆಯ ನಕಲಿನೋಟುಗಳು ಪತ್ತೆಯಾದ ಪ್ರಕರಣಗಳು ಕಳೆದ ಮೂರು ವರ್ಷಗಳಲ್ಲೇ ಅತ್ಯಧಿಕವಾಗಿತ್ತು. 2015-16ರಲ್ಲಿ 50 ರೂ. ಮುಖಬೆಲೆಯ 6,453 ನಕಲಿ ನೋಟುಗಳು ಪತ್ತೆಯಾಗಿದ್ದರೆ, 2016-17ರಲ್ಲಿ ಆ ಸಂಖ್ಯೆಯು 9,222ಕ್ಕೆ ಜಿಗಿಯಿತು ಹಾಗೂ 2017-18ರ ಸಾಲಿನಲ್ಲಿ ಅದು 23,447ಕ್ಕೇರಿತು.ಇನ್ನು 2015-16ರಲ್ಲಿ 100 ರೂ.ಮುಖಬೆಲೆಯ 2,21,447 ಖೋಟಾ ನೋಟುಗಳು ಪತ್ತೆಯಾಗಿದ್ದವು. ನೋಟು ನಿಷೇಧ ಜಾರಿಗೊಂಡ ವಿತ್ತವರ್ಷ ವಾದ 2016-17ರಲ್ಲಿ ಪತ್ತೆಯಾದ ಆ ಸಂಖ್ಯೆ 1,77,195ಕ್ಕೇರಿತ್ತು. ಆನಂತರ 2017-18ರಲ್ಲಿ 100 ರೂ. ಮುಖಬೆಲೆಯ 2,39,182 ನಕಲಿ ನೋಟುಗಳು ಪತ್ತೆಯಾಗಿದ್ದು, ಗರಿಷ್ಠ ಹೆಚ್ಚಳವನ್ನು ಕಂಡಿದೆ.

ನೋಟು ಅಮಾನ್ಯದ ಬಳಿಕ ಚಲಾವಣೆಗೆ ಬಂದಿರುವ 2000 ರೂ. ಮುಖಬೆಲೆಯ ನೋಟುಗಳು ಉತ್ತಮ ಭದ್ರತಾ ಕ್ರಮಗಳೊಂದಿಗೆ ಮುದ್ರಿಸಲ್ಪಟ್ಟಿದ್ದು, ಅವುಗಳನ್ನು ನಕಲಿ ಮಾಡುವುದು ಅಸಾಧ್ಯವಾದುದೆಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ ಆರ್‌ಬಿಐನ ವಾರ್ಷಿಕ ವರದಿಯು 2016-17ರಲ್ಲಿ 2 ಸಾವಿರ ರೂ. ಮುಖಬೆಲೆಯ ಕೇವಲ 638 ನಕಲಿ ನೋಟುಗಳು ಪತ್ತೆಯಾಗಿದ್ದರೆ, 2017-18ರ ಸಾಲಿನಲ್ಲಿ ಆ ಸಂಖ್ಯೆ 17,929 (36 ಕೋಟಿ ರೂ.)ಕ್ಕೇರಿತು. ಕಳೆದ ಸಾಲಿಗೆ ಹೋಲಿಸಿದರೆ, ಪತ್ತೆಯಾದ ಖೋಟಾನೋಟುಗಳ ಒಟ್ಟಾರೆ ಸಂಖ್ಯೆ 31.4 ಶೇಕಡದಷ್ಟು ಕಡಿಮೆಯಾಗಿತ್ತು. ಯಾಕೆಂದರೆ 2016ರಲ್ಲಿ 500 ಹಾಗೂ 1 ಸಾವಿರ ರೂ. ಮುಖಬೆಲೆಯ ನಕಲಿ ನೋಟುಗಳ ಚಲಾವಣೆ ಕಡಿಮೆ ಯಾಗಿರುವುದೇ ಇದಕ್ಕೆ ಕಾರಣ. ಆದಾಗ್ಯೂ, ವಾಸ್ತವಿಕವಾಗಿ 500 ರೂ. ಮುಖಬೆಲೆಯ ಹೊಸ ಕರೆನ್ಸಿ ನೋಟುಗಳು ಬಿಡುಗಡೆಯಾದ ಬಳಿಕ ಖೋಟಾ ನೋಟು ಪತ್ತೆ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, 2016-17ರ ಸಾಲಿನಲ್ಲಿ 199 ನೋಟುಗಳು ಹಾಗೂ 2017-18ರಲ್ಲಿ 9892 ನೋಟುಗಳು ಪತ್ತೆಯಾಗಿದ್ದವು.

ಇದೇ ಸಂದರ್ಭದಲ್ಲಿ ಬ್ಯಾಂಕಿಗೆ ಶೇ. 100ರಷ್ಟು ಹಣ ಬಂದು ಬಿದ್ದರೂ ಅವನ್ನು ಸಕ್ರಮ ಹಣ ಎಂದು ಹೇಳುವಂತಿಲ್ಲ. ಒಂದು ರೀತಿಯಲ್ಲಿ, ಕಪ್ಪು ಹಣವನ್ನು ಬಚ್ಚಿಟ್ಟವರಿಗೆಲ್ಲ ಸರಕಾರ ನೋಟು ನಿಷೇಧದ ಮೂಲಕ ಕ್ಲೀನ್ ಚಿಟ್ ನೀಡಿತು. ಅಕ್ರಮ ದಾರಿಯಲ್ಲಿ ಅವರೆಲ್ಲರೂ ತಮ್ಮ ತಮ್ಮ ಕಪ್ಪು ಹಣವನ್ನು ಬಿಳುಪು ಮಾಡಿಕೊಂಡಿದ್ದಾರೆ. ಹಲವು ರಾಜಕಾರಣಿಗಳು ಈ ವ್ಯವಹಾರದಲ್ಲಿ ಒಳಗೊಂಡಿರುವ ಕುರಿತಂತೆ ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿವೆ. ಅದರ ನಾಯಕರಲ್ಲಿ ಅಮಿತ್ ಶಾ ಹೆಸರೂ ಇದೆ. ಬ್ಯಾಂಕ್‌ಗೆ ಬಂದ ಈ ಹಣದ ಪೈಕಿ ಎಷ್ಟು ಹಣ ಅಕ್ರಮವಾದುದಾಗಿದೆ ಹಾಗೂ ಯಾವ ಠೇವಣಿದಾರರು ತಮ್ಮ ಕಪ್ಪುಹಣವನ್ನು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತಂದಿದ್ದಾರೆ ಎಂಬುದನ್ನು ಪತ್ತೆಹಚ್ಚುವಲ್ಲಿ ಆದಾಯ ತೆರಿಗೆ ಹಾಗೂ ಇತರ ತನಿಖಾ ಸಂಸ್ಥೆಗಳು ಯಾವುದೇ ಮುತುವರ್ಜಿ ವಹಿಸಿಲ್ಲ.

ನೋಟು ನಿಷೇಧದ ಮಾಹಿತಿ ಮೊದಲೇ ಹೊರಬಿದ್ದಿದ್ದು, ಸರಕಾರದ ಜೊತೆಗಿರುವ ಹಲವು ಕಾರ್ಪೊರೇಟ್ ಶಕ್ತಿಗಳು, ಸಂಘಟನೆಗಳು, ರಾಜಕೀಯ ಮುಖಂಡರು ತಮ್ಮ ಹಣವನ್ನು ಬಿಳಿ ಮಾಡಿಕೊಂಡಿದ್ದಾರೆ ಎಂಬ ಆರೋಪವೂ ಇದೆ. ಇದೀಗ ಸರಕಾರ ಡಿಜಿಟಲೀಕರಣದ ಮಾತುಗಳನ್ನಾಡುತ್ತಿದೆ. ನೋಟು ನಿಷೇಧದಿಂದಾಗಿ ಆರ್‌ಬಿಐ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಸರಕಾರಕ್ಕೆ ಇಕ್ಕಟ್ಟು ತಂದಿದೆ. ಹೊಸದಾಗಿ ನೋಟುಗಳ ಮುದ್ರಣ ದೊಡ್ಡ ಆರ್ಥಿಕ ಹೊರೆಯನ್ನು ಹಾಕಿದೆ. ಇತ್ತ ಕಪ್ಪು ಹಣವೂ ಬಂದಿಲ್ಲ. ಇದರಿಂದ ಆರ್‌ಬಿಐ ತೀವ್ರ ನಷ್ಟಕ್ಕೀಡಾಗಿದೆ.

ನೋಟುಗಳನ್ನು ಪೂರೈಸಲಾಗದೆ ವೈಫಲ್ಯವನ್ನು ಮುಚ್ಚಿ ಹಾಕಲು, ಡಿಜಿಟಲೀಕರಣ ಮಂತ್ರ ಜಪಿಸುತ್ತಿದೆ. ಹಳ್ಳಿಗಳೇ ಹೆಚ್ಚಿರುವ, ಇನ್ನೂ ಮೊಬೈಲ್‌ಗಳೇ ತಲುಪದ ಹಳ್ಳಿಗಳಿರುವ ದೇಶದಲ್ಲಿ ಡಿಜಿಟಲೀಕರಣ ಕ್ರಾಂತಿಯೇ ಹಾಸ್ಯಾಸ್ಪದ. ಇದರಿಂದಾಗಿ ಸಣ್ಣ ಪುಟ್ಟ ವ್ಯಾಪಾರಿಗಳು ಬೀದಿಗೆ ಬೀಳುವಂತಾಗಿದೆ ಮಾತ್ರವಲ್ಲ, ಬೃಹತ್ ಮಾಲ್‌ಗಳು, ಸೂಪರ್ ಬಝಾರ್‌ಗಳು ಇದರ ಲಾಭವನ್ನು ತಮ್ಮದಾಗಿಸಿಕೊಳ್ಳುತ್ತಿವೆ. ನೋಟು ನಿಷೇಧದ ಬೆನ್ನಿಗೇ, ಸರಕಾರ ಜಾನುವಾರು ಮಾರಾಟ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಮುಂದಾದದ್ದು ಗ್ರಾಮೀಣ ಜನತೆಯ ಪಾಲಿಗೆ ಇನ್ನೊಂದು ಬರೆಯಾಗಿತ್ತು. ಗ್ರಾಮೀಣ ಜನರ ಪಾಲಿನ ಕರೆನ್ಸಿಯಾಗಿದ್ದ ಜಾನುವಾರುಗಳು ನಕಲಿ ಗೋರಕ್ಷಕರ ಪಾಲಾಯಿತು. ಜಾನುವಾರು ಸಾಕಾಣಿಕೆಯ ವೆಚ್ಚ ಹೆಚ್ಚಿತು ಮಾತ್ರವಲ್ಲ, ಇರುವ ಅನುಪಯುಕ್ತ ಜಾನುವಾರುಗಳನ್ನೂ ಅವರು ಸಾಕಬೇಕಾದ ಸ್ಥಿತಿ ನಿರ್ಮಾಣವಾಯಿತು. ಒಂದು ರೀತಿಯಲ್ಲಿ ನೋಟು ನಿಷೇಧ ಮತ್ತು ಆನಂತರದ ಬೆಳವಣಿಗೆಗಳು ದೇಶ ಕಂಡ ಎರಡನೇ ತುರ್ತು ಪರಿಸ್ಥಿತಿಯಾಗಿದೆ. ಸರಕಾರ ಇನ್ನಾದರೂ, ಆ ಮಹಾ ಪ್ರಮಾದಕ್ಕೆ ದೇಶದ ಕ್ಷಮೆ ಯಾಚಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News