ಇದು ಚುನಾವಣಾ ಗಿಮಿಕ್: ನ್ಯಾ. ಬಿ. ಜಿ. ಕೊಲ್ಸೆ ಪಾಟೀಲ್

Update: 2018-09-01 07:03 GMT

“ಇಶ್ರತ್ ಜಹಾನ್ ನನ್ನನ್ನು ಕೊಲ್ಲಲು ಬಂದಿದ್ದಾಳೆ ಎಂದು ಮೋದಿ ಹೇಳಿದ್ದರು”

ನಕ್ಸಲರೊಂದಿಗೆ ನಂಟು ಹೊಂದಿದ್ದಾರೆಂಬ ಶಂಕೆಯಲ್ಲಿ ಆ.28ರಂದು ಹಲವಾರು ರಾಜ್ಯಗಳಲ್ಲಿ ಎಡಪಂಥೀಯ ಚಿಂತಕರ ನಿವಾಸಗಳ ಮೇಲೆ ದಾಳಿ ನಡೆಸಿದ ಮಹಾರಾಷ್ಟ್ರ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಹೈದರಾಬಾದ್‌ನ ಖ್ಯಾತ ಕವಿ ವರವರ ರಾವ್,ಮುಂಬೈ ಮತ್ತು ಪುಣೆಯ ಸಾಮಾಜಿಕ ಹೋರಾಟಗಾರರಾದ ವೆರ್ನನ್ ಗೊನ್ಸಾಲ್ವಿಸ್ ಮತ್ತು ಅರುಣ ಫೆರೇರಾ, ಕಾರ್ಮಿಕ ಒಕ್ಕೂಟ ಕಾರ್ಯಕರ್ತೆ ಹಾಗೂ ನ್ಯಾಯವಾದಿ ಫರೀದಾಬಾದ್‌ನ ಸುಧಾ ಭಾರದ್ವಾಜ್ ಮತ್ತು ದಿಲ್ಲಿಯ ನಾಗರಿಕ ಹಕ್ಕುಗಳ ಕಾರ್ಯಕರ್ತ ಗೌತಮ ನವ್ಲಾಖಾ ಅವರು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಗೃಹಬಂಧನದಲ್ಲಿದ್ದಾರೆ. ಈ ಬಂಧನಗಳು ದೇಶಾದ್ಯಂತ ಆಕ್ರೋಶಗಳನ್ನು ಹುಟ್ಟುಹಾಕಿದ್ದು,ಕರಾಳ ತುರ್ತು ಸ್ಥಿತಿಯ ದಿನಗಳನ್ನು ನೆನಪಿಸುತ್ತಿದೆ.
ಕಳೆದ ವರ್ಷದ ಜ.1ರಂದು ಪುಣೆ ಸಮೀಪದ ಭೀಮಾ- ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆಗಾಗಿ ಎಲ್ಗಾರ್ ಪರಿಷದ್ ಭೀಮಾ-ಕೋರೆಗಾಂವ್ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ಬಳಿಕ ಸಂಭವಿಸಿದ್ದ ಹಿಂಸಾಚಾರ ಕುರಿತು ಪುಣೆ ಪೊಲೀಸರು ನಡೆಸುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಈ ದಾಳಿಗಳನ್ನು ನಡೆಸಲಾಗಿತ್ತು.
ಮಾವೋವಾದಿಗಳ ನಡುವೆ ವಿನಿಮಯಗೊಂಡಿದ್ದವು ಎನ್ನಲಾಗಿರುವ ಎರಡು ಪತ್ರಗಳು ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಹತ್ಯೆಗಳಿಗೆ ಒಳಸಂಚನ್ನು ಬೆಟ್ಟು ಮಾಡುತ್ತಿವೆ ಎನ್ನುವುದು ಪೊಲೀಸ್ ಅಧಿಕಾರಿಗಳ ಹೇಳಿಕೆ. ಈ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ಮೊದಲ ದಾಳಿಗಳು ನಡೆದಿದ್ದು, ಎರಡನೇ ಬಾರಿ ಆ.28ರಂದು ನಡೆದಿವೆ.
ಎಲ್ಗಾರ್ ಪರಿಷದ್‌ನ ಸಹಸ್ಥಾಪಕರಾದ ಬಾಂಬೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನ್ಯಾ. ಬಿ. ಜಿ. ಕೊಲ್ಸೆ ಪಾಟೀಲ್ ಅವರು ಇಂಗ್ಲಿಷ್ ಸುದ್ದಿ ಜಾಲತಾಣದ ವರದಿಗಾರ ಸೈಯದ್ ಫಿರ್ದೌಸ್ ಅಶ್ರಫ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ಈ ದಾಳಿಗಳು ಮತ್ತು ಬಂಧನಗಳ ಬಗ್ಗೆ ಮಾತನಾಡಿ, ಮೋದಿ ಆಡಳಿತದಲ್ಲಿ ಪ್ರತಿಯೊಂದು ಏಜೆನ್ಸಿಯೂ ಒತ್ತಡದಲ್ಲಿದೆ ಮತ್ತು ರಾಜಕೀಕರಣಗೊಂಡಿದೆ ಎಂದು ಟೀಕಿಸಿದ್ದಾರೆ. ಪ್ರಶ್ನೋತ್ತರ ರೂಪದ ಅವರ ಸಂದರ್ಶನದ ಸಾರಾಂಶ ಇಲ್ಲಿದೆ

♦ ಹಲವು ರಾಜ್ಯಗಳಲ್ಲಿ ದಿಢೀರ್ ದಾಳಿಗಳನ್ನು ನಡೆಸಿ ಎಡಪಂಥೀಯ ಚಿಂತಕರನ್ನು ಬಂಧಿಸಲಾಗಿದೆ ಮತ್ತು ಪ್ರಧಾನಿ ಮೋದಿ ಹತ್ಯೆಗೆ ಒಳಸಂಚಿನ ಬಗ್ಗೆ ಕೇಳಿಬರುತ್ತಿದೆ. ಈ ಬಗ್ಗೆ ನೀವೇನು ಹೇಳುತ್ತೀರಿ?
ಉ: ಅವರು ಜನರ ಗಮನವನ್ನು ಮನುವಾದಿಗಳಿಂದ ನಕ್ಸಲರತ್ತ ತಿರುಗಿಸಲು ಪ್ರಯತ್ನಿಸುತ್ತಿದ್ದಾರಷ್ಟೇ. ಕರ್ನಾಟಕ ಎಟಿಎಸ್ ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಪ್ರೊ.ಎಂ.ಎಂ.ಕಲಬುರ್ಗಿ ಅವರ ಹತ್ಯೆಗಳಿಗೂ ಮಹಾರಾಷ್ಟ್ರಕ್ಕೂ ನಂಟು ಕಲ್ಪಿಸಿರುವುದರಿಂದ ಮಹಾರಾಷ್ಟ್ರ ಎಟಿಎಸ್ ಕ್ರಮ ಕೈಗೊಳ್ಳುವ ಒತ್ತಡದಲ್ಲಿತ್ತು. ಈ ಜನರನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಕರ್ನಾಟಕ ಎಟಿಎಸ್ ಬಯಸಿದೆ,ಹೀಗಾಗಿ ಸಾಮಾಜಿಕ ಹೋರಾಟಗಾರರನ್ನು ಬಂಧಿಸುವ ಮೂಲಕ ಮಹಾರಾಷ್ಟ್ರ ಎಟಿಎಸ್ ಈ ಕ್ರಮವನ್ನು ತೆಗೆದುಕೊಂಡಿದೆ.
ಈ ಮನುವಾದಿಗಳು ಭಾರತೀಯರ ಗಮನವನ್ನು ನಕ್ಸಲರತ್ತ ತಿರುಗಿಸಲು ಬಯಸಿದ್ದಾರೆ.
 ವಾಸ್ತವದಲ್ಲಿ ಸಾಂಸ್ಕೃತಿಕ ಸಂಘಟನೆಯಾಗಿರುವ ಎಲ್ಗಾರ್ ಪರಿಷದ್‌ಗೂ ನಕ್ಸಲರಿಗೂ ಯಾವುದೇ ಸಂಬಂಧವೇ ಇಲ್ಲ. ಆದರೂ ಎಟಿಎಸ್ ಈ ಸಂಬಂಧವನ್ನು ಕಲ್ಪಿಸುತ್ತಿದೆ.
ಅವರು ಈ ದಾಳಿಗಳಿಗೆ ತಥಾಕಥಿತ ನಕ್ಸಲ್‌ವೋರ್ವನೊಂದಿಗೆ ನಂಟು ಕಲ್ಪಿಸುತ್ತಿದ್ದಾರೆ. ನಿಮಗೆ ಗೊತ್ತಿರಲಿ,ಈ ವ್ಯಕ್ತಿಯನ್ನು 2014ರಲ್ಲಿ ನ್ಯಾಯಾಲಯಗಳು ಗೌರವಪೂರ್ವಕವಾಗಿ ಖುಲಾಸೆಗೊಳಿಸಿದ್ದವು ಮತ್ತು ಸಂಶಯದ ಲಾಭ ಈ ಖುಲಾಸೆಗೆ ಕಾರಣವಾಗಿರಲಿಲ್ಲ. ಸುಧೀರ್ ದವಳೆ ಎಂಬ ಈ ವ್ಯಕ್ತಿ ಎಲ್ಗಾರ್ ಪರಿಷದ್‌ನ ಕಾರ್ಯಕರ್ತರಲ್ಲೊಬ್ಬನಾಗಿದ್ದ.
 ಜ.1ರ ಭೀಮಾ-ಕೋರೆಗಾಂವ್ ಕಾರ್ಯಕ್ರಮದಲ್ಲಿ ಪ್ರಗತಿಪರರ ಪಾಲ್ಗೊಳ್ಳುವಿಕೆ ದೃಷ್ಟಿಯಲ್ಲಿ ನಾನು ಮತ್ತು ನ್ಯಾ.(ನಿವೃತ್ತ) ಪಿ.ಬಿ.ಸಾವಂತ್ ಅವರು ಎಲ್ಗಾರ್ ಪರಿಷದ್ ಸಂಘಟಿಸಿ ದ್ದೆವು. ಅವರು ಒಂದು ದಿನ ಮುಂಚಿತವಾಗಿಯೇ ಬರಬೇಕೆಂದು ನಾವು ಬಯಸಿದ್ದೆವು. ಅವರು ಆಗಮಿಸಿದಾಗ ‘ನಾವು ಬಿಜೆಪಿಗೆ ಮತ ಹಾಕುವುದಿಲ್ಲ ’ಎಂಬ ಪ್ರತಿಜ್ಞೆಯನ್ನು ಅವರಿಂದ ನಾವು ಮಾಡಿಸಿದ್ದೆವು. ಇದು ಅವರನ್ನು(ಸರಕಾರ) ಚುಚ್ಚುತ್ತಿದೆ.
  ಎರಡನೆಯದಾಗಿ ನ್ಯಾ.ಸಾವಂತ್ ಅವರು 2002ರ ಗುಜರಾತ್‌ದಂಗೆಗಳ ವಿಚಾರಣೆ ನಡೆಸಿದ್ದು,ಮೋದಿಯವರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿದ್ದರು. ಇದರ ಬಳಿಕ,ವಿಶೇಷವಾಗಿ ಪತ್ರಕರ್ತೆ ರಾಣಾ ಅಯ್ಯೂಬ್ ಅವರ ‘ಗುಜರಾತ್ ಫೈಲ್ಸ್’ ಕೃತಿಯ ಬಳಿಕ ಅವರು ಅಮಾಯಕರನ್ನು ಹೇಗೆ ಕೊಂದಿದ್ದರು ಎನ್ನುವುದನ್ನು ನಾವು ಹೇಳುತ್ತಲೇ ಇದ್ದೇವೆ. ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಇಶ್ರತ್ ಜಹಾನ್ ಮತ್ತು ಸೊಹ್ರಾಬುದ್ದೀನ್ ಶೇಖ್ ಅವರನ್ನು ಕೊಲ್ಲಲಾಗಿತ್ತು.

♦ ಇದು ಹಳೆಯ ಸುದ್ದಿ. ಇದಕ್ಕೂ ಈ ಬಂಧನಗಳಿಗೂ ಏನು ಸಂಬಂಧ?
ಉ: ಇದು ಹಳೆಯ ಸುದ್ದಿಯಲ್ಲ. ಮೋದಿ-ಶಾ ಆಡಳಿತ ಹೇಗೆ ನಡೆಯುತ್ತಿದೆ ಎನ್ನುವುದನ್ನು ಇದು ತೋರಿಸುತ್ತಿದೆ. ಬಂಧಿತರು ಮೋದಿಯವರನ್ನು ಕೊಲ್ಲಲು ಬಯಸಿದ್ದಾರೆ ಎಂದು ಅವರು ಈಗ ಹೇಳುತ್ತಿದ್ದಾರೆ.
ಅವರು ತನ್ನನ್ನು ಕೊಲ್ಲಲು ಬರುತ್ತಿದ್ದಾರೆಂದು ಮೋದಿ ಹೇಳಿದ ಮತ್ತು ಅವರು (ಇಶ್ರತ್ ಮತ್ತು ಸೊಹ್ರಾಬುದ್ದೀನ್) ಅದಾಗಲೇ ಕಸ್ಟಡಿಯಲ್ಲಿದ್ದಂತಹ ಹಲವಾರು ನಿದರ್ಶನಗಳಿವೆ. ಅವರ ಕಾರ್ಯತಂತ್ರವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ನಕ್ಸಲರು ಮೋದಿಯನ್ನು ಕೊಲ್ಲಲು ಬರುತ್ತಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ.

ಎಲ್ಗಾರ್ ಪರಿಷದ್‌ಗೆ ನಕ್ಸಲರೊಂದಿಗೆ ಯಾವುದೇ ಸಂಬಂಧವಿಲ್ಲ,ಅದು ಅವರಿಂದ ಹಣವನ್ನೂ ಪಡೆಯುತ್ತಿಲ್ಲ. ಜ.1ರ ನಮ್ಮ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಅನುಯಾಯಿಗಳು ಬಂದಿದ್ದರು ಮತ್ತು ಅಲ್ಲಿ ಖರ್ಚಿನ ಪ್ರಶ್ನೆಯೇ ಇರಲಿಲ್ಲ. ಅಂದಿನ ಕಾರ್ಯಕ್ರಮದಲ್ಲಿ ಒಬ್ಬನೇ ಒಬ್ಬ ನಕ್ಸಲನಿರಲಿಲ್ಲ.
ದವಳೆಯನ್ನು ಉಚ್ಚ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯಗಳು ಗೌರವ ಪೂರ್ವಕವಾಗಿ ಬಿಡುಗಡೆ ಗೊಳಿಸಿವೆ. ಒಂದು ವೇಳೆ ಆತನಿಗೆ ನಕ್ಸಲರೊಂದಿಗೆ ಸಂಬಂಧ ಇದ್ದಿರಬಹುದಿದ್ದರೂ ಅವರೇಕೆ ಎಲ್ಗಾರ್ ಪರಿಷದ್‌ಗೂ ನಕ್ಸಲರಿಗೂ ನಂಟು ಕಲ್ಪಿಸುತ್ತಿದ್ದಾರೆ?
ಏಕೆಂದರೆ ನ್ಯಾ.ಸಾವಂತ್ ಅವರು ಮೋದಿ ವಿರುದ್ದ ವರದಿ ನೀಡಿದ್ದರು ಮತ್ತು ನಾನು ಸದಾಕಾಲ ಮೋದಿ ವಿರುದ್ಧ ಮಾತನಾಡುತ್ತಿರುತ್ತೇನೆ.

♦ ಈ ದಾಳಿಗಳು ದೇಶಾದ್ಯಂತ ನಡೆದಿವೆ
ಉ: ಎಲ್ಗಾರ್ ಪರಿಷದ್‌ಗೆ ನಕ್ಸಲರು ಆರ್ಥಿಕ ನೆರವು ಒದಗಿಸುತ್ತಿದ್ದಾರೆ ಎಂದು ಎಲ್ಲ ಟಿವಿ ಸುದ್ದಿಗಳು ಪ್ರಚಾರ ಮಾಡುತ್ತಿವೆ ಎಂದು ನಾನು ಜನರಿಗೆ ಹೇಳುತ್ತಲೇ ಇದ್ದೇನೆ.
ಪರಿಷದ್‌ನ ಯಾರೊಬ್ಬರೂ ನಕ್ಸಲರೊಂದಿಗೆ ನಂಟು ಹೊಂದಿಲ್ಲ. ದವಳೆಯನ್ನು ನ್ಯಾಯಾಲಯಗಳು ಖುಲಾಸೆಗೊಳಿಸಿವೆ. ಹೀಗಿರುವಾಗ ಎಲ್ಗಾರ್‌ಗೂ ನಕ್ಸಲರಿಗೂ ಸಂಬಂಧ ಕಲ್ಪಿಸಲು ಹೇಗೆ ಸಾಧ್ಯ? ಅದೂ ಮೋದಿ ಹತ್ಯೆಗೆ ಒಳಸಂಚಿನ ಆರೋಪದೊಂದಿಗೆ?

♦ ನಗರ ಪ್ರದೇಶಗಳಲ್ಲಿ ನಕ್ಸಲರು ರಾಷ್ಟ್ರಕ್ಕೆ ಬೆದರಿಕೆಯಾಗಿದ್ದಾರೆ. ಅಲ್ಲವೇ?
ಉ: ಸನಾತನ ಸಂಸ್ಥಾದ ಚಟುವಟಿಕೆಗಳನ್ನು ನೀವು ಗಮನಿಸಿದ್ದೀರಾ? ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ಕರ್ನಲ್ ಶ್ರೀಕಾಂತ ಪುರೋಹಿತ್ ಮತ್ತು ಸಾಧ್ವಿ ಪ್ರಜ್ಞಾ ಪ್ರಕರಣವನ್ನು ನೀವು ನೋಡಿದ್ದೀರಾ? ಅವರು ಮನುಸ್ಮತಿ ಆಧಾರದಲ್ಲಿ ಹಿಂದೂ ರಾಷ್ಟ್ರ ಸ್ಥಾಪಿಸಲು ಬಯಸಿದ್ದರು. ಅದು ಅವರ ಗುರಿಯಾಗಿತ್ತು. ಅದು ನ್ಯಾಯಾಲಯದಲ್ಲಿ ದಾಖಲಾಗಿದೆ. ನಮ್ಮ ಬಳಿ ಅದರ ಪ್ರಮಾಣೀಕೃತ ಪ್ರತಿಯಿದೆ. ಈಗ ಅವರೆಲ್ಲ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ.
ಇನ್ನೊಂದೆಡೆ ಈ ಆಡಳಿತವನ್ನು ಸಂವಿಧಾನಬದ್ಧವಾಗಿ ವಿರೋಧಿಸಲು ಪ್ರಯತ್ನಿಸುತ್ತಿರುವ ನಮ್ಮಂತಹ ಜನರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ.

♦ ಆದರೆ ನೀವು ರಾಜಕೀಯವಾಗಿ ಶಕ್ತಿಯೇ ಅಲ್ಲ. ಹೀಗಿರುವಾಗ ಸರಕಾರ ನಿಮ್ಮಂಥವರ ಹಿಂದೇಕೆ ಬೀಳುತ್ತದೆ?
ಉ: ಅವರು ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ನಮ್ಮ ಮಾನನಷ್ಟ ಮಾಡುತ್ತಿದ್ದಾರೆ. ಅವರು ದಾಳಿಗಳನ್ನು ನಡೆಸಬಹುದು,ಅವರಿಗೇನೂ ಸಿಗುವುದಿಲ್ಲ.
 ನ್ಯಾ.ಸಾವಂತ್ ಅತ್ಯಂತ ಗಣ್ಯ ವ್ಯಕ್ತಿಯಾಗಿದ್ದಾರೆ ಮತ್ತು ಅವರು 2002ರಲ್ಲಿ ಮೋದಿ ವಿರುದ್ಧ ವರದಿ ಸಲ್ಲಿಸಿದ್ದರು.

♦ ನೀವು ಇದನ್ನೆಲ್ಲ ಹೇಳುವಾಗ ಭಾರತದಲ್ಲಿ ಮಾನವ ಹಕ್ಕುಗಳ ಬಗ್ಗೆ ಅದು ಏನು ಅರ್ಥ ನೀಡುತ್ತದೆ?
ಉ: ಭಾರತದಲ್ಲಿ ಮಾನವ ಹಕ್ಕುಗಳಿಗೆ ಬೆಲೆಯಿಲ್ಲ. ವಿಚಾರಣಾಧೀನ ಕೈದಿಗಳಲ್ಲಿ ಸುಮಾರು ಶೇ.80ರಷ್ಟು ಜನರು ದಲಿತರು,ಮುಸ್ಲಿಮರು ಮತ್ತ್ತು ಆದಿವಾಸಿಗಳಾಗಿದ್ದಾರೆ. ಅವರ ಅಪರಾಧಗಳಿಗೆ ಗರಿಷ್ಠ ಶಿಕ್ಷೆ ಒಂದೆರಡು ವರ್ಷ ಮಾತ್ರ. ಆದರೆ ಅವರು 10 ವರ್ಷ ಮತ್ತು ಅದಕ್ಕೂ ಹೆಚ್ಚು ಕಾಲದಿಂದ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಇಲ್ಲಿ ಮಾನವ ಹಕ್ಕುಗಳ ಬಗ್ಗೆ ಯಾರಿಗೆ ಕಾಳಜಿಯಿದೆ?
ನೀವು ರಾಣಾ ಅಯ್ಯೂಬ್‌ರ ಕೃತಿಯನ್ನು ಖಂಡಿತ ಓದಬೇಕು. ಮಾನವ ಹಕ್ಕುಗಳ ಬಗ್ಗೆ ಮೋದಿ-ಶಾ ಜೋಡಿಗೆ ಗೌರವವಿಲ್ಲ ಎಂದು ಎಟಿಎಸ್ ಅಧಿಕಾರಿಯೇ ಅದರಲ್ಲಿ ಹೇಳಿದ್ದಾರೆ.
ಮತ್ತು ಈ ತಥಾಕಥಿತ ನಕ್ಸಲರು, ಅವರು ಏನಾದರೂ ಅಪರಾಧವೆಸಗಿದ್ದಾರಾ? ಅವರು ಕಾಡುಗಳಲ್ಲಿಲ್ಲ, ನಗರಗಳಲ್ಲಿ ಇದ್ದಾರೆ. ಅವರು ಯಾವ ಅಪರಾಧ ಮಾಡಿದ್ದಾರೆ?

♦ ನಕ್ಸಲರು ಬಲಪ್ರಯೋಗದಿಂದ ಭಾರತ ಸರಕಾರವನ್ನು ಉರುಳಿಸುವ ಸಂಚು ಮಾಡುತ್ತಿದ್ದಾರೆ?
ಉ: ಹಾಗೆ ಯಾರು ಹೇಳುತ್ತಾರೆ? ಪೊಲೀಸರು ಮಾತ್ರ ಹಾಗೆ ಹೇಳುತ್ತಿದ್ದಾರೆ. ಅವರ ವಿರುದ್ಧ ಏನೂ ರುಜುವಾತಾಗಿಲ್ಲ.
ಪ್ರಜ್ಞಾ ಠಾಕೂರ್ ಮತ್ತು ಪುರೋಹಿತ್ ನಡುವಿನ ಧ್ವನಿಮುದ್ರಿತ ಸಂಭಾಷಣೆ ನಮ್ಮ ಬಳಿಯಿದ್ದಾಗ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆದರೆ ಕಪೋಲಕಲ್ಪಿತ ನಕ್ಸಲರ ವಿರುದ್ಧ ಕಾನೂನು ಕ್ರಮ ನಡೆಸಲಾಗುತ್ತಿದೆ.
♦ ಮಹಾರಾಷ್ಟ್ರದಲ್ಲಿ ಉಗ್ರವಾದಿ ಹಿಂದೂ ಸಂಘಟನೆಗಳ ವಿರುದ್ಧ ಕ್ರಮಗಳನ್ನು ಕೈಗೊಂಡಿದ್ದರ ಹೆಗ್ಗಳಿಕೆ ದೇವೇಂದ್ರ ಫಡ್ನವೀಸ್ ಸರಕಾರಕ್ಕೆ ಸೇರಬೇಕಲ್ಲವೇ?
ಉ: ಮೋದಿ ಮತ್ತು ಫಡ್ನವೀಸ್ ಇದನ್ನು ಮಾಡಿರುವುದಲ್ಲ. ಕರ್ನಾಟಕ ಎಟಿಎಸ್ ಇದನ್ನು ಮಾಡಿದೆ. ಗೌರಿ ಮತ್ತು ಕಲಬುರ್ಗಿ ಹತ್ಯೆ ಪ್ರಕರಣಗಳಲ್ಲಿ ಹಿಂದೂ ಉಗ್ರವಾದಿಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಅದು ಬಯಸಿತ್ತು, ಅದನ್ನು ನಿಗ್ರಹಿಸಲು ಮಹಾರಾಷ್ಟ್ರ ಎಟಿಎಸ್ ಕ್ರಮ ಕೈಗೊಂಡಿದೆ.
ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಡಿಜಿಪಿ ವಿಶ್ವಾಸ ನಂಗ್ರೆ ಪಾಟೀಲ್ ಅವರು ತಕ್ಷಣವೇ ಸತ್ಯಶೋಧಕ ಸಮಿತಿಯನ್ನು ರಚಿಸಿದ್ದರು. ಭೀಮಾ-ಕೋರೆಗಾಂವ್‌ನಲ್ಲಿ ಮಿಲಿಂದ್ ಏಕಬೋಟೆ ಮತ್ತು ಸಂಭಾಜಿ ಭಿಡೆ ಅವರು ಹಿಂಸಾಚಾರಕ್ಕೆ ಕಾರಣರಾಗಿದ್ದರು ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿತ್ತು. ಈಗ ಆ ವರದಿಯನ್ನು ಮುಚ್ಚಿಡಲಾಗಿದೆ, ಆದರೆ ನಮ್ಮ ಬಳಿ ಅದರ ಪ್ರತಿಯಿದೆ.
ಮನುವಾದಿಗಳ ಅಪರಾಧಗಳನ್ನು ಮುಚ್ಚಿಡಲು ಮತ್ತು ವಿಚಾರವಾದಿಗಳ ‘ಅಪರಾಧ’ಗಳನ್ನು ಬಯಲಿಗೆಳೆಯಲು ಬಿಜೆಪಿ ಬಯಸುತ್ತಿದೆ.

♦ ಕರ್ನಾಟಕ ಎಟಿಎಸ್ ಮತ್ತು ಮಹಾರಾಷ್ಟ್ರ ಎಟಿಎಸ್ ವಿಭಿನ್ನ ಅಜೆಂಡಾಗಳನ್ನು ಹೊಂದಿವೆ ಎಂದು ನೀವು ಹೇಳುತ್ತಿದ್ದೀರಾ? ಎಟಿಎಸ್ ಪಡೆಗಳೂ ರಾಜಕೀಕರಣಕ್ಕೆ ಪಕ್ಕಾಗಿವೆ ಎಂದು ಅರ್ಥವೇ?
ಉ: ಅದು ಗೋಡೆಯ ಮೇಲಿನ ಬರಹದಷ್ಟು ಸ್ಪಷ್ಟವಾಗಿದೆ ಮತ್ತು ಅದು ಹಾಗೆ ಆಗಲೇಬೇಕಿತ್ತು. ಮೋದಿ ಆಡಳಿತದಡಿ ಪ್ರತಿಯೊಂದೂ ಏಜೆನ್ಸಿಯು ಒತ್ತಡದಲ್ಲಿದೆ ಮತ್ತು ರಾಜಕೀಕರಣಕ್ಕೊಳಗಾಗಿದೆ. ಕಾಂಗ್ರೆಸ್ ಆಡಳಿತದಲ್ಲಿಯೂ ಇದು ನಡೆದಿತ್ತು, ಆದರೆ ಮೋದಿ ಒಂದು ಹೆಜ್ಜೆ ಮುಂದೆ ಸಾಗಿ ಅವುಗಳ ಮೇಲೆ ಒತ್ತಡ ಹೇರಿದ್ದಾರೆ.
ಹೀಗಾಗಿ ಮಾನವ ಹಕ್ಕುಗಳು ಮತ್ತು ನ್ಯಾಯದ ಕುರಿತು ಮಾತನಾಡುವುದರಲ್ಲಿ ಯಾವ ಅರ್ಥವಿದೆ? ಅದು ಸುಮ್ಮನೆ ಸಮಯದ ಪೋಲು,ಇವೆಲ್ಲ ಕೇವಲ ಹೆಸರಿಗಷ್ಟೇ.

♦ ಪ್ರಧಾನಿಯನ್ನು ಕೊಲ್ಲಲು ಸಂಚು ನಡೆಯುತ್ತಿದೆ ಎಂಬ ಹೇಳಿಕೆಯಲ್ಲಿ ಸತ್ಯವಿದೆ ಎಂದು ನಿಮಗೆ ಅನ್ನಿಸುತ್ತಿಲ್ಲವೇ?
ಉ: ಇದು ಚುನಾವಣಾ ಗಿಮಿಕ್ ಮಾತ್ರ. ಮೋದಿಯನ್ನು ಕೊಲ್ಲಲು ಯಾರೂ ಬಯಸಿಲ್ಲ. ಇಶ್ರತ್ ಜಹಾನ್ ಕಸ್ಟಡಿಯಲ್ಲಿದ್ದರು ಮತ್ತು ಅವರು ತನ್ನನ್ನು ಕೊಲ್ಲಲು ಬಂದಿದ್ದಾರೆಂದು ಮೋದಿ ಹೇಳಿದ್ದರು. ಸೊಹ್ರಾಬುದ್ದೀನ್ ಕಸ್ಟಡಿಯಲ್ಲಿದ್ದರು ಮತ್ತು ಆತ ತನ್ನನ್ನು ಕೊಲ್ಲಲು ಬಂದಿದ್ದಾನೆಂದು ಮೋದಿ ಹೇಳಿದ್ದರು. ಇವು ನಕಲಿ ಎನ್‌ಕೌಂಟರ್‌ಗಳಾಗಿದ್ದವು ಮತ್ತು ಅವೇ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

ಮೋದಿ ಆಡಳಿತದಡಿ ಪ್ರತಿಯೊಂದೂ ಏಜೆನ್ಸಿಯು ಒತ್ತಡದಲ್ಲಿದೆ ಮತ್ತು ರಾಜಕೀಕರಣಕ್ಕೊಳಗಾಗಿದೆ. ಕಾಂಗ್ರೆಸ್ ಆಡಳಿತದಲ್ಲಿಯೂ ಇದು ನಡೆದಿತ್ತು, ಆದರೆ ಮೋದಿ ಒಂದು ಹೆಜ್ಜೆ ಮುಂದೆ ಸಾಗಿ ಅವುಗಳ ಮೇಲೆ ಒತ್ತಡ ಹೇರಿದ್ದಾರೆ.
ಹೀಗಾಗಿ ಮಾನವ ಹಕ್ಕುಗಳು ಮತ್ತು ನ್ಯಾಯದ ಕುರಿತು ಮಾತನಾಡುವುದರಲ್ಲಿ ಯಾವ ಅರ್ಥವಿದೆ? ಅದು ಸುಮ್ಮನೆ ಸಮಯದ ಪೋಲು,ಇವೆಲ್ಲ ಕೇವಲ ಹೆಸರಿಗಷ್ಟೇ.

ಕೃಪೆ: rediff.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ