ನೋಟು ನಿಷೇಧ ಪ್ರಧಾನಿ ಮೌನ ಮುರಿಯಲಿ

Update: 2018-09-01 04:42 GMT

‘ನೋಟು ನಿಷೇಧದ’ ವೈಫಲ್ಯಗಳ ಕುರಿತಂತೆ ದೇಶಾದ್ಯಂತ ಟೀಕೆಗಳ ಮಹಾಪೂರವೇ ಹರಿದು ಬರುತ್ತಿರುವ ಸಂದರ್ಭದಲ್ಲಿ, ವಿತ್ತ ಸಚಿವ ಅರುಣ್ ಜೇಟ್ಲಿ ಬೀಸು ಹೇಳಿಕೆಗಳ ಮೂಲಕ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಹವಣಿಸಿದ್ದಾರೆ. ನೋಟು ನಿಷೇಧದ ಉದ್ದೇಶವೇ, ದೇಶದೊಳಗಿರುವ ಕಪ್ಪು ಹಣವನ್ನು ಹೊರತೆಗೆಯುವುದಾಗಿತ್ತು ಎಂದು ಘೋಷಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಸ್ಪಷ್ಟವಾಗಿ ಹೇಳಿದ್ದರು. ಇಂದು ಆರ್‌ಬಿಐ ನೀಡಿರುವ ವರದಿಯ ಪ್ರಕಾರ, ಕಪ್ಪು ಹಣ ಬಹಿರಂಗವಾಗಿಯೇ ಇಲ್ಲ. ಶೇ.99ಕ್ಕೂ ಅಧಿಕ ಪ್ರಮಾಣದಲ್ಲಿ ನೋಟುಗಳು ಬ್ಯಾಂಕುಗಳಿಗೆ ಮರಳಿವೆ. ನೋಟು ನಿಷೇಧದ ಸಂದರ್ಭದಲ್ಲಿ, ನಾಟಕೀಯವಾಗಿ ಮಾಧ್ಯಮಗಳ ಮೂಲಕ ದೇಶದ ಜನರ ಮುಂದೆ ಭಾಷಣಗೈದಿದ್ದ ಪ್ರಧಾನಿ ನರೇಂದ್ರ ಮೋದಿಯವರೇ ಇಂದು ಅದರ ಸಾಧಕ ಬಾಧಕಗಳ ಕುರಿತಂತೆ ಮಾತನಾಡಬೇಕಾಗಿದೆ. ಆದರೆ ನರೇಂದ್ರ ಮೋದಿಯವರು ನೋಟು ನಿಷೇಧದ ಪರಿಣಾಮಗಳನ್ನು ವಿವರಿಸುವ ಬದಲು, ಜನರಿಗೆ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಅವರ ಸ್ಥಾನದಲ್ಲಿ ನಿಂತು ವಿತ್ತ ಸಚಿವರು ಹೇಳಿಕೆಯನ್ನು ನೀಡಿದ್ದಾರಾದರೂ, ಅದಕ್ಕೂ ನೋಟು ನಿಷೇಧಕ್ಕೂ ಯಾವ ತಾಳೆಯೂ ಇಲ್ಲ. ನೋಟು ನಿಷೇಧ ಮಾಡಿರುವುದು ಯಾಕೆ? ಎನ್ನುವ ಪ್ರಶ್ನೆಗೆ ಹೊಸತೊಂದು ಉತ್ತರದ ಜೊತೆಗೆ ಜೇಟ್ಲಿ ಜನರ ಮುಂದೆ ಬಂದಿದ್ದಾರೆ. ನೋಟು ನಿಷೇಧದ ಉದ್ದೇಶವೇ ಭಾರತವನ್ನು ತೆರಿಗೆ ಅನುಸರಿಸುವ ದೇಶವನ್ನಾಗಿ ಬದಲಾಯಿಸುವುದಾಗಿತ್ತು ಎಂಬ ಹೊಸ ವಾದಕ್ಕಿಳಿದಿದ್ದಾರೆ. ಹಾಗಾದರೆ, ಈ ದೇಶದಲ್ಲಿ ಕಪ್ಪು ಹಣ ಇಲ್ಲ ಎಂದು ಅವರು ಸ್ಪಷ್ಟ ಪಡಿಸುತ್ತಿದ್ದಾರೆಯೇ? ನೋಟು ನಿಷೇಧಕ್ಕೆ ಮುನ್ನ ದೇಶದೊಳಗಿದ್ದ ಕಪ್ಪು ಹಣ ಎಲ್ಲಿ ಹೋಯಿತು? ಇದು ಸರಕಾರದ ವೈಫಲ್ಯವಲ್ಲ ಎಂದು ಹೇಳುತ್ತಾರೆಯೇ?

ಸರಿ, ನೋಟು ನಿಷೇಧದಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಇಳಿಮುಖವಾಗುತ್ತದೆ ಎಂದು ನರೇಂದ್ರ ಮೋದಿಯವರು ಹೇಳಿದ್ದರು. ಆದರೆ ಕಾಶ್ಮೀರದಲ್ಲಿ ಭಯೋತ್ಪಾದನೆ ಉಲ್ಪಣಗೊಂಡಿದೆ. ಸೇನೆ ಮತ್ತು ಪೊಲೀಸರ ಮೇಲೆ ಉಗ್ರವಾದಿಗಳು ನೇರ ದಾಳಿಯನ್ನು ನಡೆಸುತ್ತಿದ್ದಾರೆ. ಬಳಿಕ ಮುಖ ಉಳಿಸಿಕೊಳ್ಳುವುದಕ್ಕಾಗಿ ಡಿಜಿಟಲೀಕರಣವೇ ನೋಟು ನಿಷೇಧದ ನಿಜವಾದ ಉದ್ದೇಶ ಎಂದು ನರೇಂದ್ರ ಮೋದಿಯವರು ಹೇಳಿದರು. ಮೋದಿ ಬಿಡುಗಡೆ ಮಾಡಿದ ‘ಭೀಮ್’ ಆಪ್ ಇದೀಗ ಮಕಾಡೆ ಮಲಗಿದೆ. ತೆರಿಗೆ ಸಂಗ್ರಹವೆಂದರೆ ಏನು? ಮಧ್ಯಮ ವರ್ಗದ ಕೈಕಾಲುಗಳನ್ನು ಕಟ್ಟಿ, ಅವರಿಂದ ಹಣವನ್ನು ಬಲವಂತವಾಗಿ ವಸೂಲಿ ಮಾಡುವುದನ್ನೇ ತೆರಿಗೆ ಸಂಗ್ರಹವೆಂದು ಕರೆಯಲಾಗುತ್ತದೆಯೇ? ನೋಟು ನಿಷೇಧದ ಬಳಿಕ ಮಧ್ಯಮ ವರ್ಗದ ಜನರನ್ನು ಬ್ಯಾಂಕ್‌ಗಳು ಅಕ್ಷರಶಃ ದರೋಡೆ ಮಾಡುತ್ತಿವೆ. ವಿವಿಧ ನೆಪಗಳನ್ನು ಮುಂದೊಡ್ಡಿ ಠೇವಣಿದಾರರ ಹಣವನ್ನು ಕಡಿತಗೊಳಿಸಿ ತಮ್ಮ ನಷ್ಟವನ್ನು ತುಂಬಿಸಲು ಬ್ಯಾಂಕುಗಳು ಪೈಪೋಟಿಯಲ್ಲಿವೆ. ಅಂದರೆ ಶ್ರೀಸಾಮಾನ್ಯನ ಹಣವನ್ನು ಕಿತ್ತುಕೊಂಡು, ಬ್ಯಾಂಕ್‌ಗಳು ಚೇತರಿಸಿಕೊಳ್ಳಲು ಯತ್ನಿಸುತ್ತಿವೆ. ಇದೇ ಸಂದರ್ಭದಲ್ಲಿ, ಬ್ಯಾಂಕ್‌ಗಳಿಗೆ ಸಹಸ್ರಾರು ಕೋಟಿ ರೂಪಾಯಿಗಳನ್ನು ವಂಚಿಸಿದವರು ವಿದೇಶದಲ್ಲಿ ಐಷಾರಾಮಿಜೀವನವನ್ನು ನಡೆಸುತ್ತಿದ್ದಾರೆ. ಗ್ರಾಹಕರಿಂದ ದಂಡವಾಗಿ ವಸೂಲಿ ಮಾಡಿದ ಹಣವನ್ನೇ ತನ್ನ ಲಾಭವಾಗಿ ತೋರಿಸುವ ಸ್ಥಿತಿಗೆ ಬ್ಯಾಂಕುಗಳು ಬಂದಿವೆ. ಇವನ್ನೆಲ್ಲ ಸುಧಾರಣೆ ಎಂದು ಕರೆಯುವುದಾದರೆ, ಈ ತೆರಿಗೆ ವಸೂಲಿ ಯಾರ ಪ್ರಗತಿಗಾಗಿ? ದೇಶ ಎಂದರೆ ಜನಸಾಮಾನ್ಯರು. ಅವರ ಬದುಕಿನಲ್ಲಿ ಚೆಲ್ಲಾಟವಾಡುತ್ತಾ ಸಂಗ್ರಹಿಸಿದ ತೆರಿಗೆಗಳ ಲೆಕ್ಕವನ್ನು ತೋರಿಸುವುದರಿಂದ ಅವರ ಬದುಕಿನಲ್ಲಿ ಏನು ಬದಲಾವಣೆಯಾಯಿತು?

ನೋಟು ನಿಷೇಧದಿಂದಾಗಿ ತಳಮಟ್ಟದ ಬದುಕು ಅಸ್ತವ್ಯಸ್ತವಾಯಿತು. ಸಹಸ್ರಾರು ಗ್ರಾಮೀಣ ಉದ್ದಿಮೆಗಳು ಮುಚ್ಚಿದವು. ಕೃಷಿ ಉದ್ದಿಮೆಗಳಿಗೂ ಭಾರೀ ಘಾಸಿಗೊಳಗಾದವು. ಇವೆಲ್ಲವೂ ದೇಶದ ತೆರಿಗೆಯ ಮೇಲೆ ತನ್ನ ಪರಿಣಾಮವನ್ನು ಬೀರಿವೆ. ಆರ್ಥಿಕ ವ್ಯವಹಾರಗಳು ತನ್ನ ಚಲನೆಯ ವೇಗವನ್ನು ತಗ್ಗಿಸಿದವು. ಜನಸಾಮಾನ್ಯರು ಕೈಯಲ್ಲಿರುವ ನೋಟುಗಳನ್ನು ಖರ್ಚು ಮಾಡಲು ಹಿಂಜರಿಯುವಂತಾ ಯಿತು. ಚಿಲ್ಲರೆ ವ್ಯಾಪಾರಿಗಳು ಆಕಾಶ ನೋಡಬೇಕಾಯಿತು. ಈ ದೇಶದ ಶೇ. 60ಕ್ಕೂ ಅಧಿಕ ಜನರು ಚಿಲ್ಲರೆ ವ್ಯಾಪಾರಿಗಳನ್ನೇ ಅವಲಂಬಿಸಿದ್ದಾರೆ. ಈ ಆರ್ಥಿಕ ಸರಪಣಿಗೆ ನೋಟು ನಿಷೇಧ ತೀವ್ರ ಹಾನಿಯನ್ನುಂಟು ಮಾಡಿತು. ಸಣ್ಣ ಪುಟ್ಟ ಅಂಗಡಿಗಳಲ್ಲಿ ವ್ಯಾಪಾರ ಕಡಿಮೆಯಾಯಿತು. ಸೂಪರ್ ಬಝಾರ್‌ಗಳು ನೋಟು ನಿಷೇಧದ ಲಾಭವನ್ನು ತನ್ನದಾಗಿಸಿಕೊಂಡವವು. ನೋಟು ನಿಷೇಧ ಇದ್ದವರನ್ನು ಇನ್ನಷ್ಟು ಶ್ರೀಮಂತವಾಗಿಸಿ, ಬಡವರನ್ನು ಇನ್ನಷ್ಟು ಕೆಳಗೆ ತಳ್ಳಿತು. ದಿನಸಿ ಅಂಗಡಿಗಳಲ್ಲಿ ಅಕ್ಕಿ ಕೊಳ್ಳುವವರು ತಮ್ಮ ಕಾರ್ಡ್ ಹಿಡಿದುಕೊಂಡು ಸೂಪರ್ ಬಝಾರ್‌ಗಳಲ್ಲಿ ಕ್ಯೂ ನಿಲ್ಲುವಂತಾಯಿತು. ನೋಟು ನಿಷೇಧ ಈ ದೇಶವನ್ನು ಆರ್ಥಿಕವಾಗಿ ಇಬ್ಭಾಗವಾಗಿಸಿತು.

ಡಿಜಿಟಲ್ ಇಂಡಿಯಾ ಎನ್ನುವ ಅಲ್ಪಸಂಖ್ಯಾತರ ಭಾರತವೊಂದನ್ನು ಇದು ಘೋಷಿಸಿತು. ಮೋದಿಯ ಅಭಿವೃದ್ಧಿಯ ಕಲ್ಪನೆಯಿಂದ ಗ್ರಾಮೀಣ ಭಾರತ ಅಧಿಕೃತವಾಗಿ ಹೊರಬಿತ್ತು. ದುಬಾರಿ ಮೊಬೈಲ್‌ಗಳನ್ನು ಹೊಂದಿದವರು, ಕೈಯಲ್ಲಿ ಪಾನ್‌ಕಾರ್ಡ್ ಇದ್ದವರು, ಬ್ಯಾಂಕ್‌ಗಳ ವಿವಿಧ ಕಾರ್ಡ್‌ಗಳನ್ನು ಇಟ್ಟುಕೊಂಡವರ ಭಾರತ ನೋಟು ನಿಷೇಧದಿಂದ ನಿರ್ಮಾಣವಾಯಿತು. ಇದೆಲ್ಲದರ ಕಲ್ಪನೆಯೇ ಇಲ್ಲದವರು, ಮೋದಿಯ ಭಾರತದಿಂದ ದೂರವಾದರು. ತಳಸ್ತರದ ಸಹಭಾಗಿತ್ವ ಇಲ್ಲದ ಭಾರತದ ಅಭಿವೃದ್ಧಿಯ ಸ್ಥಿತಿ ಏನಾಗಬಹುದು ಎನ್ನುವುದು ಈಗಾಗಲೇ ಜಾಹೀರಾಗಿದೆ. ಭಾರತದ ಜಿಡಿಪಿ ಇಳಿಮುಖವಾಯಿತು. ಡಾಲರ್‌ನ ಮುಂದೆ ರೂಪಾಯಿ ಕೆಳಗಿಳಿಯುತ್ತಲೇ ಹೋಯಿತು. ದೇಶದಲ್ಲಿ ನಿರುದ್ಯೋಗ ತೀವ್ರಪ್ರಮಾಣದಲ್ಲಿ ಹೆಚ್ಚಳವಾದುದು ನೋಟು ನಿಷೇಧದ ಬಳಿಕವಾಗಿದೆ. ಅಷ್ಟೇ ಅಲ್ಲ, ನೋಟು ನಿಷೇಧದ ಬಳಿಕ ದೇಶದಲ್ಲಿ ಹಿಂಸಾಚಾರ ಪ್ರಕರಣಗಳೂ ಹೆಚ್ಚಿವೆ. ನಿರುದ್ಯೋಗಿ ಯುವಕರು ಸಂಸ್ಕೃತಿ ರಕ್ಷಕರ, ಗೋರಕ್ಷಕರ ವೇಷಧರಿಸಿ ಬದುಕುವ ಹೊಸ ಹಾದಿಯನ್ನು ಕಂಡುಕೊಂಡರು. ಗ್ರಾಮೀಣ ಪ್ರದೇಶದಲ್ಲಿ ಅಪೌಷ್ಟಿಕತೆ ಹೆಚ್ಚಿತು. ಬಡತನದಲ್ಲಿ ಏರಿಕೆಯಾಯಿತು.

ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸು ಅತ್ಯಂತ ಕೆಳಮಟ್ಟಕ್ಕಿಳಿಯಿತು. ಒಟ್ಟಿನಲ್ಲಿ ನೋಟು ನಿಷೇಧದಿಂದ ಆರ್ಥಿಕವಾಗಿ ಮಾತ್ರವಲ್ಲ, ಸಾಮಾಜಿಕವಾಗಿಯೂ ಭಾರತದ ಸ್ಥಿತಿ ಚಿಂತಾಜನಕವಾಯಿತು. ಇವೆಲ್ಲವನ್ನು ಮುಚ್ಚಿಟ್ಟು, ಜೇಟ್ಲಿ ಅವರು ತೆರಿಗೆ ಸಂಗ್ರಹದ ಬಗ್ಗೆ ಮಾತನಾಡುತ್ತಿದ್ದಾರೆ. ವಿತ್ತ ಸಚಿವನೆಂದರೆ, ಸಂತೆಯಲ್ಲಿ ಸುಂಕ ವಸೂಲಿಗೆ ನಿಂತ ಕೊತ್ವಾನೆಂದು ಬಗೆದು ಮಾತನಾಡಿದ್ದಾರೆ. ಮೊತ್ತ ಮೊದಲಾಗಿ ನರೇಂದ್ರ ಮೋದಿಯವರು ದೇಶದ ಮುಂದೆ ನಿಂತು ಮಾತನಾಡುವ, ನೋಟು ನಿಷೇಧದ ಸಾಧಕಬಾಧಕಗಳ ಕುರಿತಂತೆ ಸ್ಪಷ್ಟೀಕರಣ ನೀಡುವ ಎದೆಗಾರಿಕೆಯನ್ನು ತೋರಿಸಬೇಕು.

ದೇಶದಲ್ಲಿರುವ ಕಪ್ಪು ಹಣ ಎಲ್ಲಿ ಹೋಯಿತು? ಅದನ್ನು ಪತ್ತೆ ಹಚ್ಚಲು, ಗುರುತಿಸಲು ಅಧಿಕಾರಿಗಳು ಯಾಕೆ ವಿಫಲವಾದರು? ಎನ್ನುವುದನ್ನು ಅವರು ವಿವರಿಸಬೇಕು. ನೋಟು ನಿಷೇಧದ ನಿರ್ಧಾರಕ್ಕಾಗಿ ಈ ದೇಶದ ಜನರು ತಮ್ಮ ಬದುಕನ್ನೇ ಬಲಿಕೊಟ್ಟಿದ್ದಾರೆ. ಆದರೆ ಇದರ ಲಾಭಗಳನ್ನೆಲ್ಲ ಬೃಹತ್ ಕಾರ್ಪೊರೇಟ್ ಸಂಸ್ಥೆಗಳಷ್ಟೇ ತಮ್ಮದಾಗಿಸಿವೆ. ನೋಟು ನಿಷೇಧದಿಂದ ಜನಸಾಮಾನ್ಯರಿಗಾದ ಲಾಭವೇನು? ಅವರ ಆರ್ಥಿಕ ಬದುಕಿನಲ್ಲಿ ಯಾವ ರೀತಿಯಲ್ಲಿ ಸುಧಾರಣೆಯಾಗಿದೆ? ಡಾಲರ್ ಮುಂದೆ ರೂಪಾಯಿ ಯಾಕೆ ಕುಸಿಯುತ್ತಿದೆ? ತೈಲ ಬೆಲೆಗಳು ಏರುತ್ತಲೇ ಇವೆ ಯಾಕೆ? ನೋಟು ನಿಷೇಧದಿಂದ ನೆಲಕಚ್ಚಿದ ಗ್ರಾಮೀಣ ಉದ್ದಿಮೆಗಳನ್ನು ಮತ್ತೆ ಎತ್ತಿ ನಿಲ್ಲಿಸುವ ಬಗೆ ಏನು? ಈ ಎಲ್ಲ ಪ್ರಶ್ನೆಗಳಿಗೆ ಜನರಿಗೆ ಮೋದಿ ಉತ್ತರಿಸಲೇಬೇಕು. ನೋಟು ನಿಷೇಧದಿಂದ ಈ ದೇಶಕ್ಕೆ ಆದ ಒಟ್ಟು ನಷ್ಟ ಎಷ್ಟು ಎನ್ನುವ ವಿವರಗಳನ್ನು ತಿಳಿದುಕೊಳ್ಳುವ ಹಕ್ಕು ಈ ದೇಶದ ಜನರಿಗಿದೆಯೆನ್ನುವುದನ್ನು ಮೋದಿ ಮರೆಯಬಾರದು. ಸರಕಾರವನ್ನು ಪ್ರಶ್ನಿಸುವ ಹೋರಾಟಗಾರರನ್ನು ಬಂಧಿಸುವುದರಿಂದ ಮೋದಿ ತನ್ನ ಲೋಪಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಒಂದು ಕನ್ನಡಿಯನ್ನು ಒಡೆದರೆ ಅದು ಎರಡು ಕನ್ನಡಿಯಾಗಿ ಮಾರ್ಪಾಡಾಗುತ್ತದೆ ಎನ್ನುವ ಸತ್ಯವನ್ನು ಅವರು ಮರೆಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News