ಕುಟುಂಬ ದುರಂತದಿಂದ ಹೊರಬಂದು ಬೆಳ್ಳಿ ನಗೆ ಬೀರಿದ ಪಿಂಕಿ

Update: 2018-09-01 05:11 GMT

ಜಕಾರ್ತ, ಸೆ.1: ಏಶ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ ಭಾರತದ ಕೆಲವು ಅಥ್ಲೀಟ್‌ಗಳು ತಮ್ಮ ವೈಯಕ್ತಿಕ ಸಮಸ್ಯೆಯನ್ನು ಬದಿಗಿಟ್ಟು ಶ್ರೇಷ್ಠ ಪ್ರದರ್ಶನ ನೀಡಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಈ ಸಾಲಿಗೆ ಮಾರ್ಷಲ್ ಆರ್ಟ್ಸ್ ಸ್ಪೋರ್ಟ್ಸ್ ಕುರಾಶ್‌ನಲ್ಲಿ ಬೆಳ್ಳಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿದ ಪಿಂಕಿ ಬಲ್ಹಾರ ಹೊಸ ಸೇರ್ಪಡೆಯಾಗಿದ್ದಾರೆ.

ದಿಲ್ಲಿಯ 19ರ ಹರೆಯದ ಪಿಂಕಿ ಏಶ್ಯನ್ ಗೇಮ್ಸ್ ಆರಂಭವಾಗಲು ಕೇವಲ ಮೂರು ತಿಂಗಳು ಬಾಕಿ ಇರುವಾಗ ತನ್ನ ತಂದೆ ಸಹಿತ ಕುಟುಂಬದ ಮೂವರು ಸದಸ್ಯರನ್ನು ಕಳೆದುಕೊಂಡಿದ್ದಾರೆ. ಕುಟುಂಬದಲ್ಲಿನ ಈ ದುರಂತ ಪಿಂಕಿ ಏಶ್ಯನ್ ಗೇಮ್ಸ್‌ನ 52 ಕೆಜಿ ಕುರಾಶ್ ಇವೆಂಟ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವುದಕ್ಕೆ ಅಡ್ಡಿಯಾಗಲಿಲ್ಲ.

  ಪಿಂಕಿ ಹಾಗೂ ಕನ್ನಡತಿ ಮಲಪ್ರಭಾ ಜಾಧವ್ ಕುರಾಶ್ ಸ್ಪರ್ಧೆಯಲ್ಲಿ ಭಾರತಕ್ಕೆ ಎರಡು ಪದಕ ಗೆದ್ದುಕೊಟ್ಟಿದ್ದರು. ಜಾಧವ್ ಕಂಚಿನ ಪದಕ ಜಯಿಸಿದ್ದರು.

‘‘ಏಶ್ಯನ್ ಗೇಮ್ಸ್ ಆರಂಭಕ್ಕೆ ಮೊದಲು ನಡೆದ ಘಟನೆಯು ನನ್ನ ಜೀವನದ ಅತ್ಯಂತ ಕೆಟ್ಟ ಕ್ಷಣಗಳು. ನಾನು ಮೊದಲಿಗೆ ಸೋದರ ಸಂಬಂಧಿಯೊಬ್ಬರನ್ನು ಕಳೆದುಕೊಂಡೆ. ಆ ನಂತರ ನನ್ನ ತಂದೆ ಹೃದಯಾಘಾತದಿಂದ ಮೃತಪಟ್ಟರು. ಒಂದು ತಿಂಗಳ ಬಳಿಕ ನನ್ನ ಅಜ್ಜಿ ತೀರಿಕೊಂಡರು. ಇವೆಲ್ಲವೂ ಕೆಲವೇ ಸಮಯದಲ್ಲಿ ನಡೆದುಹೋದವು. ನಾನು ಏಶ್ಯನ್ ಗೇಮ್ಸ್ ತಂಡಕ್ಕೆ ಆಯ್ಕೆಯಾದ ಕೆಲವೇ ದಿನಗಳಲ್ಲಿ ಇವರೆಲ್ಲ ಮೃತಪಟ್ಟಿದ್ದರು. ನಾನು ಭಾರತ ತಂಡಕ್ಕೆ ಆಯ್ಕೆಯಾಗಿದ್ದಕ್ಕೆ ಅವರು ತುಂಬಾ ಸಂತೋಷಪಟ್ಟಿದ್ದರು’’ ಎಂದು ಪಿಂಕಿ ಹೇಳಿದ್ದಾರೆ.

ಜುಡೋ ಪಟುವಾಗಿ ವೃತ್ತಿಜೀವನ ಆರಂಭಿಸಿದ ಪಿಂಕಿ ಜುಡೋ ರೀತಿಯ ಕುರಾಶ್ ಸ್ಪರ್ಧೆಯಲ್ಲಿ ತನ್ನನ್ನು ತೊಡಗಿಸಿಕೊಂಡರು.

‘‘ಕುಟುಂಬದ ಮೂವರು ಸದಸ್ಯರು ನನ್ನನ್ನು ಅಗಲಿದಾಗ ಆಘಾತದಿಂದ ಹೊರಬರಲು ತುಂಬಾ ಕಷ್ಟವಾಗಿತ್ತು. ಆಗ ನನ್ನ ಚಿಕ್ಕಪ್ಪ ಸಮುಂದರ್ ಟೊಕಾಸ್ ನನಗೆ ಧೈರ್ಯ ತುಂಬಿ ಕನಸನ್ನು ಬೆನ್ನತ್ತಲು ನೆರವಾದರು. ನನ್ನ ತಂದೆ ನಿಧನರಾದ 10 ದಿನಗಳ ಬಳಿಕ ಜುಡೋ ಸೀನಿಯರ್ ನ್ಯಾಶನಲ್ಸ್ ಸ್ಪರ್ಧೆ ಇತ್ತು. ನಾನು ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂದು ನನ್ನ ಚಿಕ್ಕಪ್ಪನ ಬಳಿ ಹೇಳಿದ್ದೆ. ನಿನ್ನ ತಂದೆ ನೀನು ಚೆನ್ನಾಗಿ ಆಡಬೇಕೆಂದು ಬಯಸಿದ್ದರು. ಈಗ ಅವರು ನಮ್ಮಾಂದಿಗಿಲ್ಲ. ಅವರಿಲ್ಲವೆಂಬ ಕಾರಣಕ್ಕೆ ಸ್ಪರ್ಧೆಯಿಂದ ಹಿಂದೆ ಸರಿಯುವುದು ಸರಿಯಲ್ಲ. ನಾನು ನಿನ್ನ ತಂದೆಯ ಸ್ಥಾನದಲ್ಲಿ ನಿಂತು ಬೆಂಬಲಿಸುವೆ ಎಂದು ಚಿಕ್ಕಪ್ಪ ಧೈರ್ಯ ತುಂಬಿದ್ದರು ಎನ್ನುವುದಾಗಿ ಪಿಂಕಿ ಹೇಳಿದ್ದಾರೆ.

ತಂದೆಯ ಅಂತ್ಯಕ್ರಿಯೆ ಬಳಿಕ ನೇಶನಲ್ಸ್ ಗೆ ತಯಾರಿಯಾಗಲು ನನಗೆ 5 ದಿನಗಳ ಅವಕಾಶವಿತ್ತು. ಜಿಮ್‌ಗೆ ಹೋಗಿ 52 ಕೆಜಿ ಸ್ಪರ್ಧೆಗಾಗಿ ತೂಕ ಕಳೆದುಕೊಂಡೆ. ನಾನು ದಿನಾ ಬೆಳಗ್ಗೆ ಜಿಮ್‌ಗೆ ತೆರಳುತ್ತಿದ್ದಾಗ ನೆರೆಹೊರೆಯವರು ತಂದೆ ತೀರಿಕೊಂಡ ಬೆನ್ನಿಗೆಯೇ ಜಿಮ್‌ಗೆ ಹೋಗುತ್ತಿದ್ದಾಳೆಂದು ಗೇಲಿ ಮಾಡಿದ್ದರು’’ ಎಂದು ಪಿಂಕಿ ಹೇಳಿದ್ದಾರೆ.

ನೇಶನಲ್ಸ್‌ನಲ್ಲಿ ಆಡುವಾಗ ನನ್ನ ಅಜ್ಜಿ ತೀರಿಕೊಂಡರು. ನನ್ನ ತಂಡಕ್ಕೆ ಈ ಸುದ್ದಿ ಸಿಕ್ಕಿತ್ತು. ಆದರೆ ಅವರು ನನಗೆ ಹೇಳಲಿಲ್ಲ. ನೇಶನಲ್ಸ್ ನಲ್ಲಿ ನಾನು ಚಿನ್ನ ಜಯಿಸಿದ್ದೆ. ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದಿದ್ದೆ. ಮರುದಿನ ಜೂನಿಯರ್ ಏಶ್ಯನ್ ಟ್ರಯಲ್ ಇತ್ತು. ತಂಡ ಚಿನ್ನ ಗೆಲ್ಲಲು ನೇತೃತ್ವ ವಹಿಸಿದ್ದೆ. ಮನೆಗೆ ತಲುಪಿದ ಬಳಿಕವೇ ಅಜ್ಜಿ ಸಾವಿನ ಸುದ್ದಿ ಲಭಿಸಿತ್ತು ಎಂದು ಪಿಂಕಿ ಹೇಳಿದರು.

ತಂದೆ ನನ್ನೊಂದಿಗೆ ಏಶ್ಯನ್ ಗೇಮ್ಸ್ ಗೆ ಬರುವುದಾಗಿ ಹೇಳಿದ್ದರು. ಗೇಮ್ಸ್‌ಗಿಂತ ಮೊದಲು ಒಂದು ದಿನ ನನ್ನ ತಂದೆ ಒಂದು ಗ್ಲಾಸ್ ನೀರು ಕೊಡುವಂತೆ ನನ್ನ ಬಳಿ ಕೇಳಿದ್ದರು. ಆದರೆ ನಾನು ಆ ಕೆಲಸ ಮಾಡಿರಲಿಲ್ಲ. ನೀನು ತಂದೆಯ ಮಾತು ಕೇಳುತ್ತಿಲ್ಲ. ಹಾಗಾಗಿ ನೀನು ಗೇಮ್ಸ್ ನಲ್ಲಿ ಚಿನ್ನ ಗೆಲ್ಲಲಾರೆ ಎಂದು ತಂದೆ ಹೇಳಿದ್ದರು. ಏಶ್ಯಾ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದಾಗ ತಂದೆಯ ಮಾತು ನೆನಪಿಗೆ ಬಂತು’’ ಎಂದು ಹೇಳುತ್ತಾ ಪಿಂಕಿ ಕಣ್ಣೀರಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News