ಬಿಜೆಪಿ, ಕಾಂಗ್ರೆಸ್ ಇಲ್ಲದ ಸಂಯುಕ್ತ ರಂಗ ಸ್ಥಾಪನೆ : ಟಿಆರ್‌ಎಸ್ ವಿಶ್ವಾಸ

Update: 2018-09-02 17:48 GMT

ಹೈದರಾಬಾದ್, ಸೆ.2: ಬಿಜೆಪಿ ಮತ್ತು ಕಾಂಗ್ರೆಸ್ ಇಲ್ಲದ ಸಂಯುಕ್ತ ರಂಗ ಸ್ಥಾಪಿಸುವ ವಿಶ್ವಾಸ ತಮಗಿದೆ ಎಂದು ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್) ಮುಖಂಡ ಕೆ.ಟಿ.ರಾಮರಾವ್ ಹೇಳಿದ್ದಾರೆ.

ರವಿವಾರ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್) ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಮುಂಬರುವ ವಿಧಾನಸಭೆ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಟಿಆರ್‌ಎಸ್ ಪಕ್ಷ ಜಯಭೇರಿ ಭಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಮರಾವ್ ಅವರು ಟಿಆರ್‌ಎಸ್ ಅಧ್ಯಕ್ಷ ಹಾಗೂ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರ ಹಾಗೂ ತೆಲಂಗಾಣದ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಚಿವರಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ದೂರವಿರಿಸಿ, ಸಮಾನಮನಸ್ಕ ಪಕ್ಷಗಳು ಸಂಯುಕ್ತ ರಂಗ ಸ್ಥಾಪಿಸಲು ಇದು ಸಕಾಲವಾಗಿದೆ ಎಂದು ರಾಮರಾವ್ ಹೇಳಿದ್ದಾರೆ.

ಈ ಮಧ್ಯೆ, ರಾಜ್ಯದಲ್ಲಿ ಟಿಆರ್‌ಎಸ್ ಸರಕಾರದ ಸಾಧನೆ ಅತ್ಯಂತ ಕಳಪೆಯಾಗಿದೆ ಎಂದು ಬಿಜೆಪಿ ಮುಖಂಡ ಎನ್.ರಾಮಚಂದ್ರ ರಾವ್ ಟೀಕಿಸಿದ್ದಾರೆ. ಚುನಾವಣೆ ಸಂದರ್ಭ 1ಲಕ್ಷ 25 ಸಾವಿರ ಜನತೆಗೆ ಉದ್ಯೋಗ ನೀಡುವುದಾಗಿ ಟಿಆರ್‌ಎಸ್ ಭರವಸೆ ನೀಡಿತ್ತು. ಆದರೆ ಅದು ಹುಸಿಯಾಗಿದೆ. ಅಲ್ಲದೆ ಅವಕಾಶವಂಚಿತರಿಗೆ ಮನೆ ಕಟ್ಟಿಕೊಡುವ, ದಲಿತರಿಗೆ 3 ಎಕರೆ ಜಮೀನು ನೀಡುವ ಭರವಸೆ ಹುಸಿಯಾಗಿದೆ. ತಮ್ಮ ಪಕ್ಷದ ಪ್ರಚಾರ ಕಾರ್ಯಕ್ಕಾಗಿ ಸರಕಾರದ ಹಣವನ್ನು ಬಳಸುತ್ತಿದ್ದಾರೆ. ಸರಕಾರ ರಾಜ್ಯದಲ್ಲಿ ಅವಧಿಪೂರ್ಣ ಚುನಾವಣೆಗೆ ಮುಂದಾಗಿರುವ ಸೂಚನೆ ಇದಾಗಿದೆ ಎಂದು ರಾಮಚಂದ್ರ ರಾವ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷವೂ ಟಿಆರ್‌ಎಸ್ ಸರಕಾರವನ್ನು ಟೀಕಿಸಿದೆ. ದೇಶದಲ್ಲೇ ಅತ್ಯಂತ ಕಳಪೆ ಸರಕಾರ ಇದಾಗಿದೆ. ಚುನಾವಣೆ ಸಂದರ್ಭ ಮುಖ್ಯಮಂತ್ರಿ ಭರವಸೆಗಳ ಸುರಿಮಳೆಯನ್ನೇ ಹರಿಸಿದ್ದರು, ಆದರೆ ಒಂದನ್ನೂ ಈಡೇರಿಸಿಲ್ಲ. ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷರಾಗಿದ್ದಾಗ ಕೆ.ಸಿ.ಚಂದ್ರಶೇಖರ್ ರಾವ್ ಅವರಲ್ಲಿ ಬೇಡಿಕೊಂಡ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರಿಗೆ ತೆಲಂಗಾಣವನ್ನು ನೀಡಿದರು. ಆದರೆ ಈಗ ಅವರು ಸೋನಿಯಾರನ್ನು ನಿಂದಿಸುತ್ತಿರುವುದು ವಿಪರ್ಯಾಸವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ವಿ.ಹನುಮಂತ ರಾವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News