×
Ad

ನಕ್ಸಲರ ಜತೆ ನಂಟಿನ ಆರೋಪ: ಬಂಧಿತರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಗೆ 90 ದಿನ ಕಾಲಾವಕಾಶ

Update: 2018-09-02 23:35 IST

ಮುಂಬೈ, ಸೆ.2: ಮಾವೋವಾದಿ ನಕ್ಸಲರೊಂದಿಗೆ ಸಂಪರ್ಕ ಹೊಂದಿರುವರೆಂಬ ಆರೋಪದಲ್ಲಿ ಕಳೆದ ಜೂನ್‌ನಲ್ಲಿ ಬಂಧಿತರಾಗಿರುವ ಕಾರ್ಯಕರ್ತರ ವಿರುದ್ಧ ಆರೋಪಪಟ್ಟಿ ದಾಖಲಿಸಲು ಪುಣೆ ನ್ಯಾಯಾಲಯ ಪೊಲೀಸರಿಗೆ 90 ದಿನಗಳ ಕಾಲಾವಕಾಶ ನೀಡಿದೆ.

ಇಂಡಿಯನ್ ಅಸೋಸಿಯೇಷನ್ ಆಫ್ ಪೀಪಲ್ಸ್ ಲಾಯರ್ಸ್(ಐಎಪಿಎಲ್) ಪ್ರಧಾನ ಕಾರ್ಯದರ್ಶಿ ಸುರೇಂದ್ರ ಗಾಡ್ಲಿಂಗ್, ನಾಗ್‌ಪುರ ವಿವಿಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ ಶೋಮಾ ಸೇನ್, ವಿದ್ರೋಹಿ ಪತ್ರಿಕೆಯ ಸಂಪಾದಕ ಸುಧೀರ್ ಧವಳೆ, ರಾಜಕೀಯ ಕೈದಿಗಳ ಬಿಡುಗಡೆಗಾಗಿನ ಸಮಿತಿಯ ಸಾರ್ವಜನಿಕ ಸಂಪರ್ಕ ವಿಭಾಗದ ಕಾರ್ಯದರ್ಶಿ ರೋನಾ ವಿಲ್ಸನ್, ಭಾರತ್ ಜನ ಆಂದೋಲನದ ಕಾರ್ಯಕರ್ತ ಮಹೇಶ್ ರಾವತ್‌ರನ್ನು ಅಕ್ರಮ ವ್ಯವಹಾರ ತಡೆ ಕಾಯ್ದೆಯಡಿ ಕಳೆದ ಜೂನ್‌ನಲ್ಲಿ ಪುಣೆ ಪೊಲೀಸರು ಬಂಧಿಸಿದ್ದರು. 2017ರ ಡಿಸೆಂಬರ್ 31ರಂದು ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್‌ನಲ್ಲಿ ಬಂಧಿತ ಕಾರ್ಯಕರ್ತರು ಪಾಲ್ಗೊಂಡಿದ್ದರು . ಈ ವರ್ಷದ ಜನವರಿಯಲ್ಲಿ ನಡೆದ ಭೀಮ ಕೊರೆಗಾಂವ್ ಹಿಂಸಾಚಾರ ಎಲ್ಗಾರ್ ಪರಿಷತ್‌ನಿಂದ ಪ್ರೇರಿತವಾಗಿತ್ತು ಎಂಬ ಆರೋಪವಿದೆ.

 ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಈ ಹಿಂದೆ ನೀಡಿದ್ದ 90 ದಿನಗಳ ಕಾಲಾವಕಾಶ ಸೋಮವಾರ ಕೊನೆಗೊಳ್ಳಲಿದೆ. ಆದರೆ ಎಫ್‌ಐಆರ್‌ನಲ್ಲಿ 7 ಹೊಸ ಶಂಕಿತರ ಹೆಸರನ್ನು ಸೇರಿಸಲಾಗಿದ್ದು ಇವರಲ್ಲಿ ಐದು ಜನರನ್ನು ಕಳೆದ ವಾರ ಬಂಧಿಸಿರುವ ಕಾರಣ ತನಿಖೆಗೆ ಇನ್ನಷ್ಟು ಕಾಲಾವಕಾಶ ಬೇಕು. ಆದ್ದರಿಂದ ಆರೋಪಪಟ್ಟಿ ದಾಖಲಿಸಲು ಹೆಚ್ಚಿನ ಸಮಯಾವಕಾಶ ನೀಡಬೇಕೆಂದು ಪೊಲೀಸರು ಕೋರಿಕೆ ಸಲ್ಲಿಸಿದ್ದರು. ಇದಕ್ಕೆ ಸಮ್ಮತಿಸಿದ ನ್ಯಾಯಾಲಯ, ಈ ತೀರ್ಪಿನ ಬಗ್ಗೆ ಅಸಮಾಧಾನವಿದ್ದರೆ ಪ್ರತಿವಾದಿಗಳು ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಪ್ರತಿವಾದಿಗಳ ಪರ ವಕೀಲರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News