ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಐತಿಹಾಸಿಕ ಸಾಧನೆ

Update: 2018-09-02 18:26 GMT

ಜಕಾರ್ತ , ಸೆ.2: ಇಂಡೋನೇಶ್ಯದ ಅವಳಿ ನಗರಗಳಲ್ಲಿ ನಡೆದ 18ನೇ ಆವೃತ್ತಿಯ ಏಶ್ಯನ್ ಗೇಮ್ಸ್‌ನಲ್ಲಿ ಭಾರತ 69 ಪದಕಗಳೊಂದಿಗೆ ಕೂಟದಲ್ಲಿ 8ನೇ ಸ್ಥಾನ ಗಳಿಸಿದೆ.

ಇದೇ ಮೊದಲ ಬಾರಿ ಭಾರತ ಗರಿಷ್ಠ ಪದಕಗಳನ್ನು ಗಳಿಸಿದೆ. 2010ರಲ್ಲಿ ಗುವಾಂಗ್‌ರೆದಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ 65 ಪದಕಗಳನ್ನು ಪಡೆದಿತ್ತು. ಈ ದಾಖಲೆಯನ್ನು ಭಾರತ ಉತ್ತಮಪಡಿಸಿಕೊಂಡಿದೆ.

1951ರಲ್ಲಿ ಹೊಸದಿಲ್ಲಿ ನಡೆದ ಏಶ್ಯನ್ ಗೇಮ್ಸ್ ನಲ್ಲಿ ಭಾರತ 15 ಚಿನ್ನದ ಪದಕಗಳನ್ನು ಪಡೆದಿತ್ತು. ಆ ಬಳಿಕ 67 ವರ್ಷಗಳಲ್ಲಿ ಇದೇ ಮೊದಲ ಬಾರಿ 15 ಚಿನ್ನ ಪಡೆದಿದೆ. ಈ ಬಾರಿ ಭಾರತ 15 ಚಿನ್ನ, 24 ಬೆಳ್ಳಿ ಮತ್ತು 30 ಕಂಚು ಪಡೆದಿದೆ.

 ಭಾರತದ ಪರ ಏಶ್ಯನ್ ಗೇಮ್ಸ್‌ನ 18ನೇ ಆವೃತ್ತಿಯಲ್ಲಿ ಕೆಲವು ಕ್ರೀಡೆಗಳಲ್ಲಿ ಅಚ್ಚರಿಯ ಫಲಿತಾಂಶ ದಾಖಲಾಗಿವೆ. ಹಿರಿಯ ಮತ್ತು ಕಿರಿಯ ಕ್ರೀಡಾಪಟುಗಳು ಭಾರತದ ಖಾತೆಗೆ ಹಲವು ಪದಕಗಳನ್ನು ಜಮೆ ಮಾಡಿದ್ದಾರೆ.

 ಭಾರತದ ಅಥ್ಲೀಟ್‌ಗಳು ಪದಕ ಬಾಚಿಕೊಳ್ಳುವುದರೊಂದಿಗೆ ಕೆಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೆಪಕ್‌ಟಕ್ರಾದಲ್ಲಿ ಮೊದಲ ಪದಕ ಸಿಕ್ಕಿದೆ. ರಾಹಿ ಸರ್ನೋಬತ್ ಏಶ್ಯನ್ ಗೇಮ್ಸ್‌ನ ಶೂಟಿಂಗ್‌ನಲ್ಲಿ ಚಿನ್ನ ಜಯಿಸಿದ ಮೊದಲ ಮಹಿಳಾ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಕುಸ್ತಿಯಲ್ಲಿ ಚಿನ್ನ ಜಯಿಸಿದ ವಿನೇಶ್ ಫೋಗಟ್ ಭಾರತದ ಪರ ಸಾಧನೆ ಮಾಡಿದ ಮೊದಲ ಅಥ್ಲೀಟ್ ಎಂಬ ದಾಖಲೆ ನಿರ್ಮಿಸಿದ್ದಾರೆ.

ಜಾವೆಲಿನ್‌ನಲ್ಲಿ ನೀರಜ್ ಚೋಪ್ರಾ ದಾಖಲೆಯೊಂದಿಗೆ ಜಯಿಸಿದರು. ರವಿ ಕುಮಾರ್ ಮತ್ತು ಅಪೂರ್ವಿ ಚಾಂಡೆಲಾ ಮೊದಲ ಪದಕ ಜಯಿಸಿದರು.

► ಅಥ್ಲೇಟಿಕ್ಸ್‌ನಲ್ಲಿ ದೊಡ್ಡ ಕೊಡುಗೆ: ಏಶ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಈ ಬಾರಿಯೂ ಗರಿಷ್ಠ ಪದಕಗಳು ಲಭಿಸಿವೆ. ನೀರಜ್ ಚೋಪ್ರಾ ಜಾವೆಲಿನ್‌ನಲ್ಲಿ ಮತ್ತು ಮಹಿಳೆಯರ ಹೆಪ್ಟಾಟ್ಲಾನ್‌ನಲ್ಲಿ ಸ್ವಪ್ನಾ ಬರ್ಮನ್ ಚಿನ್ನ ಜಯಿಸಿದರು. ರಿಲೇಯಲ್ಲಿ ಮಹಿಳೆಯರ ತಂಡ ಚಿನ್ನದೊಂದಿಗೆ ತನ್ನ ಸಾಮರ್ಥ್ಯವನ್ನು ಮುಂದುವರಿಸಿತು. ಕಳೆದ 20 ವರ್ಷಗಳಲ್ಲಿ ಮೊದಲ ಬಾರಿ ಪುರುಷರ 1,500 ಮೀಟರ್ ಓಟದಲ್ಲಿ ಭಾರತದ ಖಾತೆಗೆ ಮೊದಲ ಪದಕ ಜಿನ್ಸನ್ ಜಾನ್ಸನ್ ಮೂಲಕ ಜಮೆ ಆಗಿತ್ತು. ಪುರುಷರ 800 ಮೀಟರ್ ಓಟದಲ್ಲಿ 32 ವರ್ಷಗಳ ಬಳಿಕ ಮತ್ತು ಟ್ರಿಪಲ್ ಜಂಪ್‌ನಲ್ಲಿ 48 ವರ್ಷಗಳ ಬಳಿಕ ಭಾರತದ ಖಾತೆಗೆ ಚಿನ್ನ ಸಿಕ್ಕಿದೆ.

► ಆರ್ಚರಿ: ಆರ್ಚರಿಯಲ್ಲಿ ಭಾರತಕ್ಕೆ 2 ಬೆಳ್ಳಿ ಪದಕಗಳು ಸಿಕ್ಕಿದೆ. ಕಂಪೌಂಡ್ ಆರ್ಚರಿಯಲ್ಲಿ ಮಹಿಳಾ ಮತ್ತು ಪುರುಷರ ತಂಡ ಬೆಳ್ಳಿ ಪಡೆಯಿತು. ವೈಯಕ್ತಿಕ ವಿಭಾಗದಲ್ಲಿ ಪದಕ ಸಿಗಲಿಲ್ಲ.

► ಬ್ಯಾಡ್ಮಿಂಟನ್: ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಬೆಳ್ಳಿ ಮತ್ತು ಸೈನಾ ನೆಹ್ವಾಲ್ ಕಂಚು ಪಡೆದರು. ಮಹಿಳೆಯ ಸಿಂಗಲ್ಸ್‌ನಲ್ಲಿ ಮೊದಲ ಬಾರಿ ಎರಡು ಪದಕಗಳು ಭಾರತಕ್ಕೆ ಸಿಕ್ಕಿವೆೆ. ಪುರುಷರ ಸಿಂಗಲ್ಸ್ ನಲ್ಲಿ ಕೆ.ಶ್ರೀಕಾಂತ್ ಮತ್ತು ಎಚ್.ಎಸ್ ಪ್ರಣಯ್‌ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. ಮಹಿಳೆಯರ ಡಬಲ್ಸ್ ನಲ್ಲಿ ಎನ್.ಸಿಕ್ಕಿ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಕ್ವಾರ್ಟರ್ ಫೈನಲ್‌ನಲ್ಲೇ ಅಭಿಯಾನ ಕೊನೆಗೊಳಿಸಿದರು.

► ಬಾಕ್ಸಿಂಗ್: ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಳೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಬಾಕ್ಸರ್‌ಗಳು 9 ಪದಕಗಳನ್ನು ಬಾಚಿಕೊಂಡಿದ್ದರು. ಆದರೆ ಏಶ್ಯನ್ ಗೇಮ್ಸ್‌ನಲ್ಲಿ ಬಾಕ್ಸರ್‌ಗಳು ವಿಫಲರಾದರು. ಅಂತಿಮ ದಿನ ಅಮಿತ್ ಪಾಂಗಾಲ್ ಚಿನ್ನ ಜಯಿಸಿ ಅಪೂರ್ವ ಸಾಧನೆ ಮಾಡಿದರು.

► ಹಾಕಿ: ಮಹಿಳೆಯರ ತಂಡ ಹಾಕಿಯಲ್ಲಿ 20 ವರ್ಷಗಳ ಬಳಿಕ ಮತ್ತೊಮ್ಮೆ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಜಪಾನ್ ವಿರುದ್ಧ ಸೋತು ಬೆಳ್ಳಿ ಪಡೆಯಿತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಭಾರತ ತಂಡ ಕಂಚು ಪಡೆಯಿತು.

► ಕಬಡ್ಡಿಯಲ್ಲಿ ವೈಫಲ್ಯ: 1990ರಲ್ಲಿ ಏಶ್ಯನ್ ಗೇಮ್ಸ್‌ನಲ್ಲಿ ಕಬಡ್ಡಿ ಸೇರ್ಪಡೆಗೊಂಡ ಬಳಿಕ ಭಾರತ ಸತತ ಚಿನ್ನ ಜಯಿಸಿದ ಸಾಧನೆ ಮಾಡಿತ್ತು. ಆದರೆ ಈ ಆವೃತ್ತಿಯಲ್ಲಿ ಮೊದಲ ಬಾರಿ ಭಾರತದ ಪುರುಷರ ತಂಡ ಚಿನ್ನ ಕಳೆದುಕೊಂಡು ಮೂರನೇ ಸ್ಥಾನದೊಂದಿಗೆ ಕಂಚು ಪಡೆದಿದೆ. ಸೆಮಿಫೈನಲ್‌ನಲ್ಲಿ ಭಾರತಕ್ಕೆ ಇರಾನ್ ಸೋಲುಣಿಸಿ ಫೈನಲ್ ಹಾದಿಯನ್ನು ಬಂದ್ ಮಾಡಿತ್ತು. ಮಹಿಳೆಯರ ಹಾಕಿ ಫೈನಲ್‌ನಲ್ಲಿ ಭಾರತ ಇರಾನ್ ವಿರುದ್ಧ ಸೋಲು ಅನುಭವಿಸಿ ಬೆಳ್ಳಿ ಪಡೆದಿದೆ. 

► ರೋಯಿಂಗ್‌ನಲ್ಲಿ ಅಚ್ಚರಿಯ ಫಲಿತಾಂಶ: ರೋಯಿಂಗ್‌ನಲ್ಲಿ ಭಾರತದ ತಂಡ 1 ಚಿನ್ನ ಮತ್ತು ಕಂಚು ಪಡೆದಿದೆ.

► ಸ್ಕ್ವಾಷ್‌ನಲ್ಲಿ 1 ಬೆಳ್ಳಿ ಮತ್ತು 4 ಕಂಚು ಸೇರಿದಂತೆ ಐದು ಪದಕಗಳು ಜಮೆಯಾಗಿವೆ.

► ಶೂಟಿಂಗ್‌ನಲ್ಲಿ ಭಾರತದ ಶೂಟರ್‌ಗಳ ಪ್ರದರ್ಶನ ಚೆನ್ನಾಗಿತ್ತು. 16ರ ಹರೆಯದ ಸೌರಭ್ ಚೌಧರಿ ಪುರುಷರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಮತ್ತು ಮಹಿಳೆಯರ 25 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ರಾಹಿ ಸರ್ನೊಬತ್ ಚಿನ್ನ ಬಾಚಿಕೊಂಡಿದ್ದಾರೆ. ಕಳೆದ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಜಯಿಸಿದ್ದ 16ರ ಹರೆಯದ ಮನು ಭಕೆರ್ ವೈಫಲ್ಯ ಅನುಭವಿಸಿದರು. ಭಾರತ ಒಟ್ಟು 2 ಚಿನ್ನ, 4 ಬೆಳ್ಳಿ ಮತ್ತು 3 ಕಂಚು ಪಡೆಯಿತು.

►  ಟೇಬಲ್ ಟೆನಿಸ್‌ನಲ್ಲಿ ಬರ ನೀಗಿತು: ಟೇಬಲ್ ಟೆನಿಸ್‌ನಲ್ಲಿ ಭಾರತ ಎದುರಿಸುತ್ತಿದ್ದ 60 ವರ್ಷಗಳ ಪದಕದ ಬರ ನಿವಾರಣೆಯಾಗಿದೆ. ಎರಡು ಕಂಚು ಬಂದಿದೆ. ಟೆನಿಸ್‌ನಲ್ಲಿ 1 ಚಿನ್ನ ಮತ್ತು 2 ಕಂಚು ಭಾರತದ ಖಾತೆಗೆ ಜಮೆಯಾಗಿದೆ. ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಮತ್ತು ಡಿವಿಜ್ ಶರಣ್ ಚಿನ್ನ ಜಯಿಸಿದರು. ವೇಟ್ ಲಿಫ್ಟಿಂಗ್‌ನಲ್ಲಿ ಭಾರತದ ವೇಟ್‌ಲಿಫ್ಟರ್‌ಗಳು ಕಳಪೆ ಪ್ರದರ್ಶನ ನೀಡಿದರು. ಕಳೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 9 ಪದಕಗಳನ್ನು ಜಯಿಸಿದ್ದ ವೇಟ್‌ಲಿಫ್ಟರ್‌ಗಳು ಏಶ್ಯನ್ ಗೇಮ್ಸ್‌ನಲ್ಲಿ ಬರಿಗೈಯಲ್ಲಿ ವಾಪಸಾಗಿದ್ದಾರೆ.

ಕುಸ್ತಿಯಲ್ಲಿ ಖ್ಯಾತ ಕುಸ್ತಿಪಟುಗಳು ಪದಕ ಗೆಲ್ಲುವ ಭರವಸೆಯೊಂದಿಗೆ ಜಕಾರ್ತಗೆ ತೆರಳಿದ್ದರು. 2 ಚಿನ್ನ ಮತ್ತು 1 ಕಂಚು ಭಾರತದ ಖಾತೆಗೆ ಜಮೆಯಾಗಿದೆ. ಬಜರಂಗ್ ಪೂನಿಯಾ ಪುರುಷರ 65 ಕೆ.ಜಿ ವಿಭಾಗದಲ್ಲಿ ಮತ್ತು ವಿನೇಶ್ ಫೋಗಟ್ ಮಹಿಳೆಯರ ಫ್ರೀಸ್ಟೈಲ್ 50 ಕೆ.ಜಿ. ವಿಭಾಗದಲ್ಲಿ ಚಿನ್ನ ಪಡೆದಿದ್ದಾರೆ. ದಿವ್ಯಾ ಕಕ್ರಾನ್ 68 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನ ಗಿಟ್ಟಿಸಿಕೊಂಡರು.

ಚಿನ್ನದ ಪದಕದ ಭರವಸೆ ಮೂಡಿಸಿದ್ದ ಒಲಿಂಪಿಕ್ಸ್ ನಲ್ಲಿ ಪದಕ ಪಡೆದಿದ್ದ ಸುಶೀಲ್ ಕುಮಾರ್ ಮತ್ತು ಸಾಕ್ಷಿ ಮಲಿಕ್ ವೈಫಲ್ಯ ಅನುಭವಿಸಿದರು.

ಬ್ರಿಡ್ಜ್‌ನಲ್ಲಿ ಭಾರತಕ್ಕೆ ಚೊಚ್ಚಲ ಪದಕ ಜಮೆಯಾಗಿದೆ. ಪ್ರಣಬ್ ಬರ್ಧನ್ ಮತ್ತು ಶಿಭನಾಥ್ ಸರ್ಕಾರ್ ಚಿನ್ನ ಗೆದ್ದುಕೊಂಡರು. 1 ಚಿನ್ನ ಮತ್ತು 2 ಕಂಚು ಸಿಕ್ಕಿದೆ.

► ಕುದುರೆ ಸವಾರಿ: ಅಪರಿಚಿತ ಎನಿಸಿಕೊಂಡಿದ್ದ ಕುದುರೆ ಸವಾರಿ ಸ್ಪರ್ಧೆಯಲ್ಲಿ ಭಾರತಕ್ಕೆ 2 ಬೆಳ್ಳಿ ದೊರಕಿದೆ. 36 ವರ್ಷಗಳ ಬಳಿಕ ಭಾರತಕ್ಕೆ ಮತ್ತೊಮ್ಮೆ ಪದಕ ಸಿಕ್ಕಿದೆ. ಫವಾದ್ ಮಿರ್ಝಾ ವೈಯಕ್ತಿಕ ವಿಭಾಗದಲ್ಲಿ, ರಾಕೇಶ್ ಕುಮಾರ್, ಆಶಿಶ್ ಮಲಿಕ್, ,ಜಿತೇಂದರ್ ಸಿಂಗ್ ಮತ್ತು ಮಿರ್ಝಾ ಅವರನ್ನೊಳಗೊಂಡ ತಂಡ ಬೆಳ್ಳಿ ಪಡೆದಿದೆ.

ಕುರಾಶ್ ಮತ್ತು ವೊಶೂ ಸ್ಪರ್ಧೆಯಲ್ಲಿ ಭಾರತ 1 ಬೆಳ್ಳಿ ಮತ್ತು 5 ಕಂಚು ಪಡೆದಿದೆ.ಕುರಾಶ್‌ನಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News