ಭಾಗಮಂಡಲ-ಕರಿಕೆ ರಸ್ತೆಯಲ್ಲಿ ಝರಿ, ಜಲಪಾತಗಳ ಸೊಬಗು!

Update: 2018-09-03 18:56 GMT

► ಪ್ರವಾಸಿಗರ ಮನಸ್ಸಿಗೆ ಮುದ ನೀಡುವ ಮಂಜು ಮುಸುಕಿದ ಬೆಟ್ಟಗುಡ್ಡಗಳು

ಮಂಗಳೂರು, ಸೆ.2: ಕೊಡಗು ಜಿಲ್ಲೆಯ ಭಾಗಮಂಡಲ - ಕರಿಕೆ ಅಂತರ್ ರಾಜ್ಯ ಹೆದ್ದಾರಿಯ ಪ್ರಕೃತಿ ರಮಣೀಯ ಬೆಟ್ಟಗುಡ್ಡಗಳಿಂದ ಕೂಡಿರುವ ಬಾತಿಮನೆ, ಮೇಲಡ್ಕ, ಪಟ್ಟಿ, ಚೆತ್ತುಕಾಯ ಪ್ರದೇಶಗಳಲ್ಲಿ ಮೈದುಂಬಿ ಹರಿಯುತ್ತಿರುವ ಹತ್ತು ಹಲವು ಝರಿ, ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಒಂದಕ್ಕೊಂದು ಜೋಡಿಸಿಟ್ಟಿರುವಂತೆ ಇರುವ ಬೆಟ್ಟಗುಡ್ಡಗಳು, ಮಂಜು ಮುಸುಕಿದ ವಾತಾವರಣ, ಹಚ್ಚಹಸುರಿನ ಪ್ರಕೃತಿಯಿಂದ ಕೂಡಿರುವ ಕೊಡಗು ಜಿಲ್ಲೆ ಪ್ರವಾಸಿಗರ ಅಚ್ಚುಮೆಚ್ಚಿ ನ ತಾಣ. ಮಳೆಗಾಲದಲ್ಲಂತೂ ಇಲ್ಲಿನ ಬೆಟ್ಟಗುಡ್ಡಗಳಿಂದ ಧುಮ್ಮಿಕ್ಕುವ ಹಲವು ಜಲಪಾತ ಗಳು ದೇಶ, ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಜಿಲ್ಲೆಯ ಭಾಗಮಂಡಲ-ಕರಿಕೆ ಅಂತರ್ ರಾಜ್ಯ ಹೆದ್ದಾರಿಯ ತಣ್ಣಿಮಾನಿ, ಬಾತಿಮನೆ, ಪಟ್ಟಿ, ಚೆತ್ತುಕಾಯ ಪ್ರದೇಶಗಳಲ್ಲಿ ಹರಿಯುತ್ತಿರುವ ಹತ್ತಕ್ಕೂ ಅಧಿಕ ಜಲಪಾತಗಳು ಈ ಪ್ರದೇಶಕ್ಕೆ ಪ್ರವಾಸಿ ಗರನ್ನು ಸೆಳೆಯುತ್ತದೆ. 

ಮಳೆಯ ಕೊರತೆಯಿಂದ 3 ವರ್ಷಗಳಿಂದ ಬತ್ತಿ ಹೋಗಿದ್ದ ಈ ಜಲಪಾತಗಳು ಈ ವರ್ಷ ನಿರಂತರ ಸುರಿದ ಭಾರೀ ಮಳೆಯಿಂದ ಮತ್ತೆ ಜೀವ ತುಂಬಿದ್ದು ಈ ರಸ್ತೆಯಲ್ಲಿ ಸಂಚರಿಸುವ ಜನರ ಕಣ್ಮನ ಸೆಳೆಯುತ್ತಿದೆ. ಮೂಲಭೂತ ಸೌಕರ್ಯ ಒದಗಿಸಿ ಪ್ರವಾಸೋದ್ಯಮ ಇಲಾಖೆ ಮನಸ್ಸು ಮಾಡಿದರೆ ಈ ಭಾಗಕ್ಕೆ ಹೆಚ್ಚಿನ ಪ್ರವಾಸಿಗರು ಬರುವಂತೆ ಮಾಡಬಹುದು. ಅದರಲ್ಲೂ ಹದಗೆಟ್ಟಿರುವ ಈ ಭಾಗದ ರಸ್ತೆಯನ್ನು ಅಭಿವೃದ್ಧಿ ಮಾಡ ಬೇಕಾಗಿದೆ. ಸಂರಕ್ಷಿತ ಅರಣ್ಯ, ವನ್ಯಜೀವಿ ಸಂರಕ್ಷಣಾ ಅರಣ್ಯ ಹಾಗೂ ತಲಕಾವೇರಿ ವನ್ಯಧಾಮ ಸರಹದ್ದಿಗೆ ಸೇರಿರುವ ಈ ಪ್ರದೇಶವು ಹಲವು ತಿರುವುಗಳಿರುವ ಕೂಡಿರುವ ಅಂಕುಡೊಂಕಾದ ರಸ್ತೆಯಾಗಿದೆ. ಅಲ್ಲದೆ ಇಲ್ಲಿನ ರಸ್ತೆ ಸಾಕಷ್ಟು ಹದಗೆಟ್ಟಿದ್ದು ಕಿರಿದಾಗಿದೆ. ಮಳೆ ಗಾಲದಲ್ಲಿ ರಸ್ತೆಯ ಬದಿಯಲ್ಲಿ ಗುಡ್ಡಗಳು ಕುಸಿಯುತ್ತಿದ್ದೆ. ಆದ್ದರಿಂದ ಈ ರಸ್ತೆಯಲ್ಲಿ ವೇಗದ ಸಂಚಾರ ಮಾಡದೆ ಸಂಚಾರ ಮಾಡುವಾಗ ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ.

ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಮಡಿಕೇರಿ ತಾಲೂಕಿನ ಜೋಡು ಪಾಲದಲ್ಲಿ ಭೂಕುಸಿತದಿಂದ ಮಂಗಳೂರು-ಮಡಿಕೇರಿ ರಸ್ತೆ ಸಂಪೂರ್ಣ ಕುಸಿದು ಹೋಗಿದ್ದು ಸಂಚಾರ ಕಡಿತಗೊಂಡಿದೆ. ಹಾಗಾಗಿ ಪ್ರಸಕ್ತ ಮಂಗಳೂರು-ಮಡಿಕೇರಿಗೆ ಸಂಚರಿಸುವವರು ಸುಳ್ಯದಿಂದ ಪಾಣಂತ್ತೂರು - ಕರಿಕೆ-ಭಾಗಮಮಡಲ ರಸ್ತೆಯಾಗಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಮಾರ್ಗವಾಗಿ ಸಂಚರಿಸುವವರಿಗೆ ಇಲ್ಲಿನ ಹತ್ತು ಹಲವು ಝರಿ, ಜಲಪಾತಗಳ ಸೊಬಗನ್ನು ಅನುಭವಿಸಬಹುದಾಗಿದೆ. ಸಂಜೆಯಾಗುತ್ತಲೇ ಈ ಭಾಗದ ಬೆಟ್ಟಗುಡ್ಡಗಳಲ್ಲಿ ಮಂಜು ಆವರಿಸುತ್ತದೆ. ಆದ್ದರಿಂದ ರಾತ್ರಿ ವೇಳೆ ವಾಹನ ಗಳ ಸಂಚಾರ ಕಷ್ಟಕರ. ಮಳೆಗಾಲದಲ್ಲಿ ಬಿಸಿಲು ಕಡಿಮೆ ಬೀಳುವುದರಿಂದ ಬೆಳಗ್ಗೆ ಸುಮಾರು 10ರಿಂದ 11 ಗಂಟೆಯವರೆಗೂ ಈ ಪ್ರದೇಶಗಳಲ್ಲಿ ಮಂಜು ಮುಸುಕಿರುತ್ತದೆ. ಹಾಗಾಗಿ ವಾಹನಗಳ ದೀಪ ಹಾಕಿಕೊಂಡೇ ಸಂಚರಿಸುವುದು ಅನಿವಾರ್ಯವಾಗಿದೆ. ಇದು ವನ್ಯಜೀವಿ ಸಂರಕ್ಷಣಾ ಅರಣ್ಯವೂ ಆಗಿರುವುದರಿಂದ ಈ ರಸ್ತೆಯುದ್ದಕ್ಕೂ ವನ್ಯ ಜೀವಿಗಳು ರಸ್ತೆ ದಾಟುವ ಪ್ರದೇಶವಾಗಿದ್ದು ಎಚ್ಚರಿಕೆಯಿಂದ ವಾಹನ ಚಲಾಯಿಸಿ ಎಂಬ ಫಲಕಗಳಿವೆ. ಅದರಲ್ಲೂ ಆಮೆ, ಮೊಲಗಳಂತಹ ಸಾಧು ಪ್ರಾಣಿಗಳಿಂದ ಹಿಡಿದು, ಸರ್ಪ, ಚಿರತೆಗಳಂತ ಕ್ರೂರ ಪ್ರಾಣಿಗಳ ಚಲನ ವಲನಗಳ ಬಗ್ಗೆ ಇಲ್ಲಿ ಎಚ್ಚರಿಕೆಯನ್ನು ನೀಡಲಾಗುತ್ತದೆ. ಅಲ್ಲದೆ ಕಾಡುಪ್ರಾಣಿಗಳು ರಸ್ತೆ ದಾಟುವ ಪ್ರದೇಶವೂ ಆಗಿರುವುದರಿಂದ ವೇಗವಾಗಿ ಚಲಿಸದೆ ಪ್ರಾಣಿಗಳ ಮೇಲೆ ಕರುಣೆ ತೋರಿಸಿ ಎಂಬ ಫಲಕವನ್ನೂ ಕಾಣಬಹುದು. 

ಬೆಟ್ಟಗುಡ್ಡಗಳನ್ನು ಆವರಿಸುವ ಮಂಜು ಮುಸುಕಿದ ವಾತಾವರಣ

ಭಾಗಮಂಡಲ ಕರಿಕೆ ಅಂತರ್ ರಾಜ್ಯ ಹೆದ್ದಾರಿಯ ತಣ್ಣಿಮಾನಿ, ಬಾತಿಮನೆ, ಮೇಲಡ್ಕ, ಪಟ್ಟಿ, ಚೆತ್ತುಕಾಯ ಪ್ರದೇಶಗಳ ಹಚ್ಚಹಸುರಿನ ಕೃತಿ ಸೌಂದರ್ಯದ ನಡುವೆ ಮೈದುಂಬಿ ಹರಿಯುವ ಹತ್ತಾರು ಹತ್ತಾರು ಝರಿ, ಜಲಪಾತಗಳು ಒಂದೆಡೆಯಾದರೆ ಇಲ್ಲಿನ ಬೆಟ್ಟಗುಡ್ಡಗಳಿಗೆ ದಟ್ಟವಾಗಿ ಮಂಜು ಮುಸುಕಿದ ತಂಪು ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಸಂಜೆಯಾಗುತ್ತಿದ್ದಂತೆ ಎಲ್ಲಡೆಯೂ ಮಂಜು ಮುಸುಕಲು ಆರಂಭಿಸುತ್ತದೆ. ಬೆಳಗ್ಗೆ ಸುಮಾರು ಹತ್ತು ಗಂಟೆಯವರೆಗೂ ದಟ್ಟ ಮಂಜು ಬೆಟ್ಟಗುಡ್ಡಗಳನ್ನು ಆವರಿಸಿರುತ್ತದೆ. ದಟ್ಟ ಮಂಜಿನಿಂದಾಗಿ ದೂರದ ಬೆಟ್ಟಗುಡ್ಡಗಳು ಸ್ಪಷ್ಟವಾಗಿ ಕಾಣುತ್ತದೆ.

ಗದ್ದೆಗಳ ಸುಂದರ ನೋಟ

ಪ್ರಾಥಮಿಕ ಶಾಲೆಯ ಕನ್ನಡ ಪಠ್ಯ ಪುಸ್ತಕದ ಮುಖ ಪುಟದಲ್ಲಿ ಬರುತ್ತಿದ್ದ ಮೆಟ್ಟಿಲು ಆಕಾರದ ಗದ್ದೆಗಳ ಚಿತ್ರ ಇದೇ ಪ್ರದೇಶದ್ದಾಗಿದೆ. ಇಲ್ಲಿನ ತಣ್ಣಿಮಾನಿ ಗ್ರಾಮದಲ್ಲಿ ಹಚ್ಚಹಸುರಿನ ಬೆಟ್ಟಗುಡ್ಡಗಳ ಮಧ್ಯೆ ಒಂದರ ಮೇಲೊಂದರಂತೆ ಮೆಟ್ಟಿಲು ಆಕಾರದ ಗದ್ದೆಗಳ ಸುಂದರ ನೋಟವನ್ನು ಭಾಗಮಂಡಲ-ಕರಿಕೆ ರಸ್ತೆಯಲ್ಲಿ ಸಂಚರಿಸುವಾಗ ನೋಡಲು ಸಿಗುತ್ತದೆ. ನಾಗಮಂಡಲ ದ್ವಾರದಿಂದ ಕರಿಕೆ ರಸ್ತೆಯಲ್ಲಿ ಒಂದಷ್ಟು ದೂರ ಬರುವಾಗ ಸಿಗುವ ಈ ಪ್ರದೇಶದಲ್ಲಿ ಪ್ರವಾಸಿಗರು ತಮ್ಮ ವಾಹನಗಳನ್ನು ನಿಲ್ಲಿಸಿ ಫೋಟೊ ಕ್ಲಿಕ್ಕಿಸುವುದು ಕಾಣಸಿಗುತ್ತದೆ.

Writer - ಇಮ್ತಿಯಾಝ್ ಶಾ ತುಂಬೆ

contributor

Editor - ಇಮ್ತಿಯಾಝ್ ಶಾ ತುಂಬೆ

contributor

Similar News