`ಫ್ಯಾಸಿಸ್ಟ್ ಬಿಜೆಪಿ ಸರಕಾರ' ಎಂದು ಘೋಷಣೆ ಕೂಗಿದ ವಿದ್ಯಾರ್ಥಿನಿಗೆ 15 ದಿನ ನ್ಯಾಯಾಂಗ ಬಂಧನ

Update: 2018-09-04 09:15 GMT

ಟ್ಯುಟಿಕೊರಿನ್, ಸೆ.4: ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಳಿಸೈ ಸೌಂದರರಾಜನ್ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ``ಡೌನ್ ವಿದ್ ಮೋದಿ-ಬಿಜೆಪಿ-ಆರೆಸ್ಸೆಸ್ ಫ್ಯಾಸಿಸ್ಟ್ ಗವರ್ನಮೆಂಟ್'' ಎಂದು ಘೋಷಣೆ ಕೂಗಿದ ಘಟನೆ ಸೋಮವಾರ ನಡೆದಿದೆ. ಘೋಷಣೆ ಕೂಗಿದ ವಿದ್ಯಾರ್ಥಿನಿಯನ್ನು ತೂತುಕುಡಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

“ಆಕೆಯೇನೂ ಸಾಮಾನ್ಯ ಪ್ರಯಾಣಿಕೆಯಾಗಿರಲಿಲ್ಲ. ಯಾವುದಾದರೂ ತೀವ್ರಗಾಮಿ ಸಂಘಟನೆ ಆಕೆಯ ಹಿಂದಿರಬೇಕೆಂದು ನಾನು ಶಂಕಿಸುತ್ತೇನೆ” ಎಂದು ಸೌಂದರರಾಜನ್ ನಂತರ ಸುದ್ದಿಗಾರರೊಡನೆ ಮಾತನಾಡುತ್ತಾ ಹೇಳಿದರು.

ಬಂಧಿತೆ, ಲೂಯಿಸ್ ಸೋಫಿಯಾ (28), ಕೆನಡಾದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದು ಸೌಂದರರಾಜನ್ ಟ್ಯುಟಿಕೊರಿನ್ ಗೆ ಹೊರಟಿದ್ದ ವಿಮಾನದಲ್ಲಿ ಆಕೆಯೂ ಪ್ರಯಾಣಿಸುತ್ತಿದ್ದಳು. ವಿಮಾನದಲ್ಲಿ ಮೊದಲ ಸಾಲಿನಲ್ಲಿ ಕುಳಿತಿದ್ದ ಬಿಜೆಪಿ ನಾಯಕಿ ತಮ್ಮ ಬ್ಯಾಗನ್ನು ತೆಗೆಯಲೆಂದು ಆಕೆಯ ಸಮೀಪಕ್ಕೆ ಬಂದಾಗ ಆಕೆ ಘೋಷಣೆ ಕೂಗಿದ್ದಳು. ಸೌಂದರರಾಜನ್ ಆಕೆಯ ವಿರುದ್ಧ ಟ್ಯುಟಿಕೊರಿನ್ ವಿಮಾನ ನಿಲ್ದಾಣ ಪೊಲೀಸರಲ್ಲಿ ದೂರು ನೀಡಿದ ಬೆನ್ನಿಗೇ ಆಕೆಯ ಬಂಧನ ನಡೆದಿದೆ.

``ಕೈಗಳನ್ನು  ಮೇಲೆತ್ತಿ ಆಕೆ ಘೋಷಣೆ ಕೂಗಿದಾಗ  ನನ್ನ ಜೀವಕ್ಕೆ ಅಪಾಯವಿದೆಯೆಂದೆನಿಸಿತು. ಯಾವುದೇ ಮುಗ್ಧ ಹುಡುಗಿ ಫ್ಯಾಸಿಸ್ಟ್ ಪದ ಉಪಯೋಗಿಸುವುದಿಲ್ಲ,'' ಎಂದು ಬಿಜೆಪಿ ನಾಯಕಿ ಹೇಳಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ತೊಂದರೆಯುಂಟು ಮಾಡಿದ ಹಾಗೂ ಭಯ ಸೃಷ್ಟಿಸಲು ಯತ್ನಿಸಿದ ಪ್ರಕರಣ ಆಕೆಯ ಮೇಲೆ ದಾಖಲಾಗಿದೆ. ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಆಕೆಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿದ್ಯಾರ್ಥಿನಿಯ ತಂದೆ ಎಎ ಸ್ವಾಮಿ ಓರ್ವ ನಿವೃತ್ತ ಸರಕಾರಿ ಅಧಿಕಾರಿಯಾಗಿದ್ದು, ತಮಿಳುನಾಡು ಬಿಜೆಪಿ ಅಧ್ಯಕ್ಷೆ ಮತ್ತು ಕೆಲವು ಮಂದಿ ಇತರರು ಬೆದರಿಕೆಯೊಡ್ಡಿದ್ದಾರೆಂದು ಅವರು ದೂರು ನೀಡಿದ್ದು ಇನ್ನಷ್ಟೇ ಪ್ರಕರಣ ದಾಖಲಾಗಬೇಕಿದೆ.

ತಾವು ಮತ್ತು ತಮ್ಮ ಪತ್ನಿ ಚೆನ್ನೈನಲ್ಲಿ ಮಗಳನ್ನು ಬರಮಾಡಿಕೊಂಡ ನಂತರ ಆಕೆಯ ಜತೆಗೆ ಟ್ಯುಟಿಕೊರಿನ್ ಗೆ ಪಯಣಿಸಿದ್ದು ಅಲ್ಲಿ ಕೆಲ ಜನರು ಆಕೆಯನ್ನು ಸುತ್ತುವರಿದು ಆಕೆಯನ್ನು ನಿಂದಿಸಿದ್ದರೆಂದು ಅವರು ಆರೋಪಿಸಿದ್ದಾರೆ. ಈ ಜನರೆಲ್ಲಾ ಆಕ್ರೋಶಭರಿತ ಕಾರ್ಯಕರ್ತರಾಗಿದ್ದರು ಎಂದು ಸೌಂದರರಾಜನ್ ಹೇಳಿದ್ದಾರೆ.

ಲೇಖಕಿ ಹಾಗೂ ಗಣಿತ ತಜ್ಞೆಯಾಗಿರುವ ಸೋಫಿಯಾ ಈ ಹಿಂದೆ ಟ್ಯುಟಿಕೊರಿನ್ ನಲ್ಲಿ ಸ್ಟೆರ್ಲೈಟ್  ಸ್ಥಾವರದ ವಿರುದ್ಧದ ಅಭಿಯಾನದಲ್ಲಿ ಪಾಲ್ಗೊಂಡಿದ್ದರಲ್ಲದೆ ಚೆನ್ನೈ-ಸೇಲಂ ಎಕ್ಸ್‍ಪ್ರೆಸ್‍ವೇ  ವಿರುದ್ಧದ ಹೋರಾಟದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News