ಅತಿಯಾಗಿ ಬೆವರುತ್ತಿದೆಯೇ? ಇಲ್ಲಿವೆ ಐದು ಸಾಮಾನ್ಯ ಕಾರಣಗಳು

Update: 2018-09-04 10:14 GMT

ಸೆಕೆಯಿದ್ದಾಗ, ಅದೂ ಬಿಸಿಲಿನಲ್ಲಿ ತಿರುಗಾಡುವಾಗ ಮೈ ಬೆವರುವುದು ಸಾಮಾನ್ಯ. ಆದರೆ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತಿದ್ದಾಗಲೂ ಅಥವಾ ಸೆಕೆಯಿಲ್ಲದಿದ್ದಾಗಲೂ ಮೈ ಬೆವರುತ್ತಿದ್ದರೆ? ಹೌದು,ಇದು ಯೋಚಿಸಬೇಕಾದ ವಿಷಯವಾಗಿದೆ. ನೀವು ಹೈಪರ್‌ಹೈಡ್ರೊಸಿಸ್ ಅಥವಾ ಅತಿಯಾಗಿ ಬೆವರುವಿಕೆಯ ಸ್ಥಿತಿಯಿಂದ ಬಳಲುತ್ತಿದ್ದೀರಿ ಎನ್ನುವುದನ್ನು ಇದು ಸೂಚಿಸುತ್ತದೆ. ಇತ್ತೀಚಿಗೆ ನೀವು ಅತಿಯಾಗಿ ಬೆವರುತ್ತಿದ್ದರೆ ಅಥವಾ ನಿಮ್ಮ ಅಂಗೈಗಳು ಹೆಚ್ಚಿನ ಸಮಯ ಬೆವರಿನಿಂದ ಕೂಡಿರುತ್ತಿದ್ದರೆ ನೀವು ವೈದ್ಯರನ್ನು ಕಾಣಲು ಸಕಾಲವಾಗಿದೆ. ಅದು ನಿಮ್ಮ ಶರೀರವನ್ನು ಕಾಡುತ್ತಿರುವ ಅನಾರೋಗ್ಯದ ಸಂಕೇತವಾಗಿರಬಹುದು,ಹೀಗಾಗಿ ಅತಿಯಾಗಿ ಬೆವರುವಿಕೆಯನ್ನು ಖಂಡಿತ ಕಡೆಗಣಿಸಕೂಡದು.

► ಏನಿದು ಅತಿಯಾಗಿ ಬೆವರುವಿಕೆ?

ಬೆವರುವಿಕೆಯು ಒತ್ತಡ,ಸಿಟ್ಟು,ಭಯ,ದೈಹಿಕ ಚಟುವಟಿಕೆ ಅಥವಾ ಸೆಕೆಯಂತಹ ಕೆಲವು ಸ್ಥಿತಿಗಳಿಗೆ ಶರೀರದ ಸಹಜ ಪ್ರತಿಕ್ರಿಯೆಯಾಗಿದೆ. ಆದರೆ ನೀವು ಹೈಪರ್‌ಹೈಡ್ರೊಸಿಸ್‌ನಿಂದ ಬಳಲುತ್ತಿದ್ದರೆ ನೀವು ಸಾಮಾನ್ಯಕ್ಕಿಂತ ಹೆಚ್ಚಾಗಿ ಬೆವರುತ್ತೀರಿ ಮತ್ತು ಆರೋಗ್ಯ ಸಮಸ್ಯೆ ಇದಕ್ಕೆ ಕಾರಣವಾಗಿರಬಹುದು. ಅತಿಯಾಗಿ ಬೆವರುವಿಕೆಯನ್ನು ಕೇಂದ್ರೀಕೃತ ಮತ್ತು ಸಾಮಾನ್ಯೀಕೃತ ಬೆವರುವಿಕೆ ಎಂದು ವರ್ಗೀಕರಿಸಲಾಗಿದೆ.

ಕೇಂದ್ರೀಕೃತ ಬೆವರುವಿಕೆ: ಪ್ರೈಮರಿ ಹೈಪರ್‌ಹೈಡ್ರೊಸಿಸ್ ಎಂದೂ ಕರೆಯಲಾಗುವ ಇದು ಸ್ವರೂಪದಲ್ಲಿ ಸ್ವಯಂಜನ್ಯವಾಗಿದೆ. ಅಂದರೆ ಅತಿಯಾಗಿ ಬೆವರುವಿಕೆಗೆ ಕಾರಣವನ್ನು ನಿಖರವಾಗಿ ಗುರುತಿಲಾಗುವುದಿಲ್ಲ. ಇದು ಸಾಮಾನ್ಯವಾಗಿ ದಿಢೀರ್ ಆಗಿ ಕಾಣಿಸಿಕೊಳ್ಳುತ್ತದೆ,ಇದು ಬಿಟ್ಟರೆ ವ್ಯಕ್ತಿ ಆರೋಗ್ಯವಾಗಿಯೇ ಇರುತ್ತಾನೆ. ಹೆಚ್ಚಿನ ಸಂದರ್ಭದಲ್ಲಿ ಪ್ರೌಢಾವಸ್ಥೆಯಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಮತ್ತು ಹೆಚ್ಚಾಗಿ ಅಂಗೈ,ಕಂಕುಳು,ಅಂಗಾಲು ಮತ್ತು ಮುಖದಲ್ಲಿ ಅತಿಯಾಗಿ ಬೆವರುತ್ತದೆ.

ಸುಮಾರು ಶೇ.3ರಷ್ಟು ಜನರು,ಹೆಚ್ಚಾಗಿ 25ರಿಂದ 64ರ ವಯೋಮಾನದವರು ಈ ಸ್ಥಿತಿಯನ್ನು ಅನುಭವಿಸುತ್ತಾರೆ. ಅಲ್ಲದೆ ಶೇ.30ರಿಂದ ಶೇ.60ರಷ್ಟು ಹೈಪರ್‌ಹೈಡ್ರೊಸಿಸ್ ರೋಗಿಗಳು ಅತಿಯಾಗಿ ಬೆವರುವಿಕೆಯ ಕುಟುಂಬದ ಇತಿಹಾಸವನ್ನು ಹೊಂದಿರುವುದರಿಂದ ಇದು ವಂಶವಾಹಿ ಸ್ವರೂಪವನ್ನು ಹೊಂದಿರಬಹುದು.

ಸಾಮಾನ್ಯೀಕೃತ ಬೆವರುವಿಕೆ: ಸೆಕೆಂಡರಿ ಹೈಪರ್‌ಹೈಡ್ರೊಸಿಸ್ ಎಂದೂ ಕರೆಯಲಾಗುವ ಇದಕ್ಕೆ ಅನಾರೋಗ್ಯ ಅಥವಾ ಔಷಧಿಗಳ ಅಡ್ಡ ಪರಿಣಾಮ ಕಾರಣವಾಗುತ್ತದೆ. ಇಂತಹ ಪ್ರಕರಣದಲ್ಲಿ ಶರೀರವಿಡೀ ಅತಿಯಾಗಿ ಬೆವರುತ್ತದೆ.

ನಿರ್ನಾಳಗ್ರಂಥಿ ರೋಗ,ನರಸಂಬಂಧಿತ ಸಮಸ್ಯೆಗಳು ಮತ್ತು ಸೋಂಕು ಇವು ಸೆಕೆಂಡರಿ ಹೈಪರ್‌ಹೈಡ್ರೊಸಿಸ್ ಅನ್ನು ಉಂಟು ಮಾಡುವ ಸಾಮಾನ್ಯ ಆರೋಗ್ಯ ಕಾರಣಗಳಲ್ಲಿ ಸೇರಿವೆ.

► ಅತಿಯಾಗಿ ಬೆವರುವಿಕೆಗೆ ಕಾರಣಗಳು

ಉದ್ವೇಗ ಅಥವಾ ಒತ್ತಡ: ಉದ್ವೇಗ ಅಥವಾ ಒತ್ತಡ ಅತಿಯಾಗಿ ಬೆವರುವಿಕೆಯ ಸಾಮಾನ್ಯ ಕಾರಣಗಳಲ್ಲೊಂದಾಗಿದೆ. ಅಂಗೈಗಳು ಮತ್ತು ಪಾದಗಳು ಅತಿಯಾಗಿ ಬೆವರುತ್ತವೆ. ಬೆವರು ಗ್ರಂಥಿಗಳ ಅತಿ ಚಟುವಟಿಕೆ ಇದಕ್ಕೆ ಕಾರಣವಾಗಿದೆ. ಕೈಗಳು ಮತ್ತು ಕಾಲುಗಳಲ್ಲಿಯ ಬೆವರು ಗ್ರಂಥಿಗಳು ಸಿಂಪಥೆಟಿಕ್ ನರ್ವಸ್ ಸಿಸ್ಟಮ್‌ನೊಂದಿಗೆ ಸಂಪರ್ಕ ಹೊಂದಿದ್ದು,ವ್ಯಕ್ತಿ ಒತ್ತಡದಲ್ಲಿದ್ದಾಗ ಅಥವಾ ಉದ್ವೇಗಗೊಂಡಾಗ ಕ್ರಿಯಾಶೀಲಗೊಳ್ಳುತ್ತವೆ.

ಔಷಧಿಗಳು: ಆ್ಯಂಟಿಡಿಪ್ರೆಸಂಟ್ ಮತ್ತು ಆ್ಯಂಟಿಎಮಿಟಿಕ್‌ಗಳಂತಹ ಕೆಲವು ನಿರೋಧಕ ಔಷಧಿಗಳು ಸಹ ಅತಿಯಾಗಿ ಬೆವರುವಿಕೆಗೆ ಕಾರಣವಾಗುತ್ತವೆ.ಇಂತಹ ಪ್ರಕರಣಗಳಲ್ಲಿ ಮುಖ,ನೆತ್ತಿ,ಕುತ್ತಿಗೆ ಮತ್ತು ಎದೆಯ ಭಾಗದಲ್ಲಿ ಅತಿಯಾಗಿ ಬೆವರುತ್ತದೆ ಮತ್ತು ಇದು ಕೆಲವು ತಿಂಗಳುಗಳವರೆಗೆ ಮುಂದುವರಿಯಬಹುದು. ಈ ಔಷಧಿಗಳು ನರಮಂಡಲದ ಮೇಲೆ ಪರಿಣಾಮವನ್ನು ಬೀರುತ್ತವೆ ಮತ್ತು ಹೈಪರ್‌ಹೈಡ್ರೊಸಿಸ್‌ಗೆ ಕಾರಣವಾಗುತ್ತವೆ.

ಸೋಂಕುಗಳು: ಮೂತ್ರನಾಳದ ಸೋಂಕು ಅಥವಾ ಕ್ಷಯದಂತಹ ಬ್ಯಾಕ್ಟೀರಿಯಾ ಸೋಂಕುಗಳು ಅತಿಯಾದ ಬೆವರುವಿಕೆಯನ್ನುಂಟು ಮಾಡುತ್ತವೆ. ಮೂತ್ರನಾಳದ ಸೋಂಕು ಉಂಟಾದಾಗ ಮೂತ್ರಕೋಶದಲ್ಲಿ ಮೂತ್ರ ಸಂಗ್ರಹವಾಗುತ್ತದೆ ಮತ್ತು ಮೂತ್ರಕೋಶದ ಮೇಲಿನ ಒತ್ತಡ ಹೆಚ್ಚುತ್ತದೆ. ಇದು ಸಿಂಪಥೆೆಟಿಕ್ ನರಗಳನ್ನು ಪ್ರಚೋದಿಸುತ್ತದೆ ಮತ್ತು ವ್ಯಕ್ತಿಯು ಅತಿಯಾಗಿ ಬೆವರುವಂತೆ ಮಾಡುತ್ತದೆ.

ನರ ಸಂಬಂಧಿತ ಸಮಸ್ಯೆಗಳು: ತಾಪಮಾನ ಮತ್ತು ಬೆವರಿನ ಉತ್ಪಾದನೆಯನ್ನು ನಿಯಂತ್ರಿಸುವ ನ್ಯೂರಾನ್‌ಗಳು ಅಥವಾ ಮಿದುಳಿನ ಕೋಶಗಳು ಮಿದುಳು ಬಳ್ಳಿ, ಮಿದುಳು ಕಾಂಡ ಮತ್ತು ಹೈಪೊಥಲಮಸ್ ಅಥವಾ ಅಡಿಮಿದುಳುಗಳಲ್ಲಿರುತ್ತವೆ. ಹೀಗಾಗಿ ಈ ಭಾಗದ ಮೇಲೆ ಪರಿಣಾಮ ಬೀರುವ ನರದ ಕಾರ್ಯದಲ್ಲಿಯ ಯಾವುದೇ ಬದಲಾವಣೆಗಳು ಅಥವಾ ಯಾವುದೇ ಹಾನಿ ಅಥವಾ ಗಾಯ ಅತಿಯಾಗಿ ಬೆವರುವಿಕೆಯನ್ನುಂಟು ಮಾಡುತ್ತವೆ. ಮಿದುಳು ಬಳ್ಳಿಗೆ ಪೆಟ್ಟು, ಪಾರ್ಕಿನ್ಸನ್ಸ್ ಕಾಯಿಲೆ ಮತ್ತು ಪಾರ್ಶ್ವವಾಯು ಈ ಸ್ಥಿತಿಗಳಲ್ಲಿ ಸೇರುತ್ತವೆ.

ನಿರ್ನಾಳಗ್ರಂಥಿ ಸಮಸ್ಯೆಗಳು: ಹಾರ್ಮೋನ್‌ಗಳಲ್ಲಿ ಉಂಟಾಗುವ ಯಾವುದೇ ಅಸಮತೋಲನ ತಾಪಮಾನ ಮತ್ತು ಬೆವರಿನ ಉತ್ಪಾದನೆಯನ್ನು ನಿಯಂತ್ರಿಸುವ ನರಗಳನ್ನು ಕ್ರಿಯಾಶೀಲಗೊಳಿಸುತ್ತದೆ. ಈ ನರಗಳು ಅತಿ ಚಟುವಟಿಕೆಗಳಲ್ಲಿ ತೊಡಗಿದಾಗ ಅತಿಯಾದ ಬೆವರುವಿಕೆ ಉಂಟಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News