ನೈತಿಕ ಭ್ರಷ್ಟತೆಯ ವಿರುದ್ಧ ಕಠಿಣ ಕ್ರಮ: ಜ.ರಾವತ್

Update: 2018-09-04 13:34 GMT

ಹೊಸದಿಲ್ಲಿ,ಸೆ.4: ನೈತಿಕ ಭ್ರಷ್ಟತೆಯ ಯಾವುದೇ ಪ್ರಕರಣದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭೂಸೇನೆಯ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರು ಮಂಗಳವಾರ ಇಲ್ಲಿ ಹೇಳಿದರು. ಶ್ರೀನಗರದ ಹೋಟೆಲ್ಲೊಂದರಲ್ಲಿ ಯುವತಿಯೋರ್ವಳ ಜೊತೆಯಲ್ಲಿದ್ದ ಪ್ರಕರಣದಲ್ಲಿ ಸೇನಾ ನ್ಯಾಯಾಲಯದಿಂದ ತಪ್ಪಿತಸ್ಥ ಎಂದು ಘೋಷಿಸಲ್ಪಟ್ಟಿರುವ ಮೇ.ಲೀತುಲ್ ಗೊಗೋಯ್ ಅವರನ್ನು ಪ್ರಸ್ತಾಪಿಸಿ ಜ.ರಾವತ್ ಈ ಎಚ್ಚರಿಕೆಯನ್ನು ನೀಡಿದರು.

ಗೊಗೊಯ್ ಅವರ ತಪ್ಪಿಗನುಗುಣವಾಗಿ ಶಿಸ್ತುಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದ ಅವರು, “ನೈತಿಕ ಭ್ರಷ್ಟತೆಯ ಯಾವುದೇ ಪ್ರಕರಣದ ವಿರುದ್ಧ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನಾನು ಸ್ಪಷ್ಟವಾಗಿ ಹೇಳಿದ್ದೆ. ನಾವು ಕೋರ್ಟ್ ಮಾರ್ಷಲ್ ಕ್ರಮಕ್ಕೆ ಮುಂದಾಗಬೇಕೆಂದು ಸೇನಾ ನ್ಯಾಯಾಲಯವು ಶಿಫಾರಸು ಮಾಡಿದೆ. ಗೊಗೋಯ್ ಮಾಡಿರುವ ಅಪರಾಧಕ್ಕೆ ಅನುಗುಣವಾಗಿ ದಂಡನೆಯನ್ನು ವಿಧಿಸಲಾಗುವುದು” ಎಂದು ಹೇಳಿದರು.

ಕಳೆದ ಮೇ ತಿಂಗಳಲ್ಲಿ 18ರ ಹರೆಯದ ಯುವತಿಯೊಂದಿಗೆ ಶ್ರೀನಗರದ ಹೋಟೆಲ್‌ವೊಂದನ್ನು ಪ್ರವೇಶಿಸಿದ್ದ ಗೊಗೋಯ್ ಅವರನ್ನು ಜಮ್ಮು-ಕಾಶ್ಮೀರ ಪೊಲೀಸರು ವಶಕ್ಕೆ ತೆಗೆದುಕೊಂಡು ಬಳಿಕ ಸೇನೆಗೆ ಹಸ್ತಾಂತರಿಸಿದ್ದರು.

ಕಳೆದ ವರ್ಷ ಶ್ರೀನಗರ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಸಂದರ್ಭ ಕಲ್ಲು ತೂರಾಟಗಾರರಿಂದ ರಕ್ಷಿಸಿಕೊಳ್ಳಲು ಕಾಶ್ಮೀರಿ ಯುವಕನನ್ನು ಸೇನಾಜೀಪಿನ ಮುಂಭಾಗದಲ್ಲಿ ಕಟ್ಟಿ ಮಾನವ ಗುರಾಣಿಯಂತೆ ಬಳಸಿಕೊಳ್ಳುವ ಮೂಲಕ ಗೊಗೋಯ್ ಸುದ್ದಿಯಾಗಿದ್ದರು.

 ಬಂಡಾಯ ನಿಗ್ರಹ ಕಾರ್ಯಾಚರಣೆಗಳಲ್ಲಿ ತನ್ನ ಪಾತ್ರಕ್ಕಾಗಿ ಗೊಗೋಯ್ ಜ.ರಾವತ್ ಅವರಿಂದ ಗೌರವಿಸಲ್ಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News