ಆರದ ಗಾಯ-ಗೌರಿ ಲಂಕೇಶ್

Update: 2018-09-04 18:35 GMT

ಇತ್ತೀಚೆಗೆ ನನ್ನ ತಂಗಿ ಸುಮಯ್ಯಳಿಗೆ ಹೆಣ್ಣು ಮಗು ಹುಟ್ಟಿದಾಗ ನಾವೆಲ್ಲ ಅದಕ್ಕೆ ‘ಗೌರಿ’ ಹೆಸರನ್ನು ಇಡೋಣ ಎಂದು ಚರ್ಚಿಸಿದ್ದೆವು. ಆದರೆ ಕಟ್ಟ ಕಡೆಗೆ ಅದು ಬೇಡ ಎಂದು ತಿರಸ್ಕರಿಸಬೇಕಾಯಿತು. ಕಾರಣ ಸ್ಪಷ್ಟವಿತ್ತು ಗೌರಿ ಎಂದಾಗ ನಮಗೆಲ್ಲರಿಗೂ ನೆನಪಾಗುವ ಇನ್ನೊಂದು ಜೀವ ಇದೆ. ಅದು ನಮ್ಮ ಅಣ್ಣ. ಗೌರಿಯ ಜೊತೆ ಜೊತೆಗೆ ಆ ಅಣ್ಣನ ನೆನಪಿನ ಗಾಯಗಳು ಪ್ರತಿದಿನ ನಮ್ಮನ್ನು ಕಾಡುವ ಭಯದಿಂದ ಆ ಹೆಸರನ್ನು ಇಡುವುದರಿಂದ ಹಿಂದೆ ಸರಿದೆವು. ಇಂದಿಗೂ ನನಗೆ ಗೌರಿಯ ಸಾವು ಮತ್ತು ಅಣ್ಣನ ಸಾವನ್ನು ಬೇರೆ ಬೇರೆಯಾಗಿ ನೋಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಇಬ್ಬರು ಸಾವಿಗೆ ಆರಿಸಿಕೊಂಡ ಮಾರ್ಗಗಳು ಬೇರೆ ಇರಬಹುದು. ಆದರೆ ಆ ಸಾವಿಗೆ ಕಾಣವಾದ ಅಂಶಗಳಲ್ಲಿ ಸಾಮ್ಯತೆ ಇದೆ.
ನಾನು ಮುಂಬೈಯ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಪಿ. ಲಂಕೇಶ್ ಅವರ ಮೇಲೆ ಮುಂಬೈಯ ಉದ್ಯಮಿಯೊಬ್ಬರು ಪ್ರಕರಣ ದಾಖಲಿಸಿದ್ದರು. ಅದಕ್ಕೆ ಸಂಬಂಧಿಸಿ ಆಗಾಗ ಹಿರಿಯ ಪತ್ರಕರ್ತರಾದ ತ್ಯಾಗರಾಜ್, ದ್ವಾರಕಾನಾಥ್ ಮುಂಬೈಗೆ ಆಗಮಿಸುತ್ತಿದ್ದರು. ಆ ಸಂದರ್ಭದಲ್ಲಿ ನಾನು ಅವರ ಜೊತೆಗೆ ನ್ಯಾಯಾಲಯಕ್ಕೆ ಹೋಗಿದ್ದಿದೆ. ಅದೇ ಹೊತ್ತಿನಲ್ಲಿ, ಪ್ರಕರಣಕ್ಕೆ ಸಂಬಂಧಿಸಿ ಲಂಕೇಶರ ಬಂಧನಕ್ಕಾಗಿ ಮುಂಬೈ ಪೊಲೀಸರು ಬೆಂಗಳೂರಿಗೆ ಧಾವಿಸಿದರು. ಆಗ ಬೆಳವಣಿಗೆಗಳ ಬಗ್ಗೆ ಮಾಹಿತಿ ಕೇಳಲು ಗೌರಿ ಲಂಕೇಶ್ ನನಗೆ ಪೋನಾಯಿಸಿದ್ದರು. ಆವರೆಗೆ ಯಾವ ರೀತಿಯಲ್ಲೂ ಪರಿಚಯ ಇಲ್ಲದ ಗೌರಿ ಅವರ ಜೊತೆಗೆ ಮೊದಲ ಬಾರಿಗೆ ನಾನು ಫೋನ್‌ನಲ್ಲಿ ಸಂಭಾಷಣೆ ನಡೆಸಿದ್ದೆ. ಅವರು ಇಂಗ್ಲಿಷ್‌ನಲ್ಲಿ ಮಾತನಾಡಿದ್ದರು. ನಾನು ಅದಕ್ಕೆ ಕನ್ನಡದಲ್ಲಿ ಉತ್ತರಿಸಿದ್ದೆ. ಅದು ಹೊರತು ಪಡಿಸಿದರೆ, ಅವರ ಸಂಪರ್ಕವಾದುದು ಸುಮಾರು ಆರೇಳು ವರ್ಷಗಳ ಬಳಿಕ. ಲಂಕೇಶ್ ತೀರಿ ಹೋದ ನಂತರ.
 ‘ಲಂಕೇಶ್ ನಂತರ ಪತ್ರಿಕೆಯ ಗತಿ ಏನು?’ ದಶಕಗಳ ಹಿಂದಿನಿಂದ ಕಾಡುತ್ತಿದ್ದ ನಮ್ಮೆಲ್ಲರ ಪ್ರಶ್ನೆಗೆ ಉತ್ತರವಾಗಿ ಬಂದವರು ಗೌರಿ ಲಂಕೇಶ್. ಅವರು ಲಂಕೇಶ್ ಸ್ಥಾನವನ್ನು ತುಂಬಲು ಬಂದವರಾಗಿರಲಿಲ್ಲ, ಕಾಲದ ಅಗತ್ಯಕ್ಕೆ ತಕ್ಕಂತೆ ಲಂಕೇಶ್‌ಗೆ ಪರ್ಯಾಯವಾಗಿ ಬಂದರು. ‘‘ಲಂಕೇಶ್ ನಿಧನದ ಅನಂತರ ಲಂಕೇಶ್ ಪತ್ರಿಕೆ ಇರುವುದಿಲ್ಲ’’ ಎನ್ನುವ ಮಾತು ಕೂಡ ನಿಜವಾಯಿತು. ಲಂಕೇಶ್ ನಡೆಸುತ್ತಿರುವ ಪತ್ರಿಕೆಯೇ ಬೇರೆ, ಗೌರಿ ಲಂಕೇಶ್ ನಡೆಸುತ್ತಿರುವ ಪತ್ರಿಕೆಯೇ ಬೇರೆ ಎನ್ನುವುದನ್ನು ಅವರು ತಮ್ಮ ಸಂಚಿಕೆಗಳ ಮೂಲಕವೇ ಓದುಗರಿಗೆ ಸ್ಪಷ್ಟಪಡಿಸಿದ್ದರು. ಗೌರಿ ಲಂಕೇಶ್‌ನ್ನು ಮತ್ತೆ ಮತ್ತೆ ಲಂಕೇಶ್ ಪತ್ರಿಕೆಯ ಜೊತೆಗಿಟ್ಟು ವಿಮರ್ಶೆ ಮಾಡುತ್ತಿರುವ ಮಂದಿ, ಕಾಲದ ತಿರುವುಗಳನ್ನು ಗಮನಿಸುತ್ತಿರಲಿಲ್ಲ. ಲಂಕೇಶರು ತೀರಿ ಹೋಗುವ ಮುನ್ನವೇ ಟ್ಯಾಬ್ಲಾಯ್ಡಾ ಸಂಸ್ಕೃತಿ ತಳಮುಟ್ಟಿತ್ತು. ತನ್ನ ಜೊತೆಗಿದ್ದ ವಿದ್ವಜ್ಜನರ ಜೊತೆಗೆ ವೈರ ಕಟ್ಟಿಕೊಳ್ಳುತ್ತಾ ಅದಾಗಲೇ ಲಂಕೇಶರು ಬಹುತೇಕ ಒಂಟಿಯಾಗಿದ್ದರು. ಅವರ ಕೈಯಿಂದ ಗೌರಿ ಕೈಗೆ ಪತ್ರಿಕೆ ಹಸ್ತಾಂತರ ಹೊತ್ತಿನಲ್ಲಿ, ಬೇರೆ ಬೇರೆ ಅನಿವಾರ್ಯ ಕಾರಣಗಳಿಂದ ಲಂಕೇಶರ ಜೊತೆಗೆ ಗುರುತಿಸಿಕೊಳ್ಳುತ್ತಿದ್ದ ‘ಲೇಖಕರ’ ಒಳಗೆ ಪಂಥ, ಧೋರಣೆಗಳಲ್ಲಿ ಬದಲಾವಣೆಗಳಾಗ ತೊಡಗಿದವು. ಬಹುಶಃ ಯಾವುದೇ ಹೊರಗಿನ ಶತ್ರುಗಳಿಗಿಂತ, ಈ ಲೇಖಕರ ಹಟಾತ್ ಬದಲಾವಣೆಗಳೇ ಗೌರಿ ಲಂಕೇಶ್‌ಗೆ ಸವಾಲಾಗಿದ್ದವು. ಲಂಕೇಶರ ಜೊತೆಗೆ ಗುರುತಿಸಿಕೊಂಡಿದ್ದ ಹಲವು ಪ್ರಮುಖರು ಬಲಪಂಥೀಯ ಧೋರಣೆಗಳ ಜೊತೆಗೆ ಬಹಿರಂಗವಾಗಿ ಗುರುತಿಸಿಕೊಳ್ಳುತ್ತಾ, ತಮ್ಮ ಬದಲಾವಣೆಗೆ ಲಂಕೇಶರ ನಿಲುವುಗಳನ್ನೇ ಸಮರ್ಥನೆಯಾಗಿ ಕೊಡುತ್ತಾ ಬಂದರು. ‘ಲಂಕೇಶ್ ಇದ್ದಿದ್ದರೆ ಹೀಗೆ ಯೋಚಿಸುತ್ತಿರಲಿಲ್ಲ, ಹಾಗೆ ಯೋಚಿಸುತ್ತಿರಲಿಲ್ಲ’ ಎನ್ನುವ ಹೇಳಿಕೆಗಳನ್ನು ನೀಡುತ್ತಲೇ ಗೌರಿಯ ವಿರುದ್ಧ ದಿವಂಗತ ಲಂಕೇಶರನ್ನು ಎತ್ತಿಕಟ್ಟುತ್ತಿದ್ದರು. ಒಂದು ರೀತಿಯಲ್ಲಿ ಲಂಕೇಶ್ ಬಳಿಕ ಪತ್ರಿಕೆಯ ನೇತೃತ್ವವನ್ನು ಹೊತ್ತುಕೊಂಡಾಗ ಗೌರಿ ಒಂಟಿಯಾಗಿದ್ದರು. ಯಾಕೆಂದರೆ, ಲಂಕೇಶರ ಜೊತೆಗಿದ್ದ ಯಾರೂ ಗೌರಿ ಲಂಕೇಶರ ಜೊತೆಗೆ ನೈತಿಕ ಶಕ್ತಿಯಾಗಿ ನಿಂತಿರಲಿಲ್ಲ. ಅದಕ್ಕೆ ಹಲವಾರು ಕಾರಣಗಳಿವೆ.
   ಲಂಕೇಶ್ ಮತ್ತು ಗೌರಿ ಲಂಕೇಶ್ ನಡುವೆ ಮೂಲಭೂತವಾಗಿ ಹಲವು ಭಿನ್ನತೆಗಳಿದ್ದವು. ಅದು ವ್ಯಕ್ತಿತ್ವಕ್ಕೆ ಸಂಬಂಧಪಟ್ಟುದು. ಲಂಕೇಶ್ ಸುತ್ತ ಒಂದು ಪ್ರಭಾವಳಿಯಿತ್ತು. ಅದು ಸೃಜನಶೀಲವಾದ ಇನ್ನಿತರ ಕ್ಷೇತ್ರಗಳಿಂದ ಸಂಪಾದಿಸಿಕೊಂಡದ್ದು. ಅವರು ಕಾದಂಬರಿಕಾರರು, ಕಥೆಗಾರರು, ಸಿನೆಮಾ ನಿರ್ದೇಶಕರು, ನಟರು, ಕಟು ವಿಮರ್ಶಕರು, ಅಂಕಣಕಾರರು ಆಗಿದ್ದರು. ಈ ಎಲ್ಲ ಪ್ರಭಾವಳಿ, ಟ್ಯಾಬ್ಲಾಯ್ಡಾ ಸಂಪಾದಕರಾಗಿದ್ದ ಲಂಕೇಶರಿಗೆ ಅನೇಕರ ರೀತಿಯಲ್ಲಿ ರಕ್ಷಣೆಯನ್ನು ನೀಡುತ್ತಿತ್ತು. ಒಂದರಲ್ಲಿ ಕಳೆದುಕೊಂಡದ್ದನ್ನು ಮತ್ತೊಂದರಲ್ಲಿ ಅವರು ತುಂಬಿಸುತ್ತಿದ್ದರು. ಖಾಸಗಿಯಾಗಿ ಅವರು ಪುಕ್ಕಲರಾಗಿದ್ದರು. ಒಂದು ಚಳವಳಿಯನ್ನು ಬೀದಿಗಿಳಿದು ಕಟ್ಟಿ ಬೆಳೆಸುವ ಉಢಾಳ ಧೈರ್ಯ ಅವರಲ್ಲಿರಲಿಲ್ಲ. ನೀರಿನೊಳಗಿರುವ ಸುಳಿಗಳನ್ನು ಗುರುತಿಸುವ ಶಕ್ತಿ ಅವರಿಗಿತ್ತು ಮತ್ತು ನೀರಿಗಿಳಿದಷ್ಟೇ ವೇಗವಾಗಿ ಹಿಂದಕ್ಕೆ ಬರಬಲ್ಲವರಾಗಿದ್ದರು. ಲಂಕೇಶ್‌ಪತ್ರಿಕೆಯನ್ನು ಲಾಭದಾಯಕವಾಗಿ ಕಟ್ಟುವಲ್ಲಿ ಅವರು ಯಶಸ್ವಿಯಾದುದು ಇದೇ ಗುಣದಿಂದ.ತನ್ನ ಜೊತೆಗಿದ್ದ ಸಿಬ್ಬಂದಿಯನ್ನೂ ಕೈ ಬಿಡದೇ ಪೋಷಿಸಿದರು. ಕುದುರೆ ರೇಸ್‌ಗೆ ತನ್ನೆಲ್ಲ ಬಂಡವಾಳವನ್ನು ಕಟ್ಟಿ ದಿವಾಳಿಯಾಗುವಷ್ಟು ಅವಿವೇಕಿ ಆಗಿರಲಿಲ್ಲ. ಬದುಕಿನ ರೋಚಕತೆಗೆ ಬೇಕಾದಷ್ಟನ್ನು ಮಾತ್ರ ಕುದುರೆಯ ಮೇಲೆ ಕಟ್ಟುತ್ತಿದ್ದರು. ಅವರ ಪ್ರೇಮವೂ ಅಷ್ಟೇ. ತನ್ನ ವೈವಾಹಿಕ ಬದುಕನ್ನು ಸಂಪೂರ್ಣ ಪಣಕ್ಕೊಡ್ಡಿ ಪ್ರೇಮಿಸಿ ಅಧ್ವಾನವಾಗಿಸುವಷ್ಟು ದಡ್ಡ ಅವರಾಗಿರಲಿಲ್ಲ. ತನ್ನ ಗೆಳೆಯರ ಜೊತೆ ಸೇರಿ ಕಟ್ಟಿದ ಪಕ್ಷವೊಂದರ ನಿರರ್ಥಕತೆಯನ್ನು ಅರ್ಥ ಮಾಡಿಕೊಂಡಾಕ್ಷಣ ಆ ಸಾಹಸದಿಂದ ಹಿಂದೆ ಸರಿದರು. ಮುಂದೆಂದೂ ನೇರವಾಗಿ ರಾಜಕೀಯಕ್ಕೆ ಪ್ರವೇಶ ಮಾಡುವ ಸಾಹಸ ಮಾಡಲಿಲ್ಲ. ಟ್ಯಾಬ್ಲಾಯ್ಡಾ ಪತ್ರಿಕೆಯ ಸಂಪಾದಕರಾಗಿ, ಕೋರ್ಟ್ ಕೇಸುಗಳು, ಪೊಲೀಸರನ್ನು ಎದುರಿಸುವಾಗಲೂ ಅವರು ನೇರವಾಗಿ ಎದೆಗೊಟ್ಟದ್ದು ಕಡಿಮೆ. ಅನೇಕ ಪ್ರಭಾವಶಾಲಿಗಳನ್ನು ಸಂದರ್ಭಕ್ಕೆ ಸರಿಯಾಗಿ ಬಳಸಿಕೊಳ್ಳುವ ಶಕ್ತಿ ಲಂಕೇಶರಿಗಿತ್ತು. ಅವರಿಂದ ಟೀಕೆಗೊಳಗಾದ ವ್ಯಕ್ತಿಗಳೂ ಲಂಕೇಶರಿಗೆ ಸಹಾಯ ಮಾಡಲು ಒಳಗೊಳಗೆ ಸಮಯಕ್ಕಾಗಿ ಕಾಯುತ್ತಿದ್ದರು. ಅನೇಕ ಸಂದರ್ಭದಲ್ಲಿ ಇದನ್ನು ಬಳಸಿಕೊಳ್ಳಲು ಲಂಕೇಶ್ ಹಿಂಜರಿದಿರಲಿಲ್ಲ.
    ಲಂಕೇಶ್‌ಗೆ ಹೋಲಿಸಿದರೆ ಗೌರಿ ಅವರದು ಹುಂಬ ಧೈರ್ಯ. ಟ್ಯಾಬ್ಲಾಯ್ಡಾ ಜಗತ್ತಿಗೆ ಅವರು ಲಂಕೇಶರಂತೆ, ಬುಲ್ಲೆಟ್ ಪ್ರೂಫ್ ಕಟ್ಟಿಕೊಂಡು ಇಳಿಯಲಿಲ್ಲ. ಅವರು ಸಂಪಾದಕರಾದಾಗ ಕಾಲ ತೀರಾ ಮಗ್ಗುಲು ಬದಲಿಸಿತ್ತು. ಸಂಘಪರಿವಾರದ ಅಟ್ಟಹಾಸ ಮುಗಿಲು ಮುಟ್ಟಿತ್ತು. ಪ್ರಭುತ್ವದ ಚುಕ್ಕಾಣಿ ಸಂಪೂರ್ಣವಾಗಿ ಅವರ ಕೈಗೆ ಹಸ್ತಾಂತರವಾಗಿತ್ತು ಬರಹಗಾರರು ಮುಕ್ತವಾಗಿ ಬರೆಯುವಂತಹ ಸನ್ನಿವೇಶ ಇರಲಿಲ್ಲ. ಲಂಕೇಶರಿಗೆ ರೂಪಕ ಭಾಷೆ ಗೊತ್ತಿತ್ತು. ಗೌರಿ ಲಂಕೇಶರ ಬೊಗಸೆಯಲ್ಲಿದ್ದದ್ದು ಮುಗ್ಧ, ಸರಳ, ನವಜಾತ ಕನ್ನಡ ಭಾಷೆ ಮತ್ತು ಅಕ್ಷರಗಳು. ಸಂಪಾದಕೀಯ ಗರ್ಭಗುಡಿಯೊಳಗೆ ಬರೆಯುತ್ತಾ ಕೂರದೆ, ಬೆಳವಣಿಗೆಗಳ ವಿರುದ್ಧ ಬೀದಿಗಿಳಿದರು. ಅವರ ಜೊತೆಗೆ ಆಗ ದೊಡ್ಡ ಶಕ್ತಿಯಾಗಿ ಕೈ ಜೋಡಿಸಿದವರು ಎಡಪಂಥೀಯ ಚಿಂತಕರು. ಪತ್ರಿಕೆಯಲ್ಲೂ ಬೀದಿಯ ಸ್ಪಷ್ಟ ಭಾಷೆ ಮತ್ತು ಘೋಷಣೆಗಳನ್ನು ಬಳಸಿದರು. ಆವರೆಗೆ ಸಾಂಸ್ಕೃತಿಕ ಬೆಳವಣಿಗೆಗಳ ಭಾಗವಾಗಿದ್ದ ಲಂಕೇಶರ ಪತ್ರಿಕೆ, ಗೌರಿಯಿಂದಾಗಿ ಒಂದು ಪ್ರಗತಿಪರ ಚಳವಳಿಯ ಕರಪತ್ರವಾಗಿ ಬದಲಾಯಿತು. ಅದು ಕಾಲದ ಅಗತ್ಯವಾಗಿತ್ತು. ಸಂಘಪರಿವಾರದ ಸಂವಿಧಾನ ವಿರೋಧಿ, ಜೀವವಿರೋಧಿ ನೀತಿಗಳನ್ನು ಖಂಡಿಸಲು ಬರಹಗಾರರೆಲ್ಲ ರೂಪಕಗಳ ಮೊರೆ ಹೋಗುತ್ತಿದ್ದರು. ಅಥವಾ ಬಹುತೇಕರು ವೌನ ತಳೆದಿದ್ದರು. ಕೆಲವರಂತೂ ಸಂಘಪರಿವಾರದ ಜೊತೆಗೆ ನೇರವಾಗಿ ಗುರುತಿಸಿಕೊಂಡರು. ಆಗ ಗೌರಿ ಲಂಕೇಶ್ ಬೀದಿಗಿಳಿದು ಜನರ ಭಾಷೆಯಲ್ಲಿ ಮಾತನಾಡಿದರು. ತಮ್ಮ ಪತ್ರಿಕೆಯಲ್ಲಿ ಜನರ ಭಾಷೆಯಲ್ಲ್ಲೇ ಬರೆದರು. ಬಾಬಾಬುಡಾನ್‌ಗಿರಿ ಹೋರಾಟವೂ ಸೇರಿದಂತೆ ಕರ್ನಾಟಕದಲ್ಲಿ ಜೀವಪರ ಹೋರಾಟಕ್ಕೆ ಹೊಸ ದಿಕ್ಕು ಗೌರಿ ಲಂಕೇಶ್ ಮೂಲಕ ಸಿಕ್ಕಿತು ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಇದೇ ಸಂದರ್ಭದಲ್ಲಿ ನಕ್ಸಲ್ ಚಳವಳಿಯ ಬಿಸಿ ಕರ್ನಾಟಕದಲ್ಲೂ ಕಾಣಿಸಿಕೊಂಡಾಗ, ಅವರಲ್ಲಿ ಗುರುತಿಸಿಕೊಂಡ ಪ್ರಮುಖರನ್ನು ಮತ್ತೆ ಮುಖ್ಯವಾಹಿನಿಗೆ ತಂದರು. ಅವರ ಕೈಗೆ ಪ್ರಜಾಸತ್ತಾತ್ಮಕ ಹೋರಾಟದ ಧ್ವಜವನ್ನು ಕೊಟ್ಟರು. ಇಂದು ಕರ್ನಾಟಕದಲ್ಲಿ ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧದ ಹೋರಾಟ ಒಂದಿಷ್ಟು ಜೀವಂತವಿದ್ದರೆ, ಅದಕ್ಕೆ ಗೌರಿ ಲಂಕೇಶರ ಈ ಪ್ರಯತ್ನವೂ ಒಂದು ಕಾರಣ ಎನ್ನುವುದನ್ನು ನಾವು ಮರೆಯಬಾರದು. ನಕ್ಸಲರನ್ನು ಮುಖ್ಯವಾಹಿನಿಗೆ ತರುವುದು ವ್ಯವಸ್ಥೆಗೂ ಬೇಡವಾಗಿತ್ತು. ಕಾಡಲ್ಲಿದ್ದರೆ, ಯಾವ ಸಮರ್ಥನೆಯೂ ಇಲ್ಲದೆ ಹೊಡೆದು ಮುಗಿಸಿ ಬಿಡಬಹುದು. ಆದರೆ ನಾಡಿಗೆ ಬಂದು, ಸಂವಿಧಾನ ಬದ್ಧವಾಗಿ ಹೋರಾಡಲು ಶುರು ಹಚ್ಚಿದರೆ,ಸರಕಾರಕ್ಕೂ ತಲೆ ನೋವು. ಗೌರಿ ಲಂಕೇಶ್ ಪ್ರಯತ್ನ ಈ ಕಾರಣದಿಂದ ಸಂಘಪರಿವಾರಕ್ಕೂ ಅಸಹನೆಯ ಸಂಗತಿಯಾಗಿತ್ತು. ಇದೇ ಸಂದರ್ಭದಲ್ಲಿ ಕೆಲವು ಪ್ರಗತಿ ಪರರೆನಿಸಿಕೊಂಡವರೇ, ಗೌರಿ ಲಂಕೇಶ್‌ಗೆ ನಕ್ಸಲರ ಸಂಬಂಧವನ್ನು ಕಟ್ಟಿ ಹಾಕಲು ಯತ್ನಿಸಿದರು. ‘ಗೌರಿ ಪ್ರತಿಪಾದಿಸಿದ ಹಿಂಸೆಯೇ ಆಕೆಯನ್ನು ಬಲಿ ತೆಗೆದುಕೊಂಡಿತ್ತು’ ಎನ್ನುವ ಕಪಟ ಮಾತುಗಳನ್ನಾಡಿದರು. ಗೌರಿಯನ್ನು ಬಲಿ ತೆಗೆದುಕೊಂಡಿದ್ದು, ಅವರು ಪ್ರತಿಪಾದಿಸಿದ ಅಹಿಂಸೆಯಾಗಿದೆ. ಗಾಂಧಿ ಪ್ರತಿಪಾದಿಸಿದ ಅಹಿಂಸೆ ಬಳಿಕ ಅವರನ್ನೇ ಬಲಿತೆಗೆದುಕೊಂಡ ಹಾಗೆ.
 ಇವೆಲ್ಲದರ ನಡುವೆಯೂ ಗೌರಿ ತನ್ನ ವೈಯಕ್ತಿಕ ಸಮಸ್ಯೆಗಳನ್ನು ಒಂಟಿಯಾಗಿಯೇ ಎದುರಿಸಬೇಕಾಗಿತ್ತು. ಪತ್ರಿಕೆ ನಷ್ಟದಲ್ಲಿತ್ತು ಮಾತ್ರವಲ್ಲ, ಮುಚ್ಚುವಂತಹ ಸ್ಥಿತಿಯಲ್ಲಿತ್ತು. ಮೈತುಂಬಾ ಕೋರ್ಟು ಮೊಕದ್ದಮೆಗಳಿದ್ದವು. ತಮ್ಮವರೇ ತಮ್ಮಿಂದ ದೂರವಾಗಿದ್ದರು ಮಾತ್ರವಲ್ಲ, ಒಂದು ಕಾಲದ ಗೆಳೆಯರಾಗಿದ್ದವರ ದಾಳಿಗಳನ್ನೂ ಅವರು ಸಹಿಸಿಕೊಳ್ಳಬೇಕಾಗಿತ್ತು ಸಿಬ್ಬಂದಿಗೆ ವೇತನ ಕೊಡುವ ಸ್ಥಿತಿಯಲ್ಲಿ ಅವರಿರಲಿಲ್ಲ. ಅದನ್ನು ಅವರು ಹಲವರಲ್ಲಿ ತೋಡಿಕೊಂಡಿದ್ದರು. ವೈಯಕ್ತಿಕವಾಗಿ ಬಿಲ್ಲೆ ಕಾಸನ್ನೂ ತನಗಾಗಿ ಮಾಡಿಕೊಳ್ಳದ ಗೌರಿ, ಸುತ್ತಮುತ್ತಲೆಲ್ಲ ಶತ್ರುಗಳನ್ನು ಸೃಷ್ಟಿ ಮಾಡಿಕೊಂಡರು. ಯಾರಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೋ, ಅವರೇ ಗೌರಿಯ ಜೊತೆಗೆ ಪೂರ್ಣವಾಗಿ ನಿಂತಿರಲಿಲ್ಲ. ಕೊನೆಯ ದಿನಗಳಲ್ಲಿ ಅವರು ತೀರಾ ಸುಸ್ತಾದಂತಿದ್ದರು. ಶತ್ರುವಿನ ಗುಂಡು ಅವರ ಸಾವಿಗೆ ಒಂದು ನೆಪ ಮಾತ್ರವಾಗಿತ್ತು.
   ಗೌರಿಲಂಕೇಶ್ ಧ್ವನಿ ನಮ್ಮ ಕುಟುಂಬಕ್ಕೆ ಚಿರಪರಿಚಿತ. ಯಾವುದೋ ಕಾರಣಕ್ಕಾಗಿ ಅಣ್ಣನಿಗಾಗಿ ಮನೆಯ ಲ್ಯಾಂಡ್‌ಲೈನಿಗೆ ಫೋನಾಯಿಸಿದಾಗ ಅದನ್ನು ನಮ್ಮ ಮನೆಯ ಸದಸ್ಯರಲ್ಲಿ ಯಾರಾದರೂ ಎತ್ತುತ್ತಿದ್ದರು. ಗೌರಿ ಲಂಕೇಶ್ ಪತ್ರಿಕೆಯ ವರದಿಗಾರನಾಗಿದ್ದ ನನ್ನ ಅಣ್ಣನ ಅಕಾಲ ಮರಣದ ಸಂದರ್ಭದಲ್ಲಿ ಗೌರಿ ಲಂಕೇಶ್ ಮತ್ತು ಇಂದ್ರಜಿತ್ ಲಂಕೇಶ್ ಇಬ್ಬರೂ ನನ್ನ ಮನೆಗೆ ಬಂದಿದ್ದರು. ಇಂದ್ರಜಿತ್ ಲಂಕೇಶ್ ಬಂದವರು ಅಣ್ಣನ ಗೋರಿಗೆ ಮಂಡಿಯೂರಿ ನಮಸ್ಕರಿಸಿದ್ದರು. ಅಂತಹ ಇಂದ್ರಜಿತ್ ಲಂಕೇಶ್ ಇಂದು ಯಾರಿಗೆ ಮಂಡಿಯೂರಿದ್ದಾರೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಗೌರಿ ಲಂಕೇಶ್‌ರ ದುರಂತವನ್ನು ನಾನು ಅದಾಗಲೇ ಅಣ್ಣನ ದುರಂತದಲ್ಲಿ ಕಂಡಿದ್ದೆ. ಗೌರಿ ಮನೆಗೆ ಬಂದಾಗ ನನ್ನೆಲ್ಲ ಅಸಮಾಧಾನಗಳನ್ನು ಹಂಚಿ ಕೊಂಡಿದ್ದೆ. ಹೇಗೆ ಒಬ್ಬ ವರದಿಗಾರನನ್ನು ಪತ್ರಿಕೆ ಕೂಡ ಒಂಟಿಯಾಗಿಸಿತು ಮತ್ತು ಅದು ಆತನನ್ನು ದುರಂತಕ್ಕೆ ತಳ್ಳಿತು ಎನ್ನುವುದನ್ನು ಹೇಳಿದ್ದೆ. ಗೌರಿಯವರು ಅದನ್ನು ವೌನವಾಗಿ ಆಲಿಸಿದ್ದರು. ಇದೀಗ ಗೌರಿಯ ದುರಂತದಲ್ಲೂ ನಮ್ಮೆಲ್ಲರ ಭಾಗೀದಾರಿಕೆಯನ್ನು ನಾನು ಕಾಣುತ್ತಿದ್ದೇನೆ. ಗೌರಿಯ ನೆನಪಿನ ಜೊತೆಗೆ ನಾವೆಲ್ಲ ಒಂದಾಗುತ್ತಿರುವುದರ ಹಿಂದೆ, ಆಕೆಯನ್ನು ಒಂಟಿಯಾಗಿಸಿದ ನಮ್ಮ ಪಾಪಪ್ರಜ್ಞೆಯೂ ಕೆಲಸ ಮಾಡುತ್ತಿದೆಯೇನೋ ಎನ್ನುವ ಕೊರಗೂ ನನ್ನಲ್ಲಿದೆ. ಮುಂದಿನ ದಿನಗಳಲ್ಲಿ ಯಾವ ಪ್ರಗತಿ ಪರ ಧ್ವನಿಯೂ ಒಂಟಿಯಾಗದಿರಲಿ. ಆತ ಸಂಕಟಕ್ಕೆ ಸಿಲುಕಿದಾಗ, ಶತ್ರುಗಳು ಬಲಿ ಹಾಕಲು ನಾಲ್ಕೆಡೆಗಳಿಂದ ಹೊಂಚು ಹಾಕಿದಾಗ ನಾವು ಆತನನ್ನು ಒಂಟಿಯಾಗಿ ಬಿಟ್ಟು, ಅದಕ್ಕೆ ಸಮರ್ಥನೆಗಳನ್ನು ಕೊಟ್ಟು ಕಾಲ ಕಳೆಯುವುದು ಸಲ್ಲ. ಎಲ್ಲ ಭಿನ್ನ ದನಿಗಳು ಒಂದು ಕಾರಣಕ್ಕಾಗಿ ಪರಸ್ಪರ ಕೈ ಜೋಡಿಸಬೇಕಾದ ಕಾಲವಿದು. ಗೌರಿ ತನ್ನ ಸಾವಿನಲ್ಲೂ ಇದನ್ನೇ ಕೂಗಿ ಕೂಗಿ ನಮಗೆ ಹೇಳುತ್ತಿದ್ದಾರೆ.

ಇಂದು ಗೌರಿ ದಿನ
ಇಂದಿಗೆ ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷವಾಗುತ್ತದೆ. ಈ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಬಳಗ, ಗೌರಿ ಮೆಮೋರಿಯಲ್ ಟ್ರಸ್ಟ್ ಇಂದು ಬೆಂಗಳೂರಿನಲ್ಲಿ ‘ಗೌರಿ ದಿನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ರಾಜಭವನ ಚಲೋದಿಂದ ಈ ಕಾರ್ಯಕ್ರಮ ಆರಂಭಗೊಳ್ಳಲಿದೆ. ಮಧ್ಯಾಹ್ನ 2:30ಕ್ಕೆ ಅಧಿಕೃತ ಸಮಾವೇಶ ಉದ್ಘಾಟನೆಯಾಗಲಿದ್ದು, ಬಳಿಕ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ದೇಶದ ಪ್ರಮುಖ ಚಿಂತಕರು ಭಾಗವಹಿಸಲಿದ್ದಾರೆ. ಸಿದ್ಧಾರ್ಥ ವರದರಾಜನ್, ಹೆಗ್ಗೋಡು ಪ್ರಸನ್ನ, ಮೇಘನಾ ಪನ್ಸಾರೆ, ತೀಸ್ತಾ ಸೆಟಲ್ವಾಡ್, ಗಿರೀಶ್ ಕಾರ್ನಾಡ್, ಸ್ವಾಮಿ ಅಗ್ನಿವೇಶ್, ವರವರರಾವ್, ಪ್ರಕಾಶ್ ರೈ, ಕನ್ಹಯ್ಯಾ ಕುಮಾರ್, ಶಬನಂ ಹಾಶ್ಮಿ, ದಿನೇಶ್ ಅಮೀನ್ ಮಟ್ಟು ಮೊದಲಾದ ಹಿರಿಯ ಚಿಂತಕರ ನೇತೃತ್ವದಲ್ಲಿ ಸಭಾ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕವೂ ಗೌರಿ ಧ್ವನಿಯನ್ನು ವಿವಿಧ ಕಲಾವಿದರು ಜನರ ಮುಂದೆ ಇಡಲಿದ್ದಾರೆ. 

Writer - ಬಿ. ಎಂ. ಬಶೀರ್

contributor

Editor - ಬಿ. ಎಂ. ಬಶೀರ್

contributor

Similar News

ಜಗದಗಲ
ಜಗ ದಗಲ