ಹಕ್ಕಾನಿ ನೆಟ್‌ವರ್ಕ್ ಸಂಸ್ಥಾಪಕ ಜಲಾಲುದ್ದೀನ್ ನಿಧನ

Update: 2018-09-05 05:03 GMT

ಇಸ್ಲಾಮಾಬಾದ್, ಸೆ. 5: ಕಳೆದ ಹದಿನೇಳು ವರ್ಷಗಳಿಂದ ಅಮೆರಿಕ, ನ್ಯಾಟೊ ಮತ್ತು ಅಪ್ಘಾನ್ ಪಡೆಗಳ ಮೇಲೆ ಉಗ್ರ ದಾಳಿ ನಡೆಸಿದ್ದ ಹಕ್ಕಾನಿ ನೆಟ್‌ವರ್ಕ್‌  ಸಂಸ್ಥಾಪಕ ಜಲಾಲುದ್ದೀನ್ ಹಕ್ಕಾನಿ ಮೃತಪಟ್ಟಿದ್ದಾಗಿ ಅಪ್ಘಾನ್ ತಾಲಿಬಾನ್ ದೃಢಪಡಿಸಿದೆ.

ಜಲಾಲುದ್ದಿನ್, ಎಲ್ಲಿ ಹೇಗೆ ಮತ್ತು ಯಾವಾಗ ಮೃತಪಟ್ಟ ಎಂಬ ವಿವರಗಳನ್ನು ತಾಲಿಬಾನ್ ಬಹಿರಂಗಪಡಿಸಿಲ್ಲ. ಆದರೆ "ಮೌಲ್ವಿ ಜಲಾಲುದ್ದೀನ್ ಹಕ್ಕಾನಿ ಅಸ್ವಸ್ಥರಾಗಿದ್ದರು ಹಾಗೂ ಹಲವು ವರ್ಷಗಳಿಂದ ಹಾಸಿಗೆ ಹಿಡಿದ್ದರು" ಎಂದಷ್ಟೇ ಹೇಳಿದೆ.

1970ರ ದಶಕದಲ್ಲಿ ಸ್ಥಾಪನೆಗೊಂಡ ಹಕ್ಕಾನಿ ನೆಟ್‌ವರ್ಕ್, 1980ರ ದಶಕದಲ್ಲಿ ಸೋವಿಯತ್ ಯೂನಿಯನ್ ವಿರುದ್ಧ ಹೋರಾಡಿತ್ತು. 1996ರಲ್ಲಿ ತಾಲಿಬಾನ್ ಕಾಬೂಲನ್ನು ವಶಕ್ಕೆ ಪಡೆದುಕೊಂಡ ಬಳಿಕ ಆ ಸಂಘಟನೆಯ ಜತೆ ಹಕ್ಕಾನಿ ನೆಟ್‌ವರ್ಕ್ ಕೈಜೋಡಿಸಿತ್ತು. ಬಳಿಕ ಜಲಾಲುದ್ದೀನ್ ಸಂಪುಟ ದರ್ಜೆ ಸಚಿವನಾಗಿ, ತಾಲಿಬಾನ್ ಆಡಳಿತವನ್ನು ಅಂತ್ಯಗೊಳಿಸುವ ಸಲುವಾಗಿ 2001ರಲ್ಲಿ ಅಮೆರಿಕ ದಾಳಿ ನಡೆಸಿದ ಬಳಿಕ, ಹಕ್ಕಾನಿ ಅಮೆರಿಕವನ್ನು ಗುರಿ ಮಾಡಲಾಗಿತ್ತು. ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನದ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಉಗ್ರ ಸಂಘಟನೆಗಳ ಪೈಕಿ ಇದು ಕೂಡಾ ಸೇರಿತ್ತು.

ಅಪ್ಘಾನಿಸ್ತಾನದ ಪಕ್ತಿಯಾ ಪ್ರಾಂತ್ಯದಲ್ಲಿ ಹುಟ್ಟಿದ ಹಕ್ಕಾನಿ, ಪಾಕಿಸ್ತಾನ- ಅಪ್ಘಾನಿಸ್ತಾನದ ಗಡಿಭಾಗವಾದ ದುರಾಂತ್ ಲೈನ್‌ನ ಇಕ್ಕೆಲಗಳಲ್ಲಿ ಬೆಂಬಲಿಗರು ಹಾಗೂ ಹೋರಾಟಗಾರರನ್ನು ಹೊಂದಿದ್ದ. ಅಮೆರಿಕ, ನ್ಯಾಟೊ ಮತ್ತು ಪಾಶ್ಚಿಮಾತ್ಯ ಬೆಂಬಲಿತ ಅಪ್ಘಾನ್ ಸೇನೆಯ ವಿರುದ್ಧದ ಹೋರಾಟದ ನಾಯಕನಾಗಿದ್ದ ಆತ ಬಳಿಕ ತನ್ನ ಮಗ ಸಿರಾಜುದ್ದೀನ್ ಹಕ್ಕಾನಿ ಜತೆ ತಾಲಿಬಾನ್ ಸೇರಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News