ನಾಲ್ಕು ತಿಂಗಳ ತರಬೇತಿ ಪಡೆದು ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ವಿಸ್ಮಯ!

Update: 2018-09-05 08:25 GMT

ಹೊಸದಿಲ್ಲಿ, ಸೆ.5: ಇಂಡೋನೇಶ್ಯಾದಲ್ಲಿ ರವಿವಾರ ಕೊನೆಗೊಂಡ ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಅಮೋಘ ಪ್ರದರ್ಶನ ನೀಡಿದ್ದಾರೆ. 22ರ ಹರೆಯದ ಕೇರಳದ ಅಥ್ಲೀಟ್ ವಿ.ಕೆ. ವಿಸ್ಮಯ ಸಾಧನೆ ನಿಜಕ್ಕೂ ವಿಸ್ಮಯವಾಗಿದೆ.

 ಕೋಚ್ ಗಲಿನಾ ಬುಖಾರಿಯಾರೊಂದಿಗೆ ಕೇವಲ ನಾಲ್ಕು ತಿಂಗಳು ತರಬೇತಿ ಪಡೆದಿದ್ದ ವಿಸ್ಮಯ 4-400 ಮೀ. ಮಹಿಳೆಯರ ರಿಲೇ ತಂಡದಲ್ಲಿ ಭಾಗವಹಿಸಿ ಭಾರತ ಏಶ್ಯನ್ ಗೇಮ್ಸ್‌ನಲ್ಲಿ ಸತತ 5ನೇ ಬಾರಿ ಚಿನ್ನ ಜಯಿಸಿ ಅಜೇಯ ದಾಖಲೆ ಕಾಯ್ದುಕೊಳ್ಳಲು ನೆರವಾಗಿದ್ದಾರೆ.

ಭಾರತ ರಿಲೇ ತಂಡದಲ್ಲಿದ್ದ ಹಿಮಾ ದಾಸ್, ಎಂ.ಆರ್.ಪೂವಮ್ಮ ಹಾಗೂ ಸರಿತಾಬೆನ್ ಗಾಯಕ್ವಾಡ್ ತನ್ನ ಮೊದಲ ಅಂತರ್‌ರಾಷ್ಟ್ರೀಯ ಕೂಟದಲ್ಲಿ ವಿಸ್ಮಯ ನೀಡಿದ್ದ ಪ್ರದರ್ಶನ ನೋಡಿ ಬೆರಗಾಗಿದ್ದಾರೆ.

ಕಣ್ಣೂರಿನ ಓಟಗಾರ್ತಿ ವಿಸ್ಮಯ ಆ.24 ರಂದು ಜಕಾರ್ತದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಜಿಸ್ನಾ ಮ್ಯಾಥ್ಯೂ ಹಾಗೂ ವಿಜಯಾ ಕುಮಾರಿ ಅವರನ್ನು ಹಿಂದಿಕ್ಕಿ ಭಾರತ ಮಹಿಳೆಯರ ರಿಲೇ ತಂಡಕ್ಕೆ ನಾಲ್ಕನೇ ಸದಸ್ಯೆಯಾಗಿ ಆಯ್ಕೆಯಾಗಿದ್ದರು.

ವಿಸ್ಮಯ ಏಶ್ಯನ್ ಗೇಮ್ಸ್‌ಗಿಂತ ಮೊದಲು ಯಾವುದೇ ಸೀನಿಯರ್ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ. ನೇಶನ್ಸ್, ಫೆಡರೇಶನ್ ಕಪ್ ಹಾಗೂ ಅಂತರ್‌ರಾಜ್ಯ ಕ್ರೀಡಾಕೂಟದಲ್ಲಿ ಭಾಗವಹಿಸಿರಲಿಲ್ಲ. ಈ ವರ್ಷದ ಎಪ್ರಿಲ್‌ನಲ್ಲಿ ಮೊದಲ ಬಾರಿ ರಾಷ್ಟ್ರೀಯ ಶಿಬಿರವನ್ನು ಸೇರಿದ್ದರು.

 ನವೆಂಬರ್‌ನಲ್ಲಿ ವಿಜಯವಾಡದಲ್ಲಿ ನಡೆದ ಅಂತರ್ ವಿವಿ ಚಾಂಪಿಯನ್‌ಶಿಪ್‌ನಲ್ಲಿ 400 ಮೀ.ಓಟದಲ್ಲಿ 53.63 ಸೆಕೆಂಡ್‌ನಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದ್ದರು. ಈ ಮೂಲಕ ಭಾರತದ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ) ಗಮನ ಸೆಳೆದಿದ್ದರು. ವಿಜಯವಾಡದಲ್ಲಿ ನೀಡಿದ್ದ ಪ್ರದರ್ಶನವನ್ನು ಆಧರಿಸಿದ ಎಎಫ್‌ಐ ವಿಸ್ಮಯಗೆ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸಲು ನೇರ ಪ್ರವೇಶ ನೀಡಿತ್ತು. 72ರ ಹರೆಯದ ಕೋಚ್ ಗಲಿನಾ ಅವರು ವಿಸ್ಮಯರನ್ನು ಗೇಮ್ಸ್‌ಗೆ ಸಜ್ಜುಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News