ಮಧುಮೇಹವನ್ನು ನಿಯಂತ್ರಿಸುವ ನೇರಳೆಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು?

Update: 2018-09-05 10:33 GMT

ಜಾಮೂನು ಎಂದೇ ಜನಪ್ರಿಯವಾಗಿರುವ ನೇರಳೆಹಣ್ಣು ಪೌಷ್ಟಿಕಾಂಶಭರಿತವಾಗಿದ್ದು, ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ. ಈ ಮಾಮೂಲು ಕಾಡುಹಣ್ಣು ಮಧುಮೇಹ, ಕ್ಯಾನ್ಸರ್, ಹೃದ್ರೋಗ, ಸಂಧಿವಾತ, ಅತಿಸಾರದಂತಹ ಹಲವಾರು ರೋಗಗಳನ್ನು ನಿಯಂತ್ರಿಸುತ್ತದೆ.

100 ಗ್ರಾಂ.ನೇರಳೆಹಣ್ಣು 62 ಕ್ಯಾಲರಿಗಳ ಜೊತೆಗೆ ಶೇ.0.9ರಷ್ಟು ನಾರು,ಶೇ.14ರಷ್ಟು ಕಾರ್ಬೊಹೈಡ್ರೇಟ್‌ಗಳು,ಶೇ. 0.4ರಷ್ಟು ಖನಿಜಗಳು, 1.2ಎಂಜಿ ಕಬ್ಬಿಣ,15 ಎಂಜಿ ರಂಜಕ,15 ಎಂಜಿ ಕ್ಯಾಲ್ಸಿಯಂ,ಶೇ.18ರಷ್ಟು ವಿಟಾಮಿನ್ ಸಿ,ಅಲ್ಪ ಪ್ರಮಾಣದಲ್ಲಿ ಬಿ ಕಾಂಪ್ಲೆಕ್ಸ್ ವಿಟಾಮಿನ್ ಮತ್ತು ಶೇ.83.7ರಷ್ಟು ನೀರನ್ನು ಒಳಗೊಂಡಿರುತ್ತದೆ.

ಜಾಮೂನನ್ನು ಪ್ರತಿದಿನ ರಸದ ರೂಪದಲ್ಲಾದರೆ 10ರಿಂದ 20 ಎಂಎಲ್ ಮತ್ತು ಹುಡಿಯ ರೂಪದಲ್ಲಾದರೆ ವಿಭಜಿತ ಪ್ರಮಾಣದಲ್ಲಿ ಒಟ್ಟು 3ರಿಂದ 6 ಗ್ರಾಂ ಸೇವಿಸಬೇಕು. ಜಾಮೂನಿನ ಆರೋಗ್ಯಲಾಭಗಳು ಹೀಗಿವೆ.....

► ಮಧುಮೇಹವನ್ನು ನಿಯಂತ್ರಿಸುತ್ತದೆ

ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಜಾಮೂನು ನೆರವಾಗುತ್ತದೆ. ಅದರ ಬೀಜಗಳನ್ನು ಒಣಗಿಸಿ,ಬಳಿಕ ಪುಡಿ ಮಾಡಿ ಹಲವಾರು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಮಧುಮೇಹಿಗಳು ಪ್ರತಿ ಊಟಕ್ಕೆ ಮೊದಲು ಈ ಹುಡಿಯನ್ನು ಸೇವಿಸುವುದರಿಂದ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರುತ್ತದೆ. ಜಾಮೂನು ಮತ್ತು ಅದರ ಬೀಜಗಳಲ್ಲಿರುವ ಜಾಂಬೊಲಿನ್ ಮತ್ತು ಜಾಂಬೊಸಿನ್ ಎಂಬ ರಾಸಾಯನಿಕಗಳು ಶರೀರದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ರಕ್ತದಲ್ಲಿ ಬಿಡುಗಡೆಯಾಗುವ ಸಕ್ಕರೆಯ ಪ್ರಮಾಣವನ್ನು ತಗ್ಗಿಸುತ್ತವೆ.

► ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ರಕ್ತಹೀನತೆಯ ವಿರುದ್ಧ ಹೋರಾಡುತ್ತದೆ

ಜಾಮೂನಿನಲ್ಲಿರುವ ಕಬ್ಬಿಣಾಂಶವು ಮಹಿಳೆಯರು ರಜಸ್ವಲೆಯರಾದ ಸಂದರ್ಭದಲ್ಲಿ ರಕ್ತಸ್ರಾವದಿಂದಾಗಿ ನಷ್ಟವಾಗುವ ಕಬ್ಬಿಣವನ್ನು ಭರ್ತಿ ಮಾಡುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವರು ತಮ್ಮ ಆಹಾರದಲ್ಲಿ ಜಾಮೂನು ಸೇರಿಸಿಕೊಳ್ಳುವುದು ಲಾಭಕಾರಿಯಾಗುತ್ತದೆ. ಅದರಲ್ಲಿರುವ ಕಬ್ಬಿಣವು ರಕ್ತವನ್ನು ಶುದ್ಧೀಕರಿಸಲು ನೆರವಾಗುತ್ತದೆ ಮತ್ತು ಚರ್ಮಕ್ಕೂ ಒಳ್ಳೆಯದು.

► ರಕ್ತದೊತ್ತಡ ತಗ್ಗಿಸಲು ನೆರವಾಗುತ್ತದೆ

ಜಾಮೂನಿನ ಬೀಜಗಳು ರಕ್ತದೊತ್ತಡವನ್ನು ತಗ್ಗಿಸುವ ಸಾಮರ್ಥ್ಯವನ್ನು ಹೊಂದಿವೆ. ಅಧಿಕ ರಕ್ತದೊತ್ತಡವನ್ನು ಹೊಂದಿರುವವರು ಜಾಮೀನು ಬೀಜಗಳ ಸಾರವನ್ನು ನಿಯಮಿತವಾಗಿ ಸೇವಿಸಿದರೆ ರಕ್ತದೊತ್ತಡ ಶೇ.34.6ರಷ್ಟು ಕಡಿಮೆಯಾಗುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.

► ಹೊಟ್ಟೆಯ ಸಮಸ್ಯೆಗಳನ್ನು ಶಮನಗೊಳಿಸುತ್ತದೆ

ಕರುಳುಹುಣ್ಣುಗಳಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮತ್ತು ಕ್ಯಾಂಡಿಡಾ ಅಲ್ಬಿಕನ್‌ಗಳೆಂಬ ರೋಗಕಾರಕ ಕಿಣ್ವಗಳಿಂದ ಜನನಮೂತ್ರೀಯ ನಾಳದಲ್ಲಿ ಉಂಟಾಗುವ ಸೋಂಕು ನಿವಾರಣೆಗೆ ಜಾಮೂನು ಬೀಜ ರಾಮಬಾಣವಾಗಿದೆ. ಜಜ್ಜಿದ ಜಾಮೂನು ಬೀಜವನ್ನು ಸಕ್ಕರೆಯೊಂದಿಗೆ ಬೆರೆಸಿಕೊಂಡು ದಿನಕ್ಕೆರಡು ಮೂರು ಬಾರಿ ಸೇವಿಸಿದರೆ ಬೇಧಿ ನಿಲ್ಲುತ್ತದೆ.

► ವಿಷವಸ್ತುಗಳನ್ನು ನಿವಾರಿಸುತ್ತದೆ

ಜಾಮೂನು ಬೀಜಗಳಲ್ಲಿ ಹೇರಳವಾಗಿರುವ ಉತ್ಕರ್ಷಣ ನಿರೋಧಕಗಳು ಶರೀರದಲ್ಲಿನ ಫ್ರೀ ರ್ಯಾಡಿಕಲ್ಸ್‌ಗಳನ್ನು ಹೊರಗೆ ಹಾಕಲು ಮತ್ತು ಶರೀರ ವ್ಯವಸ್ಥೆಯನ್ನು ನೈಸರ್ಗಿಕವಾಗಿ ವಿಷಮುಕ್ತವನ್ನಾಗಿಸಲು ನೆರವಾಗುತ್ತವೆ. ಇದು ಶರೀರದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಈ ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್ ವಿರುದ್ಧವೂ ಹೋರಾಡುತ್ತವೆ.

ಮಧುಮೇಹಿಗಳು ಜಾಮೂನು ಹುಡಿಯನ್ನು ನಿಯಮಿತವಾಗಿ ಖಾಲಿಹೊಟ್ಟೆಯಲ್ಲಿ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರುತ್ತದೆ. ಒಂದು ಗ್ಲಾಸ್ ನೀರಿನಲ್ಲಿ ಒಂದು ಚಮಚ ಹುಡಿಯನ್ನು ಬೆರೆಸಿಕೊಂಡು ಸೇವಿಸಬಹುದಾಗಿದೆ. ಆದರೂ ಮಧುಮೇಹಿಗಳು ಜಾಮೂನು ಹುಡಿಯ ಸೇವನೆಯನ್ನು ಆರಂಭಿಸುವ ಮುನ್ನ ತಮ್ಮ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News