ಅತ್ಯಧಿಕ ಮಹಿಳಾ ಪೈಲಟ್‌ಗಳಿರುವ ದೇಶ ಯಾವುದು ಗೊತ್ತೇ ?

Update: 2018-09-06 04:57 GMT

ಹೊಸದಿಲ್ಲಿ, ಸೆ. 6: ವಾಣಿಜ್ಯ ವಿಮಾನಗಳಲ್ಲಿ ಪೈಲಟ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಪ್ರಮಾಣ ಭಾರತದಲ್ಲಿ ಅತ್ಯಧಿಕ. ವಿಶ್ವದಲ್ಲಿರುವ ಒಟ್ಟು ಮಹಿಳಾ ಪೈಲಟ್‌ಗಳ ಪೈಕಿ ಶೇಕಡ 12ರಷ್ಟು ಮಂದಿ ಭಾರತದಲ್ಲಿದ್ದಾರೆ.

ಶ್ವೇತಾ ಸಿಂಗ್ 20 ವರ್ಷದ ಹಿಂದೆ ಮಹಿಳೆಯರಿಗೆ ಸಾಮಾನ್ಯವಲ್ಲದ ಈ ವೃತ್ತಿಯನ್ನು ಮೊಟ್ಟಮೊದಲ ಬಾರಿಗೆ ಆಯ್ಕೆ ಮಾಡಿಕೊಳ್ಳುವಾಗ ತಂದೆ- ತಾಯಿಯ ಮನವೊಲಿಸಲು ಮತ್ತು ಕಾಕ್‌ಪಿಟ್‌ನ ಪುರುಷ ಸಹೋದ್ಯೋಗಿಗಳನ್ನು ನಿಭಾಯಿಸಲು ಸಾಕಷ್ಟು ಕಷ್ಟಪಟ್ಟಿದ್ದರು. ಆದರೆ ಇಂದು ಇದು ಮಹಿಳೆಯರಿಗೆ ಸುಲಭ ವೃತ್ತಿ ಅವಕಾಶ ಎಂದು ಅವರು ಹೇಳುತ್ತಾರೆ.

ಬಹಳಷ್ಟು ಮಂದಿ ಭಾರತೀಯ ಮಹಿಳೆಯರು ಪೈಲಟ್‌ಗಳಾಗಲು ಮುಂದೆ ಬರುತ್ತಿದ್ದಾರೆ. ಕೇಂದ್ರ ಸರ್ಕಾರ ಕಡ್ಡಾಯ ಪಡಿಸಿದ ಸಮಾನ ವೇತನ, ಸುರಕ್ಷಿತ ಕೆಲಸದ ಸ್ಥಳ, ಡೇ ಕೇರ್ ವ್ಯವಸ್ಥೆ, ವಿಮಾನಯಾನ ಕ್ಷೇತ್ರ ಬೆಳೆಯುತ್ತಿರುವುದು ಹೀಗೆ ಬಹಳಷ್ಟು ಪ್ರಯೋಜನಗಳು ಮಹಿಳೆಯರಿಗೆ ಇವೆ ಎಂದು ಅವರು ಹೇಳುತ್ತಾರೆ.

"ಪುರುಷ ಪ್ರಧಾನ ಕ್ಷೇತ್ರಕ್ಕೆ ಲಗ್ಗೆ ಇಡುವುದು ಸುಲಭವೇನೂ ಆಗಿರಲಿಲ್ಲ" ಎಂದು ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಸಮಾಜದಲ್ಲಿ ಮನೋಭಾವ ಬದಲಾಗುತ್ತಿದೆ ಎಂದು ಜೆಟ್ ಏರ್‌ವೇಸ್‌ನಲ್ಲಿ ಹಿರಿಯ ತರಬೇತುದಾರರಾಗಿರುವ ಅವರು ಹೇಳುತ್ತಾರೆ.

ಅಮೆರಿಕ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಎಲ್ಲ ಪಾಶ್ಚಿಮಾತ್ಯ ದೇಶಗಳಲ್ಲಿರುವ ಮಹಿಳಾ ಪೈಲಟ್‌ಗಳಿಗಿಂತ ಹೆಚ್ಚಿನ ಮಹಿಳಾ ಪೈಲಟ್‌ಗಳು ಭಾರತದಲ್ಲಿದ್ದಾರೆ. ಜಾಗತಿಕವಾಗಿ ಒಟ್ಟು ಪೈಲಟ್‌ಗಳ ಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇಕಡ 5ಕ್ಕಿಂತ ಕಡಿಮೆ ಇದೆ ಎಂದು ಇಂಟರ್‌ನ್ಯಾಷನಲ್ ಸೊಸೈಟಿ ಆಫ್ ವುಮನ್ ಏರ್‌ಲೈನ್ ಪೈಲಟ್ಸ್ ಅಂದಾಜಿಸಿದೆ.

ವಿಮಾನಯಾನ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಮುಂದಿನ 20 ವರ್ಷಗಳಲ್ಲಿ 7.9 ಲಕ್ಷ ಪೈಲಟ್‌ಗಳು ಬೇಕಾಗುತ್ತಾರೆ ಎಂದು ಬೋಯಿಂಗ್ ಕಂಪೆನಿ ಅಂದಾಜು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News