ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Update: 2018-09-06 14:57 GMT

ಹೊಸದಿಲ್ಲಿ, ಸೆ.6: ಸಲಿಂಗಕಾಮ ಅಪರಾಧವಲ್ಲ ಅಥವಾ ಇದು ಮಾನಸಿಕ ಅಸ್ವಸ್ಥತೆಯ ಲಕ್ಷಣವಲ್ಲ ಎಂದು ತಿಳಿಸಿರುವ ಸುಪ್ರೀಂಕೋರ್ಟ್ , ದೇಶದಲ್ಲಿ 158 ವರ್ಷದಿಂದ , ವಸಾಹತುಶಾಹಿ ಯುಗದಿಂದ ಜಾರಿಯಲ್ಲಿದ್ದ ಕಾನೂನನ್ನು ತನ್ನ ಐತಿಹಾಸಿಕ ತೀರ್ಪಿನ ಮೂಲಕ ಆಂಶಿಕವಾಗಿ ರದ್ದುಪಡಿಸಿದೆ. ಸಲಿಂಗಕಾಮದ ಪರ- ವಿರೋಧಿಗಳ ದಶಕಗಳ ಕಾಲದ ಹೋರಾಟಕ್ಕೆ ಮುಕ್ತಾಯದ ಗೆರೆ ಎಳೆದಿರುವ ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರಿದ್ದ ನ್ಯಾಯಪೀಠವು, ದೇಶದಲ್ಲಿ 1860ರಲ್ಲಿ ಜಾರಿಗೊಂಡಿದ್ದ ಭಾರತೀಯ ಅಪರಾಧ ಸಂಹಿತೆಯ ಸೆಕ್ಷನ್ 377ರ ಕೆಲವು ಅಂಶಗಳನ್ನು ರದ್ದುಗೊಳಿಸಿದೆ.

ಸೆಕ್ಷನ್ 377ನ್ನು ಪಕ್ಷಪಾತದ ಆಯುಧವನ್ನಾಗಿ ಬಳಸಲಾಗುತ್ತಿತ್ತು. ಲೈಂಗಿಕತೆಯ ಆಧಾರದಲ್ಲಿ ತಾರತಮ್ಯ ನಡೆಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿತವಾಗುತ್ತದೆ ಎಂದು ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ತೀರ್ಪನ್ನು ಓದಿ ಹೇಳಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ತಿಳಿಸಿದ್ದಾರೆ. ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಇಂದು ಮಲ್ಹೋತ್ರಾ, ಎ.ಎಂ.ಖಾನ್ವಿಳ್ಕರ್, ನಾರಿಮನ್ ಅವರು ಪೀಠದ ಇತರ ಸದಸ್ಯರಾಗಿದ್ದು, ಎಲ್ಲರೂ ಸಮಾನವಾದ ತೀರ್ಪನ್ನು ನೀಡಿದರು.

ಏಕ ಭಾರತ, ಸಮಾನ ಪ್ರೀತಿ ಎಂಬುದು ಈ ತೀರ್ಪಿನ ಸಾರಾಂಶವಾಗಿತ್ತು. ಸುಪ್ರೀಂಕೋರ್ಟ್‌ನ ಈ ತೀರ್ಪು ದೇಶದಲ್ಲಿರುವ ಸಲಿಂಗಕಾಮಿ ಸ್ತ್ರೀ, ಸಲಿಂಗಕಾಮಿ ಪುರುಷ, ಉಭಯಲಿಂಗಿ, ತೃತೀಯ ಲಿಂಗಿಗಳ ಮೇಲೆ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮ ಬೀರಲಿದೆ. ಸಲಿಂಗಕಾಮಿ ಉದ್ಯೋಗಿಗಳ ಮತ್ತು ಅವರ ಸಂಗಾತಿಗಳ ವಿರುದ್ಧ ತಾರತಮ್ಯದ ಧೋರಣೆಗಳಿಗೆ ಅಂತ್ಯ ಹಾಡುವ ನಿರೀಕ್ಷೆಯಿದೆ. ಸಾಮಾಜಿಕವಾಗಿ ಇವರನ್ನು ಪ್ರತ್ಯೇಕಿಸುವುದು ಅಥವಾ ಬ್ಲಾಕ್‌ಮೇಲ್ ಮಾಡುವ ಪ್ರಕ್ರಿಯೆಯ ವಿರುದ್ಧ ಸಾಮಾಜಿಕ ಕಾರ್ಯಕರ್ತರು ಹಲವು ಬಾರಿ ಧ್ವನಿ ಎತ್ತಿದ್ದರು. ಭಾರತದಲ್ಲಿ ಬಹುಕಾಲದಿಂದ ನನೆಗುದಿಗೆ ಬಿದ್ದಿದ್ದ ವೈಯಕ್ತಿಕ ಸ್ವಾತಂತ್ರಕ್ಕೆ ದೊರೆತ ಗೆಲುವು ಇದಾಗಿದೆ ಎಂದು ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ‘ಕಾರ್ನಿಜಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್’ನ ದಕ್ಷಿಣ ಏಶ್ಯಾ ವಿಭಾಗದ ನಿರ್ದೇಶಕ ಮಿಲನ್ ವೈಷ್ಣವ್ ಹೇಳಿದ್ದಾರೆ.

ಸಲಿಂಗಕಾಮದ ಬಗ್ಗೆ 2013ರಲ್ಲಿ ನೀಡಿದ್ದ ತೀರ್ಪಿನಲ್ಲಿ ಇದೊಂದು ಅಪರಾಧದ ಕೃತ್ಯ ಎಂದು ಸುಪ್ರೀಂಕೋರ್ಟ್ ತಿಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಐವರು ಗಣ್ಯವ್ಯಕ್ತಿಗಳು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಕ್ರಿಶ್ಚಿಯನ್ ಸಂಸ್ಥೆಗಳಾದ ಅಪೊಸ್ಟೊಲಿಕ್ ಅಲಯನ್ಸ್ ಆಫ್ ಚರ್ಚ್, ಉತ್ಕಲ್ ಕ್ರಿಶ್ಚಿಯನ್ ಅಸೋಸಿಯೇಷನ್ ಹಾಗೂ ಇತರ ಕೆಲವು ಎನ್‌ಜಿಒ ಸಂಸ್ಥೆಗಳು ಮೇಲ್ಮನವಿಯನ್ನು ವಿರೋಧಿಸಿದ್ದವು. 2009ರಲ್ಲಿ ನಾಝ್ ಪ್ರತಿಷ್ಠಾನ ಸಲ್ಲಿಸಿದ್ದ ಅರ್ಜಿಗೆ ಸ್ಪಂದಿಸಿದ್ದ ದಿಲ್ಲಿ ಹೈಕೋರ್ಟ್ ಸೆಕ್ಷನ್ 377ನ್ನು ರದ್ದುಗೊಳಿಸಿತ್ತು. ಆದರೆ ದಿಲ್ಲಿ ಹೈಕೋರ್ಟ್‌ನ ಆದೇಶವನ್ನು 2013ರಲ್ಲಿ ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್, ಸಲಿಂಗಕಾಮದ ಮೇಲೆ ಮತ್ತೆ ನಿಷೇಧ ಹೇರಿತ್ತು. ನಿಯಮಗಳನ್ನು ರದ್ದುಗೊಳಿಸುವ ಕಾರ್ಯವನ್ನು ಸಂಸತ್ತು ನಡೆಸಬೇಕು ಎಂದು ತೀರ್ಪು ಪ್ರಕಟಿಸುವ ಸಂದರ್ಭ ಸುಪ್ರೀಂ ತಿಳಿಸಿತ್ತು.

ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆ ಸಂದರ್ಭದಲ್ಲಿ ಇತ್ತೀಚೆಗೆ ಹೇಳಿಕೆ ನೀಡಿದ್ದ ಸುಪ್ರೀಂಕೋರ್ಟ್, ಬಹುಮತದ ಸರಕಾರದ ನಿಲುವಿಗಾಗಿ ಇನ್ನು ಕಾಯಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಇತಿಹಾಸ ಸಲಿಂಪ್ರೇಮಿಗಳ ಕ್ಷಮೆ ಯಾಚಿಸಬೇಕು : ನ್ಯಾ. ಮಲ್ಹೋತ್ರಾ

ಚಾರಿತ್ರಿಕ ತೀರ್ಪು ಪ್ರಕಟಿಸಿದ ಐವರು ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾ. ಇಂದು ಮಲ್ಹೋತ್ರಾ , ಸೆಕ್ಷನ್ 377 ಸಲಿಂಗಪ್ರೇಮಿಗಳ ಹಕ್ಕು ಮತ್ತು ಸ್ವಾತಂತ್ರವನ್ನು ನಿರಾಕರಿಸಿದ ಕಾರಣ ಅವರು ಭಯದಿಂದ ಬದುಕಬೇಕಿತ್ತು. ಇದೀಗ ಇತಿಹಾಸವು ಅವರ ಕ್ಷಮೆ ಯಾಚಿಸಬೇಕಿದೆ ಎಂದು ತಿಳಿಸಿದ್ದಾರೆ.

ಬಲವಂತದ ಲೈಂಗಿಕ ಕ್ರಿಯೆಗೆ ನಿಷೇಧ

ಯಾವುದೇ ಮಹಿಳೆ, ಪುರುಷ ಅಥವಾ ಪ್ರಾಣಿಗಳ ಜೊತೆ ಅನೈಸರ್ಗಿಕ ರೀತಿಯ ಲೈಂಗಿಕ ಕ್ರಿಯೆ ನಡೆಸುವುದು ನಿಷಿದ್ಧವಾಗಿದೆ ಎಂದು 1861ರ ನಿಯಮದ ಭಾಗವಾಗಿರುವ ಸೆಕ್ಷನ್ 377ರಲ್ಲಿ ತಿಳಿಸಲಾಗಿದೆ. ಇದೀಗ ಸುಪ್ರೀಂಕೋರ್ಟ್ ಈ ಸೆಕ್ಷನ್ ರದ್ದುಗೊಳಿಸಿದ್ದರೂ, ಇದರ ಎರಡು ಅಂಶಗಳನ್ನು ಮುಂದುವರಿಸಿದೆ. ಒಪ್ಪಿಗೆಯಿಲ್ಲದೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸುವುದು ಅಥವಾ ಬಲವಂತದಿಂದ ಒಪ್ಪಿಗೆ ಪಡೆದು ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸುವುದರ ಮೇಲಿದ್ದ ನಿಷೇಧ ಮುಂದುವರಿದಿದೆ. ಅಲ್ಲದೆ ಮಕ್ಕಳ ಅಥವಾ ಪ್ರಾಣಿಗಳ ಜೊತೆ ಅನೈಸರ್ಗಿಕ ಮತ್ತು ಕ್ರೂರ ರೀತಿಯ ಲೈಂಗಿಕ ಕ್ರಿಯೆಯ ನಿಷೇಧ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News