ಏಶ್ಯಾ ಕಪ್‌ಗೆ ಹಾಂಕಾಂಗ್: ಯುಎಇ ವಿರುದ್ಧ ರೋಚಕ ಜಯ

Update: 2018-09-06 18:21 GMT

ಕೌಲಾಲಂಪುರ, ಸೆ.6: ಅರ್ಹತಾ ಟೂರ್ನಮೆಂಟ್‌ನ ಕೊನೆಯ ಪಂದ್ಯದಲ್ಲಿ ಯುಎಇ ತಂಡವನ್ನು 2 ವಿಕೆಟ್‌ಗಳ ಅಂತರದಿಂದ ರೋಚಕವಾಗಿ ಮಣಿಸಿದ ಹಾಂಕಾಂಗ್ ಕ್ರಿಕೆಟ್ ತಂಡ ಯುಎಇಯಲ್ಲಿ ನಡೆಯಲಿರುವ 2018ರ ಆವೃತ್ತಿಯ ಏಶ್ಯಾಕಪ್‌ಗೆ ಅರ್ಹತೆ ಪಡೆದುಕೊಂಡಿದೆ.

ಏಶ್ಯಾಕಪ್‌ನಲ್ಲಿ ಆಡುವ ಅರ್ಹತೆ ಪಡೆದಿರುವ ಹಾಂಕಾಂಗ್ ತಂಡ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳೊಂದಿಗೆ ಸೇರಿಕೊಂಡಿದೆ. ಮಳೆಯಿಂದಾಗಿ ಪಂದ್ಯವನ್ನು 24 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಯುಎಇ 24 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 176 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮೂರು ಎಸೆತ ಬಾಕಿ ಇರುವಾಗಲೇ 8 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿದ ಹಾಂಕಾಂಗ್ ಗೆಲುವಿನ ನಗೆ ಬೀರಿತು.

 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದಾಗ ಯುಎಇ 65ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು. ಪಂದ್ಯ ಮತ್ತೆ ಆರಂಭವಾದ ಬಳಿಕ ಈ ಮೊತ್ತಕ್ಕೆ 111 ರನ್ ಸೇರಿಸಿತು. ಆರಂಭಿಕ ಆಟಗಾರ ಮುಹಮ್ಮದ್ ಅಶ್ಫಕ್ ಅಹ್ಮದ್ 51 ಎಸೆತಗಳಲ್ಲಿ 79 ರನ್ ಗಳಿಸಿದರು. ಹಾಂಕಾಂಗ್‌ನ ಅಝಾಝ್ ಖಾನ್ 28ಕ್ಕೆ 5 ವಿಕೆಟ್‌ಗಳನ್ನು ಪಡೆದು ಮಿಂಚಿದರು.

   ಡಿ/ಎಲ್ ನಿಯಮದ ಪ್ರಕಾರ ಹಾಂಕಾಂಗ್ ಗೆಲುವಿಗೆ 179 ರನ್ ಗುರಿ ಪಡೆಯಿತು. ಒಂದು ಹಂತದಲ್ಲಿ 147 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದ ಹಾಂಕಾಂಗ್ ಸೋಲಿನ ಭೀತಿಯಲ್ಲಿತ್ತು. ಆಗ 22ನೇ ಓವರ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿದ ತನ್ವೀರ್ ಅಫ್ಝಲ್ ಹಾಗೂ ಸ್ಕಾಟ್ ಮೆಕೆಂಜಿ ತಂಡದ ರನ್ ಚೇಸಿಂಗ್‌ಗೆ ಬಲ ನೀಡಿದರು. ಅಫ್ಝಲ್ 23ನೇ ಓವರ್‌ನ ಕೊನೆಯ ಎಸೆತದಲ್ಲಿ ಔಟಾದರು. ಎಹ್ಸಾನ್ ಹಾಗೂ ಮೆಕೆಂಜಿ ಹಾಂಕಾಂಗ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಹಾಂಕಾಂಗ್ ಸೆ.15 ರಂದು ಆರಂಭವಾಗಲಿರುವ ಏಶ್ಯಾಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡದೊಂದಿಗೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News