ಮೋದಿ ಹತ್ಯೆಗೆ ಈ ವರೆಗೆ ನಡೆದ ಸಂಚುಗಳೆಷ್ಟು ಮತ್ತು ಅದರಲ್ಲಿ ವಾಸ್ತವವೆಷ್ಟು?

Update: 2018-09-06 18:33 GMT

ಭಾಗ-2

ಸಾರ್ವತ್ರಿಕ ಚುನಾವಣೆ ಪ್ರಚಾರ (2013)

2013 ಅಕ್ಟೋಬರ್ 27ರಂದು ಅಂದಿನ ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿಯವರ ಪ್ರಚಾರ ರ್ಯಾಲಿಗೆ ಮುನ್ನ ಪಾಟ್ನಾದ ಗಾಂಧಿ ಮೈದಾನ ಮತ್ತು ರೈಲು ನಿಲ್ದಾಣದಲ್ಲಿ ಸರಣಿ ಬಾಂಬ್‌ಸ್ಫೋಟ ನಡೆಯಿತು. ಈ ಸ್ಫೋಟಗಳಲ್ಲಿ ಆರು ಮಂದಿ ಸಾವಿಗೀಡಾದರು ಹಾಗೂ ಇತರ 89 ಮಂದಿ ಗಾಯಗೊಂಡರು. ಬಾಂಬ್ ನಿಷ್ಕ್ರಿಯ ದಳ ಆ ಬಳಿಕ ಎರಡು ಸ್ಫೋಟಿಸದ ಇಐಡಿಗಳನ್ನು ಸುತ್ತಮುತ್ತಲ ಪ್ರದೇಶಗಳಲ್ಲಿ ಪತ್ತೆ ಮಾಡಿತು. ಈ ಬಗ್ಗೆ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) 2014ರ ಎಪ್ರಿಲ್‌ನಲ್ಲಿ ಆರೋಪಪಟ್ಟಿಯನ್ನು ಮತ್ತು 2014ರ ಆಗಸ್ಟ್‌ನಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸಿತು. ನಿಷೇಧಿತ ‘ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ’ ಈ ದಾಳಿ ನಡೆಸಿದೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಯಿತು. ಪೂರಕ ಆರೋಪಪಟ್ಟಿಯಲ್ಲಿ, ‘‘ನರೇಂದ್ರ ಮೋದಿಯವರು 2002ರ ಗೋಧ್ರೋತ್ತರ ಹಿಂಸಾಚಾರಕ್ಕೆ ಕಾರಣ ಎನ್ನುವ ಭಾವನೆಯನ್ನು ಆರೋಪಿಗಳು ಹೊಂದಿದ್ದಾರೆ’’ ಎಂದು ಹೇಳಲಾಗಿದೆ. ‘‘ಮೋದಿ ರ್ಯಾಲಿಯ ಭದ್ರತಾ ವ್ಯವಸ್ಥೆಯನ್ನು ವೀಕ್ಷಿಸಿದ ಬಳಿಕ, ಶಸ್ತ್ರಾಸ್ತ್ರಗಳಿಂದ ಅವರ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಇದರ ಬದಲಾಗಿ ಮೋದಿಯವರ ಚುನಾವಣಾ ರ್ಯಾಲಿಯಲ್ಲಿ ಇಐಡಿಗಳನ್ನು ಸ್ಫೋಟಿಸಲು ನಿರ್ಧರಿಸಿದರು. ಹೀಗೆ ಮಾಡುವುದರಿಂದ ದೊಡ್ಡ ಸಂಖ್ಯೆಯಲ್ಲಿ ಜನಸಾಮಾನ್ಯರನ್ನು ಕೊಲ್ಲಬಹುದು ಹಾಗೂ ಇದು ದೊಡ್ಡ ಪ್ರಮಾಣದ ಕಾಲ್ತುಳಿತಕ್ಕೂ ಕಾರಣವಾಗುತ್ತದೆ. ಈ ಗದ್ದಲದಲ್ಲಿ ಮೋದಿಯವರನ್ನು ಸುಲಭವಾಗಿ ಸನಿಹದಿಂದ ಟಾರ್ಗೆಟ್ ಮಾಡಬಹುದು ಎನ್ನುವುದು ಅವರ ಹವಣಿಕೆಯಾಗಿತ್ತು’’ ಎಂದು ಆರೋಪಪಟ್ಟಿ ವಿವರಿಸಿತ್ತು.
2017ರ ಅಕ್ಟೋಬರ್‌ನಲ್ಲಿ, ಬಾಲನ್ಯಾಯ ಮಂಡಳಿ ಒಬ್ಬ ಬಾಲಾಪರಾಧಿಗೆ ಪ್ರಕರಣದ ಸಂಬಂಧ ಮೂರು ವರ್ಷ ಸುಧಾರಣಾಗೃಹ ವಾಸದ ಶಿಕ್ಷೆ ವಿಧಿಸಿತು. ಎನ್‌ಐಎ ಕೋರ್ಟ್‌ನ ಮುಂದೆ ಈ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ.

ವಾಟ್ಸ್‌ಆ್ಯಪ್ ಬೆದರಿಕೆ (2015)
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಒಂದು ವರ್ಷದ ಸಂಭ್ರಮಾಚರಣೆ ಅಂಗವಾಗಿ 2015ರ ಮೇ ತಿಂಗಳಲ್ಲಿ ಉತ್ತರ ಪ್ರದೇಶದ ಮಥುರಾದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮೋದಿ ಮಾತನಾಡಬೇಕಿತ್ತು. ಈ ರ್ಯಾಲಿಗೆ ಒಂದು ದಿನ ಮೊದಲು, ಪ್ರಧಾನಿಯವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುವ ವಾಟ್ಸ್‌ಆ್ಯಪ್ ಸಂದೇಶ ಉತ್ತರ ಪ್ರದೇಶ ಪೊಲೀಸರಿಗೆ, ಮಾಧ್ಯಮ ಪ್ರತಿನಿಧಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಬಂತು.
ಮಾಧ್ಯಮ ವರದಿಗಳ ಪ್ರಕಾರ, ರಾಮವೀರ್ ಎಂಬಾತ ಈ ಸಂದೇಶ ಕಳುಹಿಸಿದ್ದ. ಆತನ ಸಹೋದರ ಲಕ್ಷ್ಮಣ್ ಸಿಂಗ್ ಎಂಬಾತನನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದರು. ರಾಮವೀರ್ ಈ ಹಿಂದೆಯೂ ಇಂಥದ್ದೇ ಸಂದೇಶವನ್ನು ಕಳುಹಿಸಿದ್ದಾಗಿ ಜಿಲ್ಲಾಧಿಕಾರಿ ರಾಜೇಶ್ ಕುಮಾರ್ ಹೇಳಿಕೆ ನೀಡಿದರು. ಆತನ ವಿರುದ್ಧ ಭಾರತೀಯ ದಂಡಸಂಹಿತೆಯ ಸೂಕ್ತ ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಈ ವಾಟ್ಸ್‌ಆ್ಯಪ್ ಸಂದೇಶದ ಬಗೆಗಿನ ಮಾಧ್ಯಮ ವರದಿಗಳು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿಗಳಲ್ಲೂ ಹರಿದಾಡಿತು. ಆದರೆ ರಾಮವೀರ್‌ನನ್ನು ಬಂಧಿಸಲಾಗಿದೆಯೇ ಅಥವಾ ಮೋದಿ ಹತ್ಯೆ ಬೆದರಿಕೆಗಾಗಿ ಶಿಕ್ಷಿಸಲಾಗಿದೆಯೇ ಎಂಬ ಬಗ್ಗೆ ಯಾವ ಮಾಧ್ಯಮಗಳಲ್ಲೂ ವರದಿಯಾಗಿಲ್ಲ.

ನೋಟು ಅಮಾನ್ಯ ಬಳಿಕ (2016)
2016 ನವೆಂಬರ್ 19ರಂದು ಅಂದರೆ ಮೋದಿ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರ ಪ್ರಕಟಿಸಿದ ಹತ್ತು ದಿನಗಳ ಬಳಿಕ, ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ ಬಗ್ಗೆ ದೂರವಾಣಿ ಕರೆ ಬಂದಿದೆ ಎಂದು ದಿಲ್ಲಿ ಪೊಲೀಸರು ಬಹಿರಂಗಪಡಿಸಿದರು. ಯಾರಿಗೆ ಈ ಮೊಬೈಲ್ ಸಂಖ್ಯೆ ನೀಡಲಾಗಿದೆ ಎಂದು ಪೊಲೀಸರು ಪತ್ತೆ ಮಾಡಿದಾಗ, ಈ ಸಿಮ್ ಕಾರ್ಡನ್ನು ತಮ್ಮ ಸಂಬಂಧಿಕರೊಬ್ಬರಿಗೆ ನೀಡಿದ್ದಾಗಿ ಹೇಳಿದ್ದ. ಆತನನ್ನು ವಿಚಾರಣೆಗೆ ಗುರಿಪಡಿಸಿದಾಗ, ತುರ್ತು ಕರೆ ಮಾಡಲು ಅಪರಿಚಿತ ವ್ಯಕ್ತಿಯೊಬ್ಬ ತನ್ನ ಫೋನ್ ಪಡೆದಿದ್ದಾಗಿ ಆತ ಹೇಳಿದ. ಹಲವು ಮಾಧ್ಯಮಗಳು ಈ ಹತ್ಯೆ ಸಂಚಿನ ಬಗ್ಗೆ ಸುದ್ದಿ ಮಾಡಿದವು. ಆದರೆ ಫಾಲೋ ಅಪ್ ವರದಿ ಎಲ್ಲೂ ಪ್ರಕಟವಾಗಲಿಲ್ಲ. ವಿಶೇಷ ಘಟಕ ಮತ್ತು ಅಪರಾಧ ವಿಭಾಗ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಹೇಳಿತ್ತು.

ಉತ್ತರ ಪ್ರದೇಶ ಚುನಾವಣಾ ರ್ಯಾಲಿ (2017)
2017ರ ಫೆಬ್ರವರಿಯಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಚಾರ ರ್ಯಾಲಿಯನ್ನು, ರಾಜ್ಯದ ಪೂರ್ವಭಾಗವಾದ ಮವು ಪಟ್ಟಣದಲ್ಲಿ ಆಯೋಜಿಸಲಾಗಿತ್ತು. ಮೋದಿಯವರ ಮೇಲೆ ಪ್ರಾಣಾಪಾಯದ ದಾಳಿಯ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ ಎಂದು ಆ ಪ್ರದೇಶದ ಹೆಚ್ಚುವರಿ ಎಸ್ಪಿ ಆರ್.ಕೆ.ಸಿಂಗ್ ಹೇಳಿಕೆ ನೀಡಿದರು. ಮಾಧ್ಯಮ ವರದಿಗಳ ಪ್ರಕಾರ, ಹರೇನ್ ಪಾಂಡ್ಯ ಹತ್ಯೆ ಪ್ರಕರಣ ಆರೋಪಿಗಳಲ್ಲೊಬ್ಬನಾದ ರಸೂಲ್ ಪಾಟಿ ಎಂಬಾತ ಈ ಜೀವಬೆದರಿಕೆ ಒಡ್ಡಿದ್ದಾನೆ ಎಂದು ಸಿಂಗ್ ಹೇಳಿದ್ದರು. ‘‘ರಾಕೆಟ್ ಲಾಂಚರ್ ಮತ್ತು ಸ್ಫೋಟಕಗಳ ಮೂಲಕ ಮೋದಿಯವರ ವೇದಿಕೆಯ ಮೇಲೆ ದಾಳಿ ಮಾಡಲು ಯೋಜಿಸಿರುವುದು ತಿಳಿದುಬಂದಿದೆ’’ ಎಂದು ಸಿಂಗ್ ವಿವರಿಸಿದ್ದರು. ಆದರೆ ರ್ಯಾಲಿಯಲ್ಲಿ ಅಂಥ ಯಾವ ದಾಳಿಯೂ ನಡೆಯಲಿಲ್ಲ. ‘ಇಂಡಿಯಾ ಟುಡೇ’ ವರದಿಯ ಪ್ರಕಾರ, ಮವು ಪೊಲೀಸರಿಗೆ ಹುಸಿ ಕರೆ ಮಾಡಿದ್ದಕ್ಕಾಗಿ ದಿಲ್ಲಿ ಪೊಲೀಸರು ದಿಲ್ಲಿ ವಿವಿ ವಿದ್ಯಾರ್ಥಿಯೊಬ್ಬನನ್ನು ಫೆಬ್ರವರಿ 27ರಂದು ಬಂಧಿಸಿದರು.

ಐಸಿಸ್ ಹತ್ಯೆ ಸಂಚು (2018)
ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುವ ಎರಡು ದಿನಗಳ ಮುನ್ನ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಇಸ್ಲಾಮಿಕ್ ಉಗ್ರವಾದಿಗಳು ಸಂಚು ರೂಪಿಸಿದ್ದಾರೆ ಎಂದು ‘ಟೈಮ್ಸ್ ನೌ’ ವರದಿ ಮಾಡಿತು. ಮರುದಿನ ‘ಝೀ ನ್ಯೂಸ್’ ಇಂಥದ್ದೇ ವರದಿ ಪ್ರಕಟಿಸಿತು. ಗುಜರಾತ್‌ನ ಅಂಕಲೇಶ್ವರ ನಗರದ ನ್ಯಾಯಾಲಯದಲ್ಲಿ ಗುಜರಾತ್‌ನ ಭಯೋತ್ಪಾದಕ ತಡೆ ವಿಭಾಗದ ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯನ್ನು ಎರಡೂ ವರದಿಗಳು ಉಲ್ಲೇಖಿಸಿದ್ದವು. ‘ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ’ ಸಂಘಟನೆಯ ಕಾರ್ಯಕರ್ತರು ಪ್ರಧಾನಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿತ್ತು. ‘‘ಸ್ನಿಪ್ಪರ್ ರೈಫಲ್‌ನಿಂದ ಮೋದಿಯವರನ್ನು ಮುಗಿಸಿ ಬಿಡೋಣ’’ ಎಂಬ ವಾಟ್ಸ್‌ಆ್ಯಪ್ ಸಂದೇಶವನ್ನು ಎರಡೂ ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು. ಈ ‘ಶಂಕಿತ ಇಸ್ಲಾಮಿಸ್ಟ್’ ಅಪಾಯದಿಂದ ಮೋದಿ ಪಾರಾದರು. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಚುನಾವಣೋತ್ತರ ಮೈತ್ರಿಯಿಂದಾಗಿ ಬಿಜೆಪಿ ರಾಜ್ಯದ ಚುಕ್ಕಾಣಿ ಹಿಡಿಯುವುದು ಸಾಧ್ಯವಾಗಲಿಲ್ಲ.

ಭೀಮಾ ಕೋರೆಗಾಂವ್ ಬಂಧನ (2018ರ ಜೂನ್)
2018ರ ಜನವರಿಯಲ್ಲಿ ನಡೆದ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜೂನ್ ತಿಂಗಳಲ್ಲಿ ಪುಣೆ ಪೊಲೀಸರು ಐವರನ್ನು ಬಂಧಿಸಿದರು. ಈ ಪೈಕಿ ಒಬ್ಬರಾದ ರೋನಾ ವಿಲ್ಸನ್ ಎಂಬವರ ಮನೆಯಿಂದ ಒಂದು ಪತ್ರವನ್ನು ವಶಪಡಿಸಿಕೊಂಡರು. ‘‘ನಾವು ರಾಜೀವ್‌ಗಾಂಧಿ ಹತ್ಯೆ ಮಾದರಿಯ ಘಟನೆಯ ಬಗ್ಗೆ ಯೋಚಿಸುತ್ತಿದ್ದೇವೆ’’ ಎಂದು ಪತ್ರದಲ್ಲಿ ಹೇಳಲಾಗಿತ್ತು ಎನ್ನುವುದು ಪೊಲೀಸರ ಹೇಳಿಕೆ. ಆದರೆ ಈ ಪತ್ರದ ಹಲವು ಆಯಾಮಗಳ ಬಗ್ಗೆ, ಇದರ ಅಧಿಕೃತತೆ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಪತ್ರ ರೆಡ್ ಸೆಲ್ಯೂಟ್ ಅಥವಾ ಲಾಲ್ ಸಲಾಮ್ ಎಂದು ಆರಂಭವಾಗುತ್ತದೆ ಎಂಬ ಅಂಶವೂ ಒಂದು.
ಈ ಬಂಧನದ ಹಿನ್ನೆಲೆಯಲ್ಲಿ ನ್ಯೂಸ್‌ಲಾಂಡ್ರಿಯಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ, ಈ ಪತ್ರವನ್ನು ಕಳೆದ ವರ್ಷದ ಎಪ್ರಿಲ್‌ನಲ್ಲಿ ವಿಲ್ಸನ್ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಕುತೂಹಲದ ವಿಚಾರವೆಂದರೆ, ಈ ಪತ್ರವನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವ ಮುನ್ನ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿತ್ತು. ಆದರೆ ಇನ್ನೂ ಒಗಟಿನ ಅಂಶವೆಂದರೆ, ಬಂಧಿತರನ್ನು ಕಸ್ಟಡಿಗೆ ಒಪ್ಪಿಸುವಂತೆ ಪೊಲೀಸರು ಮಾಡಿದ ಮನವಿಯಲ್ಲಿ ಕೂಡಾ ಹತ್ಯೆಯ ಸಂಚಿನ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ಮಾವೋವಾದಿ ಚಟುವಟಿಕೆಗಳ ಬಗ್ಗೆ ಅರಿವು ಇರುವ ಭದ್ರತಾ ಏಜೆನ್ಸಿಗಳ ಪ್ರಕಾರ, ಕಾರ್ಯಾಚರಣೆ ವಿವರವಲ್ಲ; ಪತ್ರದಲ್ಲಿ ತಮ್ಮ ಹೆಸರನ್ನೂ ಉಲ್ಲೇಖಿಸುವುದಿಲ್ಲ. ಆದರೆ ಈ ಪತ್ರದಲ್ಲಿ ಮುಂಚಿತವಾಗಿಯೇ ಮುಂದೆ ಬಂಧಿತರಾಗುವವರ ಅರುಣ್, ವೆರ್ನನ್ ಮತ್ತು ಇತರರ ಹೆಸರನ್ನೂ ಉಲ್ಲೇಖಿಸಲಾಗಿದೆ. ಅರುಣ್ ಫೆರೇರಾ, ವೆರ್ನನ್ ಗೊನ್ಸಾಲ್ವಿಸ್ ಮತ್ತು ಇತರ ಮೂವರನ್ನು ಆಗಸ್ಟ್‌ನಲ್ಲಿ ಬಂಧಿಸಲಾಗಿದೆ.
ಆದರೆ ಈ ಶಂಕಿತರು ಮೋದಿ ಹತ್ಯೆಗೆ ಏಕೆ ಸಂಚು ರೂಪಿಸುವ ಪ್ರಯತ್ನ ಮಾಡಿದರು ಎನ್ನುವುದೇ ನಿಗೂಢ. ಈ ಹಿಂದೆ ಬೆಳಕಿಗೆ ಬಂದಿದ್ದ ಮೋದಿ ಹತ್ಯೆಯ ಸಂಚಿನ ಪ್ರಕರಣಗಳು ಹುಸಿ ಕರೆಗಳು, ಮಾಧ್ಯಮಗಳಿಗೆ ಸಂದೇಶಗಳು ಹಾಗೂ ಪೊಲೀಸರು ಹೆಣೆದ ಕಥೆಗಳಾಗಿರುವುದರಿಂದ ಇದು ಕೂಡಾ ಅಚ್ಚರಿಯಲ್ಲ.
ಕೃಪೆ: caravanmagazine.in

Writer - ತುಷಾರ್ ಧಾರಾ

contributor

Editor - ತುಷಾರ್ ಧಾರಾ

contributor

Similar News

ಜಗದಗಲ
ಜಗ ದಗಲ