ಮಲಗಿದ ಎರಡೇ ನಿಮಿಷಗಳಲ್ಲಿ ಗಾಢನಿದ್ರೆಗೆ ಜಾರಬೇಕೇ? ಹಾಗಿದ್ದರೆ ಈ ಮಿಲಿಟರಿ ತಂತ್ರ ಬಳಸಿ

Update: 2018-09-07 14:10 GMT

ನಿದ್ರೆಯಿಲ್ಲದೆ ಹಾಸಿಗೆಯಲ್ಲಿ ಹೊರಳಾಡುತ್ತ ರಾತ್ರಿಯನ್ನು ಕಳೆಯುವುದರ ಕಷ್ಟ ಅದನ್ನು ಅನುಭವಿಸಿದವರಿಗೇ ಗೊತ್ತು. ಸುಲಭವಾಗಿ ನಿದ್ರೆಗೆ ಜಾರುವಂತೆ ಮಾಡುವ ಅಮೆರಿಕದ ಈ ಮಿಲಿಟರಿ ತಂತ್ರ ಇಂತಹವರಿಗೆ ವರದಾನವಾಗಬಹುದು.

ಯುದ್ಧರಂಗದಂತಹ ಅಶಾಂತ ವಾತಾವರಣದಲ್ಲಿಯೂ ತನ್ನ ಯೋಧರು ಸುಖನಿದ್ರೆಯನ್ನು ಮಾಡಲು ನೆರವಾಗಲು ಅಮೆರಿಕದ ಸೇನೆಯು ಬಳಸುತ್ತಿದ್ದ ಹಳೆಯ ನಿದ್ರಾತಂತ್ರವನ್ನು ಪತ್ತೆ ಹಚ್ಚಲಾಗಿದ್ದು,ಆನ್‌ಲೈನ್‌ನಲ್ಲಿ ಪ್ರಕಟಗೊಂಡಿದೆ.

1981ರಲ್ಲಿ ಮೊದಲ ಬಾರಿ ಪ್ರಕಟಗೊಂಡಿದ್ದ ‘ರಿಲ್ಯಾಕ್ಸ್ ಆ್ಯಂಡ್ ವಿನ್:ಚಾಂಪಿಯನ್‌ಷಿಪ್ ಪರ್ಫಾರ್ಮನ್ಸ್’ ಪುಸ್ತಕದಲ್ಲಿ ಈ ರಹಸ್ಯವನ್ನು ವಿವರಿಸಲಾಗಿತ್ತು. ಆದರೆ ಇತ್ತೀಚಿಗೆ ಜೋ ಡಾಟ್ ಕೋ ಡಾಟ್ ಯುಕೆ ಮರುಪ್ರಕಟಿಸಿದ ಬಳಿಕ ಆನ್‌ಲೈನ್‌ನಲ್ಲಿ ಹೆಚ್ಚಿನವರನ್ನು ಸೆಳೆಯುತ್ತಿದೆ.

ಅದು ಹಗಲು ಅಥವಾ ರಾತ್ರಿಯಾಗಿರಲಿ,ಎರಡೇ ನಿಮಿಷಗಳಲ್ಲಿ ಗಾಢನಿದ್ರೆಗೊಳಗಾಗಲು ವೈಜ್ಞಾನಿಕ ಪದ್ಧತಿಯೊಂದನ್ನು ಅಮೆರಿಕದ ನೇವಿ ಪ್ರಿ-ಫ್ಲೈಟ್ ಸ್ಕೂಲ್ ಅಭಿವೃದ್ಧಿಗೊಳಿಸಿತ್ತು. ಆರು ವಾರಗಳ ಅಭ್ಯಾಸದ ಬಳಿಕ ಶೇ.96ರಷ್ಟು ಪೈಲಟ್‌ಗಳು ಎರಡು ನಿಮಿಷ ಅಥವಾ ಅದಕ್ಕೂ ಕಡಿಮೆ ಅವಧಿಯಲ್ಲಿ ನಿದ್ರೆಗೊಳಗಾಗುತ್ತಿದ್ದರು. ನಿದ್ರೆ ಮಾಡುವ ಮುನ್ನ ಕಾಫಿ ಸೇವಿಸಿದ್ದರೂ, ಮಷಿನ್‌ಗನ್‌ಗಳ ಗುಂಡುಗಳು ಸದ್ದು ಮಾಡುತ್ತಿದ್ದರೂ ನಿದ್ರೆಗೆ ಜಾರಿ ಇಹಲೋಕದ ಪರಿವೆಯಲ್ಲಿಯೇ ಇರುತ್ತಿರಲಿಲ್ಲ ಎಂದು ಪುಸ್ತಕವು ವಿವರಿಸಿದೆ.

ಅನುಸರಿಸಬೇಕಾದ ಕ್ರಮಗಳು

ಎರಡೇ ನಿಮಿಷಗಳಲ್ಲಿ ಗಾಢನಿದ್ರೆಗೆ ಜಾರಲು ಅನುಸರಿಸಬೇಕಾದ ಕ್ರಮಗಳನ್ನು ಪುಸ್ತಕದಲ್ಲಿ ಸೂಚಿಸಲಾಗಿದೆ.

ಅದರಂತೆ ಅಂಗಾತ ಮಲಗಿ ನಾಲಿಗೆ,ದವಡೆ ಮತ್ತು ಕಣ್ಣುಗಳ ಸುತ್ತಲಿನ ಸ್ನಾಯುಗಳು ಸೇರಿದಂತೆ ನಿಮ್ಮ ಮುಖದಲ್ಲಿಯ ಮಾಂಸಖಂಡಗಳನ್ನು ಸಡಿಲಿಸಿ,ಅವು ನಿರಾಳ ಸ್ಥಿತಿಯಲ್ಲಿರಲಿ.

ನಿಮ್ಮ ಭುಜಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕೆಳಗೆ ಜೋಲು ಬಿಡಿ,ನಂತರ ಒಂದು ಬಾರಿಗೆ ಒಂದು ಬದಿಯಂತೆ ನಿಮ್ಮ ಮೇಲಿನ ಮತ್ತು ಕೆಳಗಿನ ತೋಳುಗಳನ್ನು ವಿಶ್ರಾಂತ ಸ್ಥಿತಿಯಲ್ಲಿರಿಸಿ. ಉಸಿರನ್ನು ಹೊರಗೆ ಬಿಡುತ್ತ ಎದೆ,ತೊಡೆಗಳು ಮತ್ತು ಕಾಲುಗಳನ್ನು ಸಡಿಲವಾಗಿಸಿ.

 ಈಗ 10 ಸೆಕೆಂಡ್‌ಗಳಷ್ಟು ಕಾಲ ನಿಮ್ಮ ಮನಸ್ಸು ಯಾವುದೇ ಯೋಚನೆಯಲ್ಲಿರದಂತೆ ನೋಡಿಕೊಳ್ಳಿ.ನಂತರ ಶಾಂತವಾದ ಸರೋವರದಲ್ಲಿ ತೇಲುತ್ತಿರುವ ದೋಣಿಯಲ್ಲಿ ನೀವು ಮಲಗಿದ್ದೀರಿ ಮತ್ತು ನಿಮ್ಮ ಮೇಲೆ ನೀಲಿ ಆಗಸ ಬಿಟ್ಟರೆ ಇನ್ನೇನಿಲ್ಲ ಎಂದು ಅಥವಾ ಗಾಢಕತ್ತಲು ತುಂಬಿರುವ ಕೋಣೆಯಲ್ಲಿ ಕಪ್ಪು ಮೃದುವಾದ ವೆಲ್ವೆಟ್ ಮೆತ್ತೆಯಲ್ಲಿ ಬಿದ್ದುಕೊಂಡಿದ್ದೀರಿ ಎಂದು ಭಾವಿಸಿ ಅದರತ್ತಲೇ ಮನಸ್ಸನ್ನು ಕೇಂದ್ರೀಕರಿಸಿ.ಸುಮಾರು 10 ಸೆಕೆಂಡ್‌ಗಳ ಕಾಲ ನಿಮ್ಮಷ್ಟಕ್ಕೆ ‘ಯೋಚನೆ ಬೇಡ’ಎಂದು ಹೇಳಿಕೊಳ್ಳುತ್ತಿದ್ದರೆ ನಿದ್ರಾದೇವಿ ನಿಮ್ಮನ್ನು ಆಲಂಗಿಸಿಕೊಳ್ಳುತ್ತಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News