ಬ್ರಿಟಿಶ್ ಏರ್‌ವೇಸ್‌ನ 3.80 ಲಕ್ಷ ಗ್ರಾಹಕರ ಹಣಕಾಸು ಮಾಹಿತಿ ಕಳವು

Update: 2018-09-07 16:22 GMT

ಲಂಡನ್, ಸೆ. 7: ಇತ್ತೀಚಿನ ವಾರಗಳಲ್ಲಿ ಆನ್‌ಲೈನ್ ಬುಕಿಂಗ್‌ಗಳನ್ನು ಮಾಡಿರುವ ಬ್ರಿಟಿಶ್ ಏರ್‌ವೇಸ್‌ನ ಲಕ್ಷಾಂತರ ಗ್ರಾಹಕರ ಹಣಕಾಸು ಮಾಹಿತಿಗಳನ್ನು ಕಳವುಗೈಯಲಾಗಿದೆ.

ಆಗಸ್ಟ್ 21 ಮತ್ತು ಸೆಪ್ಟಂಬರ್ 5ರ ನಡುವಿನ ಅವಧಿಯಲ್ಲಿ ವಿಮಾನಯಾನ ಕಂಪೆನಿಯ ವೆಬ್‌ಸೈಟ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸಿದ ಗ್ರಾಹಕರು ಈ ಆನ್‌ಲೈನ್ ಕಳ್ಳತನಕ್ಕೆ ಬಲಿಯಾಗಿದ್ದಾರೆ ಎಂದು ಬ್ರಿಟಿಶ್ ಏರ್‌ವೇಸ್‌ನ ಮಾತೃ ಕಂಪೆನಿ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಗ್ರೂಪ್ ಗುರುವಾರ ತಿಳಿಸಿದೆ.

ಸುಮಾರು 3.80 ಲಕ್ಷ ಕಾರ್ಡ್‌ಗಳ ಮೂಲಕ ಮಾಡಲಾದ ಪಾವತಿಗಳ ವೇಳೆ ಕಾರ್ಡ್‌ಗಳ ಮಾಹಿತಿಗಳನ್ನು ಕದಿಯಲಾಗಿದೆ ಎಂದಿದೆ.

ಸಮಸ್ಯೆಯನ್ನು ಪರಿಹರಿಸಲಾಗಿದೆ ಹಾಗೂ ವೆಬ್‌ಸೈಟ್ ಈಗ ಸಾಮಾನ್ಯ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಗ್ರೂಪ್ ಹೇಳಿದೆ. ಯಾವುದೇ ಪ್ರಯಾಣ ಅಥವಾ ಪಾಸ್‌ಪೋರ್ಟ್ ಮಾಹಿತಿಗಳನ್ನು ಕದಿಯಲಾಗಿಲ್ಲ ಎಂಬುದಾಗಿಯೂ ಅದು ಹೇಳಿದೆ.

ತಕ್ಷಣ ಗ್ರಾಹಕರಿಗೆ ಮಾಹಿತಿ ನೀಡಿದ್ದೇವೆ: ಏರ್‌ಲೈನ್ಸ್

‘‘ಗ್ರಾಹಕರಿಗೆ ಸಂಬಂಧಿಸಿದ ಮಾಹಿತಿಗಳು ಅಪಾಯಕ್ಕೊಳಪಟ್ಟಿವೆ ಎನ್ನುವುದು ನಮಗೆ ತಿಳಿದುಬಂದಾಕ್ಷಣ, ನಮ್ಮ ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಅದು ನಮ್ಮ ಆದ್ಯತೆಯಾಗಿತ್ತು’’ ಎಂದು ಬ್ರಿಟಿಶ್ ಏರ್‌ವೇಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷ ಅಲೆಕ್ಸ್ ಕ್ರೂಝ್ ‘ಬಿಬಿಸಿ ರೇಡಿಯೋ’ಗೆ ಹೇಳಿದ್ದಾರೆ.

ಆರ್ಥಿಕ ನಷ್ಟ ಅನುಭವಿಸುವ ಯಾವುದೇ ಗ್ರಾಹಕರಿಗೆ ಏರ್‌ಲೈನ್ ಪರಿಹಾರ ನೀಡುವುದು ಎನ್ನುವ ಭರವಸೆಯನ್ನು ಅವರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News