ಅಲ್ಪಸಂಖ್ಯಾತರನ್ನು ಸಮಾನತೆ, ಘನಡೆಯಿಂದ ನಡೆಸಿಕೊಳ್ಳಿ: ನೂತನ ಪಾಕ್ ಸರಕಾರಕ್ಕೆ ಅಮೆರಿಕ ಸಂಸದರ ಒತ್ತಾಯ

Update: 2018-09-07 16:40 GMT

ವಾಶಿಂಗ್ಟನ್, ಸೆ. 7: ತನ್ನ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಸಮಾನತೆ ಮತ್ತು ಘನತೆಯಿಂದ ನಡೆಸಿಕೊಳ್ಳುವಂತೆ ಅಮೆರಿಕದ ಹಲವು ಸಂಸದರು ಪಾಕಿಸ್ತಾನದ ನೂತನ ಸರಕಾರವನ್ನು ಒತ್ತಾಯಿಸಿದ್ದಾರೆ.

ಸೌತ್ ಏಶ್ಯ ಮೈನಾರಿಟೀಸ್ ಅಲಯನ್ಸ್ ಫೌಂಡೇಶನ್ (ಎಸ್‌ಎಎಂಎಎಫ್) ಮತ್ತು ವಾಯ್ಸ್ ಆಫ್ ಕರಾಚಿ (ವಿಒಕೆ) ಬುಧವಾರ ಇಲ್ಲಿ ಏರ್ಪಡಿಸಿದ ‘ದ ಮೈನಾರಿಟೀಸ್ ಡೇ ಆನ್ ದ ಹಿಲ್’ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದರು, ಕರಾಚಿ, ಬಲೂಚಿಸ್ತಾನ ಮತ್ತು ಖೈಬರ್ ಪಖ್ತೂನ್‌ಖ್ವ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಮಾನವಹಕ್ಕು ಉಲ್ಲಂಘನೆಗಳನ್ನು ನಿಲ್ಲಿಸುವಂತೆ ಇಮ್ರಾನ್ ಖಾನ್ ಸರಕಾರವನ್ನು ಒತ್ತಾಯಿಸಿದರು.

ಕಾರ್ಯಕ್ರಮದ ಆತಿಥೇಯನ ನೆಲೆಯಲ್ಲಿ ಮಾತನಾಡಿದ ಅಮೆರಿಕ ಸಂಸದ ಥಾಮಸ್ ಗ್ಯಾರೆಟ್ ಜೂನಿಯರ್, ಅಲ್ಪಸಂಖ್ಯಾತರನ್ನು ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳುವಂತೆ ಜಗತ್ತಿನ ಎಲ್ಲ ದೇಶಗಳಿಗೆ ಮನವಿ ಮಾಡಿದರು.

‘‘ನಾವು ಅಮೆರಿಕನ್ನರು ಎಲ್ಲ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಎಲ್ಲ ಅಲ್ಪಸಂಖ್ಯಾತರನ್ನು ಸಮಾನವಾಗಿ ಕಾಣುತ್ತೇವೆ. ನಮ್ಮ ಮಿತ್ರರೂ ಹೀಗೆಯೇ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ. ನಾವೆಲ್ಲರೂ ಜೊತೆಯಾಗಿ ಬದುಕಿ, ನಮ್ಮ ಧರ್ಮಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಅನುಸರಿಸಬಹುದಾಗಿದೆ. ಅಮೆರಿಕದಲ್ಲಿ ಈಗ ಈ ರೀತಿ ಇದೆ. ಆದರೆ, ಅದು ಎಲ್ಲೆಡೆಯೂ ಇರಬೇಕಾಗಿದೆ’’ ಎಂದು ಇನ್ನೋರ್ವ ಸಂಸದ ಸ್ಕಾಟ್ ಪೆರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News