ಹೃದಯ್ ಹಝಾರಿಕಾ, ಮಹಿಳಾ ತಂಡಕ್ಕೆ ಚಿನ್ನದ ಪದಕ

Update: 2018-09-07 18:34 GMT

ಚಾಂಗ್ವಾನ್(ದ.ಕೊರಿಯಾ), ಸೆ.7: ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಜೂನಿಯರ್ ಶೂಟರ್‌ಗಳ ‘ಗೋಲ್ಡನ್ ರನ್’ ಮುಂದುವರಿದಿದೆ. ಹೃದಯ್ ಹಝಾರಿಕಾ ಪುರುಷರ 10 ಮೀ. ಏರ್ ರೈಫಲ್‌ನಲ್ಲಿ ಮೊದಲ ಸ್ಥಾನ ಪಡೆದರು. ಮಹಿಳೆಯರ ಶೂಟಿಂಗ್ ತಂಡ ನೂತನ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಬಾಚಿಕೊಂಡಿದೆ.

ಇಲವೆನಿಲ್ ವಲಾರಿವನ್(631), ಶ್ರೇಯಾಅಗರ್ವಾಲ್(628.5) ಹಾಗೂ ಮಾನಿನಿ ಕೌಶಿಕ್(621.2)ಉತ್ತಮ ಪ್ರದರ್ಶನ ನೀಡಿ ಒಟ್ಟು 1888.7 ಅಂಕ ಗಳಿಸಿ ವಿಶ್ವ ದಾಖಲೆಯೊಂದಿಗೆ ಚಿನ್ನ ಜಯಿಸಿದ್ದಾರೆ.

ಜೂನಿಯರ್ ವಿಶ್ವಕಪ್ ಚಾಂಪಿಯನ್ ಇಲವೆನಿಲ್ ಗಳಿಸಿದ ಒಟ್ಟು ಸ್ಕೋರ್ ಕೂಡ ನೂತನ ಜೂನಿಯರ್ ವಿಶ್ವ ದಾಖಲೆಯಾಗಿದೆ.

ಹಝಾರಿಕಾ, ದಿವ್ಯಾಂಶ್ ಪನ್ವಾರ್ ಹಾಗೂ ಅರ್ಜುನ್ ಬಬುಟಾ ಅವರನ್ನೊಳಗೊಂಡ ಪುರುಷರ ಶೂಟಿಂಗ್ ತಂಡ ಒಟ್ಟು 1,872.3 ಅಂಕ ಗಳಿಸಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಪುರುಷರ 50 ಮೀ. ರೈಫಲ್ ತ್ರಿ ಪೊಸಿಶನ್ ಸ್ಪರ್ಧೆಯಲ್ಲಿ ಹಿರಿಯ ಶೂಟರ್‌ಗಳು ನಿರಾಶಾದಾಯಕ ಪ್ರದರ್ಶನ ನೀಡಿದ್ದು, ಯಾವೊಬ್ಬ ಭಾರತೀಯನು ಫೈನಲ್‌ಗೆ ತಲುಪಲು ಶಕ್ತನಾಗಿಲ್ಲ. ಇತ್ತೀಚೆಗೆ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಸಂಜೀವ್ ರಾಜ್‌ಪೂತ್ 1,158 ಅಂಕ ಗಳಿಸಿ 58ನೇ ಸ್ಥಾನ ಪಡೆದರು. ಸ್ವಪ್ನಿಲ್ ಕುಸಾಲೆ(1,161)55ನೇ ಹಾಗೂ ಅಖಿಲ್ ಶೆರೊನ್(1,167)44ನೇ ಸ್ಥಾನ ಪಡೆದಿದ್ದಾರೆ.

ಸ್ವಪ್ನಿಲ್, ಅಖಿಲ್, ಸಂಜೀವ್ ಅವರನ್ನೊ ಳಗೊಂಡ ಭಾರತ ತಂಡ ಒಟ್ಟು 3,503 ಅಂಕ ಗಳಿಸಿ 11ನೇ ಸ್ಥಾನ ಪಡೆದಿದೆ.

ಚಿನ್ನ ಗೆದ್ದ ಹೃದಯ್ ಹಝಾರಿಕಾ

ಭಾರತದ 16ರ ಹರೆಯದ ಶೂಟರ್ ಹೃದಯ್ ಹಝಾರಿಕಾ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವರ್ಲ್ಡ್‌ಚಾಂಪಿಯನ್‌ಶಿಪ್‌ನಲ್ಲಿ ಶುಕ್ರವಾರ ಚಿನ್ನ ಜಯಿಸಿದ್ದಾರೆ.

 ಜೂನಿಯರ್ ವಿಭಾಗದ ಬಾಲಕರ 10 ಮೀಟರ್ ಏರ್ ರೈಫಲ್ ಇವೆಂಟ್‌ನಲ್ಲಿ ಹಝಾರಿಕಾ ಮತ್ತು ಇರಾನ್‌ನ ಆಮಿರ್ ನಿಯೋಕೌನಮ್ ಅವರು 250.1 ಪಾಯಿಂಟ್ಸ್ ಗಳನ್ನು ಕಲೆ ಹಾಕಿ ಸಮಬಲ ಸಾಧಿಸಿದರು. ಆದರೆ ಪ್ರಥಮ ಗುರಿಯಲ್ಲಿ ಹಝಾರಿಕಾ ಅವರು ಆಮಿರ್‌ಗಿಂತ 0.1 ಪಾಯಿಂಟ್ ಮುನ್ನಡೆ ಸಾಧಿಸಿದ್ದರು. ಈ ಕಾರಣದಿಂದಾಗಿ ಹಝಾರಿಕಾಗೆ ಚಿನ್ನ ಒಲಿಯಿತು.

ಫೈನಲ್‌ನಲ್ಲಿ 250.1 ಪಾಯಿಂಟ್ಸ್‌ಗಳನ್ನು ಕಲೆ ಹಾಕಿದ್ದ ಹಝರಿಕಾ ಮತ್ತು ಆಮಿರ್ 0.1 ಅಂತರದಲ್ಲಿ ವಿಶ್ವ ದಾಖಲೆ ನಿರ್ಮಿಸುವ ಅವಕಾಶವನ್ನು ಕೈ ಚೆಲ್ಲಿದರು. ಆರಂಭದಲ್ಲಿ ಹಝಾರಿಕಾ 627.3 ಸ್ಕೋರ್ ಸಂಪಾದಿಸಿ 4ನೇ ಸ್ಥಾನದೊಂದಿಗೆ ಫೈನಲ್‌ಗೆ ಪ್ರವೇಶ ಪಡೆದಿದ್ದರು. ಇವರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ರಶ್ಯದ ಗ್ರಿಗೋರಿ ಶಮಾಕೋವ್ 228.6 ಪಾಯಿಂಟ್ಸ್ ಗಳಿಸಿ ಕಂಚು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News