ಮೂತ್ರಪಿಂಡ ಸೋಂಕಿನ ಈ ಲಕ್ಷಣಗಳನ್ನು ನೀವು ಖಂಡಿತ ಕಡೆಗಣಿಸಕೂಡದು

Update: 2018-09-08 10:50 GMT

ಪ್ರತಿನಿತ್ಯ ನಾವು ಸೇವಿಸುವ ಆಹಾರ ಮತ್ತು ಪಾನೀಯಗಳು ಶರೀರದ ವಿವಿಧ ಆಂಗಾಂಗಗಳ ಸಮರ್ಪಕ ಕಾರ್ಯನಿರ್ವಹಣೆಗೆ ಮತ್ತು ನಾವು ಚಟುವಟಿಕೆಯಿಂದಿರಲು ಅಗತ್ಯವಾದ ಹೆಚ್ಚಿನ ಶಕ್ತಿಯ ಉತ್ಪಾದನೆಗಾಗಿ ಬಳಕೆಯಾಗುತ್ತದೆ. ಈ ಆಹಾರಗಳ ಪೈಕಿ ಕೆಲವು ಹಾಗೆಯೇ ಉಳಿದುಕೊಳ್ಳುತ್ತವೆ ಮತ್ತು ಇವು ಶರೀರದಲ್ಲಿಯ ಇತರ ಕಲ್ಮಶಗಳೊಂದಿಗೆ ವಿಸರ್ಜನೆ ವ್ಯವಸ್ಥೆಯ ಮೂಲಕ ಹೊರಕ್ಕೆ ಹಾಕಲ್ಪಡುತ್ತವೆ. ಹೆಚ್ಚುವರಿ ಕಲ್ಮಶಗಳು ಮತ್ತು ವಿಷವಸ್ತುಗಳನ್ನು ಶೋಧಿಸಿ ಮೂತ್ರದ ರೂಪದಲ್ಲಿ ಶರೀರದಿಂದ ಹೊರಕ್ಕೆ ಹಾಕುವಲ್ಲಿ ನಮ್ಮ ಮೂತ್ರಪಿಂಡಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಮೂತ್ರಪಿಂಡಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದಿದ್ದಾಗ ಕಲ್ಮಶಗಳು ಮತ್ತು ವಿಷವಸ್ತುಗಳು ಸೂಕ್ತವಾಗಿ ವಿಲೇವಾರಿಯಾಗದೇ ಶರೀರದಲ್ಲಿಯೇ ಉಳಿದುಕೊಳ್ಳುತ್ತವೆ ಮತ್ತು ಹಲವಾರು ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ.

 ಹೆಚ್ಚಿನ ಸಂದರ್ಭಗಳಲ್ಲಿ ಮೂತ್ರನಾಳದ ಮೂಲಕ ಮೂತ್ರಪಿಂಡಗಳಿಗೆ ಲಗ್ಗೆಯಿಡುವ ಬ್ಯಾಕ್ಟೀರಿಯಾಗಳು ಸೋಂಕನ್ನುಂಟು ಮಾಡುತ್ತವೆ ಮತ್ತು ಇದರ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸದಿರಬಹುದು. ಮೂತ್ರಪಿಂಡಗಳ ಸೋಂಕಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಮೂತ್ರಪಿಂಡ ಕಲ್ಲುಗಳು ಸೃಷ್ಟಿಯಾಗುತ್ತವೆ ಮತ್ತು ಮೂತ್ರಪಿಂಡಗಳ ವೈಫಲ್ಯವೂ ಉಂಟಾಗಬಹುದು. ಮೂತ್ರಪಿಂಡಗಳ ಸೋಂಕನ್ನು ಸೂಚಿಸುವ,ನಾವು ಎಂದಿಗೂ ಕಡೆಗಣಿಸಬಾರದ ಕೆಲವು ಪ್ರಮುಖ ಲಕ್ಷಣಗಳ ಕುರಿತು ಮಾಹಿತಿಗಳಿಲ್ಲಿವೆ......

►ಪದೇ ಪದೇ ಮೂತ್ರವಿಸರ್ಜನೆಯ ಅವಸರ

 ನೀವು ದಿನನಿತ್ಯ ಸೇವಿಸುವ ನೀರು ಅಥವಾ ಇತರ ಪಾನೀಯಗಳ ಪ್ರಮಾಣದಲ್ಲಿ ಯಾವುದೇ ಹೆಚ್ಚಳವಾಗಿರದಿದ್ದರೂ,ನೀವು ಮಧುಮೇಹಿಯಾಗಿರದಿದ್ದರೂ, ಮಹಿಳೆಯರಾಗಿದ್ದರೆ ಗರ್ಭಿಣಿಯಲ್ಲದಿದ್ದರೂ ಆಗಾಗ್ಗೆ ಮೂತ್ರ ವಿಸರ್ಜಿಸಬೇಕೆಂಬ ತುಡಿತವುಂಟಾಗುತ್ತಿದ್ದರೆ, ಅದು ಮೂತ್ರಪಿಂಡ ಸೋಂಕಿನ ಲಕ್ಷಣವಾಗಿರಬಹುದು. ಮೂತ್ರಪಿಂಡಗಳ ಅಂಗಾಂಶಗಳು ಬ್ಯಾಕ್ಟೀರಿಯಾ ಸೋಂಕಿಗೊಳಗಾಗಿದ್ದರೆ ಅವು ಉರಿಯೂತಕ್ಕೆ ಗುರಿಯಾಗುತ್ತವೆ ಮತ್ತು ಮೂತ್ರಕೋಶವನ್ನು ಹೆಚ್ಚು ಪ್ರಚೋದಿಸಿ ಆಗಾಗ್ಗೆ ಮೂತ್ರ ವಿಸರ್ಜಿಸಬೇಕೆಂಬ ತುಡಿತವನ್ನುಂಟು ಮಾಡುತ್ತವೆ.

►ಕೆಟ್ಟವಾಸನೆಯಿಂದ ಕೂಡಿದ ಮೂತ್ರ

ಮೂತ್ರವು ಸಾಮಾನ್ಯಕ್ಕಿಂತ ಭಿನ್ನವಾದ ಕೆಟ್ಟ ವಾಸನೆಯಿಂದ ಕೂಡಿದ್ದರೆ ಅದು ಮೂತ್ರಪಿಂಡ ಸೋಂಕಿನ ಸಾಧ್ಯತೆಯನ್ನು ಸೂಚಿಸುತ್ತದೆ. ಮೂತ್ರಪಿಂಡಗಳು ಸೋಂಕಿಗೊಳಗಾಗಿದ್ದಾಗ ಅವುಗಳಲ್ಲಿ ಕೀವು ಕೋಶಗಳು ಉತ್ಪತ್ತಿಯಾಗುತ್ತವೆ. ಈ ಕೀವು ಕೋಶಗಳು ಮೂತ್ರದ ಮೂಲಕ ಹೊರಗೆ ಹಾಕಲ್ಪಟ್ಟಾಗ ಕೆಟ್ಟ ವಾಸನೆಯನ್ನುಂಟು ಮಾಡುತ್ತವೆ.

►ಮೂತ್ರವಿಸರ್ಜನೆಯ ವೇಳೆ ನೋವು

  ಹೆಚ್ಚಿನ ಸಂದರ್ಭಗಳಲ್ಲಿ ಜನರು,ವಿಶೇಷವಾಗಿ ಮಹಿಳೆಯರು ಮೂತ್ರವಿಸರ್ಜನೆಯ ವೇಳೆ ನೋವು ಅಥವಾ ಉರಿಯನ್ನು ಅನುಭವಿಸುತ್ತಾರೆ ಮತ್ತು ಇದು ಅಷ್ಟೇನೂ ಗಂಭೀರ ಸಮಸ್ಯೆಯಲ್ಲದ ಮೂತ್ರನಾಳದ ಸೋಂಕು ಆಗಿರಬಹುದು ಎಂದು ತಪ್ಪಾಗಿ ಗ್ರಹಿಸಿ ಕಡೆಗಣಿಸುತ್ತಾರೆ. ಆದರೆ ಇದು,ವಿಶೇಷವಾಗಿ ಇಲ್ಲಿ ಪಟ್ಟಿ ಮಾಡಿರುವ ಇತರ ಕೆಲವು ಲಕ್ಷಣಗಳೊಂದಿಗೆ ಕಾಣಿಸಿಕೊಂಡಿದ್ದರೆ ಮೂತ್ರಪಿಂಡಗಳ ಸೋಂಕನ್ನು ಸೂಚಿಸುತ್ತದೆ. ಮೂತ್ರಪಿಂಡಗಳ ಸೋಂಕು ಮೂತ್ರ ವಿಸರ್ಜನಾ ನಾಳ ಮತ್ತು ಮೂತ್ರಕೋಶಗಳಲ್ಲಿ ಉರಿಯನ್ನುಂಟು ಮಾಡುವುದರಿಂದ ಮೂತ್ರ ವಿಸರ್ಜನೆಯ ವೇಳೆ ನೋವು ಕಾಣಿಸಿಕೊಳ್ಳುತ್ತದೆ.

►ಮೂತ್ರ ವಿಸರ್ಜನೆ ಆರಂಭಿಸಲು ಕಷ್ಟ

 ಕೆಲವೊಮ್ಮೆ ಮೂತ್ರವಿಜರ್ಸನೆಯ ತುಡಿತವುಂಟಾಗಿದ್ದರೂ ಮೂತ್ರ ವಿಸರ್ಜನೆಗೆ ಮುಂದಾದಾಗ ಮೂತ್ರ ಹೊರಗೆ ಹೋಗದ ಅನುಭವವಾಗಬಹುದು. ಈ ಸಂದರ್ಭದಲ್ಲಿ ನೋವು ಉಂಟಾಗುತ್ತಿದ್ದರೆ ಅದು ಮೂತ್ರಪಿಂಡ ಸೋಂಕಿನ ಲಕ್ಷಣವಾಗಿರಬಹುದು. ಮೂತ್ರಪಿಂಡಗಳಲ್ಲಿಯ ಉರಿಯೂತ ಮೂತ್ರವು ಶರೀರದಿಂದ ಸರಾಗವಾಗಿ ಹೊರಗೆ ಹೋಗಲು ತಡೆಯನ್ನುಂಟು ಮಾಡುವುದು ಇದಕ್ಕೆ ಕಾರಣವಾಗಿರಬಹುದು.

►ಬೆನ್ನುನೋವು

ಮೂತ್ರಪಿಂಡಗಳು ಬೆನ್ನಿನ ಭಾಗದಲ್ಲಿ,ಬೆನ್ನುಮೂಳೆಯ ಉಭಯ ಕಡೆಗಳಲ್ಲಿರುತ್ತವೆ. ಹೀಗಾಗಿ ಮೂತ್ರಪಿಂಡಗಳು ಉರಿಯೂತ ಮತ್ತು ಸೋಂಕಿಗೊಳಗಾದಾಗ ಅದು ಸಹಜವಾಗಿಯೇ ಬೆನ್ನುನೋವಿಗೆ ಕಾರಣವಾಗಬಹುದು. ಈ ಬೆನ್ನುನೋವು ಆರಂಭದಲ್ಲಿ ಸೌಮ್ಯವಾಗಿರುತ್ತದೆ, ಹೀಗಾಗಿ ಜನರು ಅದನ್ನು ಕಡೆಗಣಿಸುತ್ತಾರೆ. ಆದರೆ ಬೆನ್ನುನೋವು ನಿರಂತರವಾಗಿದ್ದರೆ ಅದು ಮೂತ್ರಪಿಂಡ ಸೋಂಕನ್ನು ಸೂಚಿಸುತ್ತದೆ ಮತ್ತು ತಪಾಸಣೆ ಅಗತ್ಯವಾಗುತ್ತದೆ.

►ಮೂತ್ರದಲ್ಲಿ ರಕ್ತ ಹೋಗುವಿಕೆ

 ಮೂತ್ರದಲ್ಲಿ ರಕ್ತ ಹೋಗುತ್ತಿದ್ದರೆ ಮತ್ತು ನೋವು ಹಾಗೂ ಕೆಟ್ಟ ವಾಸನೆಯಿಂದ ಕೂಡಿದ್ದರೆ ಅದು ಖಂಡಿತವಾಗಿಯೂ ಮೂತ್ರಪಿಂಡಗಳ ಸೋಂಕಿನ ಲಕ್ಷಣವಾಗಿರುತ್ತದೆ. ಆದರೆ ಈ ಲಕ್ಷಣ ಕೇವಲ ನಂತರದ ಹಂತಗಳಲ್ಲಿ ಕಾಣಿಸಿಕೊಳ್ಳಬಹುದು. ಉರಿಯೂತ ಮತ್ತು ಸೋಂಕು ಮೂತ್ರಪಿಂಡದಲ್ಲಿ ರಕ್ತಸ್ರಾವವನ್ನುಂಟು ಮಾಡುತ್ತವೆ ಮತ್ತು ಈ ರಕ್ತವು ಮೂತ್ರದೊಂದಿಗೆ ಸೇರಿ ವಿಸರ್ಜನೆಯ ಸಮಯ ಕಾಣಿಸಿಕೊಳ್ಳುತ್ತದೆ.

►ಜ್ವರ

  ಇದು ಮೂತ್ರಪಿಂಡ ಸೋಂಕಿನ ಇನ್ನೊಂದು ಲಕ್ಷಣವಾಗಿದೆ,ಆದರೆ ಜನರು ಇದೊಂದು ಸಾಮಾನ್ಯ ಜ್ವರವೆಂದು ಪರಿಗಣಿಸಿ ಕಡೆಗಣಿಸುತ್ತಾರೆ. ನಮ್ಮ ಶರೀರದ ಯಾವುದೇ ಭಾಗವು ಸೋಂಕಿಗೊಳಗಾದಾಗ ಮತ್ತು ರೋಗ ನಿರೋಧಕ ವ್ಯವಸ್ಥೆಯು ಸೋಂಕಿನ ವಿರುದ್ಧ ಹೋರಾಡುವಾಗ ಜ್ವರದ ಲಕ್ಷಣಗಳು ಕಂಡುಬರುತ್ತವೆ. ಹೀಗಾಗಿ ಜ್ವರ ಕಾಣಿಸಿಕೊಂಡಿದ್ದರೆ ಮತ್ತು ಅದರೊಂದಿಗೆ ಇಲ್ಲಿ ಪಟ್ಟಿ ಮಾಡಿರುವ ಇತರ ಒಂದೆರಡು ಲಕ್ಷಣಗಳೂ ಜೊತೆಗೂಡಿದ್ದರೆ ತಕ್ಷಣ ವೈದ್ಯರ ಬಳಿಗೆ ತೆರಳಿ ಮೂತ್ರಪಿಂಡಗಳ ಸೋಂಕಿಗಾಗಿ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News