ಸೆಕ್ಸ್‌ಪ್ಲಾಯಿಟೇಷನ್ ವಿರುದ್ಧ ಬೀದಿಗಿಳಿದ ಕ್ರೈಸ್ತ ಸನ್ಯಾಸಿನಿಯರು

Update: 2018-09-09 04:18 GMT

ಕೊಚ್ಚಿನ್, ಸೆ. 9: ಕೇರಳ ಕ್ಯಾಥೊಲಿಕ್ ಚರ್ಚ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ತಮ್ಮ ವಿರುದ್ಧ ನಡೆಯುತ್ತಿರುವ ಲೈಂಗಿಕ ಶೋಷಣೆ ವಿರುದ್ಧ ಕ್ರೈಸ್ತ ಸನ್ಯಾಸಿನಿಯರು ಚರ್ಚ್ ಅಧಿಕಾರಿಗಳ ವಿರುದ್ಧ ಬಹಿರಂಗ ಪ್ರತಿಭಟನೆ ನಡೆಸಿದ್ದಾರೆ. ಜಲಂಧರ್‌ನ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧದ ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಪಿತೂರಿ ನಡೆದಿದೆ ಎಂದು ಕ್ರೈಸ್ತ ಸನ್ಯಾಸಿನಿಯರು ಆಪಾದಿಸಿದ್ದಾರೆ.

ಕೇರಳದ ಐಜಿ ನಿವಾಸದ ಬಳಿಯ ವಾಂಚಿ ಚೌಕದಲ್ಲಿ ಶನಿವಾರ ಮೂರು ಗಂಟೆ ಕಾಲ ಪ್ರತಿಭಟನೆ ನಡೆಸಿದ ಸನ್ಯಾಸಿನಿಯರು, ಮುಲಕ್ಕಲ್ ಅವರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು.

ಸ್ವತಂತ್ರ ಕ್ರಿಶ್ಚಿಯನ್ ಸಂಘಟನೆಗಳ ಒಕ್ಕೂಟವಾದ ಜಾಯಿಂಟ್ ಕ್ರಿಶ್ಚಿಯನ್ ಕೌನ್ಸಿಲ್ ಈ ಪ್ರತಿಭಟನೆ ಆಯೋಜಿಸಿತ್ತು. ಲೈಂಗಿಕ ಶೋಷಣೆಗೆ ಒಳಗಾಗಿ ದ್ದಾರೆ ಎನ್ನಲಾದ ಕ್ರೈಸ್ತ ಸನ್ಯಾಸಿನಿಯರ ಮಿಷನರೀಸ್ ಆಫ್ ಜೀಸಸ್‌ನ ಐವರು ಸೇರಿದಂತೆ ಏಳು ಮಂದಿ ಕ್ರೈಸ್ತ ಸನ್ಯಾಸಿನಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತ್ರಿಶ್ಶೂರ್ ಮೂಲದ ಮುಲಕ್ಕಲ್, 2014 ಹಾಗೂ 2016ರಲ್ಲಿ ಕೊಟ್ಟಾಯಂ ಸಮೀಪದ ಕುರವಿಲಂಗಾಡ್‌ನ ಸೆಂಟ್ ಫ್ರಾನ್ಸಿಸ್ ಮಿಷನ್ ಹೋಮ್ ಮತ್ತು ಕಾನ್ವೆಂಟ್‌ನಲ್ಲಿದ್ದಾಗ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆಪಾದಿಸಲಾಗಿದೆ.

ಬಿಷಪ್ ಹಾಗೂ ಶೋಷಣೆಗೆ ಒಳಗಾಗಿದ್ದಾರೆ ಎನ್ನಲಾದ ಸನ್ಯಾಸಿನಿ, ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ ಅಧೀನದ ಜಲಂಧರ್ ಧರ್ಮಪ್ರಾಂತ್ಯದಲ್ಲಿ ಜತೆಗೆ ಕೆಲಸ ಮಾಡಿದ್ದರು. ಜೂನ್ 27ರಂದು ಪೊಲೀಸರಿಗೆ ಲೈಂಗಿಕ ಶೋಷಣೆ ವಿರುದ್ಧ ದೂರು ನೀಡಲಾಗಿತ್ತು. "ಚರ್ಚ್ ನಮಗೆ ನ್ಯಾಯ ಒದಗಿಸಿಲ್ಲ. ಪೊಲೀಸರು ಹಾಗೂ ಸರ್ಕಾರ ಕೂಡಾ ನಮ್ಮ ನೆರವಿಗೆ ಬಂದಿಲ್ಲ. ನಾವು ಹೋರಾಡುತ್ತೇವೆ. ಚರ್ಚ್, ನಾವು ಬೀದಿಗೆ ಬರುವಂತೆ ಮಾಡಿದೆ" ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅನುಪಮಾ ಎಂ.ಜೆ. ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News