ರಫೆಲ್ ಒಪ್ಪಂದವನ್ನು ಶ್ಲಾಘಿಸುವಂತೆ ವಾಯುಪಡೆ ಅಧಿಕಾರಿಗಳ ಮೇಲೆ ಒತ್ತಡ: ಪ್ರಶಾಂತ್ ಭೂಷಣ್ ಆರೋಪ

Update: 2018-09-09 10:37 GMT

ಹೊಸದಿಲ್ಲಿ, ಸೆ.9: ಫ್ರಾನ್ಸ್ ಜತೆಗೆ ಮಾಡಿಕೊಂಡ ಹೊಸ ರಫೆಲ್ ಯುದ್ಧವಿಮಾನ ಒಪ್ಪಂದವನ್ನು ಶ್ಲಾಘಿಸುವಂತೆ ಭಾರತೀಯ ವಾಯುಪಡೆ ಅಧಿಕಾರಿಗಳ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಸುಪ್ರೀಂಕೋರ್ಟ್ ಹಿರಿಯ ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಆಡಳಿತಾರೂಢ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

"ಹಗರಣ ಬೆಳಕಿಗೆ ಬಂದ ಬಳಿಕ, ಒಪ್ಪಂದದಲ್ಲಿ ಮಾಡಿಕೊಂಡ ಬದಲಾವಣೆ ಬಗ್ಗೆ ಸಮರ್ಥನೆ ಮಾಡಿಕೊಳ್ಳಲು ಸರ್ಕಾರದ ಬಳಿ ಏನೂ ಇಲ್ಲ. ಆದ್ದರಿಂದ ಇದೀಗ ಹೊಸ ಒಪ್ಪಂದದ ಪರವಾಗಿ ಹೇಳಿಕೆ ನೀಡುವಂತೆ ಐಎಎಫ್ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ" ಎಂದು ಪ್ರಶಾಂತ್‍  ಭೂಷಣ್ ಹೇಳಿದ್ದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

ರಫೆಲ್ ಒಪ್ಪಂದ ಹಗರಣ ಎಂಬ ಪ್ರತಿಪಾದನೆಯನ್ನು ಭಾರತೀಯ ಸೇನಾ ಪಡೆ ಅಧಿಕಾರಿಗಳು ಸೆಪ್ಟೆಂಬರ್ 6ರಂದು ತಳ್ಳಿಹಾಕಿದ್ದಾರೆ. ಕಾಂಗ್ರೆಸ್ ಪಕ್ಷ ಮಾಡಿಕೊಂಡ ಒಪ್ಪಂದಕ್ಕಿಂತ ಒಳ್ಳೆಯ ಒಪ್ಪಂದ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ವಾಯುಪಡೆಯ ಉಪ ಮುಖ್ಯಸ್ಥ ಏರ್‍ಮಾರ್ಷಲ್ ರಘುನಾಥ್ ನಂಬಿಯಾರ್ ಇಂಡಿಯಾ ಟುಡೇ ಟಿವಿ ಜತೆ ಮಾತನಾಡಿ, "ಮೋದಿ ಸರ್ಕಾರ ಸಹಿ ಮಾಡಿದ ಹೊಸ ಒಪ್ಪಂದವು, ಹಿಂದೆ ಕಾಂಗ್ರೆಸ್ ಸರ್ಕಾರ 2008ರಲ್ಲಿ ಮಾಡಿಕೊಂಡಿದ್ದ, ಆದರೆ ಜಾರಿಗೊಳಿಸಲಾಗದ ಒಪ್ಪಂದಕ್ಕೆ ಹೋಲಿಸಿದರೆ ಶೇಕಡ 40ರಷ್ಟು ಅಗ್ಗ" ಎಂದು ಹೇಳಿದ್ದಾರೆ.

ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥ ಸಿರೀಶ್ ಬಬನ್‍ದೇವ್ ಕೂಡಾ ವಿರೋಧ ಪಕ್ಷಗಳ ಪ್ರತಿಪಾದನೆಯನ್ನು ಅಲ್ಲಗಳೆದಿದ್ದು, ಒಪ್ಪಂದವನ್ನು ಟೀಕಿಸುವವರು ಖರೀದಿ ನಿಯಮಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News