ಕೇರಳ ಪ್ರವಾಹದಲ್ಲಿ ಶಾಲೆ ಧ್ವಂಸ: 72 ಗಂಟೆಗಳಲ್ಲಿ ಸುಂದರ ಶಾಲೆ ನಿರ್ಮಿಸಿದ ಯುವಕರ ತಂಡ

Update: 2018-09-09 11:17 GMT

ಆಗಸ್ಟ್ 9ರಂದು ಭಾರೀ ಪ್ರಮಾಣದ ಭೂಕುಸಿತ ಉತ್ತರ ಕೇರಳದ ವಯನಾಡ್ ಜಿಲ್ಲೆ ಕುರಿಚೇರ್ ‍ಮಲೆಯಲ್ಲಿ ಸಂಭವಿಸಿತು. ನೂರಾರು ಎಕರೆ ಅರಣ್ಯಭೂಮಿ ಮತ್ತು ಚಹಾ ತೋಟಕ್ಕೆ ಇದರಿಂದ ಹಾನಿಯಾಯಿತು. ಐದು ಮನೆಗಳು ಧ್ವಂಸವಾದವು. ಹಲವು ಜಾನುವಾರುಗಳು ಜೀವಂತ ಸಮಾಧಿಯಾದವು. ಸುತ್ತಮುತ್ತಲ ಗ್ರಾಮಗಳ ಚಹಾತೋಟ ಕಾರ್ಮಿಕರ ಬದುಕನ್ನು ಕಸಿದುಕೊಂಡಿತು. ಭೂಕುಸಿತದ ಮಣ್ಣು ಹಾಗೂ ಕಲ್ಲುಬಂಡೆಗಳು ಪೊಳುತಾನ ಗ್ರಾಮ ಪಂಚಾಯ್ತಿಯ ಕುರಿಚೇರ್ ‍ಮಲದಲ್ಲಿರುವ ಏಕೈಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಧ್ವಂಸಗೊಳಿಸಿದವು. ಇದರಿಂದ ಶಾಲೆಯಲ್ಲಿ ಕಲಿಯುತ್ತಿದ್ದ 92 ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಆತಂಕ ಎದುರಾಯಿತು. ಆಗಸ್ಟ್ ಆರಂಭದಿಂದಲೂ ಭಾರಿ ಮಳೆಯ ಕಾರಣ ತರಗತಿಗಳು ನಡೆಯದ ಈ ಶಾಲೆ ಪುನರಾರಂಭದ ಬಗ್ಗೆಯೇ ಅನುಮಾನ ಸೃಷ್ಟಿಯಾಗಿತ್ತು.

ಕುರಿಚೇರ್‍ ಮಲ ವಯನಾಡ್ ಜಿಲ್ಲೆಯ ಅತಿ ಎತ್ತರದ ಪ್ರದೇಶವಾಗಿದ್ದು, ತೀರಾ ಗುಡ್ಡಗಾಡು ಪ್ರದೇಶ. ಆಗಸ್ಟ್ 9ರಂದು ಬೆಳಗ್ಗೆ 10ರ ಸುಮಾರಿಗೆ ಭೂಕುಸಿತ ಆರಂಭವಾದಾಗ ಬೆಟ್ಟದಲ್ಲಿ ವಾಸಿಸುತ್ತಿದ್ದ 150 ಕುಟುಂಬಗಳಿಗೆ ಬೆಟ್ಟ ಕಂಪಿಸಿದ ಅನುಭವವಾಯಿತು. ಬೆಟ್ಟದ ಇಳಿಜಾರಿನಲ್ಲಿ ಭೂಕುಸಿತದ ಅವಶೇಷಗಳು ಬೇರೆಡೆಗೆ ಬಿದ್ದ ಪರಿಣಾಮ 150 ಕುಟುಂಬಗಳು ಪವಾಡಸದೃಶ ಅಪಾಯದಿಂದ ಪಾರಾದರು.

ರಾಜ್ಯಾದ್ಯಂತ ಭಾರಿ ಮಳೆ, ಭೂಕುಸಿತ ಮತ್ತು ಪ್ರವಾಹದ ಕಾರಣದಿಂದಾಗಿ ಜಿಲ್ಲಾಡಳಿತ ಆಗಸ್ಟ್ ಮೊದಲ ವಾರವೇ ಶಾಲೆಯನ್ನು ಮುಚ್ಚಲು ಆದೇಶ ನೀಡಿತ್ತು. ಜೂನ್ 1ರಿಂದ ಆಗಸ್ಟ್ 29ರವರೆಗೆ ವಯನಾಡ್ ಜಿಲ್ಲೆಯಲ್ಲಿ 2944 ಮಿಲೀಮೀಟರ್ ಮಳೆಯಾಗಿದ್ದು, ಇದು ಈ ಜಿಲ್ಲೆಯಲ್ಲಿ ಆ ಅವಧಿಯಲ್ಲಿ ಬೀಳುವ ವಾಡಿಕೆ ಮಳೆಗಿಂತ ಶೇಕಡ 24ರಷ್ಟು ಅಧಿಕ.

ಮಳೆ ಕಡಿಮೆಯಾದ ಬಳಿಕ ಆಗಸ್ಟ್ 29ರಂದು ಶಾಲೆ ತೆರೆಯಲು ಸರ್ಕಾರ ಸೂಚನೆ ನೀಡಿತು. ಆದರೆ ಕುರಿಚೇರ್ ‍ಮಲ ಶಾಲೆ ತೆರೆಯುವುದು ಸುಲಭದ ಮಾತಾಗಿರಲಿಲ್ಲ.

ಶಾಲಾ ಕಟ್ಟಡ ಸಂಪೂರ್ಣ ಧ್ವಂಸವಾಗಿತ್ತು. ಮಣ್ಣು, ಕಲ್ಲು ಹಾಗೂ ಮರ ಸೇರಿದಂತೆ ದೊಡ್ಡ ಪ್ರಮಾಣದ ತ್ಯಾಜ್ಯಗಳು ಶಾಲೆಯ ಎದುರು ರಾಶಿ ಬಿದ್ದಿದ್ದವು. ತ್ಯಾಜ್ಯಗಳು ಬಿದ್ದ ರಭಸಕ್ಕೆ ಶಾಲಾ ಕಟ್ಟಡದ ಅಡಿಪಾಯಕ್ಕೂ ಹಾನಿಯಾಗಿರಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿತ್ತು. ಶಾಲೆಯ ಕಟ್ಟಡಕ್ಕೆ ಆಗಿರುವ ಹಾನಿಯ ಸ್ವರೂಪವನ್ನು ಮುಂದೆ ತಿಳಿದುಕೊಳ್ಳಬೇಕಾಗಿದ್ದರೂ, ಶಾಲಾ ಕಟ್ಟಡವನ್ನು ಹಾಗೆಯೇ ಬಿಟ್ಟುಬಿಡುವಂತೆ ಜಿಲ್ಲಾಡಳಿತ ಸೂಚನೆ ನೀಡಿತು. ಹೊಸ ಕಟ್ಟಡಕ್ಕೆ ಸೂಕ್ತ ಜಾಗ ಗುರುತಿಸುವಂತೆ ಶಿಕ್ಷಣ ಇಲಾಖೆ ಮತ್ತು ಗ್ರಾಮಪಂಚಾಯ್ತಿಗೆ ಸೂಚಿಸಿತು.

ಆದರೆ “ಈ ಅವಧಿಯಲ್ಲಿ ಮಕ್ಕಳು ಏನು ಮಾಡಬೇಕು?” ಎಂಬ ಪ್ರಶ್ನೆ ಮುಖ್ಯಶಿಕ್ಷಕ ಪಿ.ಕೆ.ಶಶಿ ಅವರ ಮನಸ್ಸಿನಲ್ಲಿ ಮೂಡಿತು. ಆಗಸ್ಟ್ 25ರಂದು ಜಿಲ್ಲಾಡಳಿತವನ್ನು ಸಂಪರ್ಕಿಸಿ, ತಾತ್ಕಾಲಿಕ ಶಾಲೆಯಾಗಿ ಕಾರ್ಯನಿರ್ವಹಿಸಲು ಕಟ್ಟಡ ಗುರುತಿಸಿಕೊಡುವಂತೆ ಮನವಿ ಮಾಡಿದರು. ಆದರೆ ಅವರಿಂದ ಯಾವ ಆಶ್ವಾಸನೆಯೂ ಬರಲಿಲ್ಲ.

ಈ ಹಂತದಲ್ಲಿ ಸ್ಥಳೀಯ ಮಸೀದಿ ಸಮಿತಿ ಮುಂದೆ ಬಂದು, ಹಾನಿಗೀಡಾದ ಶಾಲೆಯಿಂದ ಒಂದು ಕಿಲೋಮೀಟರ್ ದೂರದಲ್ಲಿದ್ದ ಸ್ಥಳೀಯ ಮದ್ರಸ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಶಾಲೆ ನಡೆಸುವಂತೆ ಪ್ರಸ್ತಾವ ಮುಂದಿಟ್ಟಿತು.

ಈ ಭರವಸೆ ಹಾಗೂ 40 ಮಂದಿ ಸ್ವಯಂಸೇವಕರ ಶ್ರಮದಿಂದಾಗಿ, ಈ ಭಾಗದ ಮಕ್ಕಳು ಆಗಸ್ಟ್ 29ರಿಂದಲೇ ಶಾಲೆಗೆ ತೆರಳಲು ಸಾಧ್ಯವಾಯಿತು.

ತಂಡದ ಪರಿಶ್ರಮ

ಹಯಾತುಲ್ ಇಸ್ಲಾಂ ಮದ್ರಸ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಶಾಲೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟ ಮಸೀದಿಯ ಸಮಿತಿಗೆ ತಾವು ಕೃತಜ್ಞ ಎಂದು ಸ್ಕ್ರೋಲ್.ಇನ್ ಜತೆ ಮಾತನಾಡಿದ ಮುಖ್ಯಶಿಕ್ಷಕ ಶಶಿ ಹೇಳಿದ್ದಾರೆ. "ಆ ಯುವಕರ ತಂಡಕ್ಕೆ ಮತ್ತು ಮಸೀದಿ ಸಮಿತಿಗೆ ಈ ಅವಕಾಶ ಕಲ್ಪಿಸಿಕೊಟ್ಟದ್ದಕ್ಕೆ ನಾವು ಆಭಾರಿಗಳು" ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಸ್ವಯಂಸೇವಕರ ತಂಡ ಸಿಕ್ಕಿದ್ದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಹೋದಾಗ ಎಂದು ಅವರು ವಿವರಿಸುತ್ತಾರೆ. ಕೇರಳದ ವಿವಿಧೆಡೆಗಳಿಂದ ಆಗಮಿಸಿದ್ದ ಗ್ರೀನ್ ಪಲ್ಲೇಟಿವ್, ಹ್ಯೂಮನ್ ಬೀಯಿಂಗ್ ಕಲೆಕ್ಟಿವ್ ಮತ್ತು ಮಲಬಾರ್ ಫ್ಲಡ್ ರಿಲೀಫ್ ಸಂಘಟನೆಯ ಕಾರ್ಯಕರ್ತರು ಇವರಲ್ಲಿ ಸೇರಿದ್ದಾರೆ. ಇವರಲ್ಲಿ ಕಲಾವಿದರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿದ್ದರು. "ನಮಗೆ ಇದ್ದ ಸಂಕಷ್ಟದ ಪರಿಸ್ಥಿತಿ ಬಗ್ಗೆ ವಿವರಿಸಿದಾಗ ಅವರು ನಮ್ಮ ನೆರವಿಗೆ ಧಾವಿಸಿದರು" ಎಂದು ಶಶಿ ಹೇಳುತ್ತಾರೆ.

ಮದ್ರಸ ಕಟ್ಟಡದ ನೆಲ ಅಂತಸ್ತಿನಲ್ಲಿ ಇಸ್ಲಾಮಿಕ್ ಶಾಲೆ ಕಾರ್ಯನಿರ್ವಹಿಸುತ್ತಿತ್ತು. ಮೊದಲ ಮಹಡಿಯನ್ನು ಬಳಸುತ್ತಿರಲಿಲ್ಲ. ಮೊದಲ ಅಂತಸ್ತಿಗೆ ಛಾವಣಿ ಇದ್ದರೂ ಗೋಡೆಗಳಿರಲಿಲ್ಲ. ಗ್ರಾಮಸ್ಥರು ತಮ್ಮ ಸೀಮಿತ ಸಂಪನ್ಮೂಲ ಮತ್ತು ಸ್ವಯಂಸೇವಕರ ಶ್ರಮದಿಂದ ಸಾಮಾಜಿಕ ಜಾಲತಾಣದ ನೆರವು ಪಡೆದು, ಶಾಲೆ ಆರಂಭಕ್ಕೆ ಅಗತ್ಯವಾಗಿದ್ದ ಪರಿಕರಗಳನ್ನು ಕ್ರೋಢೀಕರಿಸಿದರು. ಜತೆಗೆ ಈ ಕಟ್ಟಡದ ಸುಧಾರಣೆಗೂ ಇದು ನೆರವಾಯಿತು.

ಆಗಸ್ಟ್ 26ರಂದು ಸ್ವಯಂಸೇವಕರು ಗ್ರಾಮಕ್ಕೆ ಬಂದರು. ಶಾಲೆಗೆ ಅಗತ್ಯವಿರುವ ಪರಿಕರಗಳ ಪಟ್ಟಿ ನೀಡುವಂತೆ ಕೇಳಿದರು. "ಶಾಲೆಯನ್ನು ಮರುಸ್ಥಾಪಿಸುವ ನಮ್ಮ ಪ್ರಯತ್ನಕ್ಕೆ ನೆರವು ಕೋರಿದಾಗ, ದೇಣಿಗೆ ಹರಿದು ಬಂತು" ಎಂದು ತಂಡದ ಮುಖ್ಯಸ್ಥರಾಗಿದ್ದ ಅನೀಸ್ ನಡೋಡಿ ನೆನಪಿಸಿಕೊಳ್ಳುತ್ತಾರೆ. ಅನೀಸ್, ಚಿತ್ರೋದ್ಯಮದಲ್ಲಿ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಾರೆ. "ಶಾಲೆ ಆರಂಭಿಸಲು ಬೇಕಾದ ಎಲ್ಲ ವಸ್ತುಗಳು ನಮಗೆ ಸಿಕ್ಕಿದವು. ಗೋಡೆ ಕಟ್ಟಲು ಇಟ್ಟಿಗೆಯಿಂದ ಹಿಡಿದು, ವಿದ್ಯಾರ್ಥಿಗಳಿಗೆ ಮೇಜು, ಕುರ್ಚಿ, ಪುಸ್ತಕಗಳು, ಶಿಕ್ಷಕರಿಗೆ ಶೆಲ್ಫ್‍ಗಳು ಕೂಡಾ ಒಂದೇ ದಿನದಲ್ಲಿ ಸಿಕ್ಕವು" ಎಂದು ಬಣ್ಣಿಸಿದರು.

ಗ್ರಾಮಸ್ಥರ ನೆರವಿನೊಂದಿಗೆ, ಸ್ವಯಂಸೇವಕರು ಈ ಕಟ್ಟಡವನ್ನು ಪ್ರಾಥಮಿಕ ಶಾಲೆಯಾಗಿ ಬಳಸಲು ಸೂಕ್ತವಾಗುವಂತೆ ಪರಿವರ್ತಿಸಿದರು. ನಿರಂತರವಾಗಿ 72 ಗಂಟೆ ಕಾಲ ಶ್ರಮಿಸಿ, ಕಟ್ಟಡ ಸಜ್ಜುಗೊಳಿಸಿದರು. ಗೋಡೆ ನಿರ್ಮಿಸಿ, ಸಿಮೆಂಟ್ ಹಾಕಿದ್ದಲ್ಲದೇ, ಬಿಳಿ ಫಲಕಗಳನ್ನು ಅಳವಡಿಸಿದರು. ತರಗತಿ ಕೊಠಡಿಗೆ ಮ್ಯಾಟ್ ಹಾಸಿದರು. ಲವಲವಿಕೆಯ ಚಿತ್ತಾರಗಳನ್ನು ನಿರ್ಮಿಸಿದರು. ಅಕ್ಕಪಕ್ಕದಲ್ಲಿ ಸಸಿಗಳನ್ನು ನೆಟ್ಟರು.

ಕುರಿಚೆರ್‍ಮಲ ಜನರ ಸಹಾಯವಿಲ್ಲದೇ ನಾವಿದನ್ನು ಸಾಧಿಸುವುದು ಸಾಧ್ಯವಾಗುತ್ತಿರಲಿಲ್ಲ ಎನ್ನುವುದು ಸ್ವಯಂಸೇವಕರ ಹೇಳಿಕೆ. "ಅವರು ಉತ್ಸಾಹ ತೋರಿ ಆರಂಭಿಸಿದ್ದನ್ನು ನಾವು ಸೂಕ್ತ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದೆವು" ಎಂದು ನಡೋಡಿ ಹೇಳುತ್ತಾರೆ. "ನಾವು ಅವರಿಗೆ ಕೇವಲ ನೆರವು ನೀಡಿದ್ದೇವೆ. ಅವರು ನಮ್ಮನ್ನು ಮನೆಗಳಲ್ಲಿ ಉಳಿಸಿಕೊಂಡು ದಿನಕ್ಕೆ ಮೂರು ಹೊತ್ತು ಉತ್ತಮ ಊಟ ಕೊಟ್ಟರು. ಇದು ಸಂಪೂರ್ಣ ತಂಡ ಪರಿಶ್ರಮ"

ಸ್ವಯಂಸೇವಕರ ಉತ್ಸಾಹದ ಬಗ್ಗೆ ಮಾತನಾಡಿದ ನಡೋಡಿ, "ಭೂಕುಸಿತದಿಂದ ಆದ ಆಘಾತವನ್ನು ತೊಡೆದುಹಾಕುವ ಸಲುವಾಗಿ ಮಕ್ಕಳಿಗೆ ಶಾಲೆ ನಿರ್ಮಿಸಿಕೊಡಲು ನಾವು ನಿರ್ಧರಿಸಿದೆವು. ಇಲ್ಲದಿದ್ದರೆ ಮಕ್ಕಳು ತಮ್ಮ ಕಾಲವನ್ನು ಪರಿಹಾರ ಶಿಬಿರಗಳಲ್ಲಿ ಕಳೆಯಬೇಕಾಗುತ್ತಿತ್ತು. ಭಯಾನಕ ಚಿತ್ರಣಗಳಿಗೆ ಅವರು ಸಾಕ್ಷಿಯಾಗಬೇಕಿತ್ತು" ಎಂದು ವಿವರಿಸಿದರು.

ಹೊಸ ಶಾಲಾ ಕಟ್ಟಡವನ್ನು ವರ್ಣರಂಜಿತ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಉದ್ಘಾಟಿದರು. ಸ್ವಯಂಸೇವಕರು ಕೂಡಾ ಈ ಸಂದರ್ಭದಲ್ಲಿ ಹಾಡಿ ಕುಣಿದರು.

ಶುಕ್ರವಾರ ಶಾಲೆ ಮುಚ್ಚುವ ಮೂಲಕ ಸ್ಥಳೀಯ ಮುಸ್ಲಿಮರಿಗೆ ಶುಕ್ರವಾರದ ಪ್ರಾರ್ಥನೆಗೆ ಸ್ಥಳಾವಕಾಶ ಕಲ್ಪಿಸಿಕೊಡಲಾಗುತ್ತದೆ. ಇದರ ಬದಲು ಶನಿವಾರ ಶಾಲೆ ಸಂಪೂರ್ಣ ತೆರೆದಿರುತ್ತದೆ. "ಈ ಶೈಕ್ಷಣಿಕ ವರ್ಷದ ಕೊನೆಯವರೆಗೂ ಇದೇ ವ್ಯವಸ್ಥೆ ಮುಂದುವರಿಯಲಿದೆ" ಎಂದು ಶಾಲೆಯ ಪೋಷಕ- ಶಿಕ್ಷಕ ಸಂಘದ ಅಧ್ಯಕ್ಷ ಮತ್ತು ಮಸೀದಿ ಸಮಿತಿಯ ಉಪಾಧ್ಯಕ್ಷ ಮುಹಮ್ಮದ್ ಅಸ್ಲಂ ಹೇಳುತ್ತಾರೆ.

Writer - ಟಿ.ಎ.ಅಮೀರುದ್ದೀನ್, scroll.in

contributor

Editor - ಟಿ.ಎ.ಅಮೀರುದ್ದೀನ್, scroll.in

contributor

Similar News