ಅಂತಿಮ ಟೆಸ್ಟ್: ಮೊದಲ ಇನ್ನಿಂಗ್ಸ್ ನಲ್ಲಿ ಟೀಮ್ ಇಂಡಿಯಾ 292 ಕ್ಕೆ ಆಲೌಟ್

Update: 2018-09-09 18:53 GMT

ಲಂಡನ್, ಸೆ.9: ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ನ ಮೂರನೇ ದಿನ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 95 ಓವರ್‌ಗಳಲ್ಲಿ 292 ರನ್‌ಗಳಿಗೆ ಆಲೌಟಾಗಿದೆ.

ಇದರೊಂದಿಗೆ ಇಂಗ್ಲೆಂಡ್ ವಿರುದ್ಧ ಭಾರತ 40 ರನ್‌ಗಳ ಹಿನ್ನಡೆ ಅನುಭವಿಸಿದೆ.

ಎರಡನೇ ದಿನದಾಟದಂತ್ಯಕ್ಕೆ 51 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 174 ರನ್ ಗಳಿಸಿದ್ದ ಟೀಮ್ ಇಂಡಿಯಾ ಆಟ ಮುಂದುವರಿಸಿ ಈ ಮೊತ್ತಕ್ಕೆ 118 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. ಆಲ್‌ರೌಂಡರ್ ರವಿಂದ್ರ ಜಡೇಜ ಅಜೇಯ 86 ರನ್ ಮತ್ತು ಹನುಮ ವಿಹಾರಿ ಚೊಚ್ಚಲ ಅರ್ಧ ಶತಕ (56) ನೆರವಿನಲ್ಲಿ ಭಾರತ ಭಾರೀ ಹಿನ್ನಡೆ ಅನುಭವಿಸುವ ಅವಕಾಶದಿಂದ ಪಾರಾಗಿದೆ.

 ಇಂಗ್ಲೆಂಡ್ ಬೌಲರ್‌ಗಳ ಸಂಘಟಿತ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಆಲ್‌ರೌಂಡರ್ ಜಡೇಜ ಮತ್ತು ಮೊದಲ ಟೆಸ್ಟ್ ಆಡುತ್ತಿರುವ ಹನುಮ ವಿಹಾರಿ ತಂಡದ ಸ್ಕೋರ್‌ನ್ನು 290ರ ಗಡಿ ದಾಟಿಸಲು ನೆರವಾದರು.

ಶನಿವಾರ ದಿನದಾಟದಂತ್ಯಕ್ಕೆ ಔಟಾಗದೆ 25 ರನ್ ಗಳಿಸಿದ್ದ ಹನುಮ ವಿಹಾರಿ ಮತ್ತು 8 ರನ್ ಗಳಿಸಿದ್ದ ರವೀಂದ್ರ ಜಡೇಜ ಆಟ ಮುಂದುವರಿಸಿ 7ನೇ ವಿಕೆಟ್‌ಗೆ 77 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು.

►ವಿಹಾರಿ ಚೊಚ್ಚಲ ಅರ್ಧಶತಕ: ಹನುಮ ವಿಹಾರಿ ತಾನಾಡುತ್ತಿರುವ ಮೊದಲ ಟೆಸ್ಟ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದರು.

 ಆಂಧ್ರಪ್ರದೇಶದ 24ರ ಹರೆಯದ ದಾಂಡಿಗ ಹನುಮ ವಿಹಾರಿ 104 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಅರ್ಧಶತಕ ದಾಖಲಿಸಿದರು. ಆದರೆ ಅರ್ಧಶತಕ ದಾಖಲಿಸಿದ ಬಳಿಕ ವಿಹಾರಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ತಂಡದ ಸ್ಕೋರ್ 76.4 ಓವರ್‌ಗಳಲ್ಲಿ 237ಕ್ಕೆ ತಲುಪುವಾಗ ವಿಹಾರಿ ಔಟಾದರು . ವಿಹಾರಿ 56 ರನ್(124ಎ, 7ಬೌ,1ಸಿ) ಗಳಿಸಿ ಮೊಯಿನ್ ಅಲಿ ಎಸೆತದಲ್ಲಿ ವಿಕೆಟ್ ಕೀಪರ್ ಬೈರ್‌ಸ್ಟೋವ್‌ಗೆ ಕ್ಯಾಚ್ ನೀಡಿ ವಾಪಸಾದರು.

►ಮತ್ತೊಮ್ಮೆ ಶತಕ ವಂಚಿತರಾದ ಜಡೇಜ: ಆಲ್‌ರೌಂಡರ್ ಜಡೇಜಗೆ ಚೊಚ್ಚಲ ಶತಕ ದಾಖಲಿಸುವ ಅವಕಾಶ ತಪ್ಪಿ ಹೋಯಿತು. ಹನುಮ ವಿಹಾರಿ ಔಟಾಗುವಾಗ ಜಡೇಜ ಸ್ಕೋರ್ 39 ಆಗಿತ್ತು. ಒಂದಡೆ ವಿಕೆಟ್ ಉರುಳುತ್ತಿದ್ದರೂ ಜಡೇಜ ಮಾತ್ರ ಏಕಾಂಗಿಯಾಗಿ ಹೋರಾಟ ಮುಂದುವರಿಸಿದರು. ಆದರೆ ಅವರಿಗೆ ಶತಕ ಗಳಿಸಲು ಾಧ್ಯವಾಗಲಿಲ್ಲ.

 113 ಎಸೆತಗಳಲ್ಲಿ ಜಡೇಜ 7 ಬೌಂಡರಿಗಳ ಸಹಾಯದಿಂದ ಅರ್ಧ ಶತಕ ಪೂರ್ಣಗೊಳಿಸಿದರು. 84.6ನೇ ಓವರ್‌ನಲ್ಲಿ ಅಲಿ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಜಡೇಜ 37ನೇ ಟೆಸ್ಟ್ ನಲ್ಲಿ 9ನೇ ಅರ್ಧಶತಕ ಗಳಿಸಿದರು. ಜಡೇಜ 2017, ಆಗಸ್ಟ್ 3ರಂದು ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ಅರ್ಧಶತಕ ದಾಖಲಿಸಿದ್ದರು. ಅಂದು 70 ರನ್ ದಾಖಲಿಸಿದ್ದ ಜಡೇಜಗೆ ಶತಕದ ಕನಸು ಈಡೇರಿಲ್ಲ. 2016, ನ.26ರಂದು ಮೊಹಾಲಿಯಲ್ಲಿ ಜಡೇಜ ಜೀವನಶ್ರೇಷ್ಠ 90 ರನ್(170) ಗಳಿಸಿದ್ದರು. ಈ ಕೊಡುಗೆ ನೆರವಿನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇಂದು 4 ರನ್‌ನಿಂದ ಜೀವನ ಶ್ರೇಷ್ಠ ಸ್ಕೋರ್ ಸರಿಗಟ್ಟುವ ಅವಕಾಶದಿಂದ ವಂಚಿತಗೊಂಡರು. ಇಶಾಂತ್ ಶರ್ಮಾ(4), ಮುಹಮ್ಮದ್ ಶಮಿ(1) ಮತ್ತು ಜಸ್‌ಪ್ರೀತ್ ಬುಮ್ರಾ(0) ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ತಳವೂರಿ ಜಡೇಜಗೆ ಸಾಥ್ ನೀಡಿದರು.

ಕೊನೆಯಲ್ಲಿ ಜಡೇಜ ಜೊತೆ ಅನಗತ್ಯವಾಗಿ ರನ್ ಕದಿಯಲು ಯತ್ನಿಸಿ ಬುಮ್ರಾ ರನೌಟಾದರು. ಇದರಿಂದಾಗಿ ಜಡೇಜರ ಶತಕದ ಕನಸು ಈಡೇರಲಿಲ್ಲ. ಅವರು ನಿರಾಸೆಗೊಂಡು ಪೆವಿಲಿಯನ್‌ಗೆ ವಾಪಸಾದರು.

ಇಂಗ್ಲೆಂಡ್ ತಂಡದ ಮೊಯಿನ್ ಅಲಿ 50ಕ್ಕೆ 2, ಜೇಮ್ಸ್ ಆ್ಯಂಡರ್ಸನ್ 54ಕ್ಕೆ 2, ಬೆನ್ ಸ್ಟೋಕ್ಸ್ 56ಕ್ಕೆ 2, ಸ್ಟುವರ್ಟ್ ಬ್ರಾಡ್ , ಸ್ಯಾಮ್ ಕರನ್, ಅದಿಲ್ ರಶೀದ್ ತಲಾ 1 ವಿಕೆಟ್ ಹಂಚಿಕೊಂಡರು.

ಇಂಗ್ಲೆಂಡ್ 106/2(40 ಓವರ್)

  ಐದನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ 40 ರನ್‌ಗಳ ಮುನ್ನಡೆ ಸಾಧಿಸಿರುವ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್‌ನಲ್ಲಿ 40 ಓವರ್‌ಗಳ ಮುಕ್ತಾಯಕ್ಕೆ 2 ವಿಕೆಟ್ ನಷ್ಟದಲ್ಲಿ 106 ರನ್ ಗಳಿಸಿದೆ.

  ಆರಂಭಿಕ ದಾಂಡಿಗ ಕೀಟನ್ ಜೆನ್ನಿಂಗ್ಸ್ 10 ರನ್ ಗಳಿಸಿ ವೇಗಿ ಮುಹಮ್ಮದ್ ಶಮಿ ಎಸೆತದಲ್ಲಿ ಬೌಲ್ಡ್ ಆಗಿದ್ದಾರೆ. ಆಲ್‌ರೌಂಡರ್ ಮೊಯಿನ್ ಅಲಿ 20 ರನ್ ಮತ್ತು ಮಾಜಿ ನಾಯಕ ಅಲಿಸ್ಟೈರ್ ಕುಕ್ ಔಟಾಗದೆ 43, ರೂಟ್ 27 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News