ಮತ್ತೆ ಮತ್ತೆ ಕಾಡುತ್ತಿದೆ ಆ ಭಯಾನಕ ದಿನ...

Update: 2018-09-10 10:39 GMT

ನನ್ನ ಹೆಸರು ನಿಶ್ರಿನ್ ಹುಸೈನ್, ನಾನು ಮಧ್ಯಪ್ರದೇಶದ ಸಣ್ಣ ಪಟ್ಟಣವಾದ ಖಾಂಡ್ವದಲ್ಲಿ ಜನಿಸಿದ್ದೇನೆ. ಅದು ನನ್ನ ತಾಯಿಯ ಹೆತ್ತವರ ಊರಾಗಿದೆ. ನನ್ನ ತಾತ ಪಕ್ಕದ ಗ್ರಾಮವಾದ ರುಸ್ತುಂಪುರದಲ್ಲಿ ರೈತರಾಗಿದ್ದರು. ನನ್ನ ತಂದೆಯ ತಂದೆ, ಬುರ್ಹಾನ್‌ಪುರದಲ್ಲಿ ವೈದ್ಯರಾಗಿದ್ದರು. ಬಳಿಕ ಅವರು ತನ್ನ ಕುಟುಂಬದೊಂದಿಗೆ ಅಹ್ಮದಾಬಾದ್‌ಗೆ ವಲಸೆಬಂದಿದ್ದರು. ನನ್ನ ತಾಯಿ ಝಕಿಯಾ ಜಾಫ್ರಿ ಈ ನಗರವನ್ನು ‘ಮನೆ’ಯೆಂದೇ ಕರೆಯುತ್ತಿದ್ದರು.
ಇತರ ಯಾವುದೇ ಕುಟುಂಬದ ಹಾಗೆ, ನನ್ನ ತಂದೆಯ ಕುಟುಂಬವೂ ಉದ್ಯೋಗ ಹಾಗೂ ವಿದ್ಯಾಭ್ಯಾಸದ ನಡುವೆ ಹೋರಾಡುತ್ತಿತ್ತು. ಹಿಂದೂಗಳು ಹಾಗೂ ಕೆಲವೇ ಮುಸ್ಲಿಂ ಕುಟುಂಬಗಳು ಸೌಹಾರ್ದದಿಂದ ಬಾಳುತ್ತಿರುವ ಸಮ್ಮಿಶ್ರ ಸಮಾಜದಲ್ಲಿ ತಾವು ಸುರಕ್ಷಿತರೆಂಬ ಭಾವನೆಯನ್ನು ಅವರು ಹೊಂದಿದ್ದರು ಹಾಗೂ ಎರಡು ಬೆಡ್‌ರೂಂಗಳ ಮನೆಯಲ್ಲಿ ನೆಮ್ಮದಿಯ ಬದುಕು ನಡೆಸುತ್ತಿದ್ದರು. ನನ್ನ ತಂದೆ, ಕಾನೂನು ಪದವಿಯ ಅಧ್ಯಯನವನ್ನು ನಡೆಸುತ್ತಿದ್ದರಿಂದ ತನ್ನ ದೈನಂದಿನ ವೆಚ್ಚಗಳನ್ನು ಸರಿದೂಗಿಸುವುದಕ್ಕಾಗಿ ಸ್ಥಳೀಯ ಬೈಕ್ ರಿಪೇರಿ ಅಂಗಡಿಯ ಮಾಲಕ ಕುಬೇರ್ ಸೇಠ್ ಹಾಗೂ ಸ್ಥಳೀಯ ದಿನಸಿ ಅಂಗಡಿ ಮಾಲಕ ರಾಮಾ ಸೇಠ್ ಅವರಿಗಾಗಿ ಕೆಲಸ ಮಾಡುತ್ತಿದ್ದರು. ಇದೊಂದು ಸಾಮಾನ್ಯ ಭಾರತೀಯ ಕುಟುಂಬವಾಗಿತ್ತು. ಆದರೆ ನಾವು ಮುಸ್ಲಿಮರಾಗಿದ್ದೆವು.
1969ರ ಗುಜರಾತ್ ಗಲಭೆಗಳು ಯೋಚಿಸಲೂ ಸಾಧ್ಯವಿಲ್ಲದಂತಹ ವಿನಾಶವನ್ನು ತಂದಿತ್ತು.ನಮ್ಮ ಮೇಲೆ ಹಿಂಸಾಚಾರವು ಅಪ್ಪಳಿಸಿದ ದುರಂತಮಯ ರಾತ್ರಿಯನ್ನು ಸ್ಮರಿಸಿಕೊಳ್ಳುವ ನನ್ನ ಅಮ್ಮಿ, ಅಂದು ನಮ್ಮ ಮನೆಯ ಕಪಾಟಿನಲ್ಲಿದ್ದ ಮದುವೆಯ ಏಕೈಕ ಫೋಟೊವನ್ನು ಕೂಡಾ ತೆಗೆದಿಡಲು ಸಮಯವಿರಲಿಲ್ಲ ಎನ್ನುತ್ತಾರೆ. ಸಿಕ್ಕಿದ್ದನ್ನೆಲ್ಲಾ ಸುಡುತ್ತಾ, ಲೂಟಿಗೈಯುತ್ತಿದ್ದ ಹಿಂಸಾನಿರತ ಗುಂಪು ಸಮೀಪಿಸುತ್ತಿದ್ದಂತೆಯೇ ನನ್ನ ಹೆತ್ತವರು, ತಾತಂದಿರು, ಚಿಕ್ಕಪ್ಪ ಹಾಗೂ ಚಿಕ್ಕಮ್ಮ ನಮ್ಮಿಂದಿಗೆ ಓಡತೊಡಗಿದರು ಹಾಗೂ ಇತರ ನೂರಾರು ಮುಸ್ಲಿಮರು ಕಗ್ಗತ್ತಲೆ ಹಾಗೂ ಗದ್ದಲದ ನಡುವೆ , ಪರಾರಿಯಾಗಲು ದಾರಿ ಹುಡುಕಲು ಯತ್ನಿಸುತ್ತಿದ್ದರು. ಅನತಿದೂರದಲ್ಲಿ ಗಲಭೆಕೋರರು ಸುಟ್ಟುಹಾಕಿದ್ದ ಮುಸ್ಲಿಮ್ ಮನೆಗಳಲ್ಲಿ ಉರಿಯುತ್ತಿದ್ದ ಬೆಂಕಿ ಮಾತ್ರವೇ ಆಗ ಕೇವಲ ಐದು ವರ್ಷ ವಯಸ್ಸಿನವಳಾಗಿದ್ದ ನಾನು ಆ ರಾತ್ರಿ ಕಂಡಿದ್ದ ಏಕೈಕ ಬೆಳಕಾಗಿತ್ತು. ರೈಲ್ವೆ ಹಳಿಗಳಲ್ಲಿ ಹಲವು ತಾಸುಗಳ ಕಾಲ ನಡೆದ ಬಳಿಕ, ನನ್ನ ಕುಟುಂಬವು ಕೊನೆಗೂ ಇತರ ಹಲವಾರು ಬದುಕುಳಿದವರೊಂದಿಗೆ ಕಲ್ಲಿದ್ದಲನ್ನು ಸಾಗಿಸುವ ರೈಲೊಂದನ್ನು ಏರಲು ಸಫಲವಾಗಿತ್ತು. ಅಲ್ಪಸ್ವಲ್ಪ ಸಾಮಗ್ರಿಗಳಿದ್ದ ಅವರ ಮನೆಯೆಲ್ಲಾ ನಾಶವಾಗಿತ್ತು. ಆನಂತರ ಅಹ್ಮದಾಬಾದ್‌ನ ಮಾಲೆಕ್‌ಸಬಾನ್ ಸ್ಟೇಡಿಯಂನಲ್ಲಿ ಸ್ಥಾಪಿಸಲಾದ ನಿರಾಶ್ರಿತ ಶಿಬಿರಗಳಲ್ಲಿ ಹಾಗೂ ಆಹಾರಕ್ಕಾಗಿ ಮಾರುದ್ದದ ಸರತಿಸಾಲುಗಳಲ್ಲಿ ನಿಲ್ಲುವ ದೀರ್ಘಾವಧಿಯ ದಿನಗಳು ಆರಂಭಗೊಂಡವು.
ನಾನು ಜನಿಸಿರುವ ಪ್ರಜಾಪ್ರಭುತ್ವವಾದಿ ರಾಷ್ಟ್ರದಲ್ಲಿ ಈ ಹಂತದಲ್ಲಿ ನಾನು ನಿರಾಶ್ರಿತರ ಶಿಬಿರದಲ್ಲಿ ಉಳಿಯಬೇಕಾಗಿ ಬಂದಿದ್ದು, ಪ್ರಾಕೃತಿಕ ದುರಂತದಿಂದಲ್ಲ.ಆದರೆ ಮುಸ್ಲಿಮರ ಬಗ್ಗೆ ಹೆಚ್ಚುತ್ತಿರುವ ದ್ವೇಷದಿಂದಾಗಿ. ದ್ವೇಷ ರಾಜಕೀಯದಿಂದಾಗಿ, ದ್ವೇಷ ಭಾಷಣಗಳಿಂದಾಗಿ ಹಾಗೂ ಆರೆಸ್ಸೆಸ್ ಮತ್ತು ವಿಶ್ವಹಿಂದೂಪರಿಷತ್‌ನಿಂದಾಗಿ.
ನನ್ನ ತಂದೆ ಹಾಗೂ ಅವರ ಕಡೆಯ ಕುಟುಂಬಿಕರು ರಾಜಕೀಯದಲ್ಲಿ ತುಂಬಾ ಸಕ್ರಿಯರಾಗಿದ್ದರು. ನನ್ನ ತಾತ (ಹೌದು. ನನ್ನ ದಾದಿಜಾನ್ ಅಥವಾ ಅಜ್ಜಿ ಕೂಡಾ), ತಂದೆ, ಚಿಕ್ಕಪ್ಪ ಹಾಗೂ ಚಿಕ್ಕಮ್ಮಂದಿರು ಇವರೆಲ್ಲೂ ಬ್ರಿಟಿಶರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿಯ ವೇಳೆ ಪ್ರತಿಭಟನೆ ಹಾಗೂ ರ್ಯಾಲಿಗಳಲ್ಲಿ ಪಾಲ್ಗೊಂಡು ಜೈಲು ವಾಸ ಅನುಭವಿಸಿದ್ದರು.
1969ಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಭೀಕರ ಗಲಭೆಯ ಬಳಿಕ, ನನ್ನ ತಂದೆ ಮರಳಿ ತನ್ನ ಮನೆಯನ್ನು ಪುನರ್‌ನಿರ್ಮಿಸುವ ದೃಢ ನಿರ್ಧಾರ ಕೈಗೊಂಡಿದ್ದರು ಮತ್ತು ಹಾಗೆಯೇ ಮಾಡಿದರು ಕೂಡಾ. ಕುಬೇರ್ ಸೇಠ್ ಹಾಗೂ ರಾಮಾ ಸೇಠ್ ಅವರು ನನ್ನ ಪಾಲಕರಿಗಾಗಿ, ಅವರ ಅಂಗಡಿಯ ಹಿಂದೆ ಇರುವ ಪುಟ್ಟ ಕೊಠಡಿಯನ್ನು ಬಿಟ್ಟುಕೊಟ್ಟಿದ್ದರು. 1969ರ ಆನಂತರ ಮತ್ತೊಮ್ಮೆ ನನ್ನ ತಂದೆಯ ಪ್ರಯತ್ನಗಳಿಂದಾಗಿ ನಾವು ಬದುಕಿನಲ್ಲಿ ನೆಲೆ ಕಂಡುಕೊಂಡೆವು ಮತ್ತು ಹೊಸ ಬದುಕನ್ನು ಆರಂಭಿಸಿದೆವು. ಮಕ್ಕಳಾದ ನಾವು ಬೆಳೆದಂತೆ, ಸುತ್ತಮುತ್ತಲಿನ ನೆರೆಹೊರೆಯವರೊಂದಿಗೆ ಸ್ನೇಹವನ್ನು ಮಾಡಿಕೊಂಡೆವು. ಜೊತೆಯಾಗಿ ಶಾಲೆಗೆ ಹೋಗುತ್ತಿದ್ದೆವು ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆವು.
1983ರಲ್ಲಿ ವಿವಾಹವಾದ ಬಳಿಕ ನಾನು ಅಮೆರಿಕಕ್ಕೆ ತೆರಳಿದೆ. ನನ್ನ ಮಕ್ಕಳು ಪ್ರತಿ ವರ್ಷವೂ ಬೇಸಿಗೆಯ ರಜಾದಿನಗಳನ್ನು ಅಹ್ಮದಾಬಾದ್‌ನಲ್ಲಿ ನನ್ನ ಪಾಲಕರೊಂದಿಗೆ ಕಳೆಯುತ್ತಿದ್ದರು.
ನಮ್ಮ ತಂದೆಯ ದೃಢನಿರ್ಧಾರ ಹಾಗೂ ಕೊಡುಗೆಯಾಗಿ ದೊರೆತಿದ್ದ ‘‘ಜರ್ಮನ್ ಕೆ ಬರ್ತನ್’’ (ಆಲ್ಯುಮಿನಿಯಂ ಅಡುಗೆ ಪಾತ್ರೆಗಳು) ಇದ್ದರೆ ಇನ್ನೇನು ನಮಗೆ ಬೇಕು ಎಂದು ಅಮ್ಮಿ ಹೇಳುತ್ತಿದ್ದುದು ನನಗೆ ಈಗಲೂ ನೆನಪಿದೆ. ಈ ಉಡುಗೊರೆಯಾಗಿ ದೊರೆತ ಪಾತ್ರೆಗಳು ನನ್ನ ತಂದೆಯ ಜೊತೆಗೆ ಬೂದಿಯಾಗಿ ಹೋಗುವ ತನಕ, ಅವು ಗುಲ್ಬರ್ಗ್ ಸೊಸೈಟಿ ವಸತಿ ಕಟ್ಟಡದಲ್ಲಿದ್ದ ಅವರ ಮನೆ ಸಂ.19ರ ಹೊಸ ಅಡುಗೆ ಮನೆಯಲ್ಲಿದ್ದವು. ಆಕೆ ಎದುರಿಸಿದ್ದ ಕಷ್ಟಕರ ದಿನಗಳನ್ನು ಅವು ನೆನಪಿಸುತ್ತಿದ್ದವು. ಹೌದು. ನಾನು ಭಾರತದ ಬಗ್ಗೆ, ನನ್ನ ದೇಶದ ಬಗ್ಗೆ, ನನ್ನ ನಗರವಾದ ಅಹ್ಮದಾಬಾದ್ ಬಗ್ಗೆ, ನನ್ನ ಮನೆಯ ಬಗ್ಗೆ ಮಾತನಾಡುತ್ತಿದ್ದೇನೆ.
 ನನ್ನ ಮನಸ್ಸಿಗೆ ಈಗಲೂ ಆ ದಿನ ಕಾಡುತ್ತಲೇ ಇದೆ. ಆರೆಸ್ಸೆಸ್/ ವಿಹಿಂಪ ಜೊತೆ ನಂಟು ಹೊಂದಿರುವ ಅಥವಾ ಅವುಗಳಿಂದ ಪ್ರೇರಣೆ ಪಡೆದ ಜನರ ಗುಂಪುಗಳು ಮಾಜಿ ಲೋಕಸಭಾ ಸದಸ್ಯರಾದ ನನ್ನ 73 ವರ್ಷ ವಯಸ್ಸಿನ ತಂದೆ ಇಹ್ಸಾನ್ ಜಾಫ್ರಿಯವರನ್ನು ಮನೆಯಿಂದ ಹೊರಗೆಳೆದು ಕೊಂಡುಹೋದ ಕ್ಷಣದ ಬಗ್ಗೆ ಯೋಚಿಸುವುದರಿಂದ ಹೊರಬರಲು ಬಲವಂತವಾಗಿ ಪ್ರಯತ್ನಿಸುತ್ತಾ ಇದ್ದೇನೆ. ಅಂದು ಫೆ.22, 2008. ಅವರು ನನ್ನ ತಂದೆಯನ್ನು ಹೊರಗೆ ಎಳೆದೊಯ್ಯುತ್ತಿದ್ದರೆ, ಅತ್ತ ಪೊಲೀಸರು ಅವರ ಸಾವಿನ ಸುದ್ದಿಯನ್ನು ಖಚಿತಪಡಿಸಿಕೊಳ್ಳಲು ಗೂಂಡಾಗಳಿಗಾಗಿ ಕಾಯುತ್ತಿರುವಂತೆ, ವಸತಿ ಸಂಕೀರ್ಣದ ಹೊರಭಾಗದಿಂದ ಕೆಲವೇ ಅಡಿಗಳ ದೂರದಲ್ಲಿ ನಿಲ್ಲಿಸಲಾಗಿದ್ದ ವ್ಯಾನ್ ಪಕ್ಕ ನಿಂತುಕೊಂಡಿದ್ದರು. ಗಲಭೆಕೋರರು ನನ್ನ ತಂದೆ ಇನ್ನೂ ಜೀವಂತವಿರುವಾಗಲೇ ಅವರ ಕಾಲುಗಳನ್ನು ಹಾಗೂ ಕೈಗಳನ್ನು ಕತ್ತರಿಸಿ ಹಾಕಿದ್ದರು. ಕಟ್ಟಕಡೆಗೆ ಅವರ ತಲೆಯನ್ನು ಕತ್ತರಿಸಿಬಿಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತ್ರಿಶೂಲದ ಮೇಲೆ ಅವರ ತಲೆಯನ್ನು ನೇತುಹಾಕಿದ ಗಲಭೆಕೋರರು, ’ಜೈ ಶ್ರೀರಾಮ್’, ‘ಜೈ ಶ್ರೀಕೃಷ್ಣ’ ಘೋಷಣೆಗಳನ್ನು ಕೂಗಿದರು.
ಅವರ ದೇಹದ ಭಾಗಗಳನ್ನು ಸುಡುವ ಕೆಲಸವನ್ನು ಮುಗಿಸುತ್ತಿರುವಾಗ, ಉಳಿದ ಗೂಂಡಾಗಳು ಮಕ್ಕಳನ್ನು, ಮಹಿಳೆಯರನ್ನು ಹಾಗೂ ಪುರುಷರನ್ನು ಲೂಟಿ ಮಾಡಿದರು, ಅತ್ಯಾಚಾರಗೈದರು, ಹತ್ಯೆಗೈದರು ಹಾಗೂ ಜೀವಂತವಾಗಿ ದಹಿಸಿದರು. ದೇಹದ ಮೇಲೆ ಬೆಂಕಿ ಉರಿಯುತ್ತಿದ್ದಂತೆಯೇ ಕೆಲವು ಮಕ್ಕಳು ತೆರೆದ ನೀರಿನ ಟ್ಯಾಂಕ್‌ಗಳಿಗೆ ಜಿಗಿಯುತ್ತಿದ್ದರು. ಹೀಗೆ ಗುಲ್ಬರ್ಗ್ ವಸತಿಸಂಕೀರ್ಣದಲ್ಲಿ ಹಿರಿಯರು, ಕಿರಿಯರ ಇಡೀ ಸಮೂಹವನ್ನು ಕತ್ತರಿಸಲಾಗಿತ್ತು ಹಾಗೂ ಸುಟ್ಟು ಬೂದಿ ಮಾಡಲಾಗಿತ್ತು.
 ಈ ಹತ್ಯಾಕಾಂಡ ಅ ದಿನವೇ ಕೊನೆಯಾಗಲಿಲ್ಲ. ಆಡಳಿತಾರೂಢ ಬಿಜೆಪಿಯ ಸಂಪೂರ್ಣ ಬೆಂಬಲದೊಂದಿಗೆ ರಾಜ್ಯದಾದ್ಯಂತ ಸುದ್ದಿಪತ್ರಿಕೆಗಳು ಸುಳ್ಳುಸುದ್ದಿಗಳನ್ನು ಹರಡಿದರೆ, ಇನ್ನೊಂದೆಡೆ ಅಧಿಕಾರಾರೂಢ ರಾಜಕಾರಣಿಗಳು ಜನರನ್ನು ಕೆರಳಿಸಲು ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದರು. ಇಡೀ ಗುಜರಾತ್ ಹಿಂಸೆಯ ದಳ್ಳುರಿಯಲ್ಲಿ ಬೇಯುತ್ತಿತ್ತು. ಅಹ್ಮದಾಬಾದ್‌ನ ಗುಲ್ಬರ್ಗ ಸೊಸೈಟಿ ಮತ್ತು ನರೋಡಾಪಾಟಿಯಾದಿಂದ ಹಿಡಿದು ಗುಜರಾತ್‌ನಾದ್ಯಂತದ ಹಳ್ಳಿಗಳಿಂದ ಹೆಣಗಳನ್ನು ಟ್ರಕ್‌ಗಳಲ್ಲಿ ತುಂಬಿಕೊಂಡು ಬಂದು, ಸಾಕ್ಷನಾಶಪಡಿಸಲು ಅವುಗಳನ್ನು ಆಳವಾದ ಬಾವಿಗಳಿಗೆ ಎಸೆಯಲಾಗಿತ್ತು.
 ಇಡೀ ಗುಜರಾತ್ ರಾಜ್ಯವು ಹೊತ್ತಿ ಉರಿಯುತ್ತಿದ್ದಂತೆಯೇ, ಎಲ್ಲೆಡೆ ಮಹಿಳೆಯರು ಹಾಗೂ ಮಕ್ಕಳು ಸಹಾಯಕ್ಕಾಗಿ ಆರ್ತನಾದ ಮಾಡುತ್ತಾ ರಸ್ತೆಗಳಲ್ಲಿ ದಿಕ್ಕಾಪಾಲಾಗಿ ಓಡಿದರು. ನಿಮ್ಮನ್ನು ರಕ್ಷಿಸಲು ನಮಗೆ ಯಾವುದೇ ಆದೇಶ ದೊರೆತಿಲ್ಲ ಎಂದು ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು ಹೇಳಿದ್ದರು. ಬಿಜೆಪಿ ಆಳ್ವಿಕೆಯ ಗುಜರಾತ್‌ನಲ್ಲಿ ಹಾಡಹಗಲೇ ನಡೆದ ಹಿಂಸಾಚಾರದ ಬಗ್ಗೆ ಮಾನವಹಕ್ಕುಗಳ ಆಯೋಗವು ನಡೆಸಿದ ಹಿಂಸಾಚಾರದ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ ಮಾನವಹಕ್ಕುಗಳ ಕಣ್ಗಾವಲು ಸಮಿತಿಯು, ತನ್ನ ವರದಿಯಲ್ಲಿ ಈ ವಿಷಯವನ್ನು ದೃಢಪಡಿಸಿದೆ.
ಇಂತಹ ಘಟನೆ ನಡೆಯುವುದನ್ನು ಯೋಚಿಸಲೂ ಅಸಾಧ್ಯವಾಗಿದೆ. ಆದರೆ ಇದು ಭಾರತಾದ್ಯಂತ ನಡೆಯುತ್ತಿದೆ. ರಾಜಕೀಯ ಹಾಗೂ ಅಧಿಕಾರಕ್ಕಾಗಿ ನಾವು ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದೇವೆ.
 ನನ್ನ ತಂದೆ ಓರ್ವ ನ್ಯಾಯವಾದಿ, ರಾಜಕಾರಣಿ ಹಾಗೂ ಕವಿಯಾಗಿದ್ದರು. ಅವರು ತನ್ನ ಪುಸ್ತಕ ‘ಕಂದೀಲ್’ನಲ್ಲಿ ಭಾರತದ ಬಗ್ಗೆ ಹೀಗೆ ಬರೆದಿದ್ದಾರೆ.
ಹರ್ ದಿಲ್ ಮೇ ಮುಹಬ್ಬತ್ ಕಿ ಉಖ್ವಾತ್ ಕಿ ಲಗಾನ್ ಹೈ
ಯೇ ಮೇರಾ ವತನ್ ಮೇರಾ ವತನ್ ಮೇರಾ ವತನ್ ಹೈ
ಇಲ್ಲಿ ರಾಜಕೀಯವೆಂಬುದು ದ್ವೇಷದ ಆಟವಾಗಿದೆ. ಹಿಂದೂ ಮುಸ್ಲಿಂ ದ್ವೇಷದ ಆಧಾರದಲ್ಲಿ ಚುನಾವಣೆಗಳಲ್ಲಿ ಹೋರಾಡಲಾಗುತ್ತದೆ. ಇದು ನಿಲ್ಲಬೇಕಾಗಿದೆ. ಭಾರತವು ಜಾತ್ಯತೀತ ದೇಶವಾಗಿದೆ. ನಮ್ಮ ಸಂಸ್ಥಾಪಕರು ಸುಂದರವಾದ ಸಂವಿಧಾನವೊಂದನ್ನು ರಚಿಸಿದ್ದಾರೆ. ಅದರಂತೆ ನಡೆಯೋಣ.

ನಿಶ್ರಿನ್ ಹುಸೈನ್ ಅವರು, ಝಕಿಯಾ ಜಾಫ್ರಿ ಹಾಗೂ ಇಹ್ಸಾನ್ ಜಾಫ್ರಿ ಅವರ ಪುತ್ರಿ
ನಿಶ್ರಿನ್ ಅವರ ಕುಟುಂಬವು ಹಲವಾರು ಸಂದರ್ಭಗಳಲ್ಲಿ ಕೇಸರಿ ದ್ವೇಷ ರಾಜಕಾರಣಕ್ಕೆ ಬಲಿಪಶುವಾಗಿತ್ತು. 1969 ಹಾಗೂ 2002ರಲ್ಲಿ ಆಕೆಯ ಕುಟುಂಬ ಹಾಗೂ ಇತರ ಸಾವಿರಾರು ಕುಟುಂಬಗಳು ಅನುಭವಿಸಿದ ಯಾತನೆಗಳ, ದುಃಖಭರಿತ ಸ್ಮರಣೆಗಳನ್ನು ಓದಿದಾಗ, ಈ ದ್ವೇಷಕ್ಕೆ ಪ್ರಚೋದನೆ ನೀಡಿದವರು ಈಗ ಕೇಂದ್ರ ಹಾಗೂ ಹಲವಾರು ರಾಜ್ಯಗಳಲ್ಲಿ ಆಳ್ವಿಕೆ ನಡೆಸುತ್ತಿದ್ದಾರೆಂಬುದನ್ನು ನಾವು ಅರಿತುಕೊಳ್ಳಬೇಕಾಗಿದೆ. ಈ ಸರಕಾರಗಳು ನಿರ್ಭೀತಿಯ ವಾತಾವರಣವನ್ನು ಒದಗಿಸಿಕೊಟ್ಟಿರುವುದು, ವಿವಿಧ ಬಲಪಂಥೀಯ ಸಂಘಟನೆಗಳ ‘ಕಟ್ಟಾಳು’ಗಳಿಗೆ ಮುಸ್ಲಿಮರನ್ನು ಥಳಿಸಲು ಹಾಗೂ ಅಲ್ಪಸಂಖ್ಯಾತರು, ದಲಿತರು, ಮಾನವಹಕ್ಕು ಕಾರ್ಯಕರ್ತರು ಹಾಗೂ ಮೂಲಭೂತವಾಗಿ ಅವರನ್ನು ವಿರೋಧಿಸುವವರನ್ನು ಭಯಗ್ರಸ್ತಗೊಳಿಸುವಂತೆ ಮಾಡಲು ಪ್ರಚೋದಿಸಿದೆ.
ಈ ದ್ವೇಷಕಾರಕ ಸಂಘಟನೆಗಳು ಜಾಗತಿಕವಾಗಿ ಹಿಂದೂಗಳ ನಡುವೆ ಸಂಪರ್ಕ ಏರ್ಪಡಿಸುವ ಸಮಾನ ಒಳಿತಿಗಾಗಿ ಶ್ರಮಿಸುವ, ಪರಸ್ಪರಲ್ಲಿ ಸ್ಫೂರ್ತಿ ತುಂಬುವ, ಚಿಂತನೆಗಳನ್ನು ಹಂಚಿಕೊಳ್ಳುವ ಸೋಗಿನಲ್ಲಿ ಸೆ.7ರಿಂದ9ರವರೆಗೆ ಚಿಕಾಗೋದಲ್ಲಿ ವಿಶ್ವ ಹಿಂದೂ ಕಾಂಗ್ರೆಸ್ ಸಮಾವೇಶವನ್ನು ಆಯೋಜಿಸಿವೆ. ಈ ದ್ವೇಷಕಾರಕ ಗುಂಪುಗಳ ಅನೇಕ ನಾಯಕರು ವಿಶ್ವ ಹಿಂದೂ ಕಾಂಗ್ರೆಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಅವರ ದ್ವೇಷದ ರಾಜಕೀಯವನ್ನು ನಾವು ತಿರಸ್ಕರಿಸುತ್ತೇವೆ ಹಾಗೂ ಅವರು ಎಲ್ಲಾ ಹಿಂದೂಗಳನ್ನು ಪ್ರತಿನಿಧಿಸುವುದಿಲ್ಲ ಮತ್ತು ಹಿಂದೂ ಏಕತೆಯ ಸೋಗಿನಲ್ಲಿ ಅವರು ಬಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲವೆಂಬುದನ್ನು ಎಂಬ ಸಂದೇಶವನ್ನು ಈ ಲೇಖನದ ಮೂಲಕ ಅವರಿಗೆ ಕಳುಹಿಸಲು ನಾವು ಬಯಸುತ್ತಿದ್ದೇವೆ.
ಕೃಪೆ: ದಿ ವೈರ್.ಇನ್

Writer - ನಿಶ್ರಿತ್ ಹುಸೈನ್

contributor

Editor - ನಿಶ್ರಿತ್ ಹುಸೈನ್

contributor

Similar News

ಜಗದಗಲ
ಜಗ ದಗಲ