ಭಾರತ್ ಬಂದ್ : ರಾಜ್ ಘಾಟ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಭಟನೆಗೆ ಚಾಲನೆ

Update: 2018-09-10 06:34 GMT

ಹೊಸದಿಲ್ಲಿ, ಸೆ.10: ತೈಲ ಬೆಲೆ ಏರಿಕೆಯ ಕೇಂದ್ರದ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ  ವಿಪಕ್ಷ  ಕಾಂಗ್ರೆಸ್ ಹಾಗೂ ಎಡಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ಪ್ರತಿಭಟನೆಗೆ  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ ಘಾಟ್ ನಲ್ಲಿ ಇಂದು  ಬೆಳಗ್ಗೆ ಚಾಲನೆ ನೀಡಿದರು. 

ಕಾಂಗ್ರೆಸ್ ಪಕ್ಷದ ನಾಯಕರು ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ ಘಾಟ್ ನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರಿಗೆ ನಮನ ಸಲ್ಲಿಸಿದ ಬಳಿಕ ಪ್ರತಿಭಟನೆ  ಆರಂಭಿಸಿದರು. 

ಭಾರತ್ ಬಂದ್ ಗೆ ಜೆಡಿಎಸ್, ಎಸ್ ಪಿ, ಡಿಎಂಕೆ, ಆರ್ ಜೆಡಿ, ಎಂಎನ್ ಎಸ್ ಬೆಂಬಲ ನೀಡಿದೆ. ಆದರೆ ಆಪ್, ಬಿಜೆಡಿ , ಶಿವಸೇನಾ, ಟಿಎಂಸಿ ಪಕ್ಷಗಳು ಬಂದ್  ಪ್ರತಿಭಟನೆಯಿಂದ ದೂರ ಉಳಿದಿವೆ.

ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಹಿರಿಯ ಮುಖಂಡರಾದ ಗುಲಾಂನಬಿ ಆಜಾದ್, ಅಶೋಕ್ ಗೆಹ್ಲೋಟ್ ,  ಆನಂದ್ ಶರ್ಮಾ  ಪಾಲ್ಗೊಂಡಿದ್ದಾರೆ.

ಕಳೆದ ಆಗಸ್ಟ್ 31ರಂದು ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೆಪ್ಟೆಂಬರ್ 12ರಂದು ವಾಪಸ್ ಆಗಮಿಸುವುದು ಈ ಹಿಂದೆ ನಿಗದಿಯಾಗಿತ್ತು.  ಆದರೆ ತಮ್ಮ ಪಕ್ಷದ ನೇತೃತ್ವದಲ್ಲಿ ಭಾರತ್ ಬಂದ್ ಘೋಷಣೆ ಮಾಡಿರುವುದರಿಂದ ರಾಹುಲ್ ಗಾಂಧಿ  ತಮ್ಮ ಮಾನಸ ಸರೋವರ ಯಾತ್ರೆಯನ್ನು ಮೊಟಕುಗೊಳಿಸಿ  ಎರಡು ದಿನ ಮುಂಚಿತವಾಗಿ ಆಗಿಮಿಸಿ,   ಪಕ್ಷದ ಕರೆ ನೀಡಿರುವ  ಪ್ರತಿಭಟನೆಯ ನೇತೃತ್ವ  ವಹಿಸಿದ್ದಾರೆ. 

ಭಾರತ ಬಂದ್ ದೇಶದ ವಿವಿಧ ನಗರಗಳಲ್ಲಿ...

*ಭಾರತ್ ಬಂದ್  ಪರಿಣಾಮವಾಗಿ ಮುಂಬೈ ನಲ್ಲಿ ಶೇ 30 ರಷ್ಟು  ಆಟೋ ಗಳು ರಸ್ತೆ ಗಿಳಿದಿಲ್ಲ. ನಗರದ ಒಳಗೆ ಹಾಗೂ  ಹೊರಗೆ ಪ್ರತಿಭಟನೆ ನಡೆಯುತ್ತಿದೆ.  ಅಂಧೇರಿ ರೈಲು ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯ ಕರ್ತರು ರೈಲು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಪುಣೆಯಲ್ಲಿ  ಎಂಎನ್ ಎಸ್ ಕಾರ್ಯಕರ್ತರು ಪುಣೆ ಮುನ್ಸಿಪಾಲ್ ಟಾನ್ಸ್ ಪೋರ್ಟ್  ಬಸ್ ಗೆ ಬೆಂಕಿ ಹಚ್ಚಿದ್ದಾರೆ

ಬೆಂಗಳೂರಿನಲ್ಲಿ ಬಂದ್ ನ ಹಿನ್ನೆಲೆಯಲ್ಲಿ  ಪೆಟ್ರೋಲ್ ಬಂಕ್ ಗಳನ್ನು ಪೊಲೀಸರು ಬಂದ್ ಮಾಡಲು ಸೂಚಿಸಿದ್ದಾರೆ.

*ಕಲಬುರಗಿ ನಗರದ ಪಟೇಲ್  ವೃತ್ತದಲ್ಲಿ  ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.

*ಹುಬ್ಬಳ್ಳಿಯಲ್ಲಿ  ತೆರೆದಿದ್ದ ಆಯೋಧ್ಯಾ ಮತ್ತು ದುರ್ಗಾದರ್ಶಿನಿ ಹೋಟೆಲ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿ ಹೋಟೆಲ್ ನ್ನು ಬಲವಂತವಾಗಿ ಮುಚ್ಚಿಸಿದ್ದಾರೆ.

*ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಕರಾವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

* ಬೆಳಗಾವಿಯಲ್ಲಿ ತೈಲ ಬೇರಿಕೆಯನ್ನು ಬೆಂಬಲಿಸಿ ಮಾತನಾಡಿದ ಎಎಪಿ ಕಾರ್ಯಕರ್ತರೊಬ್ಬರ ಮೇಲೆ  ಹಲ್ಲೆ ನಡೆದಿದೆ

*ಮಂಗಳೂರಿನಲ್ಲಿ ಎಂಎಲ್ಸಿ ಐವನ್ ಡಿ ಸೋಜಾ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ  ನಡೆಸುತ್ತಿದ್ದಾರೆ. 

*ಬಳ್ಳಾರಿಯಲ್ಲಿ ಶಾಸಕರೊಬ್ಬರು ತೈಲಬೆಲೆ ಏರಿಕೆಯನ್ನು ಖಂಡಿಸಿ ರಸ್ತೆಯಲ್ಲಿ ಟೀ ಮಾಡಿ ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

**ಪಾಟ್ನಾದಲ್ಲಿ ಜೆಎಪಿಎಲ್ ಕಾರ್ಯಕರ್ತರು ರೈಲು ಹಳಿಯಲ್ಲಿ ಜಮಾಯಿಸಿ ರೈಲು ಸಂಚಾರಕ್ಕೆ ತಡೆ ನಿರ್ಮಿಸಿದ್ದಾರೆ.

*ತಮಿಳುನಾಡಿನಲ್ಲಿ ಭಾರತ್ ಬಂದ್ ನಿಂದ ರಾಜ್ಯ ಸಾರಿಗೆ ಬಸ್ ಗಳ ಓಡಾಟಕ್ಕೆ ಧಕ್ಕೆ ಉಂಟಾಗಿಲ್ಲ. ಕನ್ಯಾ ಕುಮಾರಿ ಮತ್ತು ತಿರುನೆಲ್ವೇಲಿ ಜಿಲ್ಲೆಯಲ್ಲಿ ಬಸ್ ಎಂದಿನಂತೆ ಓಡಾಡುತ್ತಿದೆ. ಆದರೆ ಕೇರಳ ಸರಕಾರದ ಬಸ್ ಗಳ ಓಡಾಟ ಸ್ಥಗಿತಗೊಂಡಿದೆ.

*ಮುಂಬೈ, ಥಾಣೆ, ನವಿ ಮುಂಬೈನಲ್ಲಿ ಎಂಎನ್ ಎಸ್ ದಾಳಿಗೆ ಹೆದರಿ ಪೆಟ್ರೋಲ್  ಬಂಕ್ ಗಳು ಬಾಗಿಲು ತೆರೆದಿಲ್ಲ. ಆಟೋ, ಟಾಕ್ಸಿ, ಬಸ್ ಮತ್ತು ರೈಲುಗಳ  ಓಡಾಟ ಮುಂಬೈನಲ್ಲಿ ಎಂದಿನಂತೆ ಕಂಡು ಬಂದಿದೆ.

* ವಿಜಯವಾಡಾದಲ್ಲಿ ಬಂದ್ ಮಧ್ಯಾಹ್ನ  2 ಗಂಟೆಯ ತನಕ ನಡೆಯಲಿದೆ

*ಕೋಲ್ಕತಾದಲ್ಲಿ ಭಾರತ್ ಬಂದ್ ನಿಂದ ಜನಸಾಮಾನ್ಯರಿಗೆ ತೊಂದರೆಯಾಗಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News