ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಯುವ ನಾಯಕರು: ವೀಡಿಯೋ ವೈರಲ್

Update: 2018-09-10 07:12 GMT

ಭೋಪಾಲ್,ಸೆ.10 : ಇಬ್ಬರು ಭಾರತೀಯ ಜನತಾ ಯುವ ಮೋರ್ಚಾದ ನಾಯಕರು ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಗಾಳಿಯಲ್ಲಿ ಗುಂಡು  ಹಾರಿಸುತ್ತಿರುವ ದೃಶ್ಯದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ವ್ಯಕ್ತಿಯೊಬ್ಬರು ಮಧ್ಯ ಪ್ರದೇಶದ ಭೋಪಾಲದಲ್ಲಿನ ಬೈರಾಘರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಒಂದು ವೀಡಿಯೋದಲ್ಲಿ ಬಿಜೆವೈಎಂ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ರಾಹುಲ್ ರಾಜಪುತ್ ಅವರು ಗಾಳಿಯಲ್ಲಿ ಗುಂಡು ಹಾರಿಸುವುದು ಕಂಡು ಬಂದರೆ ಬೈರಾಘರ್ ನ ಅದೇ ಜಾಗದಲ್ಲಿ ತೆಗೆಯಲಾದ ಇನ್ನೊಂದು ವೀಡಿಯೋದಲ್ಲಿ ಸಂಘಟನೆಯ ಭೋಪಾಲ್ ಜಿಲ್ಲಾಧ್ಯಕ್ಷ ನಿತಿನ್ ದುಬೆ ಕೂಡ ಅಂತೆಯೇ ಗಾಳಿಯಲ್ಲಿ ಗುಂಡು ಹಾರಿಸುವುದು ಕಾಣಿಸುತ್ತದೆ.

ಸುದ್ದಿ ಸಂಸ್ಥೆಯೊಂದರೊಂದಿಗೆ ಮಾತನಾಡಿದ ರಾಹುಲ್ ರಾಜಪುತ್, ಪಕ್ಷ ಕಾರ್ಯಕರ್ತರು ರವಿವಾರ ತಮ್ಮ ಹುಟ್ಟು ಹಬ್ಬ ಆಚರಿಸುತ್ತಿದ್ದರು, ಅವರಲ್ಲೊಬ್ಬರ ಇಚ್ಛೆಯಂತೆ ತಾವು ಹಾಗೂ ನಿತಿನ್ ದುಬೆ ಚೀನಾ ನಿರ್ಮಿತ ಏರ್ ಗನ್ ನಿಂದ ಗುಂಡು ಹಾರಿಸಿದ್ದಾಗಿ ತಿಳಿಸಿದ್ದಾರೆ.

"ನಾನೊಬ್ಬ ಜವಾಬ್ದಾರಿಯುತ ನಾಗರಿಕ. ಅದೊಂದು ಚೀನಾ ನಿರ್ಮಿತ ಏರ್ ಗನ್  ಆಗಿತ್ತೇ ವಿನಹ ಹನ್ನ ಲೈಸನ್ಸ್ ಹೊಂದಿದ ರಿವಾಲ್ವರ್ ಆಗಿರಲಿಲ್ಲ'' ಎಂದು ಅವರು ಹೇಳಿಕೊಂಡಿದ್ದಾರೆ.

ದೂರು ನೀಡಿದವರು ಜತೆಗೆ ವೀಡಿಯೋ ಕ್ಲಿಪ್ಪಿಂಗ್ ಕೂಡ ನೀಡಿದ್ದಾಗಿ ಪೊಲೀಸರು ತಿಳಿಸಿದ್ದು, ಲೈಸನ್ಸ್ ಹೊಂದಿದ ಬಂದೂಕಿನಿಂದಲೂ ಸಂಭ್ರಮಾಚರಣೆಗೆ ಗುಂಡು ಹಾರಿಸುವುದು ಅಪರಾಧವಾಗಿದೆ ಎಂದು  ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News