ಕೇರಳದ ಈ ಮಾರಾಟ ಮಳಿಗೆಯಲ್ಲಿ ಹುಡುಕಿದರೂ ನಿಮಗೆ ಕ್ಯಾಷಿಯರ್ ಕಾಣುವುದಿಲ್ಲ!

Update: 2018-09-10 11:21 GMT

ಕೊಚ್ಚಿಯ ಗೋಲ್ಡ್ ಸೋಕ್ ಗ್ರಾಂಡ್ ಮಾಲ್‌ನಲ್ಲಿ ಕಳೆದ ವಾರವಷ್ಟೇ ಆರಂಭಗೊಂಡಿರುವ ಮಳಿಗೆಯಲ್ಲಿ ನೀವು ಹುಡುಕಾಡಿದರೂ ಕ್ಯಾಷಿಯರ್ ಕಂಡುಬರುವುದಿಲ್ಲ. ಹೀಗಾಗಿ ನೀವು ಹಣ ಪಾವತಿಸಲು ಸರದಿ ಸಾಲಿನಲ್ಲಿ ನಿಲ್ಲಬೇಕಾದ ಕಿರಿಕಿರಿಯೂ ಇಲ್ಲ. ನಿಮಗೆ ಬೇಕಾದ ವಸ್ತುವನ್ನೆತ್ತಿಕೊಂಡು ನೇರವಾಗಿ ಮಳಿಗೆಯಿಂದ ಹೊರಗೆ ಹೋಗಬಹುದು!

ಸರಣಿ ಮಳಿಗೆಗಳನ್ನು ಹೊಂದಿರುವ ವಾಟಾಸೇಲ್ ಅಮೆರಿಕದಲ್ಲಿಯ ಅಮೆಝಾನ್ ಗೋ ಸ್ಟೋರ್‌ಗಳಿಂದ ಸ್ಫೂರ್ತಿ ಪಡೆದು ಆರಂಭಿಸಿರುವ ಈ ಮಳಿಗೆಯು ಸಂಪೂರ್ಣವಾಗಿ ಸ್ವಯಂಚಾಲಿತವಾಗಿದ್ದು, ಕ್ಯಾಷಿಯರ್ ಮುಕ್ತವಾಗಿದೆ. ಇಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ನಿಮ್ಮ ಚೀಲದಲ್ಲಿ ಹಾಕಿಕೊಂಡು ಹೊರಟರಾಯಿತು, ಅವುಗಳ ಖರೀದಿ ವೆಚ್ಚ ನಿಮ್ಮ ಇ-ವ್ಯಾಲೆಟ್‌ನಿಂದ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.

► ಆ್ಯಪ್-ಸ್ವೈಪ್-ಗೋ

500 ಚದರಡಿ ವಿಸ್ತೀರ್ಣದ ಈ ಮಳಿಗೆಯು ಕೃತಕ ಬುದ್ಧಿಮತ್ತೆ, ಕ್ಯಾಮೆರಾ ತಂತ್ರಜ್ಞಾನ ಮತ್ತು ಸೆನ್ಸರ್‌ಗಳನ್ನು ಆಧರಿಸಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ ವಾಟಾಸೇಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡ ಬಳಿಕ ಇ-ಮೇಲ್ ಮತ್ತು ಫೋನ್ ನಂಬರ್ ಬಳಸಿ ನೊಂದಾಯಿಸಿಕೊಳ್ಳಬೇಕು.

ಆ್ಯಪ್ ಒದಗಿಸುವ ಕ್ಯೂಆರ್ ಕೋಡ್ ಗ್ರಾಹಕರ ‘ಐಡೆಂಟಿಫೈರ್’ ಮತ್ತು ಅವರಿಗೆ ಮಳಿಗೆಯೊಳಗೆ ಪ್ರವೇಶ ನೀಡುವ ‘ಟಿಕೆಟ್’ಆಗಿ ಕಾರ್ಯನಿರ್ವಹಿಸುತ್ತದೆ. ಗ್ರಾಹಕರು ಕ್ಯೂಆರ್ ಕೋಡ್‌ನ್ನು ಸ್ಕಾನ್ ಮಾಡಿ ಮಳಿಗೆಯನ್ನು ಪ್ರವೇಶಿಸಬೇಕಾಗುತ್ತದೆ.

► ಶಾಪಿಂಗ್ ಅನುಭವ ಹೇಗೆ?

ಈ ಮಳಿಗೆಯಲ್ಲಿ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನೆತ್ತಿಕೊಂಡು ಹೊರಟು ಹೋಗಬಹುದು. ಪ್ರವೇಶ ದ್ವಾರದಲ್ಲಿ ಒಮ್ಮೆ ಕ್ಯೂಆರ್ ಕೋಡ್‌ನ್ನು ಸ್ಕಾನ್ ಮಾಡಿದರಾಯಿತು,ಇಲ್ಲಿ ಅವರು ಆಯ್ಕೆ ಮಾಡಿಕೊಳ್ಳುವ ಪ್ರತಿಯೊಂದೂ ಉತ್ಪನ್ನವನ್ನು ಸ್ಕಾನ್ ಮಾಡಬೇಕಿಲ್ಲ. ಆ್ಯಪ್ ಬಿಲ್ ಮೊತ್ತವನ್ನು ಗ್ರಾಹಕರ ಖಾತೆಯಿಂದ ಅಥವಾ ಇ-ವ್ಯಾಲೆಟ್‌ನಿಂದ ಆಟೋಮ್ಯಾಟಿಕ್ ಆಗಿ ಕಡಿತಗೊಳಿಸುತ್ತದೆ. ಕ್ಯಾಷಿಯರ್ ಮುಂದೆ ಸರದಿ ಸಾಲಿನಲ್ಲಿ ನಿಂತು ಬಿಲ್ ಪಾವತಿಗಾಗಿ ಕಾಯುವ ರಗಳೆಯಿಲ್ಲ.

ಮಳಿಗೆಯ ಸೀಲಿಂಗ್ ಮತ್ತು ಶೆಲ್ಫ್‌ಗಳಲ್ಲಿ ಅತ್ಯಾಧುನಿಕ ಸೆನ್ಸರ್‌ಗಳು ಮತ್ತು ಕ್ಲೋಸ್ಡ್ ಸರ್ಕ್ಯೂಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯು ಗ್ರಾಹಕರ ಪ್ರತಿಯೊಂದೂ ಚಲನವಲನದ ಮೇಲೆ ಕಣ್ಣಿರಿಸುತ್ತದೆ. ಅವರು ರ್ಯಾಕ್‌ನಿಂದ ಎತ್ತಿಕೊಂಡ ಮತ್ತು ವಾಪಸ್ ಇಟ್ಟ ಪ್ರತಿಯೊಂದೂ ವಸ್ತುವನ್ನು ಅದು ದಾಖಲಿಸಿಕೊಳ್ಳುತ್ತದೆ. ಇತರ ಕ್ಯಾಷಿಯರ್ ರಹಿತ ಮಳಿಗೆಗಳಲ್ಲಿ ಗ್ರಾಹಕರು ತಾವು ಖರೀದಿಸಿದ ವಸ್ತುಗಳನ್ನು ತಾವೇ ಸ್ಕಾನ್ ಮಾಡಬೇಕಾಗುತ್ತದೆ,ಆದರೆ ಈ ಅತ್ಯಾಧುನಿಕ ಮಳಿಗೆಯಲ್ಲಿ ಅದರ ಅಗತ್ಯವಿಲ್ಲ.

► ಹೆಚ್ಚುತ್ತಿರುವ ಆಕರ್ಷಣೆ

ಜಾಗತಿಕವಾಗಿ ಕ್ಯಾಷಿಯರ್ ಮುಕ್ತ ಮಳಿಗೆಗಳು ಹೆಚ್ಚಿನ ಆಕರ್ಷಣೆಯನ್ನು ಪಡೆದುಕೊಳ್ಳುತ್ತಿವೆ. ಎರಡು ವರ್ಷಗಳ ಹಿಂದೆ ಚೀನಿ ಸ್ಟಾರ್ಟ್‌ಪ್ ಬಿಂಗೋಬಾಕ್ಸ್ ಕ್ಯಾಷಿಯರ್ ಮುಕ್ತ ಅಂಗಡಿಗಳನ್ನು ಆರಂಭಿಸಿದ್ದು,ಹಾಲಿ ಚೀನಾದ 30 ನಗರಗಳಲ್ಲಿ 300ಕ್ಕೂ ಅಧಿಕ ಇಂತಹ ಅಂಗಡಿಗಳನ್ನು ಹೊಂದಿದೆ. ಒಂದು ವರ್ಷದ ಹಿಂದೆ ಹೈಪರ್‌ಸಿಟಿ ಹೈದರಾಬಾದ್‌ನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಆರಂಭಿಸಿರುವ ಎರಡು ಕ್ಯಾಷಿಯರ್ ಮುಕ್ತ ಮಳಿಗೆಗಳಿಗೆ ಅಗತ್ಯ ತಂತ್ರಜ್ಞಾನವನ್ನು ಬೆಂಗಳೂರಿನ ಸ್ಟಾರ್ಟಪ್ ಒದಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News