ಸಿರಿಯ ಮೇಲೆ ಅಮೆರಿಕದಿಂದ ರಂಜಕ ಬಾಂಬ್: ರಶ್ಯ ಆರೋಪ

Update: 2018-09-10 16:38 GMT

ಮಾಸ್ಕೋ, ಸೆ. 10: ಸಿರಿಯದ ಡೇರ್ ಅಲ್-ರೊರ್ ಪ್ರಾಂತದ ಮೇಲೆ ಅಮೆರಿಕದ ಎರಡು ಎಫ್-15 ಯುದ್ಧ ವಿಮಾನಗಳು ಶನಿವಾರ ರಂಜಕ ಬಾಂಬ್‌ಗಳನ್ನು ಹಾಕಿವೆ ಎಂದು ರಶ್ಯದ ಸೇನೆ ರವಿವಾರ ಆರೋಪಿಸಿದೆ.

ಆದರೆ, ಈ ಆರೋಪವನ್ನು ಅಮೆರಿಕ ನಿರಾಕರಿಸಿದೆ. ಸಿರಿಯದಲ್ಲಿರುವ ಐಸಿಸ್‌ನ ಕೊನೆಯ ಪ್ರಮುಖ ಭದ್ರಕೋಟೆಯಾಗಿರುವ ಹಜಿನ್ ಗ್ರಾಮವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು ಹಾಗೂ ದಾಳಿಯ ಬಳಿಕ ಅಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ರಶ್ಯ ಸೇನೆ ತಿಳಿಸಿದೆ.

ಆದಾಗ್ಯೂ, ಸಾವುನೋವಿನ ಬಗ್ಗೆ ಮಾಹಿತಿಯಿಲ್ಲ ಎಂದಿದೆ. ಆದರೆ, ಅಮೆರಿಕದ ವಿಮಾನಗಳು ರಂಜಕ ಬಾಂಬ್‌ಗಳನ್ನು ಹಾಕಿವೆ ಎಂಬ ವರದಿಗಳನ್ನು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ವಕ್ತಾರರೊಬ್ಬರು ನಿರಾಕರಿಸಿದ್ದಾರೆ. ‘‘ರಂಜಕ ಬಾಂಬ್‌ಗಳನ್ನು ಬಳಸಿರುವುದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ನಮಗೆ ಈವರೆಗೆ ಬಂದಿಲ್ಲ’’ ಎಂದು ಕಮಾಂಡರ್ ಸಿಯನ್ ರಾಬರ್ಟ್‌ಸನ್ ತಿಳಿಸಿದರು.

‘‘ಈ ಪ್ರದೇಶದಲ್ಲಿರುವ ಯಾವುದೇ ಸೇನಾ ಘಟಕಗಳು ಯಾವುದೇ ರೀತಿಯ ಬಿಳಿ ರಂಜಕ ಬಾಂಬ್‌ಗಳನ್ನು ಹೊಂದಿಲ್ಲ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News