ರೂ. 312 ಕೋರ್ಟ್ ಶುಲ್ಕ ರಶೀದಿ ನಾಪತ್ತೆ ಪ್ರಕರಣ 41 ವರ್ಷದ ಬಳಿಕ ಇತ್ಯರ್ಥ !

Update: 2018-09-11 08:27 GMT

ವಾರಣಾಸಿ,ಸೆ.11 : ಗಂಗಾದೇವಿ  ಎಂಬ ಹೆಸರಿನ ಮಹಿಳೆಗೆ ಸಂಬಂಧಿಸಿದ ಆಸ್ತಿ ವ್ಯಾಜ್ಯಕ್ಕೆ ಕುರಿತಂತೆ 1975ರಲ್ಲಿ ಆಸ್ತಿ  ವಶಪಡಿಸಿಕೊಳ್ಳಲಾಗುವ ನೋಟಿಸ್ ಅನ್ನು ಮಿರ್ಜಾಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ನೀಡಿದಾಗ ಆಗ 37 ವರ್ಷದವಳಾಗಿದ್ದ ಆಕೆ ಅದನ್ನು ವಿರೋಧಿಸಿದ್ದಳಲ್ಲದೆ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಳು. 1977ರಲ್ಲಿ ತೀರ್ಪು ಆಕೆಯ ಪರವಾಗಿ ಬಂದಿತ್ತು.

ಆದರೆ ವಿಚಾರಣೆ ವೇಳೆ ಆಕೆಗೆ ರೂ. 312 ಕೋರ್ಟ್ ಶುಲ್ಕ ಪಾವತಿಸುವಂತೆ ಹೇಳಿದಾಗ ಆಕೆ ಅಂತೆಯೇ ಮಾಡಿದ್ದಳು. ಆದರೆ ಆಕೆ ಶುಲ್ಕ ಪಾವತಿಸಿದ್ದಕ್ಕೆ ಪಡೆದಿದ್ದ ರಶೀದಿ ಹೇಗೋ ಕಾಣೆಯಾಗಿತ್ತು. ಆದರೆ ಆ ರಶೀದಿ ಇಲ್ಲವೆಂದ ಮಾತ್ರಕ್ಕೆ ಆಕೆ ಮತ್ತೆ ಹಣ ಪಾವತಿಸಲು ನಿರಾಕರಿಸಿದಾಗ ಪ್ರಕರಣ 41 ವರ್ಷಗಳ ತನಕ ಮುಂದುವರಿದಿತ್ತು ಹಾಗೂ ಕೊನೆಗೂ ಆಗಸ್ಟ್ 31, 2018ರಂದು ತೀರ್ಪು ಹೊರಬಿದ್ದಾಗ ಆಕೆ ಗೆದ್ದಿದ್ದಳು. ಆದರೆ ಈ ಸಂತೋಷದ ಕ್ಷಣವನ್ನು ಆನಂದಿಸಲು ಗಂಗಾ ಬದುಕಿರಲಿಲ್ಲ. ಆಕೆ 2005ರಲ್ಲಿಯೇ ಮೃತಪಟ್ಟಿದ್ದಳು.

1977ರಲ್ಲಿ ಆಕೆ ಈ ಪ್ರಕರಣದ ಹೋರಾಟಕ್ಕೆ ಕೈಹಾಕಿದ ಸಮಯ ರೂ. 312 ದೊಡ್ಡ ಮೊತ್ತವಾಗಿತ್ತು ಎಂಬುದನ್ನು ಅಲ್ಲಗಳೆಯಲಾಗದು.

ಆದರೆ ಈ ಪ್ರಕರಣ ಮಿರ್ಜಾಪುರ ಹಿರಿಯ ಜಡ್ಜ್ ಲವ್ಲಿ ಜೈಸ್ವಾಲ್ ಅವರ ಬಳಿ ಬಂದಾಗ ಹಾಗೂ ಅವರು ಎಲ್ಲಾ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಗಂಗಾ ಹಣ ಪಾವತಿಸಿದ್ದಳೆಂದು ತಿಳಿದು ಬಂದಿತ್ತು. ಕಡತದಲ್ಲಿನ ದೋಷದಿಂದಾಗಿ ಹೀಗಾಗಿದೆ. ಯಾವುದೇ ಕೋರ್ಟ್ ಫೀ ಬಾಕಿಯಿಲ್ಲ, ಪ್ರಕರಣ ವಿಲೇವಾರಿಗೊಳಿಸಲಾಗಿದೆ ಎಂದು ನ್ಯಾಯಾಧೀಶೆ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಆದರೆ ಪ್ರಕರಣ ಇದಕ್ಕಿಂತ ಮುಂಚೆ 11 ಮಂದಿ ನ್ಯಾಯಾಧೀಶರ ಮುಂದೆ ಬಂದಾಗಲೂ ಆಕೆಯ ಮನವಿಗೆ ಯಾರೂ ಸ್ಪಂದಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News