ಪೊಲೀಸರು ತನಿಖೆಯ ದಿಕ್ಕು ತಪ್ಪಿಸಿ ಭಿಡೆ , ಎಕ್ಬೊಟೆಯನ್ನು ರಕ್ಷಿಸುತ್ತಿದ್ದಾರೆ : ಪುಣೆ ಉಪಮೇಯರ್ ಸಿದ್ಧಾರ್ಥ್ ಧೆಂಡೆ

Update: 2018-09-11 10:28 GMT

ಪುಣೆ, ಸೆ.11 : ಜನವರಿ 1ರಂದು ನಡೆದ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ನೀಡುತ್ತಿರುವ ಹೇಳಿಕೆಗೂ  ಪುಣೆ ಉಪ ಮೇಯರ್  ಸಿದ್ಧಾರ್ಥ್ ಧೆಂಡೆ ಅವರ ನೇತೃತ್ವದ 10 ಮಂದಿ ಸದಸ್ಯರ ಸತ್ಯ ಶೋಧನಾ ಸಮಿತಿಯ ವರದಿಗೂ ಅಜಗಜಾಂತರ ವ್ಯತ್ಯಾಸವಿದೆ. ಹತ್ತು ದಿನಗಳ ಕಾಲ  ಸಂಪೂರ್ಣ ಘಟನೆಯ ಬಗ್ಗೆ ಮಾಹಿತಿಯನ್ನು ವಿವಿಧ ಮೂಲಗಳಿಂದ ಹಾಗೂ ಆಯಾಮಗಳಿಂದ ಸಂಗ್ರಹಿಸಿದ್ದ ಸಮಿತಿ ಜನವರಿ 20ರಂದು ನೀಡಿದ್ದ ತನ್ನ ವರದಿಯಲ್ಲಿ ಇಬ್ಬರು ಪುಣೆ ಮೂಲದ ಹಿಂದುತ್ವ ನಾಯಕರಾದ ಮಿಲಿಂದ್ ಎಕ್ಬೊಟೆ ಹಾಗೂ ಮನೋಹರ್ ಭಿಡೆ ಅವರು ಪ್ರಮುಖ ಸಂಚುಕೋರರು ಎಂದು ಗುತುತಿಸಲಾಗಿತ್ತು. ಈ ಹಿಂದೆ ಪುಣೆ ನಿವಾಸಿ ಹಾಗೂ ಘಟನೆಯ ಪ್ರತ್ಯಕ್ಷ ಸಾಕ್ಷಿ ಅನಿತಾ ಸವಳೆ ಎಂಬವರು ಜನವರಿ 2ರಂದು ಪುಣೆ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲೂ ಇವರಿಬ್ಬರೇ ಹಿಂಸೆಗೆ ಕಾರಣರೆಂದು ಹೇಳಲಾಗಿತ್ತು.

ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಇತ್ತೀಚೆಗೆ ಹಲವು ಪ್ರಮುಖ ನಾಗರಿಕ ಹಕ್ಕು ಕಾರ್ಯಕರ್ತರು, ವಕೀಲರು ಹಾಗೂ ಲೇಖಕರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಸತ್ಯುಶೋಧನಾ ಸಮಿತಿಯ ವರದಿ ಮಹತ್ವ ಪಡೆಯುತ್ತದೆ. ಪೊಲೀಸರು ಬಂಧಿತ ಕಾರ್ಯಕರ್ತರು ಮಾವೋವಾದಿಗಳೊಂದಿಗೆ ಸಂಬಂಧ ಹೊಂದಿದ್ದು ಹಾಗೂ ಜನವರಿ 1ರ ಹಿಂಸಾಚಾರವನ್ನು ಅವರು ಉತ್ತೇಜಿಸಿದ್ದರು ಹಾಗೂ ಹಣಕಾಸು ಸಹಾಯ ಒದಗಿಸಿದ್ದರೆಂದು ಹೇಳಿದ್ದರೂ  ಸತ್ಯ ಶೋಧನಾ ಸಮಿತಿ ವರದಿ  ಮಾತ್ರ ಬೇರೆಯೇ ವಿವರಣೆ ನೀಡುತ್ತಿದೆ.

ಭೀಮಾ ಕೋರೆಗಾಂವ್ ನಲ್ಲಿ ಜನವರಿ 1ರಂದು ನಡೆದಿದ್ದು ಪೂರ್ವಯೋಜಿತ ದಾಳಿಯೆಂಬುದಕ್ಕೆ ನೀರಿನ ಟ್ಯಾಂಕರುಗಳಲ್ಲಿ ಸೀಮೆ ಎಣ್ಣೆ ತುಂಬಿಸಿದ್ದು ಹಾಗೂ  ಟೀ ಸ್ಟಾಲ್ ನಲ್ಲಿ ಬೆತ್ತ, ಕತ್ತಿಗಳನ್ನು ಹಿಂದಿನ ರಾತ್ರಿಯೇ ಶೇಖರಿಸಿಟ್ಟಿರುವುದರಿಂದ ಸ್ಪಷ್ಟ ಎಂದು ಪ್ರತ್ಯಕ ಸಾಕ್ಷಿಯ ಹೇಳಿಕೆಯ ಆಧಾರದಲ್ಲಿ ಸತ್ಯಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

ಸತ್ಯಶೋಧನಾ ಸಮಿತಿ ತನ್ನ ವರದಿ ಸಲ್ಲಿಸಿದ ಕೂಡಲೇ ಆ ವರದಿಯಲ್ಲಿ ಹೇಳಿರುವುದನ್ನು ಪೊಲೀಸರು ನಿರಾಕರಿಸಿದ್ದರು.

ಸತ್ಯಶೋಧನಾ ಸಮಿತಿಯ ವರದಿ ಹಾಗೂ ಅನಿತಾ ಸವಳೆ ಅವರ ದೂರಿನ  ಆಧಾರದಲ್ಲಿ ಏನೂ ಕ್ರಮ ಕೈಗೊಳ್ಳದೆ ಪೊಲೀಸರು ಪುಣೆ ಉದ್ಯಮಿ ತುಷಾರ್ ದಾಮ್ಗುಡೆ ಎಂಬವರು ಜನವರಿ 9ರಂದು ಸಲ್ಲಿಸಿದ ದೂರಿನ ಆಧಾರದಲ್ಲಿ ಕ್ರಮಕ್ಕೆ ಮುಂದಾಗಿದ್ದಾರೆ. ಸಂಭಾಜಿ  ಭಿಡೆಯ ಅನುಯಾಯಿಯಾಗಿರುವ ದಾಮ್ಗುಡೆ ತನ್ನ ದೂರಿನಲ್ಲಿ  ಡಿಸೆಂಬರ್ 31, 2018ರಂದು  ಎಲ್ಗಾರ್ ಪರಿಷದ್ ಸಭೆಯಲ್ಲಿ ನೀಡಲಾದ ಪ್ರಚೋದನಾತ್ಮಕ ಭಾಷಣವೇ  ಹಿಂಸೆಗೆ  ಕಾರಣವಾಗಿತ್ತು ಎಂದು ಆರೋಪಿಸಿದ್ದರು.  ಈ ಎಫ್‍ಐಆರ್ ಆಧಾರದಲ್ಲಿಯೇ ಇತ್ತೀಚಿಗಿನ ಬಂಧನ ನಡೆದಿದ್ದರೆ  ಬಂಧಿತ ಹತ್ತು ಜನರ ಪೈಕಿ ಒಬ್ಬರ ಹೆಸರು ಮಾತ್ರ ಎಫ್‍ಐಆರ್ ನಲ್ಲಿದೆ. ಈ ಹೆಸರೇ ಎಲ್ಗಾರ್ ಪರಿಷದ್ ಸಂಘಟಕರಲ್ಲೊಬ್ಬರಾಗಿದ್ದ ಸುಧೀರ್ ಧವಳೆ ಅವರದ್ದಾಗಿತ್ತು.

ತರುವಾಯ ಈ ಹಿಂಸೆಯಲ್ಲಿ ಹಿಂದುತ್ವ ನಾಯಕರ ಪಾತ್ರದ ಕುರಿತಂತೆ ತನಿಖೆಯಲ್ಲಿ ಹೆಚ್ಚಿನ ಪ್ರಗತಿಯಿಲ್ಲ. ಮಿಲಿಂದ್ ಎಕ್ಬೊಟೆ ಜಾಮೀನಿನ ಮೇಲೆ ಹೊರಬಂದಿದ್ದರೆ ಪೊಲೀಸರು ಭಿಡೆ ವಿರುದ್ಧದ  ಆರೋಪಗಳಿಗೆ ಹೆಚ್ಚಿನ ಮಹತ್ವ ನೀಡದೇ ಇರಲು ನಿರ್ಧರಿಸಿದ್ದಾರೆಂದು ಹೇಳಲಾಗಿದೆ. ಇದರ ಹಿಂದಿನ ಕಾರಣವೂ ಸ್ಪಷ್ಟ. ಎಕ್ಬೋಟೆ ಮಾಜಿ ಬಿಜೆಪಿ ಕಾರ್ಪೊರೇಟರ್ ಆಗಿದ್ದಾರಲ್ಲದೆ ಶಿವ ಜಾಗರ್ ಪ್ರತಿಷ್ಠಾನದ ಸ್ಥಾಪಕರೂ ಆಗಿದ್ದಾರೆ. ಭಿಡೆ ಓರ್ವ ಮಾಜಿ ಆರೆಸ್ಸೆಸ್ ಕಾರ್ಯಕರ್ತರಾಗಿದ್ದಾರಲ್ಲದೆ ಹಿಂದು ಜನಜಾಗರಣ್ ಸಮಿತಿ ಸ್ಥಾಪಕರೂ ಆಗಿದ್ದಾರೆ. ಅವರಿಗೆ ದೇಶಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದು ಪ್ರಧಾನಿ ಮೋದಿ ಕೂಡ ಅವರನ್ನು ಗುರೂಜಿ ಎಂದು ಕರೆಯುತ್ತಾರೆ.

ಪೊಲೀಸರು ಉದ್ದೇಶಪೂರ್ವಕವಾಗಿ ಭೀಮಾ ಕೋರೆಗಾಂವ್ ಹಿಂಸಾಚಾರ ಹತ್ತಿಕ್ಕಲು ವಿಫಲರಾಗಿದ್ದರೆಂದು ಸತ್ಯಶೋಧನಾ ವರದಿ ತಿಳಿಸಿದೆ ಹಾಗೂ ಕೇಸರಿ ಧ್ವಜಗಳನ್ನು ಹಿಡಿದವರ ಜತೆಗೆ ಸಾಮಾನ್ಯ ಉಡುಪಿನಲ್ಲಿದ್ದ ಪೊಲೀಸರೂ ಇದ್ದರು ಎಂದು ತಿಳಿಸಿದೆ. ಹಿಂದುತ್ವವಾದಿ ಗುಂಪುಗಳು ವಿಜಯ ಸ್ಥಂಭ್ ಹತ್ತಿರಕ್ಕೆ ಬರುತ್ತಿದ್ದಂತೆ ಚಿಂತಿಸಬೇಡಿ, ಪೊಲೀಸರು ನಮ್ಮ ಜತೆಗಿದ್ದಾರೆ ಎಂದು ಕೆಲವರು ಹೇಳುತ್ತಿರುವುದು ಕೇಳಿಸುತ್ತದೆ.

ಈ ಹಿನ್ನೆಲೆಯಲ್ಲಿ ತನಿಖೆಯನ್ನು ಪೊಲೀಸರು ನಡೆಸದೆ ವಿಶೇಷ ತನಿಖಾ ತಂಡದ ಮೂಲಕ ನಡೆಸಬೇಕೆಂದು ಸಮಿತಿ ಅಭಿಪ್ರಾಯ ಪಟ್ಟಿದೆ. ಆದರೆ ಪುಣೆ ಪೊಲೀಸರು ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ.

ತರುವಾಯ  ಸತ್ಯ ಶೋಧನಾ ಸಮಿತಿಯ ನೇತೃತ್ವ ವಹಿಸಿದ್ದ ಸಿದ್ಧಾರ್ಥ್ ಧೆಂಡೆ  ಬಿಜೆಪಿಯ ಮಿತ್ರ ಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಥಾವಳೆ)ಇದರ ಸದಸ್ಯರಾಗಿದ್ದು ಬಿಜೆಪಿ ಟಿಕೆಟ್ ಪಡೆದು ಪುಣೆ ನಗರಪಾಲಿಕೆ ಚುನಾವಣೆ ಸ್ಪರ್ಧಿಸಿ ಉಪ ಮೇಯರ್ ಆದವರು. ಭೀಮಾ ಕೋರೆಗಾಂವ್ ಹಿಂಸಾಚಾರದಲ್ಲಿ ನಕ್ಸಲ್ ಶಾಮೀಲಾತಿ ಇರುವ ಬಗ್ಗೆ ಪೊಲೀಸರ ಹೇಳಿಕೆಯನ್ನು ತಿರಸ್ಕರಿಸುವ ಅವರು ಹಿಂದುತ್ವ ಗುಂಪುಗಳೇ ಜಾತಿ  ವಿಚಾರದಲ್ಲಿ ಉದ್ವಿಗ್ನತೆ ಸೃಷ್ಟಿಸಿದ್ದವು ಎನ್ನುತ್ತಾರೆ, ವರದಿಗೆ ಪೊಲೀಸರ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ ಅವರು ವರದಿಯು ಕೇಸರಿ ಸಂಘಟನೆಗಳು ಹಾಗೂ ಹಿಂದುತ್ವ ಅಜೆಂಟಾ ಹೊಂದಿದವರಿಗೆ ವಿರುದ್ಧವಾಗಿರುವುದರಿಂದ  ಸರಕಾರದಿಂದ ಒತ್ತಡವಿದೆ ಎನ್ನುತ್ತಾರೆ. ಪೊಲೀಸರು ಭೀಮಾ ಕೋರೆಗಾಂವ್ ಹಿಂಸಾಚಾರದ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ ಹಾಗೂ ಭಿಡೆ, ಎಕ್ಬೋಟೆಯನ್ನು ರಕ್ಷಿಸುತ್ತಿದ್ದಾರೆ ಎಂದೂ ಧೆಂಡೆ ಹೇಳುತ್ತಾರೆ.

ಕೃಪೆ : caravanmagazine.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News