ಗುರಿ ತಪ್ಪಿದ ವಿದ್ಯಾರ್ಥಿ ಸಂಘಟನೆಗಳು

Update: 2018-09-11 18:33 GMT

ಮಾನ್ಯರೇ,

ಇತ್ತೀಚೆಗೆ ವಿದ್ಯಾರ್ಥಿ ಸಂಘಟನೆಗಳು ತಮ್ಮ ಉದ್ದೇಶವನ್ನೇ ಮರೆತಿವೆ. ತಾವು ಮಾಡಲೇಬೇಕಾದ ಕಾರ್ಯಗಳ ಬಗ್ಗೆ ಗಮನಹರಿಸದೆ ಅನವಶ್ಯಕ ವಿಚಾರಗಳ ಬಗ್ಗೆ ಕಾಲಹರಣ ಮಾಡುತ್ತ ವಿದ್ಯಾರ್ಥಿಗಳ ಯುವಶಕ್ತಿ ಪೋಲಾಗುತ್ತಿದೆೆ. ಕರ್ನಾಟಕದ ಮಟ್ಟಿಗೆ ಯುವಜನರ ಪರ ಧ್ವನಿ ಎತ್ತುವಂತಹ, ವಿದ್ಯಾರ್ಥಿಗಳಿಗಾಗುವಂತಹ ಅನ್ಯಾಯದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವಂತಹ ವಿದ್ಯಾರ್ಥಿ ಸಂಘಟನೆಗಳನ್ನು ಭೂತಕನ್ನಡಿ ಇಟ್ಟು ಹುಡುಕಬೇಕಾಗಿದೆ. ಇರುವ ಸಂಘಟನೆಗಳಲ್ಲಿ ಕೆಲವು ಧರ್ಮಗಳಿಗೆ, ರಾಜಕೀಯ ಪಕ್ಷಗಳಿಗೆ ತಮ್ಮನ್ನು ಸಮರ್ಪಿಸಿಕೊಂಡು ಬಿಟ್ಟಿವೆ. ವಿದ್ಯಾಸಂಸ್ಥೆಗಳು ಹಲವಾರು ತರದ ಶುಲ್ಕಗಳನ್ನು ನಮೂದಿಸಿ ಶಿಕ್ಷಣ ಶುಲ್ಕಗಳನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಲೇ ಇವೆ. ಹೀಗಾಗಿ ಉನ್ನತ ವ್ಯಾಸಂಗದ ಕನಸು ಹೊತ್ತಿರುವ ಬಡ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಅನ್ಯಾಯದ ವಿರುದ್ಧ ಹೋರಾಡಬೇಕಾದ ವಿದ್ಯಾರ್ಥಿ ಸಂಘಟನೆಗಳು ಕಾಲೇಜು ಕ್ಯಾಂಪಸ್‌ಗಳಲ್ಲಿ ಯಾವುದೋ ಧರ್ಮದ ಹೆಸರಿನಲ್ಲಿ, ರಾಜಕೀಯ ಪಕ್ಷಗಳ ಹೆಸರಿನಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿವೆ. ರಾಜಕೀಯ ಪಕ್ಷಗಳು ತಮಗೆ ಬೇಕಾದಾಗ, ಸಂಘಟನೆಗಳನ್ನು ಹುಟ್ಟುಹಾಕಿ, ಬೇಕಾದಹಾಗೆ ಅವರನ್ನು ಬಳಸಿಕೊಳ್ಳುತ್ತ, ಗಲಭೆಗಳನ್ನೆಬ್ಬಿಸುತ್ತ ದಾರಿ ತಪ್ಪಿಸುತ್ತಿವೆ. ಆದ್ದರಿಂದ ಯುವಜನತೆ ಇನ್ನಾದರೂ ತುರ್ತಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ. ತಮ್ಮನ್ನು ನಿಯಂತ್ರಿಸುತ್ತಿರುವವರ ಕುತಂತ್ರವನ್ನು ಅರಿಯಬೇಕಾಗಿದೆ. ಯಾವುದೇ ಪೊರ್ವಗ್ರಹಗಳಿಲ್ಲದ, ವಿದ್ಯಾರ್ಥಿ ಹಿತದ ಉದ್ದೇಶಗಳನ್ನು ಹೊಂದಿದ ಹೊಸ ವಿದ್ಯಾರ್ಥಿ ಸಂಘಟನೆಯನ್ನು ಕಟ್ಟಲೇಬೇಕಾದ ತುರ್ತು ಇಂದಿದೆ. 

Writer - -ಪ್ರಣಾಮ್ ಶೆಟ್ಟಿ, ಕಲ್ಲಡ್ಕ

contributor

Editor - -ಪ್ರಣಾಮ್ ಶೆಟ್ಟಿ, ಕಲ್ಲಡ್ಕ

contributor

Similar News