ಲಂಡನ್ ಗೆ ತೆರಳುವುದಾಗಿ ಮಲ್ಯ ಜೇಟ್ಲಿಗೆ ಹೇಳಿದ್ದು ‘ನಿರಾಕರಿಸಲಾಗದ ಸತ್ಯ’: ಸುಬ್ರಮಣಿಯನ್ ಸ್ವಾಮಿ ಬಾಂಬ್

Update: 2018-09-13 11:32 GMT

ಹೊಸದಿಲ್ಲಿ, ಸೆ.13: ತಾನು ಲಂಡನ್ ಗೆ ತೆರಳುವುದಾಗಿ ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯ ಅವರು ವಿತ್ತ ಸಚಿವ ಅರುಣ್ ಜೇಟ್ಲಿಗೆ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ತಿಳಿಸಿದ್ದರೆಂಬುದು ‘ನಿರಾಕರಿಸಲಾಗದ ಸತ್ಯ' ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಮಲ್ಯಗೆ ತಮ್ಮ  ಒಟ್ಟು 54 ಲಗೇಜ್ ಗಳೊಂದಿಗೆ ಸಾಗಲು ‘ಬ್ಲಾಕ್’ ಡಿಪಾರ್ಚರ್ ಇದ್ದ ಲುಕೌಟ್ ನೋಟಿಸನ್ನು ‘ರಿಪೋರ್ಟ್’ ಡಿಪಾರ್ಚರ್ ಎಂದು ಅಕ್ಟೋಬರ್ 24, 2015ರಂದು ತಿದ್ದಲಾಗಿತ್ತು ಎಂದು ಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸ್ವಾಮಿ, “ಮಲ್ಯ ಪರಾರಿ ಪ್ರಕರಣಕ್ಕೆ ಸಂಬಂಧಿಸಿ ನಮ್ಮಲ್ಲಿ ಎರಡು ನಿರಾಕರಿಸಲಾಗದ ವಿಷಯಗಳಿವೆ. 1. ಮಲ್ಯ 54 ಲಗೇಜ್ ಗಳೊಂದಿಗೆ ಪರಾರಿಯಾಗಲು ಲುಕ್ ಔಟ್ ನೋಟಿಸನ್ನು ‘ಬ್ಲಾಕ್’ನಿಂದ ‘ರಿಪೋರ್ಟ್’ ಎಂದು 2015 ಅಕ್ಟೋಬರ್ 24ರಂದು ದುರ್ಬಲಗೊಳಿಸಲಾಗಿತ್ತು. 2.ತಾನು ಲಂಡನ್ ಗೆ ತೆರಳುವುದಾಗಿ ಮಲ್ಯ ಹಣಕಾಸು ಸಚಿವರಿಗೆ ಹೇಳಿದ್ದರು” ಎಂದಿದ್ದಾರೆ.

ಇನ್ನೊಂದು ಟ್ವೀಟ್ ನಲ್ಲಿ ಸ್ವಾಮಿ, “ಹಣಕಾಸು ಸಚಿವಾಲಯದ ಯಾರದೋ ಆದೇಶದ ಮೇರೆಗೆ ಮಲ್ಯ ವಿರುದ್ಧದ ಸಿಬಿಐ ಲುಕ್ ಔಟ್ ನೋಟಿಸನ್ನು ‘ಬ್ಲಾಕ್ ಡಿಪಾರ್ಚರ್’ನಿಂದ ‘ರಿಪೋರ್ಟ್ ಡಿಪಾರ್ಚರ್’ ಎಂದು ಬದಲಿಸಲಾಗಿತ್ತು ಎಂದು ನನಗೆ ಮೂಲಗಳಿಂದ ತಿಳಿದುಬಂದಿದೆ” ಎಂದಿದ್ದಾರೆ

ತಾನು ಭಾರತ ಬಿಟ್ಟು ಲಂಡನ್ ಗೆ ತೆರಳುವ ಮುನ್ನ ಜೇಟ್ಲಿಯನ್ನು ಭೇಟಿಯಾಗಿದ್ದಾಗಿ ಮಲ್ಯ ಲಂಡನ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು. ಆದರೆ ಜೇಟ್ಲಿಯನ್ನು ಔಪಚಾರಿಕವಾಗಿ ತಾವು ಯಾವತ್ತೂ ಭೇಟಿಯಾಗಿಲ್ಲ ಎಂದೂ ಅವರು ಹೇಳಿದ್ದಾರೆ.

ರಾಜ್ಯಸಭಾ ಸದಸ್ಯರಾಗಿದ್ದ ಮಲ್ಯ ಸಂಸತ್ತಿನ ಪಡಸಾಲೆಯಲ್ಲಿ ತಮಗೆ ಸಿಕ್ಕಿದ್ದರು ಎಂದು ಜೇಟ್ಲಿ ಹೇಳಿಕೊಂಡಿದ್ದಾರೆ. ``ಅವರು ನನ್ನತ್ತ ಬಂದು ನಡೆಯುತ್ತಿರುವಾಗಲೇ ನಾನು ಪ್ರಕರಣ ಇತ್ಯರ್ಥಕ್ಕೆ ಒಂದು ಆಫರ್ ಮಾಡುತ್ತೇನೆ ಎಂದರು. ಆದರೆ ಅವರ ಹಿಂದಿನ ಸುಳ್ಳು ಆಫರ್ ಗಳ ಬಗ್ಗೆ ತಿಳಿದಿದ್ದ ನಾನು ``ನನ್ನ ಜತೆ ಮಾತನಾಡಿ ಪ್ರಯೋಜನವಿಲ್ಲ. ಅವರು ತಮ್ಮ ಬ್ಯಾಂಕರುಗಳಿಗೆ ತಮ್ಮ ಆಫರ್ ತಿಳಿಸಬೇಕು ಎಂದೆ. ಅವರ ಕೈಯ್ಯಲ್ಲಿದ್ದ ಪೇಪರ್ ಗಳನ್ನೂ ನಾನು ಪಡೆದುಕೊಂಡಿಲ್ಲ,'' ಎಂದು ಜೇಟ್ಲಿ ಹೇಳಿದ್ದಾರೆ.

ಆದರೆ ಜೇಟ್ಲಿ ಸುಳ್ಳು ಹೇಳುತ್ತಿದ್ದಾರೆಂದು  ಕಾಂಗ್ರೆಸ್ ವಕ್ತಾರ ಪಿ ಎಲ್ ಪುನಿಯ ಹೇಳಿದ್ದಾರ. ಅವರಿಬ್ಬರು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಬಹಳ ಹೊತ್ತು ಮಾತನಾಡುತ್ತಿದ್ದುದನ್ನು ನೋಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News