ಕೇರಳ ಪ್ರವಾಹ: 30 ಮಂದಿಯ ಪ್ರಾಣ ಉಳಿಸಿದ ಸದಾಶಿವನ್ ನಾಯರ್ ಗೆ ಕಣ್ಣು ಕಳೆದುಕೊಳ್ಳುವ ಭೀತಿ

Update: 2018-09-13 12:32 GMT

ತಿರುವನಂತಪುರಂ, ಸೆ. 13 : ಕೇರಳದ ಅಲಪ್ಪುಝ ಜಿಲ್ಲೆಯ ಚೆಂಗನ್ನೂರಿನಲ್ಲಿ ಇತ್ತೀಚಿಗಿನ ಪ್ರವಾಹದ ವೇಳೆ ಹಲವು ಸ್ಥಳಗಳು ಮುಳುಗಡೆಯಾದಾಗ ಟಯರ್ ಟ್ಯೂಬ್ ಸಹಾಯದಿಂದ ಕನಿಷ್ಠ 30 ಜನರನ್ನು ರಕ್ಷಿಸಿದ 58 ವರ್ಷದ ಸದಾಶಿವನ್ ನಾಯರ್ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅವರ ಬಲಗಣ್ಣಿಗೆ ಮರದ ರೆಂಬೆಯೊಂದು ಬಡಿದು ಗಾಯಗೊಂಡಿದ್ದರು.

ಸದ್ಯ ಅಲಪ್ಪುಝ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ತಮ್ಮ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ. ಈಗಾಗಲೇ ಒಂದು ಸಣ್ಣ ಶಸ್ತ್ರಕ್ರಿಯೆಯನ್ನು ನಡೆಸಲಾಯಿತಾದರೂ ಇನ್ನೊಂದು ಶಸ್ತ್ರಕ್ರಿಯೆ ನಡೆಸಿದರೆ ಅವರು  ತಮ್ಮ ದೃಷ್ಟಿ ವಾಪಸ್ ಪಡೆಯಬಹುದೆಂಬ ದೂರದ ವಿಶ್ವಾಸ ವೈದ್ಯರಿಗಿದೆ. ಅವರ ಇನ್ನೊಂದು ಕಣ್ಣಿಗೂ ಸೋಂಕು ಹರಡಿದೆ ಎಂದು ಹೇಳಲಾಗಿದೆ.

ಸರಕಾರಿ ಆಸ್ಪತ್ರೆಯಲ್ಲಿ ತಮ್ಮ ಸರದಿಗಾಗಿ ಅವರು ಕಾಯಬೇಕು ಇಲ್ಲವೇ ಖಾಸಗಿ ಆಸ್ಪತ್ರೆಯಲ್ಲಿ ರೂ 1.5 ಲಕ್ಷ ತೆತ್ತು ಶಸ್ತ್ರಕ್ರಿಯೆಗೊಳಗಾಗುವ ಅನಿವಾರ್ಯತೆಯನ್ನು ಅವರು ಎದುರಿಸುತ್ತಿದ್ದಾರೆ. ಅವರು ಸಣ್ಣ ತುಂಡು ಭೂಮಿ ಹೊಂದಿದ್ದು ಲಾಟರಿ ಮಾರಾಟವೇ ಅವರ ಜೀವನಾಧಾರ. ಅವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದು ಎರಡನೇ ಪುತ್ರ ಭಿನ್ನ ಸಾಮರ್ಥ್ಯದವನಾಗಿದ್ದಾನೆ.

ಅವರಿಗೆ ಚಿಕಿತ್ಸೆ ದೊರೆಯುವಲ್ಲಿ ವಿಳಂಬವಾಗಿದ್ದರಿಂದ ಸಮಸ್ಯೆಯಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಉತ್ತಮ ಈಜುಪಟುವಾಗಿದ್ದ ಅವರು ಎರಡು ದಿನ ನೀರಿನಲ್ಲಿದ್ದರು. ಮೂರನೇ ದಿನ ನೋವು ಜಾಸ್ತಿಯಾದಾಗ ಆಸ್ಪತ್ರೆಗೆ ದಾಖಲಾಗಿದ್ದರು. ಗಾಯಗೊಂಡಿರುವ ಕಣ್ಣಿನ ದೃಷ್ಟಿ ಮಂದವಾಗಿದ್ದರೆ ಸೋಂಕು ಇನ್ನೊಂದು ಕಣ್ಣಿಗೂ ಹರಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News