ವಿದ್ಯಾರ್ಥಿಯ ತಲೆಯನ್ನು ಕಂಬಕ್ಕೆ ಅಪ್ಪಳಿಸಿದ ನಿರ್ದಯಿ ಶಿಕ್ಷಕ

Update: 2018-09-13 16:19 GMT

ನೆಲ್ಲೂರು, ಸೆ.13: ಬುಡಕಟ್ಟು ವಿದ್ಯಾರ್ಥಿಗಳಿಗೆ ಶಾಲೆಯೊಂದರ ಶಿಕ್ಷಕ ಹಿಗ್ಗಾಮುಗ್ಗಾ ಥಳಿಸುತ್ತಿರುವ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೆಲ್ಲೂರು ಪಟ್ಟಣದ ದರ್ಗಾಮಿತ್ತಾ ಬುಡಕಟ್ಟು ಕಲ್ಯಾಣ ಸನಿವಾಸ ಶಾಲೆಯಲ್ಲಿ ಈ ಘಟನೆ ನಡೆದಿದೆ. ಪ್ರಾಚಾರ್ಯ ವೆಂಕಟರಮಣ ನಿರ್ದಯವಾಗಿ ಪುಟ್ಟ ಮಕ್ಕಳನ್ನು ಥಳಿಸುತ್ತಿರುವ ಫೋಟೊ ಹಾಗೂ ವಿಡಿಯೋಗಳು ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.

ಒಂದು ಫೋಟೊದಲ್ಲಂತೂ ಪ್ರಾಚಾರ್ಯ, ಪುಟ್ಟ ವಿದ್ಯಾರ್ಥಿಯೊಬ್ಬನ ತಲೆ ಹಿಡಿದುಕೊಂಡು, ಕಂಬಕ್ಕೆ ಅಪ್ಪಳಿಸುತ್ತಿದ್ದ ದೃಶ್ಯ ಸೆರೆಯಾಗಿತ್ತು. ಇದನ್ನು ಇತರ ಮಕ್ಕಳು ಅಸಹಾಯಕರಾಗಿ ನೋಡುತ್ತಾ ನಿಂತಿದ್ದರು. ಇನ್ನೊಂದು ಚಿತ್ರದಲ್ಲಿ ಕಂಡುಬರುವಂತೆ ನೆಲದಲ್ಲಿ ಬಿದ್ದ ಮಗುವನ್ನು ಈತ ನಿರ್ದಯವಾಗಿ ಥಳಿಸುತ್ತಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿಯನ್ನು ಮುಂದಕ್ಕೆ ಕರೆದು ಆತನ ಪ್ಯಾಂಟ್ ಬಿಚ್ಚಿ ಹೊಡೆಯುತ್ತಿರುವುದು ಇನ್ನೊಂದು ಚಿತ್ರದಲ್ಲಿ ಕಾಣಿಸುತ್ತದೆ. ನಾಲ್ಕನೇ ಫೋಟೊದಲ್ಲಿ ವೆಂಕಟರಮಣ ಬಾಲಕನೊಬ್ಬನ ತಲೆಕೂದಲು ಎಳೆಯುತ್ತಿದ್ದಾನೆ. ಬಾಲಕನೊಬ್ಬನ ಕಾಲರ್ ಹಿಡಿದು ಎಳೆಯುತ್ತಿರುವ ಮತ್ತೊಂದು ಚಿತ್ರವೂ ಇದೆ.

ಮತ್ತೊಂದು ವಿಡಿಯೊದಲ್ಲಿ ಕಾಣಿಸುವಂತೆ ವೆಂಕಟರಮಣ ಬೆತ್ತದಿಂದ ಇಬ್ಬರು ವಿದ್ಯಾರ್ಥಿಗಳಿಗೆ ಹೊಡೆಯುತ್ತಿದ್ದಾನೆ.  ಪ್ರಾಚಾರ್ಯ ಬಾಲಕನೊಬ್ಬನಿಗೆ ಒದೆಯುತ್ತಿರುವ ದೃಶ್ಯ ಇನ್ನೊಂದು ವಿಡಿಯೋದಲ್ಲಿ ಸೆರೆಯಾಗಿದೆ. ಇಂತಹ ಶಿಕ್ಷೆಯನ್ನು ನಿರಂತರವಾಗಿ ನೀಡಲಾಗುತ್ತಿದೆ ಎಂದು ದೂರಲಾಗಿದೆ. ಬುಡಕಟ್ಟು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿರುವ ಆಂಧ್ರಪ್ರದೇಶ ಯನಡಿ ಸಮಕ್ಯ, ಪ್ರಾಚಾರ್ಯರ ವಿರುದ್ಧ ನೆಲ್ಲೂರು ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ದೂರು ನೀಡಿದೆ ಎಂದು ಸಂಘಟನೆಯ ಅಧ್ಯಕ್ಷ ಗಂದಾಲ ಶ್ರೀರಾಮುಲು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News