ಕೇಂದ್ರ ಸಚಿವ ರಾಮ್‌ ವಿಲಾಸ್ ಪಾಸ್ವಾನ್ ಗೆ ಶಾಕ್ ನೀಡಿದ ಪುತ್ರಿ

Update: 2018-09-14 03:27 GMT

ಪಾಟ್ನಾ, ಸೆ. 14: ಕೇಂದ್ರದಲ್ಲಿ ಅಧಿಕಾರಾರೂಢ ಎನ್‌ಡಿಎ ತೆಕ್ಕೆಯಲ್ಲಿರುವ ಲೋಕಜನಶಕ್ತಿ ಪಕ್ಷದ ಮುಖಂಡ ಹಾಗೂ ಕೇಂದ್ರ ಸಚಿವ ರಾಮ್‌ ವಿಲಾಸ್ ಪಾಸ್ವಾನ್ ಅವರಿಗೆ ಹೊಸ ಸಮಸ್ಯೆ ಎದುರಾಗಿದೆ.

ಪಾಸ್ವಾನ್ ಅವರ ಪುತ್ರಿ ಆಶಾ ಪಾಸ್ವಾನ್, ಆರ್‌ಜೆಡಿ ಟಿಕೆಟ್‌ನಲ್ಲಿ ಹಾಜಿಪುರ ಲೋಕಸಭಾ ಕ್ಷೇತ್ರದಿಂದ ತಂದೆಯ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಪಾಸ್ವಾನ್ ಅವರು ಪುತ್ರ ಚಿರಾಗ್ ಪಾಸ್ವಾನ್ ಅವರನ್ನಷ್ಟೇ ಉತ್ತೇಜಿಸುತ್ತಿದ್ದಾರೆ; ಹೆಣ್ಣುಮಕ್ಕಳನ್ನು ಕಡೆಗಣಿಸಿದ್ದಾರೆ ಎಂದು ಆಶಾ ಪಾಸ್ವಾನ್ ಆಪಾದಿಸಿದ್ದಾರೆ. ಚಿರಾಗ್ ಪಾಸ್ವಾನ್ ಇದೀಗ ಬಿಹಾರದ ಜಮೂಯಿ ಕ್ಷೇತ್ರದ ಸಂಸದ. "ನನ್ನನ್ನು ನಿರ್ಲಕ್ಷಿಸಲಾಗಿದ್ದು, ಚಿರಾಗ್‌ನನ್ನು ಎಲ್‌ಜೆಪಿ ಸಂಸದೀಯ ಪಕ್ಷದ ಮುಖಂಡರಾಗಿ ಮಾಡಲಾಗಿದೆ. ಆರ್‌ಜೆಡಿ ನನಗೆ ಟಿಕೆಟ್ ನೀಡಿದರೆ ನಾನು ಹಾಜಿಪುರದಿಂದ ಸ್ಪರ್ಧಿಸುತ್ತೇನೆ" ಎಂದು ಆಶಾ ಪಾಟ್ನಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಾಮ್ ವಿಲಾಸ್ ಪಾಸ್ವಾನ್ ಅವರ ಮೊದಲ ಪತ್ನಿ ರಾಜಕುಮಾರಿ ದೇವಿಯ ಇಬ್ಬರು ಪುತ್ರಿಯರಲ್ಲಿ ಆಶಾ ಒಬ್ಬರು. ಪಾಸ್ವಾನ್ ಅವರ ಎರಡನೇ ಪತ್ನಿ ರೀನಾ ಪಾಸ್ವಾನ್, ಚಿರಾಗ್ ಹಾಗೂ ಮತ್ತೊಬ್ಬಳು ಮಗಳ ತಾಯಿ. ರಾಜಕುಮಾರಿಗೆ 1981ರಲ್ಲಿ ವಿಚ್ಛೇದನ ನೀಡಿದ ಬಳಿಕ ಪಾಸ್ವಾನ್, ಅಮೃತಸರದ ಪಂಜಾಬಿ ಹಿಂದೂ ಕುಟುಂಬಕ್ಕೆ ಸೇರಿದ ರೀನಾ ಅವರನ್ನು ವಿವಾಹವಾಗಿದ್ದರು.

ಆಶಾ ಪಾಟ್ನಾದಲ್ಲಿ ಪತಿ ಅನಿಲ್ ಸಾಧು ಜತೆ ವಾಸವಿದ್ದು, ಅನಿಲ್ ಎಲ್‌ಜೆಪಿ ದಲಿತ ಸೇನಾದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಇತ್ತೀಚೆಗೆ ಪಕ್ಷ ತೊರೆದು ಅವರು ಆರ್‌ಜೆಡಿ ಸೇರಿದ್ದರು. ಆಶಾ ತಂದೆಯ ವಿರುದ್ಧ ಕಣಕ್ಕೆ ಇಳಿಯುವುದಾಗಿ ಗುರುವಾರ ಘೋಷಣೆ ಮಾಡಿದ್ದು, ಬುಧವಾರ ಅನಿಲ್, ಮಾವನ ವಿರುದ್ಧ ಹಾಜಿಪುರದಲ್ಲಿ ಕಣಕ್ಕೆ ಇಳಿಯಲು ನಿರ್ಧರಿಸಿರುವುದಾಗಿ ಹೇಳಿದ್ದರು. "ನಾನು ಅಥವಾ ಪತ್ನಿ.. ನಮ್ಮಲ್ಲಿ ಯಾರಿಗೆ ಆರ್‌ಜೆಡಿ ಟಿಕೆಟ್ ಸಿಗುತ್ತದೆಯೋ ಅವರು ಕಣಕ್ಕೆ ಇಳಿಯಲಿದ್ದೇವೆ" ಎಂದು ಅವರು ಹೇಳಿದ್ದರು.

ಪರಿಶಿಷ್ಟ ಜಾತಿಯ ಮತದಾರರು ಎಲ್‌ಜೆಪಿಯ ಜೀತದವರಲ್ಲ ಎಂದು ಲೇವಡಿ ಮಾಡಿರುವ ಸಾಧು, 1980ರ ಬಳಿಕ ತಂದೆ ಪುನೀತ್ ರಾಯ್ ಫತೂವಾ ಕ್ಷೇತ್ರದಿಂದ ಸತತ ಐದು ಬಾರಿ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News