ಸಿಬಿಎಸ್‌ಇ ಟಾಪರ್ ಮೇಲೆ ಗ್ಯಾಂಗ್‌ರೇಪ್

Update: 2018-09-14 04:04 GMT

ಹರ್ಯಾಣ, ಸೆ. 14: ಸಿಬಿಎಸ್‌ಇ ಪರೀಕ್ಷೆಯಲ್ಲಿ ದೇಶಕ್ಕೇ ಟಾಪರ್ ಆಗಿ, ರಾಷ್ಟ್ರಪತಿಗಳಿಂದ ಸನ್ಮಾನ ಸ್ವೀಕರಿಸಿದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಹರ್ಯಾಣದ ಮಹೇಂದ್ರಗಢ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

ಗುರ್‌ಗಾಂವ್ ನಿಂದ 116 ಕಿಲೋಮೀಟರ್ ದೂರದ ಬಸ್‌ ನಿಲ್ದಾಣವೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿ ಪತ್ತೆಯಾಗಿದ್ದಾಳೆ. ಎರಡನೇ ವರ್ಷದ ಪದವಿ ವಿದ್ಯಾರ್ಥಿನಿಯಾದ ಈಕೆ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲಿ ಅಪಹರಿಸಿ, ಹೊಲಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಲಾಗಿದೆ. ಅಪಹರಣಕಾರರು ಮಾತ್ರವಲ್ಲದೇ, ಹೊಲದಲ್ಲಿ ಮೊದಲೇ ಇದ್ದ ಹಲವು ಮಂದಿ ಕೂಡಾ ಈಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರಿಗಳೆಲ್ಲರೂ ತನ್ನ ಗ್ರಾಮದವರೇ ಎಂದು ಯುವತಿ ದೃಢಪಡಿಸಿದ್ದಾಳೆ.

ಪೊಲೀಸರು ದೂರು ಸ್ವೀಕರಿಸಲು ಮತ್ತು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಯುವತಿಯ ತಂದೆ- ತಾಯಿ ಆಪಾದಿಸಿದ್ದಾರೆ. ಒಂದಲ್ಲ ಒಂದು ಠಾಣೆಯಲ್ಲಿ ದೂರು ಸ್ವೀಕರಿಸಬಹುದು ಎಂಬ ನಿರೀಕ್ಷೆಯಲ್ಲಿ ಅಲೆದಾಡುತ್ತಿದ್ದು, ಪ್ರಕರಣವನ್ನು ಮುಂದುವರಿಸದಂತೆ ಆರೋಪಿಗಳಿಂದ ಬೆದರಿಕೆಯೂ ಇದೆ ಎಂದು ಅವರು ದೂರಿದ್ದಾರೆ.

ಮಹಿಳೆಯ ದೂರಿನ ಮೇರೆಗೆ "ಝೀರೊ ಎಫ್‌ಐಆರ್" ದಾಖಲಿಸಲಾಗಿದ್ದು, ಮಹೇಂದ್ರಗಢ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ರೇವಾರಿ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಝೀರೊ ಎಫ್‌ಐಆರ್ ಎಂದರೆ ದೂರು ಸ್ವೀಕರಿಸಿದ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿರುವುದಿಲ್ಲ. ಆದರೆ ಪ್ರಕರಣ ದಾಖಲಿಸಿದ ಬಳಿಕ ಸೂಕ್ತ ಠಾಣೆಗೆ ಈ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News