ಮಾಜಿ ವಿಜ್ಞಾನಿಯನ್ನು ಅನಗತ್ಯವಾಗಿ ಬಂಧಿಸಲಾಗಿತ್ತು ಎಂದ ಸುಪ್ರೀಂ ಕೋರ್ಟ್: 50 ಲಕ್ಷ ರೂ. ಪರಿಹಾರಕ್ಕೆ ಆದೇಶ

Update: 2018-09-14 15:30 GMT

ಹೊಸದಿಲ್ಲಿ, ಸೆ.14: ಗೂಢಚರ್ಯೆ ಹಗರಣದಲ್ಲಿ ತನ್ನ ಮೇಲೆ ಆರೋಪ ಹೊರಿಸಿದ್ದ ಕೇರಳ ಪೊಲೀಸರು ಮಾನಸಿಕ  ಹಿಂಸೆ ನೀಡಿದ್ದರೆಂದು ಆರೋಪಿಸಿದ್ದ ಮಾಜಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಪ್ರಕರಣದಲ್ಲಿ ಇಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಅವರನ್ನು ಅನಗತ್ಯವಾಗಿ ಬಂಧಿಸಿ ಕಿರುಕುಳ ನೀಡಲಾಗಿತ್ತು ಎಂದು ಹೇಳಿತಲ್ಲದೆ ಅವರಿಗೆ 50 ಲಕ್ಷ ರೂ. ಪರಿಹಾರ ಮೊತ್ತವನ್ನೂ ಪಾವತಿಸುವಂತೆ ಆದೇಶಿಸಿದೆ.

ಜತೆಗೆ  ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಡಿ.ಕೆ. ಜೈನ್ ನೇತೃತ್ವದ ಸಾಂವಿಧಾನಿಕ ಸಮಿತಿಯನ್ನೂ ರಚಿಸಲು ನ್ಯಾಯಾಲಯ ಆದೇಶಿಸಿದೆಯಲ್ಲದೆ ನಾರಾಯಣನ್ ಅವರ ವಿರುದ್ಧ ಸುಳ್ಳು ಆರೋಪ ಹೊರಿಸಿದ ಹಿಂದೆ ಪೊಲೀಸರ ಪಾತ್ರವನ್ನು ಪರಿಶೀಲಿಸಲು ಸೂಚಿಸಿದೆ.

ಮಾಲ್ದೀವ್ಸ್ ದೇಶದ ಗುಪ್ತಚರ ಅಧಿಕಾರಿಗಳಿಗೆ ದೇಶದ ಪ್ರಮುಖ ರಕ್ಷಣಾ ರಹಸ್ಯಗಳನ್ನು ಸೋರಿಕೆ ಮಾಡಿದ ಆರೋಪವನ್ನು 1994ರಲ್ಲಿ ನಾರಾಯಣನ್ ಮೇಲೆ ಹೊರಿಸಲಾಗಿತ್ತು. ಈ  ರಹಸ್ಯ ಮಾಹಿತಿಗಳು ರಾಕೆಟ್ ಮತ್ತು ಉಪಗ್ರಹ ಉಡಾವಣೆ ಕುರಿತಂತೆ ಫ್ಲೈಟ್ ಟೆಸ್ಟ್ ಡಾಟಾಗೆ ಸಂಬಂಧಿಸಿದ್ದಾಗಿತ್ತು ಎಂದು ರಕ್ಷಣಾ ಅಧಿಕಾರಿಗಳು ಹೇಳಿದ್ದರು. ಲಕ್ಷಗಟ್ಟಲೆ ಹಣಕ್ಕಾಗಿ ಇಸ್ರೋ  ರಹಸ್ಯಗಳನ್ನು ಮಾರಾಟ ಮಾಡಿದ ಆರೋಪವನ್ನು ಹೊತ್ತ ಇಬ್ಬರು ವಿಜ್ಞಾನಿಗಳಲ್ಲಿ ನಂಬಿ ನಾರಾಯಣನ್ ಒಬ್ಬರಾಗಿದ್ದರು.

ತನ್ನನ್ನು ಬಂಧಿಸಿದ್ದ ಕೇರಳ ಪೊಲೀಸರ ವಿರುದ್ಧ ಕ್ರಿಮಿನಲ್ ಮತ್ತು ಶಿಸ್ತು ಕ್ರಮ ಕೈಗೊಳ್ಳಬೇಕೆಂದು ನಂಬಿ ನಾರಾಯಣನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತ್ತು. ತಮ್ಮಿಂದ ಮಾಹಿತಿ ಹೊರ ಹಾಕುವ ಸಲುವಾಗಿ ಪೊಲೀಸರು ಹಾಗೂ ಗುಪ್ತಚರ ಬ್ಯುರೋ ಅಧಿಕಾರಿಗಳು ತಮಗೆ ಹಿಂಸೆ ನೀಡಿದ್ದರು ಎಂದು ಮಾಜಿ ವಿಜ್ಞಾನಿ ಆರೋಪಿಸಿದ್ದರು.

ನಾರಾಯಣನ್ ಅವರ ಅಪೀಲನ್ನು ಕೇರಳ ಹೈಕೋರ್ಟಿನ ವಿಭಾಗೀಯ ಪೀಠ ತಿರಸ್ಕರಿಸಿದ ನಂತರ ಅವರು ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದರು. ಈ ಪ್ರಕರಣದ ಮರುತನಿಖೆಗೆ ಕೇರಳ ಸರಕಾರ ನಡೆಸಿದ ಪ್ರಯತ್ನಕ್ಕೆ ಸುಪ್ರೀಂ ಕೋರ್ಟ್ 1998ರಲ್ಲಿಯೇ ತಡೆ ಹೇರಿತ್ತಲ್ಲದೆ ಅವರಿಗೆ ರೂ. ಒಂದು ಲಕ್ಷ ಪರಿಹಾರ ಪಾವತಿಸುವಂತೆಯೂ ತಿಳಿಸಿತ್ತು. ಮುಂದೆ  ನಾರಾಯಣನ್ ಅವರು ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಮೊರೆ ಹೋದಾಗ ಅವರ ಪರವಾಗಿ  ಮಾರ್ಚ್ 2001ರಲ್ಲಿ ಹೊರಬಿದ್ದ ತೀರ್ಪಿನಲ್ಲಿ ರೂ 10 ಲಕ್ಷ ಪರಿಹಾರ ಪಾವತಿಸುವಂತೆ  ಆದೇಶಿಸಲಾಗಿತ್ತು. ಕೇರಳ ಸರಕಾರ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರೂ ವಿಫಲವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News