ಕುಷ್ಠರೋಗಿಗಳಿಗೆ ಅಂಟಿರುವ ಕಳಂಕ ನಿವಾರಣೆಗೆ ಪ್ರತ್ಯೇಕ ನಿಯಮ ರೂಪಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2018-09-14 17:46 GMT

ಹೊಸದಿಲ್ಲಿ, ಸೆ.14: ಕುಷ್ಠರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅವರಿಗೆ ಪ್ರತ್ಯೇಕ ಅಂಗವೈಕಲ್ಯ ಪ್ರಮಾಣ ಪತ್ರ ಒದಗಿಸಲು ಸಾಧ್ಯವಾಗುವಂತೆ ಪ್ರತ್ಯೇಕ ನಿಯಮ ರೂಪಿಸುವುದನ್ನು ಪರಿಗಣಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಕುಷ್ಠರೋಗದ ಬಗ್ಗೆ ಸಮಾಜದಲ್ಲಿ ಬೃಹತ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕುಷ್ಠರೋಗಿಗಳ ಬಗ್ಗೆ ಜನತೆಯಲ್ಲಿ ಮೂಡಿರುವ ತಪ್ಪು ಅಭಿಪ್ರಾಯಗಳನ್ನು ದೂರಗೊಳಿಸಬೇಕು ಎಂದು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳಿಗೆ ಸೂಚಿಸಿರುವ ಸುಪ್ರೀಂಕೋರ್ಟ್, ಈ ನಿಟ್ಟಿನಲ್ಲಿ ಹಲವಾರು ಸೂಚನೆಗಳನ್ನು ನೀಡಿದೆ. ಕುಷ್ಠರೋಗ ಬಾಧಿತರು ಅಂತ್ಯೋದಯ ಅನ್ನ ಯೋಜನೆ ಹಾಗೂ ಇತರ ಯೋಜನೆಗಳ ಸಂಪೂರ್ಣ ಪ್ರಯೋಜನ ಪಡೆಯುವಂತಾಗಲು ಅವರಿಗೆ ಬಿಪಿಎಲ್ ಪಡಿತರ ಚೀಟಿಗಳನ್ನು ನೀಡುವ ಬಗ್ಗೆ ಸರಕಾರಗಳು ಸೂಕ್ತ ಗಮನ ಹರಿಸಬೇಕು ಎಂದು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ, ನ್ಯಾಯಾಧೀಶರಾದ ಎ.ಎಂ.ಖಾನ್ವಿಳ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರಿದ್ದ ನ್ಯಾಯಪೀಠ ತಿಳಿಸಿದೆ.

ಕುಷ್ಠರೋಗ ಬಾಧಿತರ ಅಂಗವೈಕಲ್ಯ ಪ್ರಮಾಣದ ಅಂಶವನ್ನು ನಿರ್ಧರಿಸಲು ಪ್ರತ್ಯೇಕ ನಿಯಮ ರೂಪಿಸುವ ಬಗ್ಗೆ ಕೇಂದ್ರ ಸರಕಾರ ಪರಿಶೀಲಿಸಬೇಕು. ಅಲ್ಲದೆ ಕುಷ್ಠರೋಗ ಬಾಧಿತರನ್ನು ಕುಟುಂಬದವರು ಅಥವಾ ಸಮುದಾಯ ದೂರ ಇರಿಸಬಾರದು. ಇವರನ್ನು ಪ್ರತ್ಯೇಕ ಆಸ್ಪತ್ರೆ ಅಥವಾ ಕ್ಲಿನಿಕ್‌ಗೆ ಕರೆದೊಯ್ಯುವ ಅಗತ್ಯವಿರುವುದಿಲ್ಲ ಎಂಬ ಜಾಗೃತಿಯನ್ನು ಜನರಲ್ಲಿ ಮೂಡಿಸುವ ಕಾರ್ಯವಾಗಬೇಕು . ಶಾಲಾ ಪಠ್ಯಕ್ರಮದಲ್ಲಿ ಕುಷ್ಠರೋಗದ ಬಗ್ಗೆ ಸರಿಯಾದ ಮಾಹಿತಿ ನೀಡುವಂತಹ ಪಠ್ಯವನ್ನು ಅಳವಡಿಸುವ ಕುರಿತು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ತಿಳಿಸಿದೆ. ಕುಷ್ಠರೋಗ ಬಾಧಿತರ ಕುಟುಂಬದ ಮಕ್ಕಳ ಬಗ್ಗೆ ಖಾಸಗಿ ಅಥವಾ ಸರಕಾರಿ ಶಾಲೆಗಳಲ್ಲಿ ತಾರತಮ್ಯದ ವರ್ತನೆ ತೋರದಂತೆ ಹಾಗೂ ಇಂತಹ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

ಅಲ್ಲದೆ ಕುಷ್ಠರೋಗದ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಕುಷ್ಠರೋಗವನ್ನು ಭಯಾನಕ ಎಂಬಂತೆ ಚಿತ್ರಿಸುವ ಫೋಟೋಗಳನ್ನು ಬಳಸದಂತೆ ಸಲಹೆ ನೀಡಿದೆ. ದೇಶದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಕುಷ್ಠರೋಗದ ಔಷಧ ಹಾಗೂ ಮಲ್ಟಿ ಡ್ರಗ್ ಥೆರಪಿ(ಎಂಡಿಟಿ) ವ್ಯವಸ್ಥೆ ಸದಾಕಾಲ ಲಭ್ಯವಿರುವಂತೆ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಕುಷ್ಠರೋಗ ನಿವಾರಣಾ ಕಾರ್ಯಕ್ರಮದಡಿ ಕುಷ್ಠರೋಗ ಬಾಧಿತರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂಬ ಅಭಿಯಾನವನ್ನು ನಿರಂತರ ನಡೆಸುವಂತೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News