ಪಾಕ್ ವಿರುದ್ಧ ಆಡುವುದು ಯಾವಾಗಲೂ ಉತ್ಸಾಹದಾಯಕ : ರೋಹಿತ್

Update: 2018-09-15 18:28 GMT

ಢಾಕಾ,ಸೆ. 15: ‘‘ಬಲಿಷ್ಠ ತಂಡವಾಗಿರುವ ಪಾಕಿಸ್ತಾನ ವಿರುದ್ದ ಆಡುವುದು ಯಾವಾಗಲೂ ಭಾರತಕ್ಕೆ ಉತ್ಸಾಹದಾಯಕ ವಿಚಾರವಾಗಿದೆ’’ ಎಂದು ಟೀಮ್ ಇಂಡಿಯಾದ ಹಂಗಾಮಿ ನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟರು.

 ಹದಿನಾಲ್ಕನೇ ಆವೃತ್ತಿಯ ಏಶ್ಯ ಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ರೋಹಿತ್ ಶರ್ಮಾ ಅವರು ಏಶ್ಯಕಪ್‌ನ ಅನಾವರಣದ ಬಳಿಕ ವಿವಿಧ ತಂಡಗಳ ನಾಯಕರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

 ಶನಿವಾರ ಆರಂಭಗೊಂಡ ಏಶ್ಯಕಪ್ ಟೂರ್ನಮೆಂಟ್ ಏಶ್ಯದ ತಂಡಗಳಿಗೆ ಮುಂಬರುವ ವಿಶ್ವಕಪ್‌ಗೂ ಮುನ್ನ ಬಲಿಷ್ಠವಾಗಿ ರೂಪುಗೊಳ್ಳಲು ಉತ್ತಮ ಅವಕಾಶ ಒದಗಿಸಿದೆ. ಟೀಮ್ ಇಂಡಿಯಾದ ಅಗ್ರ ಮೂರರಲ್ಲಿ ಶಿಖರ್ ಧವನ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಳವೂರಿದ್ದರೂ, ಮಧ್ಯಮ ಸರದಿಯಲ್ಲಿ ಸಮಸ್ಯೆ ಇದೆ. ಮಧ್ಯಮ ಸರದಿಯಲ್ಲಿ ಬಲಿಷ್ಠ ದಾಂಡಿಗರಿಗಾಗಿ ಶೋಧ ಮುಂದುವರಿದಿದೆ.

ಪ್ರತಿಯೊಂದು ದೇಶಗಳು ವಿಶ್ವಕಪ್‌ಗೂ ಮುನ್ನ ಬಲಿಷ್ಠ ತಂಡ ಕಟ್ಟಲು ಯೋಚಿಸುವುದು ಸಹಜ. ಭಾರತವೂ ಇದಕ್ಕೆ ಹೊರತಲ್ಲ ಎಂದರು.

  ‘‘ಆ್ಯಂಜೆಲೊ ಮ್ಯಾಥ್ಯೂಸ್, ಸರ್ಫರಾಝ್ ಅಥವಾ ಮಶ್ರಾಫೆ ಅವರು ತಮ್ಮ ತಂಡಗಳನ್ನು ಕಟ್ಟಲು ಬಯಸುತ್ತಾರೆ.ಅವರ ತಂಡಗಳ ಸಾಮರ್ಥ್ಯ ಮತ್ತು ದೌರ್ಬಲ್ಯ ಬಗ್ಗೆ ತಿಳಿಯಲು ಬಯಸುವುದಿಲ್ಲ. ಟೂರ್ನಮೆಂಟ್ ಆರಂಭಗೊಂಡ ಬಳಿಕ ತಂಡಗಳು ಯಾವ ರೀತಿ ಇದೆ ಎನ್ನುವುದು ಗೊತ್ತಾಗುತ್ತದೆ’’ ಎಂದು ರೋಹಿತ್ ಹೇಳಿದರು.

  ‘‘ ವಿಶ್ವಕಪ್‌ಗೆ ಇನ್ನೂ ಸಮಯ ಇದೆ. ಅದಕ್ಕೂ ಮೊದಲು ಅನೇಕ ಪಂದ್ಯಗಳನ್ನು ಆಡಬೇಕಿದೆ. ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರಿಗೆ ಉತ್ತಮ ಅವಕಾಶಗಳು ಒದಗಿ ಬರಲಿದೆ ’’ ಎಂದು ರೋಹಿತ್ ಶರ್ಮಾ ನುಡಿದರು.

 ಸೆ.18ರಂದು ಏಶ್ಯಕಪ್‌ನಲ್ಲಿ ಹಾಂಕಾಂಗ್‌ನ್ನು ಎದುರಿಸುವ ಮೂಲಕ ಭಾರತ ಅಭಿಯಾನ ಆರಂಭಿಸಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಹೆಚ್ಚು ಆಸಕ್ತಿದಾಯಕವಾಗಿದೆ.

‘‘ಪ್ರತಿಯೊಂದು ತಂಡಗಳು ಟೂರ್ನಮೆಂಟ್‌ನಲ್ಲಿ ಚೆನ್ನಾಗಿ ಆಡಿ ಟ್ರೋಫಿ ಎತ್ತಲು ನೋಡುತ್ತಿವೆ. ನನಗೂ ಈ ಟೂರ್ನಮೆಂಟ್ ಆಸಕ್ತಿದಾಯಕವಾಗಿದೆ. ಮೊದಲ ಬಾರಿ ಟೂರ್ನಮೆಂಟ್‌ನಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿದೆ ’’ ಎಂದು ರೋಹಿತ್ ಹೇಳಿದರು.

ರೋಹಿತ್ ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ನಡೆದ ಐಪಿಎಲ್ ಟೂರ್ನಮೆಂಟ್‌ನ ಮೊದಲ ಹಂತದ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದರು. 2006ರಲ್ಲಿ ಭಾರತ ತಂಡವನ್ನು ರೋಹಿತ್ ಪ್ರತಿನಿಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News